ಜಗತ್ತಿನ ಅತಿದೊಡ್ಡ ತೈಲಮೂಲ ದಾಳಿಗೆ ಬಲಿ!

By Kannadaprabha NewsFirst Published Sep 16, 2019, 12:43 PM IST
Highlights

ವಿಶ್ವದಲ್ಲೇ ಅತಿ ಹೆಚ್ಚು ತೈಲ ಸಂಸ್ಕರಿಸುವ ಸೌದಿ ಅರೇಬಿಯಾದ ಅರಾಮ್ಕೊ ಕಂಪನಿಯ ತೈಲ ಘಟಕಗಳ ಮೇಲೆ ಪಕ್ಕದ ಯಮನ್‌ ದೇಶದ ಬಂಡುಕೋರರು ಭಾರಿ ಡ್ರೋನ್‌ ದಾಳಿ ನಡೆಸಿದ್ದಾರೆ. ದಾಳಿಯಿಂದ ಸಾವು-ನೋವು ಸಂಭವಿಸದಿದ್ದರೂ ದಿನಕ್ಕೆ 50 ಲಕ್ಷಕ್ಕೂ ಅಧಿಕ ಬಾರೆಲ್‌ ತೈಲ ಪೂರೈಕೆ ಕಡಿತಗೊಂಡಿರಬಹುದು ಎಂಬ ಅಂದಾಜಿಸಲಾಗಿದೆ. 

ವಿಶ್ವದಲ್ಲೇ ಅತಿ ಹೆಚ್ಚು ತೈಲ ಸಂಸ್ಕರಿಸುವ ಸೌದಿ ಅರೇಬಿಯಾದ ಅರಾಮ್ಕೊ ಕಂಪನಿಯ ತೈಲ ಘಟಕಗಳ ಮೇಲೆ ಪಕ್ಕದ ಯಮನ್‌ ದೇಶದ ಬಂಡುಕೋರರು ಭಾರಿ ಡ್ರೋನ್‌ ದಾಳಿ ನಡೆಸಿದ್ದಾರೆ. ದಾಳಿಯಿಂದ ಸಾವು-ನೋವು ಸಂಭವಿಸದಿದ್ದರೂ ದಿನಕ್ಕೆ 50 ಲಕ್ಷಕ್ಕೂ ಅಧಿಕ ಬಾರೆಲ್‌ ತೈಲ ಪೂರೈಕೆ ಕಡಿತಗೊಂಡಿರಬಹುದು ಎಂಬ ಅಂದಾಜಿಸಲಾಗಿದೆ.

ಸೌದಿ ಅರೇಬಿಯಾ ಜಗತ್ತಿನ ಅತಿದೊಡ್ಡ ತೈಲೋತ್ಪಾದಕ ದೇಶಗಳಲ್ಲೊಂದು. ಈಗಿನ ದಾಳಿಯಿಂದ ಅಲ್ಲಿನ ಅರ್ಧಕ್ಕರ್ಧ ತೈಲ ಪೂರೈಕೆ ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ. ಇದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಲ್ಲೋಕಲ್ಲೋಲ ಸೃಷ್ಟಿಸುವ ಸಂಗತಿ. ಇದರ ಬಗೆಗಿನ ಪೂರ್ಣ ಮಾಹಿತಿ ಇಲ್ಲಿದೆ.

ICICI ಗ್ರಾಹಕರಿಗೆ ಬ್ಯಾಡ್ ನ್ಯೂಸ್: ಅ.16ರಿಂದ ಪ್ರತಿ ವ್ಯವಹಾರಕ್ಕೂ ಶುಲ್ಕ!

80 ಲಕ್ಷ ಬ್ಯಾರೆಲ್‌ ತೈಲೋತ್ಪಾದನೆ ಮಾಡುವ ಘಟಕಗಳ ಮೇಲೆ ದಾಳಿ

ದಾಳಿಗೆ ತುತ್ತಾಗಿರುವ ಬುಕ್ಯಾಕ್‌ ಮತ್ತು ಖುರಾಯಿಸ್‌ ತೈಲ ಸಂಸ್ಕಣಾ ಘಟಕಗಳು ಸೌದಿಯ ಸರ್ಕಾರಿ ಒಡೆತನದ ಅರಾಮ್ಕೊ ತೈಲ ಕಂಪನಿಗೆ ಸೇರಿವೆ. ಅರಾಮ್ಕೋ ಜಾಗತಿಕ ತೈಲದಲ್ಲಿ 5% ತೈಲವನ್ನು ರಫ್ತು ಮಾಡುತ್ತದೆ. ಸೌದಿಯ ಧಾಹ್ರಾನ್‌ನಿಂದ ಸುಮಾರು 60 ಕಿ.ಮೀ. ದೂರದ ಬುಕ್ಯಾಕ್‌ನಲ್ಲಿರುವ ಅಬ್‌ಕೈಖ್‌ ತೈಲ ನಿಕ್ಷೇಪ ಕೇಂದ್ರಗಳು ವಿಶ್ವದಲ್ಲೇ ಅತಿ ದೊಡ್ಡ ತೈಲ ಸಂಸ್ಕರಣಾ ಕೇಂದ್ರಗಳು. ಇಲ್ಲಿಂದ ಕಚ್ಚಾ ತೈಲವನ್ನು ಸಂಸ್ಕರಿಸಿ ಪರ್ಶಿಯನ್‌ ಕೊಲ್ಲಿ ಹಾಗೂ ಕೆಂಪು ಸಮುದ್ರದ ಮೂಲಕ ಟ್ರಾನ್‌ಶಿಪ್‌ಮೆಂಟ್‌ ಘಟಕಗಳಿಗೆ ಸರಬರಾಜು ಮಾಡಲಾಗುತ್ತದೆ.

ದಿನವೊಂದಕ್ಕೆ 70 ಲಕ್ಷ ಬ್ಯಾರೆಲ್‌ನಷ್ಟು ತೈಲವನ್ನು ಇಲ್ಲಿ ಸಂಸ್ಕರಣೆ ಮಾಡಲಾಗುತ್ತದೆ. ಇನ್ನು ಖುರಾಯಿಸ್‌ ತೈಲ ಘಟಕವು ದಕ್ಷಿಣ ಸೌದಿಯಿಂದ 160 ಕಿ.ಮೀ ದೂರದಲ್ಲಿದ್ದು, ಪ್ರತಿ ದಿನ 10 ಲಕ್ಷ ಬ್ಯಾರೆಲ್‌ ಕಚ್ಚಾತೈಲ ಉತ್ಪಾದಿಸುತ್ತದೆ. ಇದು 2 ಸಾವಿರ ಕೋಟಿ ಬ್ಯಾರೆಲ್‌ನಷ್ಟುತೈಲ ಸಂಗ್ರಹಣ ಸಾಮರ್ಥ್ಯ ಹೊಂದಿದೆ.

ಸೀತಾರಾಮನ್ ಹೊಸ ಘೋಷಣೆ: ಒಂದೊಂದಾಗಿ ಎಲ್ಲದರ ಪೋಷಣೆ!

ದಾಳಿ ನಡೆಸಿದ್ದು ಹೌತಿ ಬಂಡುಕೋರರು

ಯುಎಇ ಗಡಿ ಭಾಗದಲ್ಲಿರುವ ತೈಲ ಸಂಸ್ಕರಣ ಘಟಕದ ಮೇಲೆ ನೆರೆಯ ಯೆಮನ್‌ ಬಂಡುಕೋರರು ಡ್ರೋನ್‌ ದಾಳಿ ನಡೆಸಿದ ಒಂದು ತಿಂಗಳ ಬಳಿಕ ಈ ದಾಳಿ ನಡೆದಿದೆ. ಹೀಗಾಗಿ ಯೆಮನ್‌ನಿಂದಲೇ ಮತ್ತೊಂದು ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿತ್ತು. ಅದರ ಬೆನ್ನಲ್ಲೇ ಯೆಮನ್‌ನ ಹೌತಿ ಬಂಡುಕೋರರು ತಾವೇ ದಾಳಿ ನಡೆಸಿದ್ದಾಗಿ ಹೊಣೆಹೊತ್ತುಕೊಂಡಿದ್ದಾರೆ. 10 ಡ್ರೋನ್‌ಗಳನ್ನು ಬಳಸಿ ಅರಾಮ್ಕೋ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಹೌತಿ ನೇತೃತ್ವದ ಸೌದಿಯ ಅಲ್‌ ಮಸಿರಾ ಟಿ.ವಿ ಇದನ್ನು ವರದಿ ಮಾಡಿದೆ.

ಕಳೆದ ತಿಂಗಳು ಅರಾಮ್ಕೊದ ಶೇಬಾ ನೈಸರ್ಗಿಕ ಅನಿಲ ಸಂಸ್ಕರಣಾ ಘಟಕದ ಮೇಲೆ ನಡೆದಿದ್ದ ದಾಳಿಯ ಹೊಣೆಯನ್ನು ಯೆಮನ್‌ನ ಹೌತಿ ಬಂಡುಕೋರರು ಹೊತ್ತುಕೊಂಡಿದ್ದರು. ಮೇ 14ರಂದು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಎರಡು ತೈಲ ಉತ್ಪಾದನಾ ಘಟಕಗಳ ಮೇಲೆ ಇದೇ ಗುಂಪು ಡ್ರೋನ್‌ ದಾಳಿ ನಡೆಸಿತ್ತು.

ಅಂಬಾನಿ ಕುಟುಂಬಕ್ಕೆ ಟ್ಯಾಕ್ಸ್ ನೊಟೀಸ್: ಅವರನ್ನು ಬಿಟ್ಟು ಉಳಿದವರೆಲ್ಲ ಕನ್ಫ್ಯೂಸ್!

ಪ್ರಮುಖ ತೈಲ ಪೈಪ್‌ಲೈನ್‌ ದಾಳಿಗೆ ಗುರಿಯಾಗಿದ್ದರಿಂದ ಹಲವು ದಿನಗಳ ಕಾಲ ಇದನ್ನು ಮುಚ್ಚಲಾಗಿತ್ತು. ಅಲ್ಲದೆ ಇತ್ತೀಚಿನ ಕೆಲ ತಿಂಗಳುಗಳಲ್ಲಿ ಸೌದಿಯ ವಾಯುನೆಲೆ ಹಾಗೂ ಇತರೆ ಪ್ರದೇಶಗಳ ಮೇಲೆ ಯೆಮನ್‌ನ ಹೌತಿ ಬಂಡುಕೋರರು ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ನಡೆಸುತ್ತಿದ್ದಾರೆ.

ಹೌತಿ ಬಂಡುಕೋರರು ದಾಳಿ ಮಾಡಿದ್ದೇಕೆ?

ಯೆಮನ್‌ನಲ್ಲಿ 2015ರಿಂದಲೂ ಸರ್ಕಾರಿ ಪಡೆಗಳು ಮತ್ತು ಇರಾನ್‌ ಬೆಂಬಲಿತ ಹೌತಿ ಬಂಡುಕೋರರ ನಡುವೆ ಸಂಘರ್ಷ ನಡೆಯುತ್ತಿದೆ. ಸರ್ಕಾರ ಮತ್ತು ಬಂಡುಕೋರರ ನಡುವೆ ಸ್ವೀಡನ್‌ನಲ್ಲಿ ಶಾಂತಿ ಮಾತುಕತೆ ನಡೆದ ಬಳಿಕ ಕಳೆದ ವರ್ಷ ಡಿಸೆಂಬರ್‌ನಲ್ಲಿ ಯುದ್ಧ ವಿರಾಮ ಘೋಷಿಸಲಾಗಿತ್ತು. ಸೌದಿ ಅರೇಬಿಯಾ ಮತ್ತು ಅದರ ಮಿತ್ರ ರಾಷ್ಟ್ರಗಳು ಯೆಮನ್‌ನ ಸರ್ಕಾರಕ್ಕೆ ಬಂಬಲ ನೀಡುತ್ತಾ ಬಂದಿವೆ.

ಅಮೆರಿಕ ಮೂಲಕ ಎಸಿಎಲ್‌ಇಡಿ ಅಂಕಿಅಂಶದ ಪ್ರಕಾರ ಕಳೆದ 4 ವರ್ಷದಲ್ಲಿ ಯೆಮನ್‌ನಲ್ಲಿ 90,000ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಯೆಮನ್‌ನಲ್ಲಿನ ಬಂಡುಕೋರರ ಪ್ರದೇಶಗಳ ಮೇಲೆ ಸೌದಿ ಅರೇಬಿಯಾ ನೇತೃತ್ವದಲ್ಲಿ ಹಲವು ದಿನಗಳಿಂದ ಬಾಂಬ್‌ ಕಾರಾರ‍ಯಚರಣೆ ನಡೆಸಲಾಗುತ್ತಿತ್ತು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಸ್ವತಃ ಬಂಡುಕೋರರು ಹೇಳಿಕೊಂಡಿದ್ದಾರೆ.

ವಿಶ್ವದ 2ನೇ ಅತಿ ದೊಡ್ಡ ತೈಲ ರಫ್ತು ದೇಶ ಸೌದಿ

ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಸಂಘಟನೆಯಲ್ಲಿ (ಒಪೆಕ್‌) ಸೌದಿ ಎರಡನೇ ಸ್ಥಾನ ಪಡೆದಿದೆ. ವಿಶ್ವದ ಒಟ್ಟು ತೈಲ ನಿಕ್ಷೇಪಗಳಲ್ಲಿ ಸೌದಿ ಅರೇಬಿಯಾ 18% ನಿಕ್ಷೇಪಗಳನ್ನು ಹೊಂದಿದೆ. ಪ್ರತಿ ದಿನ 1 ಕೋಟಿಗೂ ಅಧಿಕ ಬ್ಯಾರೆಲ್‌ ತೈಲವನ್ನು ವಿವಿಧ ರಾಷ್ಟ್ರಗಳಿಗೆæ ರಫ್ತು ಮಾಡುತ್ತಿದೆ. ಅತ್ಯಧಿಕ ತೈಲ ಉತ್ಪಾದಕ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕ ಮೊದಲ ಸ್ಥಾನ ಪಡೆದಿದ್ದರೆ, ಸೌದಿ ಎರಡನೇ ಸ್ಥಾನ ಪಡೆದಿದೆ.

ಆರ್ಥಿಕ ಹಿಂಜರಿಕೆ ಮೂಲ ಎಲ್ಲಿದೆ? ಪರಿಹಾರವೇನು?

ಚೀನಾ, ಭಾರತ, ಜಪಾನ್‌ಗೆ ತೈಲ ಟೆನ್ಷನ್‌

ಡ್ರೋನ್‌ ದಾಳಿಗೆ ಒಳಗಾಗಿರುವ ಅರಾಮ್ಕೊ ತೈಲ ನಿಕ್ಷೇಪ ಕೇಂದ್ರಗಳು ವಿಶ್ವದಲ್ಲೇ ಅತಿ ದೊಡ್ಡ ತೈಲ ಸಂಸ್ಕರಣಾ ಕೇಂದ್ರಗಳಾಗಿದ್ದು, ಜಾಗತಿಕ ಬೇಡಿಕೆಯ 5% ತೈಲವನ್ನು ಇದೊಂದೇ ಪೂರೈಸುತ್ತಿದೆ. ಆದರೆ ಈ ದಾಳಿಯಿಂದ ಸಾಕಷ್ಟು ನಷ್ಟ ಉಂಟಾಗಿದ್ದು, ಇಲ್ಲಿಂದ ಅತಿ ಹೆಚ್ಚು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ದೇಶಗಳಾದ ಚೀನಾ, ಭಾರತ, ಜಪಾನ್‌, ತೈವಾನ್‌, ದಕ್ಷಿಣ ಕೊರಿಯಾ ಮುಂತಾದ ದೇಶಗಳು ಚಿಂತೆಗೆ ಬಿದ್ದಿವೆ.

ಈ ದಾಳಿಯ ಪರಿಣಾಮ ಜಗತ್ತಿನಾದ್ಯಂತ ತೈಲ ಬೆಲೆ ಏರಿಕೆಯಾಗಬಹುದೆಂದು ಉದ್ಯಮಿಗಳು ಊಹಿಸುತ್ತಿದ್ದಾರೆ. ದಾಳಿಯಿಂದ ತೈಲ ಬೇಡಿಕೆ ಮತ್ತು ಅದರ ಬೆಲೆಯಲ್ಲಿ ಆಗುವ ವ್ಯತ್ಯಾಸಗಳು ತಕ್ಷಣಕ್ಕೆ ಗೋಚರವಾಗದು ಎಂದು ಹೇಳಲಾಗುತ್ತಿದ್ದರೂ, ಒಂದೇ ವಾರದಲ್ಲಿ ಪರಿಣಾಮ ಗೋಚರಿಸಲಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಅಮೆರಿಕ-ಇರಾನ್‌ ಬಿಕ್ಕಟ್ಟು ತೀವ್ರ?

ಸೌದಿ ಅರೇಬಿಯಾ ತೈಲ ಸಂಸ್ಕರಣಾ ಘಟಕಗಳ ಮೇಲಿನ ದಾಳಿಗೆ ಇರಾನ್‌ ಕಾರಣ ಎಂದು ಅಮೆರಿಕ ಆರೋಪಿಸಿದೆ. ಯೆಮನ್‌ನ ಹೌತಿ ಬಂಡುಕೋರರಿಗೆ ಇರಾನ್‌ ಕುಮ್ಮಕ್ಕು ನೀಡುತ್ತಿದೆ ಎಂಬುದು ಅಮೆರಿಕದ ಆರೋಪ. ಆದರೆ ಈಗಾಗಲೇ ಇರಾನ್‌ ಮತ್ತು ಅಮೆರಿಕದ ನಡುವಿನ ಜಗಳ ಬೂದಿ ಮುಚ್ಚಿದ ಕೆಂಡದಂತಿದ್ದು, ಈ ಘಟನೆಯಿಂದ ಯುದ್ಧದ ಕಾರ್ಮೋಡ ಆವರಿಸಿದೆ.

ಇದೇ ವರ್ಷ ಜೂನ್‌ನಲ್ಲಿ ಅಮೆರಿಕದ ಡ್ರೋನ್‌ ಮೇಲೆ ಇರಾನ್‌ ದಾಳಿ ಮಾಡಿ ಹೊಡೆದುರುಳಿಸಿತ್ತು. ಇದಾದ ಬಳಿಕ ಇರಾನ್‌ ಮೇಲೆ ನಡೆಸಬೇಕಿದ್ದ ವೈಮಾನಿಕ ದಾಳಿಯನ್ನು ಅಮೆರಿಕ ಕೊನೆ ಕ್ಷಣದಲ್ಲಿ ರದ್ದುಪಡಿಸಿತ್ತು. ಜೊತೆಗೆ ಇರಾನ್‌ ಮೇಲೆ ಆರ್ಥಿಕ ನಿರ್ಬಂಧ ಹೇರಿತ್ತು.

4 ವರ್ಷ ಹಿಂದೆಯೇ ಉಬರ್, ಓಲಾ ಬಗ್ಗೆ ಎಚ್ಚರಿಸಿದ್ದ ಆನಂದ್ ಮಹೀಂದ್ರಾ!

2006 ರಲ್ಲಿ ಉಗ್ರರ ದಾಳಿ ಯತ್ನ ವಿಫಲ

ಸೌದಿಯ ಅರಾಮ್ಕೊ ತೈಲ ಸಂಸ್ಕರಣಾ ಕೇಂದ್ರದ ಮೇಲೆ ಈ ಹಿಂದೆಯೂ ಉಗ್ರರು ದಾಳಿ ಮಾಡಿಲು ಯತ್ನಿಸಿದ್ದರು. 2006ರ ಫೆಬ್ರವರಿಯಲ್ಲಿ ಅಲ್‌-ಖೈದಾ ಉಗ್ರಗಾಮಿ ಸಂಘಟನೆಯು ಆತ್ಮಹತ್ಯಾ ಬಾಂಬ್‌ ದಾಳಿಗೆ ಯತ್ನಿಸಿ ವಿಫಲಗೊಂಡಿತ್ತು.

ಅತಿ ಹೆಚ್ಚು ತೈಲ ಉತ್ಪಾದಿಸುವ ರಾಷ್ಟ್ರಗಳು

ದೇಶ ಬ್ಯಾರೆಲ್‌/ ದಿನ

ಅಮೆರಿಕ 1.7 ಕೋಟಿ

ಸೌದಿ ಅರೇಬಿಯಾ 1.2 ಕೋಟಿ

ರಷ್ಯಾ 1.1 ಕೋಟಿ

ಕೆನಡಾ 50 ಲಕ್ಷ

ಚೀನಾ 48 ಲಕ್ಷ

ಇರಾಕ್‌ 46 ಲಕ್ಷ

ಇರಾನ್‌ 44 ಲಕ್ಷ

ಯುಎಇ 37 ಲಕ್ಷ

ಬ್ರೆಜಿಲ್‌ 34 ಲಕ್ಷ

ಕುವೈತ್‌ 28 ಲಕ್ಷ

ಪೆಟ್ರೋಲ್‌ ಬಳಕೆದಾರ ಟಾಪ್‌ 10 ರಾಷ್ಟ್ರಗಳು

ದೇಶ ಬಳಕೆ/ ದಿನಕ್ಕೆ ಬ್ಯಾರಲ್‌

ಅಮೆರಿಕ 1.9 ಕೋಟಿ

ಚೀನಾ 1.2 ಕೋಟಿ

ಭಾರತ 44 ಲಕ್ಷ

ಜಪಾನ್‌ 40 ಲಕ್ಷ

ರಷ್ಯಾ 36 ಲಕ್ಷ

ಸೌದಿ ಅರೇಬಿಯಾ 33 ಲಕ್ಷ

ಬ್ರೆಜಿಲ್‌ 29 ಲಕ್ಷ

ದಕ್ಷಿಣ ಕೊರಿಯಾ 26 ಲಕ್ಷ

ಕೆನಡಾ 24 ಲಕ್ಷ

ಜರ್ಮನಿ 23 ಲಕ್ಷ

click me!