
ನವದೆಹಲಿ(ಜ.31): ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಇಂದು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ನವ ಭಾರತ ನಿರ್ಮಾಣಕ್ಕಾಗಿ ದುಡಿಯುತ್ತಿದ್ದು, ಜನರಲ್ಲಿ ಹೊಸ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಪ್ರತೀ ಕ್ಷೇತ್ರದಲ್ಲಿರುವ, ಎಲ್ಲಾ ರೀತಿಯ ಜನರ ಭರವಸೆಗಳು ಹಾಗೂ ಆಸೆಗಳನ್ನು ಈಡೇರಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಮುಸ್ಲಿಂ ಮಹಿಳೆಯರು ಯಾವುದೇ ರೀತಿಯ ಭಯವಿಲ್ಲದೆ ಜೀವನ ನಡೆಸುವ ಸಲುವಾಗಿ, ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ ತ್ರಿವಳಿ ತಲಾಖ್ ಮಸೂದೆ ಜಾರಿಗೆ ತರಲು ಸರ್ಕಾರ ಯತ್ನಿಸುತ್ತಿದೆ ಎಂದು ಕೋವಿಂದ್ ನುಡಿದರು.
2014ರ ಲೋಕಸಭಾ ಚುನಾವಣೆಗೂ ಮುನ್ನ ದೇಶ ಅನಿಶ್ಚಿತತೆಯತ್ತ ಸಾಗುತ್ತಿತ್ತು. ಚುನಾವಣೆ ಪೂರ್ಣಗೊಂಡ ಬಳಿಕ ನಮ್ಮ ಸರ್ಕಾರ ನವ ಭಾರತ ನಿರ್ಮಾಣಕ್ಕಾಗಿ ದುಡಿಯಲು ಆರಂಭಿಸಿತು ಎಂದು ರಾಷ್ಟ್ರಪತಿ ಹೇಳಿದ್ದಾರೆ.
ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನಮ್ಮ ಸರ್ಕಾರ ಸಾಧನೆ ಮಾಡಿದೆ. ಪ್ರಧಾನಮಂತ್ರಿ ಜೀವನ್ ವಿಮಾ ಯೋಜನೆ 21 ಕೋಟಿ ಜನರಿಗೆ ಲಾಭವನ್ನು ತಂದಿದೆ. ಪ್ರಧಾನಮಂತ್ರಿ ಸೌಭಾಗ್ಯ ಯೋಜನೆಯಡಿಯಲ್ಲಿ 2ಕೋಟಿಗೂ ಹೆಚ್ಚು ಮನೆಗಳಿಗೆ ವಿದ್ಯುತ್ ಲಭಿಸಿದೆ.
ಸ್ವಚ್ಛ ಭಾರತ ಅಭಿಯಾನ ಅಡಿಯಲ್ಲಿ ಸರ್ಕಾರ ಈವರೆಗೂ 9 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಿದೆ. ಅಲ್ಲದೇ ಜಿಎಸ್ ಟಿ ಜಾರಿಯಿಂದ ಭಾರತದ ತೆರಿಗೆ ವ್ಯವಸ್ಥೆಯೇ ಬದಲಾಗಿದ್ದು, ಇದೊಂದು ಕ್ರಾಂತಿಕಾರಕ ಹೆಜ್ಜೆ ಎಂದು ಇತಿಹಾಸದಲ್ಲಿ ದಾಖಲಾಗಲಿದೆ ಎಂದು ರಾಷ್ಟ್ರಪತಿ ಕೋವಿಂದ್ ಅಭಿಪ್ರಾಯಪಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.