ಲೇಖಕ, ಹಾಸ್ಯಗಾರ ಎಂ ಎಸ್ ನರಸಿಂಹ ಮೂರ್ತಿಗೆ 70 ವರ್ಷದ ಸಂಭ್ರಮ | ಜಯನಗರದ ನ್ಯಾಷನಲ್ ಕಾಲೇಜಿನ ಎಚ್ ಎನ್ ಕಲಾಕ್ಷೇತ್ರದಲ್ಲಿ ಸನ್ಮಾನ ಸಮಾರಂಭ | ಬ್ಯಾಂಕ್ ನಲ್ಲಿ ಹಾಸ್ಯ ಇವರ ಫೇಮಸ್ ಬರಹಗಳಲ್ಲಿ ಒಂದು
ನಂಗೆ ಎಪ್ಪತ್ತು ಆಗಿದ್ದು ಗೊತ್ತೇ ಆಗಲಿಲ್ಲ. ಜನರೆಲ್ಲ ‘ಎಪ್ಪತ್ತು ಎಪ್ಪತ್ತು ಅಂತಿದ್ರು. ನನಗೆ ಅನುಮಾನ ಬಂತು, ಆಮೇಲೆ ಪಾಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ ಮಾರ್ಕ್ಸ್‌ಕಾರ್ಡ್ ನೋಡಿ ಕನ್ ಫರ್ಮ್ ಮಾಡ್ಕೊಂಡೆ. ಹೌದು, ನನಗೆ ಎಪ್ಪತ್ತಾಗುತ್ತೆ ನಾಳೆಗೆ (ಇಂದಿಗೆ) ಅಂತ ಗೊತ್ತಾಯ್ತು. ಸದಾ ಹಾಸ್ಯದಲ್ಲೇ ತೊಡಗಿರೋದ್ರಿಂದ ನನಗೆ ದಿನಗಳು ಕಳೆಯೋದೇ ಗೊತ್ತಾಗ್ತಿಲ್ಲ. ಮೊದಲಿನ ಉತ್ಸಾಹವೇ ಇದೆ.
ಬ್ಯಾಂಕ್ ಅಂದ್ರೆ ನಗುವವರೂ ಸೀರಿಯಸ್ ಆಗ್ತಾರೆ. ಆದರೆ ನಿಮ್ಮ ನಗೆ ಅಲ್ಲಿಂದಲೇ ಹೆಚ್ಚುತ್ತಾ ಹೋಯ್ತು ಅಂತಿದ್ರಿ..
undefined
‘ಬ್ಯಾಂಕ್‌ನಲ್ಲಿ ಹಾಸ್ಯ’ ಅಂತಲೇ ನನ್ನ ಕೆಲವೊಂದು ಬರಹಗಳಿವೆ. ಬ್ಯಾಂಕ್‌ನಲ್ಲಿ ಕೆಲಸ ಮಾಡುವಾಗ ಎಂತೆಂಥಾ ಹಾಸ್ಯ ಪ್ರಸಂಗಗಳು ನನಗೆ ಎದುರಾಗ್ತಿದ್ದವು. ನಾನು ಜಡಗೇನಹಳ್ಳಿಯ ಬ್ಯಾಂಕ್ ನಲ್ಲಿದ್ದಾಗ ಹಸುಗಳಿಗೆ, ಎಮ್ಮೆಗಳಿಗೆ ಸಾಲ ಕೊಡ್ತಿದ್ದೆ. ಒಂದು ವರ್ಷ ಆದ್ಮೇಲೆ ಅಲ್ಲಿ ಹೋದಾಗ ಒಬ್ಬಾಕೆ ಬಂದು ನಮಸ್ಕಾರ ಮಾಡಿ ಕೈಯಲ್ಲಿ ಹಣ್ಣು ಇಟ್ಟು, ‘ಅಣ್ಣಾರೆ, ಚಂದಾಗಿದ್ದೀರಾ?’ ಅಂದ್ಲು. ‘ನೀನು ಚೆನ್ನಾಗಿದ್ದೀಯಾ, ನನ್ನ ನೆನ್ಪಿದಿಯಾ ಅಮ್ಮಾ..’ ಅಂದೆ. ‘ಏನ್ ಸ್ವಾಮ್ಗೋಳೆ ಹಿಂಗಂತೀರಾ, ನೀವು ಎಮ್ಮೆ ಕೊಡ್ಸಿದ್ದೀರಾ, ಎರಡೂವರೆ ಲೀಟರ್ ಹಾಲು ಕರೀತಾದೆ. ಅದರ ಮುಖ ನೋಡಿದಾಗ ಎಲ್ಲ ನಿಮ್ ಮುಖ ಜ್ಞಾಪಕಕ್ಕೆ ಬರುತ್ತೆ..’ ಅನ್ಬೇಕೆ! ಸಾಲ ಮೇಳದಲ್ಲಾದ ಕೆಲವು ಪ್ರಸಂಗಗಳಿವೆ.
BB7: ರಾತ್ರಿಯೆಲ್ಲಾ ಎಕ್ಸಾಮ್ ಗೆ ಓದಿ ಮಾರನೇ ದಿನ ಬಸ್ ನಲ್ಲಿ ನಿದ್ದೆ ಮಾಡಿದ ಕಿಲಾಡಿ!
ನಾವು ಸಾಲ ಕೊಡುವ ಮೊದಲು ಪ್ರಿ ಇನ್ಸ್‌ಪೆಕ್ಷನ್ ಅಂತ ಮಾಡ್ತೀವಿ. ಅದಕ್ಕೆ ಹಳ್ಳಿಗಳಿಗೆ ಹೋದಾಗ ನಾಯಿಗಳೆಲ್ಲ, ಹೋ.. ಅಂತ ಅಟ್ಟಿಸಿಕೊಂಡು ಮೈಮೇಲೆ ಬರುತ್ತವೆ. ಬಾವಿ ಸಾಲಗಾರರು, ಹಚಾ.. ಹಚಾ ಅನ್ನುತ್ತಾ ನಾಯಿಗಳನ್ನು ಓಡಿಸಿ, ನಾವು ಮುಂದುವರಿಯಲು ಸರಿಯಾದ ವ್ಯವಸ್ಥೆ ಮಾಡುತ್ತಾರೆ. ಸಾಲ ಕೊಟ್ಟ ಮೇಲೆ ಪೋಸ್ಟ್ ಇನ್ಸ್‌ಪೆಕ್ಷನ್‌ಗೆ ಹೋಗ್ತೀವಲ್ಲ ನಾವು, ಅದೇ ನಾಯಿಗಳು ಮತ್ತೆ ನಮ್ಮ ಮೇಲೆ ತಿರುಗಿ ಬೀಳುತ್ತವೆ. ಕಚ್ಚಲಿಕ್ಕೆ ಬರುತ್ತವೆ, ‘ಏಯ್,ಹಿಡ್ಕೊಳಯ್ಯ ನಾಯೀನ..’ ಅಂದ್ರೆ,‘ಸಾರ್, ಅದು ನಮ್ದಲ್ಲ ನಾಯಿ, ರಾಮಣ್ಣಂದು.. ನೀವೇ ಹೇಳಿ’ ಅನ್ನುತ್ತಾ ಹೊರಟುಹೋಗ್ತಾರೆ!
ಜರಗೇನಗಳ್ಳಿಯಲ್ಲಿರುವಾಗ ನಾನು ಮಾಡಿದ ಒಂದು ಪುಣ್ಯ ಕೆಲಸವೂ ಇದೆ. ಅಲ್ಲಿ ಎಲ್ಲ ದಲಿತ, ಬಡ ಮಹಿಳೆಯರು ಓಲೆಗಳನ್ನ, ಮಾಂಗಲ್ಯವನ್ನ ತಗೊಂಡು ಹೋಗಿ ಸೇಟುಗಳ ಹತ್ರ ಕೊಟ್ಟು ಸಾಲ ತಗೋತಿದ್ರು. ಪ್ರತೀ ತಿಂಗಳು ಆ ಸಾಲ ಕಟ್ಟೋದು, ಜೀವಮಾನ ಇಡೀ ಕಟ್ಟಿದರೂ ಸಾಲ ಮುಗೀತಿರಲಿಲ್ಲ. ಆ ಚಿನ್ನ ಎಂದೂ ಅವರಿಗೆ ವಾಪಾಸ್ ಬಂದ ಉದಾಹರಣೆಗಳಿರಲಿಲ್ಲ. ಅವರನ್ನು ಬ್ಯಾಂಕ್‌ಗೆ ಕರೆಸಿ ತಿಳುವಳಿಕೆ ಕೊಟ್ಟು ತೀರಾ ಕಡಿಮೆ ಬಡ್ಡಿಗೆ ಅವರಿಗೆ
ಸಾಲ ಸಿಗೋ ಹಾಗೆ ಮಾಡಿದೆ. ಅಲ್ಲಿ ಕಟ್ಟುತ್ತಿದ್ದ 10 ರು.ವನ್ನು ಇಲ್ಲೇ ಕೆಲವು ತಿಂಗಳು ಕಟ್ಟಿ ಚಿನ್ನ ವಾಪಾಸ್ ಪಡೆಯೋ ಹಾಗೆ ಮಾಡಿದೆ. ಈ ತರದ ಒಳ್ಳೆ ಕೆಲಸ ತೃಪ್ತಿ ಕೊಟ್ಟಿದೆ.
ಸೀರಿಯಲ್ ಜಗತ್ತಿಗೆ ಎಂಟ್ರೀ ಕೊಟ್ಟಿದ್ದು, 10 ಸಾವಿರ ಎಪಿಸೋಡು ಬರೆದದ್ದು.. ಆ ಕಥೆ ಹೇಳ್ತೀರಾ?
1988 ರಲ್ಲಿ ಸಿಹಿಕಹಿ ಚಂದ್ರು ಅವರ ಸೀರಿಯಲ್‌ಗೆ ಕಂಡಕ್ಟರ್ ಕರಿಯಪ್ಪ ಅಂತ ಬರೆದೆ. ಇದು ಮೊದಲ ಸೀರಿಯಲ್. ಆಮೇಲೆ ಕ್ರೇಜಿ ಕರ್ನಲ್ ಬರೆದೆ. ಇದಾದ ನಂತರ ಪಾಪ ಪಾಂಡು, ಸಿಲ್ಲಿಲಲ್ಲಿ, ಪಾರ್ವತಿ ಪರಮೇಶ್ವರ, ಪಾಂಡುರಂಗ ವಿಠಲ ಇತ್ಯಾದಿ ಸೀರಿಯಲ್‌ಗಳು.
BB7: ಕಿರುತೆರೆ ರಸ್ತೆಯಲ್ಲಿ ದೋಸೆ ಮಾರಿ ಜೀವನ ಮಾಡುತ್ತಿದ್ದಾರೆ!
ಹೆಚ್ಚಿನ ಸೀರಿಯಲ್‌ಗಳಿಗೆ ದೇವ್ರ ಹೆಸರೇ ಇದೆ?
ಆ ಲೆಕ್ಕದಲ್ಲಾದಲ್ಲಾದ್ರೂ ಮೇಲಿನ ಅಕೌಂಟ್‌ನಲ್ಲಿ ಒಂದಿಷ್ಟು ಪುಣ್ಯ ಜಮೆಯಾಗ್ಲಿ ಅಂತ (ನಗು). ನನ್ನ ಹೆಚ್ಚಿನ ಸೀರಿಯಲ್‌ಗೂ ದೇವ್ರ ಹೆಸರೇ ಇದೆ. ಅದು ಆಕಸ್ಮಿಕವಾಗಿ ಆಗಿದ್ದು. ಈಗ ನೆನೆಸಿಕೊಂಡರೆ ಒಳ್ಳೇದೆ ಆಯ್ತು ಅನಿಸುತ್ತೆ. ಆದ್ರೂ ಮುಂಗಾರು ಮಳೆ ಗಣೇಶ್ ಅಭಿನಯಿಸಿದ, ‘ಯದ್ವಾ ತದ್ವಾ’, ಈಗಿನ ‘ಸಿಲ್ಲಿಲಲ್ಲಿ’ ಹೆಸರು ಅಪರೂಪಕ್ಕೆ ಬಂದಿದೆ. ಹಾಗೆ, 1988 ರಿಂದ ಈವರೆಗೆ ಬರೆದದ್ದು 10,010 ಎಪಿಸೋಡುಗಳು! ಲೆಕ್ಕ ಸಿಗದೇ ಇರೋವು ಇನ್ನೂ ಇರಬಹುದು. ಹೆಚ್ಚುಕಮ್ಮಿ ದಿನಕ್ಕೊಂದು ಕಥೆಯ ತರ ಇದೆ. ಅಂದರೆ 10 ಸಾವಿರ ಚಿತ್ರಕಥೆಗಳಾದವು, ಇದು ಭಾರತದಲ್ಲೇ ಫಸ್ಟು ಅಂತ ಜನ ಹೇಳ್ತಾರೆ.
ಈಗಿನ ಹುಡುಗ್ರನ್ನು ನಗಿಸೋದು ಕಷ್ಟ ಅನಿಸಿಲ್ವಾ?
ಈ ಕಾಲದವ್ರಿಗೆ ಹಳೆಯ ಕಾಮಿಡಿ ಇಷ್ಟ ಆಗಲ್ಲ. ಅವರಿಗೆ ಡೈರೆಕ್ಟ್ ಜೋಕ್ ಬೇಕು, ಆಂಗಿಕ ಅಭಿನಯ ಜಾಸ್ತಿ ಇರಬೇಕು. ‘ಸಿಲ್ಲಿಲಲ್ಲಿ’ ಈ ಥರದ್ದು. ಇದು ಸ್ಲ್ಯಾಪ್ ಸ್ಟಿಕ್ ಕಾಮಿಡಿ. ಪಾಪ ಪಾಂಡು ಶುದ್ಧ ಕಾಮಿಡಿ. ಅದು ಕೇಳೋದ್ರಲ್ಲೇ ಪಂಚ್ ಇದೆ. ಇವೆರಡೂ ಜನಕ್ಕೆ ಇಷ್ಟ ಆಗಿದೆ. ನನ್ನ ಈವರೆಗಿನ ಸೀರಿಯಲ್ ಬರಹದಲ್ಲಿ ಒಂದೇ ಒಂದು ಡಬ್ಬಲ್ ಮೀನಿಂಗ್ ಬಂದಿಲ್ಲ. ಡಬ್ಬಲ್ ಮೀನಿಂಗ್ ಇಲ್ಲ ಅಂದ್ರೆ ನಗಿಸಕ್ಕೇ ಆಗಲ್ಲ ಅಂತ ಈಗ ಬರುವ ಎಲ್ಲ ಸೀರಿಯಲ್‌ನವ್ರೂ ಅಂದುಕೊಂಡಿದ್ದಾರೆ. ಆದರೆ ನಾನು ಡಬ್ಬಲ್ ಮೀನಿಂಗ್ ಇಲ್ಲದೆಯೂ ನಗಿಸಿದ್ದೀನಿ. ಇನ್ನೊಂದು ಅಂದರೆ ಅಪ್ಪ ಅಮ್ಮನಿಗೆ ಗೌರವ ಕೊಡದೇ ಇರುವ ಒಂದೇ ಒಂದು ಕ್ಯಾರೆಕ್ಟರ್ ಅನ್ನು ನನ್ನ ಸೀರಿಯಲ್‌ನಲ್ಲಿ ಸೃಷ್ಟಿ ಮಾಡಿಲ್ಲ.
ಅಪ್‌ಡೇಟ್ ಆಗೋದು ಕಷ್ಟ ಆಗ್ಲಿಲ್ವಾ?
ಇಲ್ಲಪ್ಪ. ಸೋಷಲ್ ಮೀಡಿಯಾಗಳನ್ನು ಗಮನಿಸುತ್ತಿರುತ್ತೇವೆ. ಅದರ ದುಷ್ಪರಿಣಾಮಗಳೇನು ಅನ್ನೋದನ್ನೂ ಹಾಸ್ಯದ ಮೂಲಕ ಪರಿಣಾಮಕಾರಿಯಾಗಿ ತೋರಿಸುವ ಪ್ರಯತ್ನ ಮಾಡಿದ್ದೀವಿ. ಪಬ್ಜಿ ಆಡಿ ಹೇಗೆ ಹಾಳಾದ ಅಂತ, ಬ್ಲೂವೇಲ್ ಎಫೆಕ್ಟ್ ಏನಾಗಬಹುದು ಅಂತ ಪವರ್‌ಫುಲ್ ಎಪಿಸೋಡ್ ಬರೆದೆ. ಅದರಲ್ಲಿ ಬ್ಲೂವೇಲ್ ಗೇಮ್ ಆಡಿ ಒಬ್ಬ ಕೈಕಾಲು ಮುರ‌್ಕೊಂಡು ಬ್ಯಾಂಡೇಜ್ ಹಾಕ್ಕೊಂಡು ಬಿಡ್ತಾನೆ. ನನ್ನ ಸೀರಿಯಲ್‌ನಲ್ಲಿ ಯಾರನ್ನೂ ಸಾಯಿಸಲ್ಲವಾದ ಕಾರಣ ಅವನು
ಬದುಕ್ಕೊಂಡ!
ನನ್ನ ಕೆಲಸದಲ್ಲಿ ಪತ್ನಿಯ ಸಹಕಾರ ಬಹಳಷ್ಟಿದೆ. ಉಳಿದಂತೆ ನಮ್ಮದು ಕಲಾವಿದರ ಕುಟುಂಬ. ಮಗ ಕತೆ, ಸಂಭಾಷಣೆ ಬರೆಯೋ ಜೊತೆಗೆ ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದಾನೆ. ಸೊಸೆ ಸಿನಿಮಾ, ಕಿರುತೆರೆ ಕಲಾವಿದೆ. ಮದ್ವೆಗೂ ಮುಂಚೆನೇ ಮಾವನ ಕೈಯಲ್ಲಿ ಅಡುಗೆ ಮಾಡಿಸಿದ ಏಕೈಕ ಸೊಸೆ ಇವಳು!
ಅದು ಹೇಗೆ?
ಉದಯ ಟಿವಿಯಲ್ಲಿರಬೇಕು, ಸ್ಟಾರ್‌ಪಾಕ ಅಂತ ಒಂದು ಪ್ರೋಗ್ರಾಂ ಬರ‌್ತಿತ್ತು. ಅದಕ್ಕೆ ನಾನು ಗೆಸ್ಟ್ ಆಗಿ ಹೋಗಿದ್ದೆ. ಈಕೆ ಆ್ಯಂಕರಿಂಗ್ ಮಾಡ್ತಿದ್ಲು. ‘ಅಡುಗೆ ಮಾಡಿ..’ ಅಂದ್ಲು. ಮಾಡಿದೆ, ಕೊಟ್ಟೆ. ಸ್ಯಾಂಪಲ್ ರುಚಿ ನೋಡಿ, ‘ಬಹಳ ಚೆನ್ನಾಗಿದೆ, ಕೀಪ್ ಇಟ್ ಅಪ್’ ಅಂದ್ಲು. ಆಮೇಲೆ ಎಷ್ಟೋ ವರ್ಷಗಳ ಬಳಿಕ ನಮ್ಮನೆಗೆ ಸೊಸೆಯಾಗಿ ಬಂದ್ಲು! ಅವಳ ಹೆಸರು ಅನುಷಾ, ಮಗ ಶ್ರೀ ಹರ್ಷ.
- ಪ್ರಿಯಾ ಕೇರ್ವಾಶೆ