ಇಎಂಐ, ಪಾವತಿ ಮುಂದೂಡಿದ ಸಾಲದ ಕಂತಿನ ಮೇಲೆ ಬಡ್ಡಿ?

By Kannadaprabha NewsFirst Published Aug 27, 2020, 7:23 AM IST
Highlights

ಇಎಂಐ ಬಡ್ಡಿ ಮೇಲೆ ಬಡ್ಡಿ: ಕೇಂದ್ರಕ್ಕೆ ಸುಪ್ರೀಂ ತರಾಟೆ| ಪಾವತಿ ಮುಂದೂಡಿದ ಸಾಲದ ಕಂತಿನ ಮೇಲೆ ಬಡ್ಡಿ ಹಿನ್ನೆಲೆ| ಒಂದು ವಾರದಲ್ಲಿ ನಿಲುವು ತಿಳಿಸುವಂತೆ ಸುಪ್ರೀಂ ತಾಕೀತು|  ಕೋರ್ಟ್‌ ಹೇಳಿದ್ದೇನು?|  ಕ್ರಮ ಕೈಗೊಳ್ಳುವ ಅಧಿಕಾರವಿದ್ದರೂ ಆರ್‌ಬಿಐ ಹಿಂದೆ ಅವಿತಿದ್ದೀರಿ| ನೀವು ಹೇರಿದ ಲಾಕ್ಡೌನ್‌ನಿಂದಾಗಿಯೇ ಈ ಸಮಸ್ಯೆ ಉಂಟಾಗಿದ್ದು|  ಹೀಗಾಗಿ ಸಮಸ್ಯೆ ನಿವಾರಿಸುವ ಹೊಣೆಯೂ ಕೇಂದ್ರ ಸರ್ಕಾರದ್ದೇ

ನವದೆಹಲಿ(ಆ.27): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಿರುವ ಮಾಸಿಕ ಸಾಲದ ಕಂತುಗಳ (ಇಎಂಐ) ಮೇಲಿನ ಬಡ್ಡಿ ಮನ್ನಾ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನಿರ್ಧಾರ ಕೈಗೊಳ್ಳಲು ನಿಮಗೆ ಎಲ್ಲಾ ಅಧಿಕಾರವಿದ್ದರೂ, ನೀವು ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಹಿಂದಿ ಅವಿತುಕೊಂಡಿದ್ದೀರಿ ಎಂದು ಕಿಡಿಕಾರಿದೆ. ಅಲ್ಲದೆ ಈ ಕುರಿತು ಇನ್ನೊಂದು ವಾರದೊಳಗೆ ನಿಮ್ಮ ಅಭಿಪ್ರಾಯ ಸಲ್ಲಿಸಿ ಎಂದು ಕೋರ್ಟ್‌ ತಾಕೀತು ಮಾಡಿದೆ.

"

ಏನಿದು ಪ್ರಕರಣ?: ಕೋವಿಡ್‌ ಹಿನ್ನೆಲೆಯಲ್ಲಿ ಆರ್‌ಬಿಐ, ಎಲ್ಲಾ ರೀತಿಯ ಸಾಲಗಳ ಮಾಸಿಕ ಕಂತು ಪಾವತಿಯನ್ನು 6 ತಿಂಗಳ ಕಾಲ ಮುಂದೂಡಿತ್ತು. ಪಾವತಿ ಮುಂದೂಡಿದರೂ ಆ ಅವಧಿಗೆ ಗ್ರಾಹಕರು ಬಡ್ಡಿ ಮತ್ತು ಸುಸ್ತಿ ಬಡ್ಡಿ ಪಾವತಿಸಬೇಕು ಎಂದು ಬ್ಯಾಂಕ್‌ಗಳು ನಿಯಮ ರೂಪಿಸಿದ್ದವು. ಆದರೆ ಇದನ್ನು ಹಲವು ಸಂಘ ಸಂಸ್ಥೆಗಳು ಬಲವಾಗಿ ಪ್ರಶ್ನಿಸಿದ್ದವು. ಪಾವತಿ ಕಷ್ಟಎಂಬ ಕಾರಣಕ್ಕೇ ಮಾಸಿಕ ಕಂತು ಪಾವತಿ ಮುಂದೂಡಿರುವಾಗ ಅದಕ್ಕೆ ಬಡ್ಡಿ ಮತ್ತು ಸುಸ್ತಿ ಬಡ್ಡಿ ಹೇರುವುದು ಎಷ್ಟುಸರಿ ಎಂದು ಪ್ರಶ್ನಿಸಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ಅಭಿಪ್ರಾಯ ಸಲ್ಲಿಕೆಗೆ ಆರ್‌ಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿತ್ತು.

ಈ ಪ್ರಕರಣದ ಹಿಂದಿನ ವಿಚಾರಣೆ ವೇಳೆ, ಗ್ರಾಹಕರು ಬಡ್ಡಿ ಪಾವತಿಸುವುದು ಅನಿವಾರ್ಯ. ಇಲ್ಲದೇ ಹೋದಲ್ಲಿ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಕ್ಕಿಬೀಳಲಿವೆ. ಅವುಗಳಿಗೆ 2 ಲಕ್ಷ ಕೋಟಿ ರು.ನಷ್ಟವಾಗಲಿದೆ ಎಂದು ಆರ್‌ಬಿಐ ಹೇಳಿತ್ತು. ಆದರೆ ಕೇಂದ್ರ ಸರ್ಕಾರ, ಬಡ್ಡಿ ಮತ್ತು ಸುಸ್ತಿಬಡ್ಡಿ ಪಾವತಿಯಿಂದ ವಿನಾಯ್ತಿ ನೀಡುವ ಕುರಿತು ಯಾವುದೇ ಸ್ಪಷ್ಟನಿಲವು ತಾಳುವುದಕ್ಕೆ ವಿಫಲವಾಗಿತ್ತು.

ಈ ಕುರಿತು ಬುಧವಾರದ ವಿಚಾರಣೆ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾ. ಅಶೋಕ್‌ ಭೂಷಣ್‌, ನ್ಯಾ. ಆರ್‌.ಸುಭಾಷ್‌ ರೆಡ್ಡಿ ಮತ್ತು ಎಂ.ಆರ್‌.ಸುಭಾಷ್‌ ಅವರನ್ನೊಳಗೊಂಡ ಪೀಠ, ‘ಲಾಕ್‌ಡೌನ್‌ ಜಾರಿಗೊಳಿಸುವ ನಿಮ್ಮ (ಕೇಂದ್ರದ) ನಿರ್ಧಾರದಿಂದಾಗಿಯೇ ಜನರು ಕಷ್ಟಗಳನ್ನು ಎದುರಿಸಬೇಕಾಗಿ ಬಂತು. ಇದು ಜನರ ವ್ಯಾಪಾರ ವಹಿವಾಟನ್ನು ಪರಿಗಣಿಸುವ ಸಮಯ ಅಲ್ಲ. ಜನರ ಸಂಕಷ್ಟವನ್ನು ನೀವೇ ಆಲಿಸಬೇಕು. ವಿಪತ್ತು ನಿರ್ವಹಣಾ ಕಾಯ್ದೆಯಡಿ ನಿರ್ಧಾರ ಕೈಗೊಳ್ಳುವ ಎಲ್ಲಾ ಅಧಿಕಾರ ನಿಮಗಿದ್ದರೂ, ನೀವು ಈವರೆಗೆ ನಿಮ್ಮ ಖಚಿತ ಅಭಿಪ್ರಾಯ ತಿಳಿಸಿಲ್ಲ. ಕೇಂದ್ರ ಸರ್ಕಾರ ಆರ್‌ಬಿಐನ ಹಿಂದೆ ಅವಿತುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿತು. ಜೊತೆಗೆ ಇನ್ನೊಂದು ವಾರದೊಳಗೆ ನೀವು ನಮಗೆ ಎರಡು ವಿಷಯ ಸ್ಪಷ್ಟಪಡಿಸಬೇಕು. ಮೊದಲನೆಯದಾಗಿ ವಿಪತ್ತು ನಿರ್ವಹಣಾ ಕಾಯ್ದೆಯಲ್ಲಿ ಕೇಂದ್ರದ ಪಾತ್ರ ಏನು ಎಂದು ತಿಳಿಸಬೇಕು. ಎರಡನೆಯದಾಗಿ ಮುಂದೂಡಿದ ಮಾಸಿಕ ಕಂತುಗಳ ಬಡ್ಡಿ ಮೇಲೆ ಬಡ್ಡಿ ಹೇರಲಾಗುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಸೂಚಿಸಿತು.

ಇದಕ್ಕೆ ಒಪ್ಪಿದ ಸಾಲಿಸಿಟರ್‌ ಜನರಲ್‌ ಕೇಂದ್ರದ ಅಭಿಪ್ರಾಯ ಸಲ್ಲಿಸಲು ಒಂದು ವಾರದ ಸಮಯ ಕೋರಿದರು. ಇದಕ್ಕೆ ಒಪ್ಪಿದ ನ್ಯಾಯಪೀಠ ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಿತು.

click me!