ಅಮೆರಿಕದ ಕರೆನ್ಸಿ ಮೇಲ್ವಿಚಾರಣೆ ಪಟ್ಟಿಯಿಂದ ಭಾರತ ಹೊರಗೆ,ಇದಕ್ಕೇನು ಕಾರಣ?

By Suvarna NewsFirst Published Nov 12, 2022, 4:19 PM IST
Highlights

ಅಮೆರಿಕದ  ಖಜಾನೆ ಇಲಾಖೆ  ತನ್ನ ಕರೆನ್ಸಿ ಮೇಲ್ವಿಚಾರಣೆ ಪಟ್ಟಿಯಿಂದ ಭಾರತ ಸೇರಿದಂತೆ ಐದು ರಾಷ್ಟ್ರಗಳನ್ನು ಹೊರಗಿಟ್ಟಿದೆ. ಇದು ಭಾರತದ ಮೇಲೆ ಹೇಗೆ ಪರಿಣಾಮ ಬೀರಲಿದೆ? ಇದ್ರಿಂದ ಭಾರತಕ್ಕೆ ಲಾಭವಾಗುತ್ತಾ ಇಲ್ಲ ನಷ್ಟವಾಗುತ್ತಾ? ಇಲ್ಲಿದೆ ಮಾಹಿತಿ. 
 

ನವದೆಹಲಿ (ನ.12): ಅಮೆರಿಕದ ಖಜಾನೆ ಇಲಾಖೆ  ತನ್ನ ಕರೆನ್ಸಿ  ಮೇಲ್ವಿಚಾರಣೆ ಪಟ್ಟಿಯಿಂದ ಭಾರತವನ್ನು ಹೊರಗಿಟ್ಟಿದೆ. ಭಾರತದ ಜೊತೆಗೆ ಇಟಲಿ, ಮೆಕ್ಸಿಕೋ, ಥೈಲ್ಯಾಂಡ್ ಹಾಗೂ ವಿಯೆಟ್ನಾಂ ಅನ್ನು ಕೂಡ ಪಟ್ಟಿಯಿಂದ ತೆಗೆಯಲಾಗಿದೆ.  ಈ ಸಂಬಂಧ ಶುಕ್ರವಾರ ಅಮೆರಿಕದ ಖಜಾನೆ ಇಲಾಖೆ  ಮಾಹಿತಿ ನೀಡಿದೆ. ಕಳೆದ ಎರಡು ವರ್ಷಗಳ ಬಳಿಕ ಕರೆನ್ಸಿ ಮೇಲ್ವಿಚರಣೆ ಪಟ್ಟಿಯ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದ ಭಾರತವನ್ನು ಕೈ ಬಿಡಲಾಗಿದೆ. ಈ ಪಟ್ಟಿ ದೇಶಗಳ ಕರೆನ್ಸಿ ಅಭ್ಯಾಸಗಳು ಹಾಗೂ ಸ್ಥೂಲ ಆರ್ಥಿಕ ನೀತಿಗಳನ್ನು ಹತ್ತಿರದಿಂದ ಗಮನಿಸಲು ನೆರವು ನೀಡುತ್ತದೆ.ಚೀನಾ, ಜಪಾನ್, ಕೊರಿಯಾ, ಜರ್ಮನಿ, ಮಲೇಷ್ಯಾ, ಸಿಂಗಾಪುರ ಹಾಗೂ ತೈವಾನ್ ಪ್ರಸ್ತುತ ಮೇಲ್ವಿಚರಣಾ ಪಟ್ಟಿಯಲ್ಲಿರುವ ಏಳು ಆರ್ಥಿಕತೆಗಳು ಎಂದು  ಅಮೆರಿಕದ ಕಾಂಗ್ರೆಸ್ ಗೆ ಸಲ್ಲಿಕೆ ಮಾಡಿದ ದ್ವಿವಾರ್ಷಿಕ ವರದಿಯಲ್ಲಿ ದೇಶದ ಖಜಾನೆ ಇಲಾಖೆ ಮಾಹಿತಿ ನೀಡಿದೆ. ಭಾರತ ಸೇರಿದಂತೆ ಐದು ರಾಷ್ಟ್ರಗಳು ಪಟ್ಟಿಯಲ್ಲಿ ಸ್ಥಾನ ಪಡೆಯಲು ನಿಗದಿಪಡಿಸಿರುವ ಮೂರು ಮಾನದಂಡಗಳಲ್ಲಿ ಕೇವಲ ಒಂದನ್ನಷ್ಟೇ ಪೂರ್ಣಗೊಳಿಸಲು ಶಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಐದು ರಾಷ್ಟ್ರಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ. 

ಪಟ್ಟಿಯ ಎರಡು ವರದಿಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಐದು ರಾಷ್ಟ್ರಗಳು ಒಂದು ಮಾನದಂಡಗಳನ್ನು ಪೂರೈಸಿವೆ. ಆದರೆ, ಸ್ವಿಜರ್ ಲ್ಯಾಂಡ್ ಮಾತ್ರ ಮೂರರಲ್ಲಿಒಂದೂ ಮಾನದಂಡಗಳನ್ನು ಪೂರೈಸಿಲ್ಲ ಎಂದು ಖಜಾನೆ ಇಲಾಖೆ ಮಾಹಿತಿ ನೀಡಿದೆ.  ಈ ವರದಿ ಸಿದ್ಧಪಡಿಸಲು ಅಮೆರಿಕದ ಖಜಾನೆ ಇಲಾಖೆ ಅಮೆರಿಕದ ಪ್ರಮುಖ ವಾಣಿಜ್ಯ ಪಾಲುದಾರ ರಾಷ್ಟ್ರಗಳ ನೀತಿಗಳನ್ನು ಪರಿಶೀಲಿಸಿ, ಮೌಲ್ಯಮಾಪನ ಮಾಡಿದೆ. ಸುಮಾರು ಶೇ.80ರಷ್ಟು ಅಮೆರಿಕದ ಸರಕು ಹಾಗೂ ಸೇವೆಗಳ ವಿದೇಶಿ ವ್ಯಾಪಾರವನ್ನು ನಾಲ್ಕು ತ್ರೈಮಾಸಿಕಗಳ ಅವಧಿಯಲ್ಲಿ ಪರಿಶೀಲಿಸಲಾಗಿದೆ. 

ಈಗ ವಾಟ್ಸ್ಆ್ಯಪ್ ನಲ್ಲಿ ಉಚಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡ್ಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ

ಭಾರತದ ಮೇಲೇನು ಪರಿಣಾಮ?
ಅಮೆರಿಕದ ಕರೆನ್ಸಿ ಮೇಲ್ವಿಚರಣೆ ಪಟ್ಟಿಯಲ್ಲಿ ಒಂದು ರಾಷ್ಟ್ರವಿದ್ದಾಗ ಅದನ್ನು 'ಕರೆನ್ಸಿ ನಿಯಂತ್ರಕ' ಎಂದು ಪರಿಗಣಿಸಲಾಗುತ್ತದೆ. ವ್ಯಾಪಾರದ ಲಾಭಕ್ಕಾಗಿ 'ಅನ್ಯಾಯದ ಕರೆನ್ಸಿ ಅಭ್ಯಾಸ' ಗಳಲ್ಲಿ ತೊಡಗಿರುವ ರಾಷ್ಟ್ರಗಳಿಗೆ ಅಮೆರಿಕದ ಸರ್ಕಾರಿ ಪ್ರಾಧಿಕಾರ ಈ ಸ್ಥಾನಮಾನ ನೀಡುತ್ತದೆ. ಒಂದರ್ಥದಲ್ಲಿ ಈ ಪಟ್ಟಿಯಿಂದ  ಕೈಬಿಟ್ಟಿರೋದು ಭಾರತದ ಪಾಲಿಗೆ ಉತ್ತಮ ಬೆಳವಣಿಗೆಯೇ ಆಗಿದೆ. 'ಭಾರತವನ್ನು ಅಮೆರಿಕದ ಕರೆನ್ಸಿ ನಿಯಂತ್ರಣ ಪಟ್ಟಿಯಿಂದ ಹೊರಗಿಟ್ಟಿರೋದ್ರಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈಗ ವಿನಿಮಯ ದರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು. ಕರೆನ್ಸಿ ನಿಯಂತ್ರಕ ಎಂಬ ಪಟ್ಟವಿದ್ರೆ ಇದು ಸಾಧ್ಯವಿಲ್ಲ. ಮಾರುಕಟ್ಟೆ ಆಯಾಮದಲ್ಲಿ ಗಮನಿಸಿದರೆ ಇದು ಭಾರತಕ್ಕೆ ದೊಡ್ಡ ಜಯ. ಅಲ್ಲದೆ, ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾತ್ರ ಬೆಳೆಯುತ್ತಿರೋದರ ಸಂಕೇತವಾಗಿದೆ' ಎಂದು ಗ್ರ್ಯಾಂಟ್ ಥೋರಂಟನ್ ಭಾರತ್  ಸಂಸ್ಥೆಯ ಪಾಲುದಾರ ವಿವೇಕ್ ಐಯರ್ ಅಭಿಪ್ರಾಯ ಪಟ್ಟಿದ್ದಾರೆ. 

ದುಬಾರಿಯಾಗುತ್ತೆ ರೋಟಿ, ಚಪಾತಿ; ಗಗನಕ್ಕೇರಿದ ಗೋಧಿ ಬೆಲೆ!

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ನಡುವೆಯೇ ವಿನಿಮಯ ದರವನ್ನು ನಿರ್ವಹಿಸಲು ಆರ್ ಬಿಐ ಇತ್ತೀಚೆಗೆ ಅತ್ಯಧಿಕ ಒಳಹರಿವಿನ ಸಮಯದಲ್ಲಿ ಡಾಲರ್ ಗಳನ್ನು ಖರೀದಿಸುವ ಹಾಗೂ ಹೊರಹರಿವಿನ ಸಮಯದಲ್ಲಿ ಡಾಲರ್ ಮಾರಾಟ ಮಾಡುವ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಇನ್ನು ಮುಂದೆ ಈ ನಿಟ್ಟಿನಲ್ಲಿ ಸ್ವತಂತ್ರ ನಿರ್ಣಯಗಳನ್ನು ಕೈಗೊಳ್ಳುವುದು ಆರ್ ಬಿಐಗೆ ಹೆಚ್ಚು ಸುಲಭವಾಗಲಿದೆ. 
ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯು ಸಾಕಷ್ಟು ತೊಂದರೆಯಲ್ಲಿ ಸಿಲುಕಿದೆ. ಪೂರೈಕೆ ಸರಪಳಿಯಲ್ಲಿ ಸಾಕಷ್ಟು ವ್ಯತ್ಯಯವಾಗಿದೆ ಕೂಡ. ಹೀಗಾಗಿ ಭಾರತದಂತಹ ಆರ್ಥಿಕತೆಗಳು ಕರೆನ್ಸಿ ಚಲಾವಣೆ ವಿಚಾರದಲ್ಲಿ ಸಾಕಷ್ಟು ಎಚ್ಚರ ವಹಿಸೋದು ಅಗತ್ಯವಾಗಿದೆ. 
 

click me!