ರಾಜೇಶ್ ಶೆಟ್ಟಿ, ಕನ್ನಡ ಪ್ರಭ
ಆರು ಅಥವಾ ಏಳು ಸೀಟಿನ ಒಂದು ಕಂಫರ್ಟೆಬಲ್ ಕಾರು ಇದ್ದರೆ ಚೆನ್ನ ಎಂದು ಭಾವಿಸುವವರು ಗಮನಿಸಬಹುದಾದ ಕಾರು ಟಾಟಾ ಸಫಾರಿ. ಹೊಸ ಅವತಾರದಲ್ಲಿ ಬಂದಿರುವ ಟಾಟಾ ಸಫಾರಿಯ ಹೊಸ ವರ್ಷನ್‌ಗಳು ವಿನ್ಯಾಸದಲ್ಲಿ ಮತ್ತು ಶಕ್ತಿಯಲ್ಲಿ ಎರಡರಲ್ಲಿಯೂ ಉತ್ತಮ ಶಕ್ತಿ ಪ್ರದರ್ಶನ ಮಾಡುತ್ತಿವೆ. ಸುಮಾರು 16 ವಿವಿಧ ಮಾದರಿಯಲ್ಲಿ ಲಭ್ಯವಿರುವ ಕಾರಿನ ಎಕ್ಸ್ ಶೋರೂಮ್ ಆರಂಭಿಕ ಬೆಲೆ ರು.15,24,900. ಇದು ಬೇಸಿಕ್ ಮಾಡೆಲ್‌ನ ಬೆಲೆ. ಅಲ್ಲಿಂದಾಚೆಗೆ 23 ಲಕ್ಷದವರೆಗೆ ಒಂದೊಂದು ಮಾಡೆಲ್‌ಗೆ ಬೆಲೆ ಬದಲಾಗುತ್ತದೆ.
undefined
ಟಾಟಾದವರು ಒಮ್ಮೆ ಮೈಕೊಡವಿಕೊಂಡು ಎದ್ದು ಬಂದ ಮೇಲೆ ಅವರ ಬಹುತೇಕ ಕಾರುಗಳು ಹವಾ ಮೇಂಟೇನ್ ಮಾಡುತ್ತಲೇ ಇವೆ. ಅದಕ್ಕೆ ಟಾಟಾ ಸಫಾರಿ ಹೊರತಲ್ಲ. ಟಾಟಾ ಹ್ಯಾರಿಯರ್‌ನ ಕೆಲವು ಅಂಶಗಳನ್ನು ಕಡ ತೆಗೆದುಕೊಂಡಿರುವ ಸಫಾರಿಯ ವಿನ್ಯಾಸ ಚಂದ ಮತ್ತು ಅದ್ದೂರಿ. ದೊಡ್ಡ ವಾಹನದಂತೆ ಕಾಣುತ್ತದೆ ಮತ್ತು ಬೆಂಗಳೂರಿನಂತಹ ಸಿಟಿಗಳಲ್ಲಿ ಕಾರು ಪಾರ್ಕ್ ಮಾಡಲು ಕೊಂಚ ವಿಶಾಲ ಜಾಗವನ್ನೇ ನೋಡಬೇಕಾಗುತ್ತದೆ. ಹೆಡ್‌ಲೈಟ್‌ನಿಂದ ಹಿಡಿದು, ಸನ್‌ರೂಫ್‌ವರೆಗೆ ಎಲ್ಲವೂ ಆಕರ್ಷಕವಾಗಿದೆ. ಹೊರಗೆ ಎಷ್ಟು ದೊಡ್ಡದಾಗಿ ಕಾಣುತ್ತದೋ ಇಂಟೀರಿಯರ್‌ನಲ್ಲಿಯೂ ಅಪಾರ ಜಾಗವಿರುವಂತೆ ಭಾಸವಾಗುತ್ತದೆ.
ಸಫಾರಿ ಕಾರಿನ ಅಂದ ಜೊತೆಗೆ ಸುರಕ್ಷತೆಗಾಗಿ ಸೆರಾಮಿಕ್ ಕೋಟಿಂಗ್ ಪರಿಚಯಿಸಿದ ಟಾಟಾ!
ಬಹುತೇಕ ಮಾಡೆಲ್‌ಗಳಲ್ಲಿ ಏಳು ಸೀಟು ಲಭ್ಯವಿದೆ. ಮೊದಲ ಸಾಲು ಎಂದಿನಂತೆ ಲಕ್ಸುರಿ. ಬಟನ್‌ಗಳ ಮೂಲಕವೇ ಸೀಟು ಅಡ್ಜಸ್ಟ್ ಮಾಡಿಕೊಳ್ಳಬಹುದು. ಎರಡನೇ ಸಾಲು ಕೂಡ ತುಂಬಾ ಆರಾಮದಾಯಕ. ಮೂರನೇ ಸಾಲಿನಲ್ಲಿ ಮೂರು ಮಂದಿ ಕೂರಬಹುದು. ಹೆವಿ ವೇಟ್ ಚಾಂಪಿಯನ್‌ಗಳನ್ನು ಹೊರತುಪಡಿಸಿ ಉಳಿದವರು ಎರಡನೇ ಸಾಲಿನ ಎರಡು ಸೀಟುಗಳ ಮಧ್ಯ ಸಾಗಿ ಹೋಗಿ ಸಮಾಧಾನಕರವಾಗಿ ಕೂರಬಹುದು. ಹಿಂದುಗಡೆ ಸಾಲಿನಲ್ಲಿ ಯುಎಸ್ ಬಿ ಚಾರ್ಜಿಂಗ್ ಪಾಯಿಂಟು ಇರುವುವುದು ತುಂಬಾ ಅನುಕೂಲಕರ.
ಕಾರಲ್ಲಿರುವ ಏಳೂ ಸೀಟುಗಳು ಫುಲ್ ಆದರೆ ಡಿಕ್ಕಿ ಸ್ಪೇಸ್ ಮಾತ್ರ ಕಡಿಮೆಯಾಗುತ್ತದೆ. ಊರಿಗೆ ಹೋದವರು ಹಲಸಿನ ಕಾಯಿ, ಬಾಳೆಗೊನೆಗಳನ್ನು ತರುವುದು ಕಷ್ಟವಾಗಲಿದೆ. ಹಾಗೊಂದು ವೇಳೆ ನೀವು ಮೂರನೇ ಸಾಲಿನ ಸೀಟುಗಳನ್ನು ಮಡಿಚಿಟ್ಟರೆ ಮಾತ್ರ ಬೇಕಾದಷ್ಟು ಜಾಗ ಸಿಗುತ್ತದೆ. ತೆಂಗಿನಕಾಯಿ ಮೂಟೆ ಬೇಕಾದರೂ ತರಬಹುದು. ಸೀಟನ್ನು ಬಿಳಿ ಥೀಮ್‌ನಲ್ಲಿ ಸಿದ್ಧಪಡಿಸಿರುವುದರಿಂದ ಕಾರೊಳಗೆ ಇರುವಾಗ ಹುಷಾರು. ಚೆಂದ ಕಾಣುತ್ತದೆ. ಆದರೆ ಕಲೆ ತಿಕ್ಕಿ ತಿಕ್ಕಿ ತೊಳೆಯಬೇಕಾಗಿ ಬರಬಹುದಾದ ಸಂದರ್ಭ ಎದುರಾದರೆ ಕಷ್ಟಾಕಷ್ಟ.
ಆಕರ್ಷಕ ಬೆಲೆಯಲ್ಲಿ ಐಕಾನಿಕ್ ಟಾಟಾ ಸಫಾರಿ ಕಾರು ಬಿಡುಗಡೆ!
2.0 ಲೀ ಡೀಸೆಲ್ ಇಂಜಿನ್ ಹೊಂದಿರುವ ಈ ಕಾರಿನ ಪವರ್ ಬಹಳ ಚೆನ್ನಾಗಿದೆ. ಎತ್ತರ ತಗ್ಗುಗಳಲ್ಲಿಯೂ ನಿರಾತಂಕವಾಗಿ ಸಾಗಬಹುದು. ಕಾರು ಎತ್ತರವಾಗಿರುವುದರಿಂದ ಇದರಲ್ಲಿ ಕುಳಿತು ಸಾಗುವ ಮಜವೇ ಬೇರೆ. ಸಣ್ಣ ಮಟ್ಟದ ಗುಂಡಿಗಳು ಇದಕ್ಕೆ ಲೆಕ್ಕವೇ ಇಲ್ಲ. ಹಿಲ್ ಅಸಿಸ್ಟ್ ಮೋಡ್ ಇರುವುದರಿಂದ ಎತ್ತರ ಪ್ರದೇಶದಿಂದ ಕೆಳಗಿಳಿಯುವಾಗ ಹಿಲ್ ಅಸಿಸ್ಟ್ ಮೋಡ್ ಅನ್ ಮಾಡಿಟ್ಟರೆ ಕಾರು ತನ್ನಿಂತಾನೇ ಬುಡ ತಲುಪುತ್ತದೆ. ನೀವು ಬ್ರೇಕ್ ಒತ್ತುವ ಶ್ರಮ ತೆಗೆದುಕೊಳ್ಳಬೇಕಾಗಿಯೇ ಇಲ್ಲ.
ಇನ್ನೊಂದು ಇಂಟರೆಸ್ಟಿಂಗ್ ಫೀಚರ್ ಎಂದರೆ ಆಟೋ ಹೋಲ್ಡ್ ಫೀಚರ್. ಸಿಟಿಯಲ್ಲಿ ಆಟೋ ಹೋಲ್ಡ್ ಫೀಚರ್ ಆನ್ ಮಾಡಿಟ್ಟುಕೊಂಡರೆ ನೀವು ಒಮ್ಮೆ ಬ್ರೇಕ್ ಹೊಡೆದು ಕಾರು ನಿಲ್ಲಿಸಿದರೆ ಕಾರು ಹಿಂದೆ ಚಲಿಸುವುದಿಲ್ಲ. ಅಟೋಮ್ಯಾಟಿಕ್ ಆಗಿ ಬ್ರೇಕ್ ಆನ್ ಆಗುತ್ತದೆ. ಆ್ಯಕ್ಸಿಲೇಟರ್ ಒತ್ತಿದಾಗಲೇ ಮುಂದೆ ಸಾಗುವುದು. ಪದೇ ಪದೇ ಹ್ಯಾಂಡ್ ಹಾಕುವುದನ್ನು ಅಥವಾ ಬ್ರೇಕ್ ಒತ್ತಿಕೊಂಡೇ ಇರುವುದನ್ನು ಈ ಫೀಚರ್ ತಪ್ಪಿಸುತ್ತದೆ. ಕೆಲವರಿಗೆ ಈ ಫೀಚರ್ ಕಿರಿಕಿರಿ ಉಂಟುಮಾಡುವ ಸಾಧ್ಯತೆಯೂ ಇದೆ. ಅವರವರ ಖುಷಿಗೆ ತಕ್ಕಂತೆ ಫೀಚರ್ ಬದಲಿಸಿಕೊಳ್ಳಬಹುದು.
ಒಟ್ಟಾರೆ ನೋಡುವುದಾದರೆ ಚೆಂದಕ್ಕೆ ಚೆಂದವೂ ಇರುವ, ಪವರ್ ಗೆ ಪವರ್ ಕೂಡ ಇರುವ ಈ ಕಾರು ಸಿಟಿಗಿಂತ ಆಚೆ ಪದೇ ಪದೇ ಹೋಗುವವರಿಗೆ ಉತ್ತಮ ಆಯ್ಕೆ.