ಭಾರತದ ಆರ್ಥಿಕತೆಯಲ್ಲಿ ಗರಿಗೆದರಿದ ಉದ್ಯಮ ಚಟುವಟಿಕೆ,14 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ;ಜಿಡಿಪಿ ಹೆಚ್ಚಳ ನಿರೀಕ್ಷೆ

By Suvarna NewsFirst Published Apr 23, 2024, 5:55 PM IST
Highlights

ಭಾರತದ ಆರ್ಥಿಕತೆಯಲ್ಲಿ ಉದ್ಯಮ ಚಟುವಟಿಕೆಗಳು ಹೆಚ್ಚಿವೆ. ಕಳೆದ 14 ವರ್ಷಗಳಲ್ಲೇ ಭಾರತದ ಆರ್ಥಿಕತೆ ಉದ್ಯಮ ಚಟುವಟಿಕೆಯಲ್ಲಿ ಭಾರೀ ಹೆಚ್ಚಳ ಕಂಡಿದೆ. 

ನವದೆಹಲಿ (ಏ.23): ಭಾರತದ ಆರ್ಥಿಕತೆಯಲ್ಲಿ ಉದ್ಯಮ ಚಟುವಟಿಕೆ ಕಳೆದ 14 ವರ್ಷಗಳಲ್ಲಿ ಭಾರೀ ಏರಿಕೆ ಕಂಡಿದೆ. ವಿವಿಧ ವಲಯಗಳಲ್ಲಿ ಉದ್ಯಮ ಗಮನಾರ್ಹ ಪ್ರಮಾಣದಲ್ಲಿ ಪ್ರಗತಿ ಕಂಡಿದೆ. ಇಂದು (ಏ.23) ಬಿಡುಗಡೆಯಾದ ರಾಯ್ಟರ್ಸ್ ಸಮೀಕ್ಷೆ ವರದಿ ಪ್ರಕಾರ ಇತ್ತೀಚಿನ ತ್ರೈಮಾಸಿಕದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ಆರ್ಥಿಕತೆ ಸ್ಥಾನಮಾನವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಉದ್ಯಮ ವಿಸ್ತರಣೆ ಮಾಡುತ್ತಿದೆ. ಭಾರತದ ಸಂಯೋಜಿತ ಖರೀದಿ ನಿರ್ವಹಣೆ ಸೂಚ್ಯಂಕ ಈ ತಿಂಗಳು 62.2 ಏರಿಕೆಯಾಗಿದೆ. ಇದು ಮಾರ್ಚ್ ನಲ್ಲಿ 61.8ರಷ್ಟಿತ್ತು. ಈ ಸುಸ್ಥಿರ ಬೆಳವಣಿಗೆ ಭಾರತದ ಆರ್ಥಿಕ ನಿರ್ವಹಣೆ ಮೇಲೆ ಪರಿಣಾಮ ಬೀರಿದೆ. ಸೇವಾ ವಲಯ, ಉತ್ಪಾದನಾ ವಲಯ , ಉದ್ಯೋಗ, ಹಣದುಬ್ಬರ ಮುಂತಾದ ಅಂಶಗಳ ಬಗ್ಗೆ ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಸೇವಾ ವಲಯದ ಪ್ರಗತಿ: ಭಾರತದ ಸೇವಾ ವಲಯದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಸೇವಾ ವಲಯದ ಪ್ರಗತಿ ಮೂರು ತಿಂಗಳ ಅತ್ಯಧಿಕ ಮಟ್ಟವಾದ 61.7 ತಲುಪಿದೆ. ಮಾರ್ಚ್ ನಲ್ಲಿ ಇದು 61.2ರಷ್ಟಿತ್ತು. ಹೊಸ ಉದ್ಯಮದಲ್ಲಿನ ಪ್ರಗತಿ ಸೇವಾ ವಲಯದ ಬೆಳವಣಿಗೆಯಲ್ಲಿ ಗಮನಾರ್ಹ ಪಾತ್ರ ವಹಿಸಿದೆ. 

2024ರಲ್ಲಿ ಭಾರತದ ಜಿಡಿಪಿ ದರ ಶೇ.7.5 ಪ್ರಗತಿ: ವಿಶ್ವಬ್ಯಾಂಕ್‌

ಉತ್ಪಾದನಾ ವಲಯದಲ್ಲಿ ಸ್ಥಿರ ಬೆಳವಣಿಗೆ: ವರದಿ ಪ್ರಕಾರ ಭಾರತದ ಉತ್ಪಾದನಾ ವಲಯ ಪ್ರಬಲವಾದ ಪ್ರಗತಿ ದಾಖಲಿಸಿದೆ. ಭಾರತದ ಉತ್ಪಾದನಾ ವಲಯದ ಪಿಎಂಐ 59.1ರಷ್ಟಿದೆ. ಇದು ಮಾರ್ಚ್ ತಿಂಗಳ ಪ್ರಗತಿಗೆ ಸರಿಸಮನಾಗಿದೆ. ಅಂದರೆ ಉತ್ಪಾದನಾ ವಲಯದ ಪ್ರಗತಿಯಲ್ಲಿ ಸ್ಥಿರತೆ ಕಂಡುಬಂದಿದೆ. ಹೊಸ ಬೇಡಿಕೆಗಳು ಹಾಗೂ ಉತ್ಪಾದನೆ ಪ್ರಮಾಣ ಎರಡೂ ಭಾರೀ ಬೆಳವಣಿಗೆ ದಾಖಲಿಸಿವೆ. 

ಹೆಚ್ಚಿದ ಅಂತಾರಾಷ್ಟ್ರೀಯ ಬೇಡಿಕೆ: ಭಾರತದ ಉದ್ಯಮ ವಲಯದ ಉತ್ಪನ್ನ ಹಾಗೂ ಸೇವೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಬೇಡಿಕೆ ಹೆಚ್ಚಿದೆ. 2014 ಸೆಪ್ಟೆಂಬರ್ ಸಮೀಕ್ಷೆಯಲ್ಲಿ ತಿಳಿಸಿರುವ ಮಾಹಿತಿ ಅನ್ವಯ ಭಾರತದ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿದೆ.

ಉದ್ಯೋಗ ಬೆಳವಣಿಗೆ ಹಾಗೂ ಹಣದುಬ್ಬರ: ಉದ್ಯೋಗ ಸೃಷ್ಟಿಗೆ ಬೇಡಿಕೆ ಹೆಚ್ಚಿದ ಬೆನ್ನಲ್ಲೇ ಉತ್ಪಾದನಾ ವಲಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿದೆ. ಇದು ಒಂದೂವರೆ ವರ್ಷದ ಅವಧಿಯಲ್ಲಿ ಅತ್ಯಂತ ವೇಗದ ಪ್ರಗತಿ ದಾಖಲಿಸಿದೆ. ಆದರೆ, ಸೇವಾ ವಲಯದಲ್ಲಿ ಮಾರ್ಚ್ ಅಂಕಿಅಂಶಗಳ ಪ್ರಕಾರ ಉದ್ಯೋಗ ಸೃಷ್ಟಿ ತಗ್ಗಿದೆ. 

ಹಣದುಬ್ಬರ ಹಾಗೂ ನೀತಿ ಪರಿಣಾಮ: ಸರಕು ಉತ್ಪಾದಕರು ಹಾಗೂ ಸೇವಾ ಪೂರೈಕೆದಾರರಿಗೆ ಉತ್ಪಾದನಾ ವೆಚ್ಚ ಮಧ್ಯಮ ಪ್ರಮಾಣದಲ್ಲಿದೆ. ಆದರೆ, ಬೇಡಿಕೆ ಹೆಚ್ಚಿರುವ ಕಾರಣ ಹೆಚ್ಚುವರಿ ವೆಚ್ಚಗಳು ಗ್ರಾಹಕರಿಗೆ ವರ್ಗಾವಣೆಯಾಗಿವೆ. ಈ ಬೆಳವಣಿಗೆ ಉತ್ಪಾದನಾ ವಲಯದಲ್ಲಿ ಉತ್ಪನ್ನದ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ. ಹಣದುಬ್ಬರದ ಒತ್ತಡ ಭಾರತೀಯ ರಿಸರ್ವ್ ಬ್ಯಾಂಕ್ ದರ ಕಡಿತದಲ್ಲಿ ವಿಳಂಬ ಮಾಡಲು ಕೂಡ ಕಾರಣವಾಗಿದೆ. 

ಭಾರತದ ಆರ್ಥಿಕತೆಯಲ್ಲಿ ಸಮಸ್ಯೆ: ರಘುರಾಂ ರಾಜನ್‌

2024ನೇ ಹಣಕಾಸು ವರ್ಷದಲ್ಲಿ ಭಾರತ ಶೇ.7.5ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ. ವಿಶೇಷವೆಂದರೆ ತನ್ನ ಈ ಹಿಂದಿನ ವರದಿಯಲ್ಲಿ ಅದು ಭಾರತದ ಜಿಡಿಪಿ ಬೆಳವಣಿಗೆ ದರ ಶೇ.6.3ರಷ್ಟು ಇರಬಹುದು ಎಂದು ಹೇಳಿತ್ತು. ಅದಕ್ಕೆ ಹೋಲಿಸಿದರೆ ಇದೀಗ ಭಾರೀ ಪ್ರಗತಿ ದರ ಭಾರೀ ಏರಿಕೆಯ ಸುಳಿವನ್ನು ಅದು ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಡೀ ದಕ್ಷಿಣ ಏಷ್ಯಾ ವಲಯ ಶೇ.6.0ರಷ್ಟು ಜಿಡಿಪಿ ಪ್ರಗತಿ ಸಾಧಿಸಲಿದೆ. 

ಸದ್ಯ ಭಾರತದಲ್ಲಿ ಹಣದುಬ್ಬರ ಪ್ರಮಾಣ ಆರ್‌ಬಿಐನ ಗುರಿಯಾದ ಶೇ.2- ಶೇ.6ರ ಮಿತಿಯಲ್ಲೇ ಇದೆ. 2023ರ ಫೆಬ್ರುವರಿಯಿಂದ ಬಡ್ಡಿದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ದೇಶದಲ್ಲಿ ವಾಣಿಜ್ಯ ವಲಯಕ್ಕೆ ಸಾಲ ವಿತರಣೆ ಪ್ರಮಾಣ ಶೇ.14ರಷ್ಟು ಏರಿಕೆ ಕಂಡಿದೆ. ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣವೂ ನಿಗದಿತ ಮಿತಿಯಲ್ಲೇ ಇದೆ.

click me!