ಮೊಬೈಲ್ ಕರೆಗಳ ಮೂಲಕ ಜನರನ್ನು ವಂಚಿಸುತ್ತಿರುವ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಮ್ ಕಾರ್ಡ್ ಗಳ ಮಾರಾಟಕ್ಕೆ ಮೂಗುದಾರ ಹಾಕಲು ದೂರಸಂಪರ್ಕ ಇಲಾಖೆ ಮುಂದಾಗಿದೆ. ಪಿಒಎಸ್ ಅಕ್ಟೋಬರ್ 1ರಿಂದ ನಿಯಮ ಮೀರಿ ಸಿಮ್ ಕಾರ್ಡ್ ಮಾರಾಟ ಮಾಡಿದ್ರೆ ಸಂಬಂಧಪಟ್ಟ ಟೆಲಿಕಾಮ್ ಆಪರೇಟರ್ ಗೆ 10 ಲಕ್ಷ ದಂಡ ವಿಧಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ನವದೆಹಲಿ (ಸೆ.1): ನೋಂದಾಯಿಸದ ಡೀಲರ್ ಗಳ ಮೂಲಕ ಸಿಮ್ ಕಾರ್ಡ್ ಗಳನ್ನು ಮಾರಾಟ ಮಾಡೋದು ಕಂಡುಬಂದರೆ ಅಂತಹ ಟೆಲಿಕಾಮ್ ಆಪರೇಟರ್ ಗಳಿಗೆ 10ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ದೂರಸಂಪರ್ಕ ಇಲಾಖೆ ಗುರುವಾರ ಸುತ್ತೋಲೆಯಲ್ಲಿ ತಿಳಿಸಿದೆ. ಸಿಮ್ ಕಾರ್ಡ್ ಗಳ ಮೋಸದ ಮಾರಾಟಕ್ಕೆ ಕಡಿವಾಣ ಹಾಕೋದು ಈ ಹೊಸ ನಿಯಮಗಳ ಉದ್ದೇಶವಾಗಿದ್ದು, ಅಕ್ಟೋಬರ್ 1ರಿಂದಲೇ ಜಾರಿಗೆ ಬರಲಿದೆ. ಹೀಗಾಗಿ ಟೆಲಿಕಾಮ್ ಆಪರೇಟರ್ ಗಳು ಎಲ್ಲ 'ಪಾಯಿಂಟ್ ಆಫ್ ಸೇಲ್' (ಪಿಒಎಸ್ ) ಅನ್ನು ಸೆಪ್ಟೆಂಬರ್ 30ರೊಳಗೆ ನೋಂದಾಯಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ. ಒಂದು ವೇಳೆ ಸೆಪ್ಟೆಂಬರ್ 30, 2023ರ ಬಳಿಕ ನೋಂದಣಿಯಿಲ್ಲದೆ ಗ್ರಾಹಕರನ್ನು ಸೇರಿಸಿಕೊಳ್ಳಲು ಯಾವುದೇ ಹೊಸ ಪಿಒಎಸ್ ಗೆ ಪರವಾನಗಿ ನೀಡಿರೋದು ಕಂಡುಬಂದರೆ ಪ್ರತಿ ಘಟನೆ ಮೇಲೆ ಪ್ರತಿ ಪಿಒಎಸ್ ಗೆ 10ಲಕ್ಷ ರೂ. ದಂಡವನ್ನು ಸಂಬಂಧಪಟ್ಟ ಎಲ್ ಎಸ್ ಎ (ಲೈಸೆನ್ಡ್ ಸರ್ವೀಸ್ ಏರಿಯಾ) ವಿಧಿಸುತ್ತದೆ ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಇನ್ನು ನೋಂದಣಿಯಾಗದ ಪಿಒಎಸ್ ಮೂಲಕ ಆಕ್ಟಿವೇಟ್ ಆಗಿರುವ ಎಲ್ಲ ಮೊಬೈಲ್ ಸಂಪರ್ಕಗಳನ್ನು ಪ್ರಸಕ್ತವಿರುವ ಸೂಚನೆಗಳ ಆಧಾರದಲ್ಲಿ ಮರುಪರಿಶೀಲನೆ ನಡೆಸೋದು ಅಗತ್ಯ ಎಂದು ಸುತ್ತೋಲೆ ತಿಳಿಸಿದೆ.
ಸೆಪ್ಟೆಂಬರ್ ಅಂತ್ಯದೊಳಗೆ ಪ್ರಸಕ್ತವಿರುವ ಎಲ್ಲ ಪಿಒಎಸ್ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು ಹಾಗೂ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸುತ್ತೋಲೆ ಮಾಹಿತಿ ನೀಡಿದೆ. ಇನ್ನು ಒಂದು ವೇಳೆ ಗ್ರಾಹಕರ ನೋಂದಣಿಗಲ್ಲದೆ ರಿಚಾರ್ಜ್ ಅಥವಾ ಬಿಲ್ಲಿಂಗ್ ಚಟುವಟಿಕೆಗಳಿಗೆ ಮಾತ್ರ ಟೆಲಿಕಾಮ್ ಆಪರೇಟರ್ ಪಿಒಎಸ್ ನೇಮಕ ಮಾಡಿಕೊಂಡಿಕೊಂಡಿದ್ದರೆ ಆಗ ಈ ಸೂಚನೆಗಳ ಅನ್ವಯ ಅಂಥ ಪಿಒಎಸ್ ಅನ್ನು ನೋಂದಣಿ ಮಾಡುವ ಅಗತ್ಯವಿಲ್ಲ.
undefined
ಡಿಜಿಟಲ್ ಇಂಡಿಯಾ: ಒಂದೇ ತಿಂಗಳಲ್ಲಿ 10 ಕೋಟಿ ಯುಪಿಐ ವಹಿವಾಟು ದಾಖಲೆ
ಪಿಒಎಸ್ ಅಥವಾ ರಿಟೇಲರ್ ನೋಂದಣಿಗೆ ಕಾರ್ಪೋರೇಟ್ ಐಡೆಂಟಿಟಿ ನಂಬ್ರ (ಸಿಐಎನ್), ಲಿಮಿಟೆಡ್ ಲಿಯೇಬಿಲಿಟಿ ಪಾರ್ಟನರ್ ಶಿಫ್ ಐಡೆಂಟಿಫಿಕೇಷನ್ ನಂಬ್ರ (ಎಲ್ಎಲ್ ಪಿಐಎನ್) ಅಥವಾ ಉದ್ಯಮ ಪರವಾನಗಿ, ಆಧಾರ್ ಅಥವಾ ಪಾಸ್ ಪೋರ್ಟ್, ಪ್ಯಾನ್ , ಗೂಡ್ಸ್ ಹಾಗೂ ಸರ್ವೀಸ್ ಟ್ಯಾಕ್ಸ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಇತ್ಯಾದಿಗಳನ್ನು ನೀಡಬೇಕು. ಒಂದು ವೇಳೆ ಪಿಒಎಸ್ ಬಳಿ ಸಿಐಎನ್, ಎಲ್ ಎಲ್ ಪಿಐಎನ್ , ಸಂಯೋಜನೆ ಪ್ರಮಾಣಪತ್ರ, ಪ್ಯಾನ್ ಹಾಗೂ ಜಿಎಸ್ ಟಿ ಪ್ರಮಾಣಪತ್ರ ಇಲ್ಲದಿದ್ದರೆ, ಆಗ ಅದು ಅಫಿಡವಿಟ್ ಸಲ್ಲಿಕೆ ಮಾಡಬೇಕು. ಆ ಬಳಿಕ ಈ ದಾಖಲೆಗಳು ಸಿಕ್ಕ ತಕ್ಷಣ ಸಲ್ಲಿಕೆ ಮಾಡಬೇಕು.
ಪಿಒಎಸ್ ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಿರೋದು ಕಂಡುಬಂದರೆ ಆಗ ಟೆಲಿಕಾಮ್ ಆಪರೇಟರ್ ಗಳು ತಮ್ಮ ಐಡಿ ಬ್ಲಾಕ್ ಮಾಡಬೇಕು ಹಾಗೂ ಪಿಒಎಸ್ ನೋಂದಣಿ ಮಾಡಿರುವ ಎಲ್ಲ ಗ್ರಾಹಕರನ್ನು ಮರುಪರಿಶೀಲನೆ ನಡೆಸಬೇಕು. ಇದರ ಜೊತೆಗೆ ಆ ಪಿಒಎಸ್ ಗೆ ಸಂಬಂಧಿಸಿದ ಎಲ್ಲ ಎಲ್ ಎಸ್ ಎಗಳು (ಲೈಸೆನ್ಡ್ ಸರ್ವೀಸ್ ಏರಿಯಾ) ಎಲ್ಲ ಲೈಸೆನ್ಸ್ ಗಳನ್ನು ರದ್ದುಗೊಳಿಸಬೇಕು. ಹಾಗೆಯೇ ಇಂಥ ಪಿಒಎಸ್ ವಿರುದ್ಧ ಟೆಲಿಕಾಮ್ ಆಪರೇಟರ್ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Jio vs Airtel ಏರ್ ಫೈಬರ್; ಡೇಟಾ ಸ್ಪೀಡ್, ಬೆಲೆ, ಒಟಿಟಿ ಸೇರಿ ತಿಂಗಳ ಪ್ಲಾನ್ ಯಾವುದು ಉತ್ತಮ?
ಮೊಬೈಲ್ ಕರೆಗಳ ಮೂಲಕ ವಂಚಿಸುತ್ತಿರುವ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿರುವ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡಿರುವ ಮಾಹಿತಿಗಳ ಅನ್ವಯ ಸರ್ಕಾರ ಈ ತನಕ 52 ಲಕ್ಷ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಿದೆ. ಹಾಗೆಯೇ 67,000 ಡೀಲರ್ ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. 2023ರ ಮೇನಿಂದ ಸಿಮ್ ಕಾರ್ಡ್ ಡೀಲರ್ಸ್ ವಿರುದ್ಧ 300 ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ. ಇನ್ನು ವಂಚನೆ ಚಟುವಟಿಕೆಗಳಲ್ಲಿ ತೊಡಗಿರುವ ಸುಮಾರು 66,000 ಖಾತೆಗಳನ್ನು ವಾಟ್ಸ್ ಆಪ್ ಬ್ಲಾಕ್ ಮಾಡಿದೆ ಎಂಬ ಮಾಹಿತಿಯನ್ನು ಕೂಡ ಸಚಿವರು ನೀಡಿದ್ದಾರೆ.