ಷೇರುಪೇಟೆಯಲ್ಲೂ ಮಹಾ ತಲ್ಲಣ, 2 ದಿನದಲ್ಲಿ 10 ಲಕ್ಷ ರೂ ಕೋಟಿ ಮಾಯ!

By Kannadaprabha NewsFirst Published Mar 10, 2020, 7:23 AM IST
Highlights

ಷೇರುಪೇಟೆಯಲ್ಲೂ ಕೊರೋನಾ ತಾಂಡವ| ಒಂದೇ ದಿನ 1941 ಅಂಕ ಕುಸಿದ ಸೆನ್ಸೆಕ್ಸ್‌| ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ನಷ್ಟ| ದಾಖಲೆ 2400 ಅಂಕ ಬಿದ್ದು ಚೇತರಿಕೆ| 2 ದಿನದಲ್ಲಿ 10 ಲಕ್ಷ ಕೋಟಿ ರೂ. ಮಾಯ

ಮುಂಬೈ[ಮಾ.10]: ಮಾರಕ ಕೊರೋನಾ ವೈರಸ್‌ ವಿಶ್ವಾದ್ಯಂತ ವ್ಯಾಪಿಸುವ ಮೂಲಕ ಜಾಗತಿಕ ಆರ್ಥಿಕತೆಗೆ ಪೆಟ್ಟು ನೀಡುತ್ತಿರುವುದು ಹಾಗೂ ತೈಲ ಬೆಲೆ ಸೋಮವಾರ ಒಂದೇ ದಿನ ಶೇ.30ರಷ್ಟುಹಠಾತ್‌ ಕುಸಿತ ಅನುಭವಿಸಿದ ಹಿನ್ನೆಲೆಯಲ್ಲಿ ಜಾಗತಿಕ ಷೇರುಪೇಟೆಗಳಲ್ಲಿ ಅಲ್ಲೋಲ- ಕಲ್ಲೋಲ ಕಂಡುಬಂದಿದೆ. ಮುಂಬೈ ಷೇರು ಸಂವೇದಿ ಸೂಚ್ಯಂಕ ‘ಸೆನ್ಸೆಕ್ಸ್‌’ 1941 ಅಂಕಗಳಷ್ಟುಕುಸಿದಿದೆ. ಇದರಿಂದಾಗಿ ಹೂಡಿಕೆದಾರರ ಸಂಪತ್ತು 7 ಲಕ್ಷ ಕೋಟಿ ರು.ನಷ್ಟುಕರಗಿಹೋಗಿದೆ.

ಸೋಮವಾರ ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್‌ 2467 ಅಂಕಗಳಷ್ಟುಕುಸಿತ ಅನುಭವಿಸಿತ್ತು. ಇದು ಸೆನ್ಸೆಕ್ಸ್‌ನ ಇತಿಹಾಸದಲ್ಲೇ ಮಧ್ಯಂತರದಲ್ಲಿ ಕಂಡುಬಂದ ಮಹಾ ಕುಸಿತ. ಬಳಿಕ ಕೊಂಚ ಚೇತರಿಸಿಕೊಂಡ ಸೂಚ್ಯಂಕ ದಿನದಂತ್ಯಕ್ಕೆ 1941.67 ಅಂಕಗಳ ಇಳಿಕೆಯೊಂದಿಗೆ 35,634.95 ಅಂಕಗಳಲ್ಲಿ ವಹಿವಾಟು ಮುಗಿಸಿದೆ. ಇದು ಕಳೆದ 13 ತಿಂಗಳಲ್ಲೇ ಸೆನ್ಸೆಕ್ಸ್‌ನ ಕನಿಷ್ಠ ಮುಕ್ತಾಯ ಅಂಕವಾಗಿದೆ. ಇದೇ ವೇಳೆ, ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ538 ಅಂಕಗಳ ಇಳಿಕೆಯೊಂದಿಗೆ 10,541.45ರಲ್ಲಿ ದಿನವನ್ನು ಮುಕ್ತಾಯಗೊಳಿಸಿದೆ.

ಕಳೆದ ಶುಕ್ರವಾರ ಸೆನ್ಸೆಕ್ಸ್‌ 894 ಅಂಕಗಳನ್ನು ಕಳೆದುಕೊಂಡಿತ್ತು. ಹೂಡಿಕೆದಾರರು 3.28 ಲಕ್ಷ ಕೋಟಿ ರು. ಸಂಪತ್ತು ಕಳೆದುಕೊಂಡಿದ್ದರು. ಇದೀಗ ಸೋಮವಾರದ ನಷ್ಟವನ್ನೂ ಲೆಕ್ಕ ಹಿಡಿದರೆ ಹೂಡಿಕೆದಾರರಿಗೆ ಸೆನ್ಸೆಕ್ಸ್‌ನ ಕೇವಲ ಎರಡು ದಿನಗಳ ವಹಿವಾಟಿನಲ್ಲಿ 10 ಲಕ್ಷ ಕೋಟಿ ರು. ನಷ್ಟವಾಗಿದೆ.

ತೈಲ ಬೆಲೆ ಕುಸಿತ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಕಂಪನಿ ಷೇರುಗಳು ಶೇ.16ರಷ್ಟುಇಳಿಕೆಯಾಗಿವೆ. ರಿಲಯನ್ಸ್‌ ಇಂಡಸ್ಟ್ರೀಸ್‌, ಇಂಡಸ್‌ಇಂಡ್‌ ಬ್ಯಾಂಕ್‌, ಟಾಟಾ ಸ್ಟೀಲ್‌, ಟಿಸಿಎಸ್‌, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ ಹಾಗೂ ಬಜಾಜ್‌ ಆಟೋ ಕಂಪನಿಗಳ ಷೇರುಗಳು ಬಿದ್ದಿವೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯಸ್‌ ಬ್ಯಾಂಕ್‌ ಖರೀದಿಗೆ ಮುಂದಾಗಿರುವ ಎಸ್‌ಬಿಐ ಷೇರುಗಳು ಶೇ.6ರಷ್ಟುಕುಸಿದಿದ್ದರೆ, ಅದೇ ಯಸ್‌ ಬ್ಯಾಂಕ್‌ ಷೇರುಗಳು ಶೇ.31ರಷ್ಟುಏರಿಕೆ ಕಂಡಿವೆ!

ಬಜೆಟ್‌ ಬಳಿಕ ಭರ್ಜರಿ ಶಾಕ್‌:

ಕೇಂದ್ರ ಸರ್ಕಾರ ಫೆ.1ರಂದು ಮಂಡಿಸಿದ ಬಜೆಟ್‌ ಬಳಿಕ ಸೆನ್ಸೆಕ್ಸ್‌ ಒಟ್ಟಾರೆ 5088 ಅಂಕಗಳ ಭರ್ಜರಿ ಕುಸಿತ ಕಂಡಿದೆ. ಅದೇ ರೀತಿ ನಿಫ್ಟಿ1510 ಅಂಕಗಳ ಕುಸಿತ ಕಂಡಿದೆ.

ಕುಸಿತಕ್ಕೆ ಪ್ರಮುಖ ಕಾರಣಗಳು

1. ತೈಲ ಬೆಲೆ 30% ಪತನ

ಒಪೆಕ್‌ ರಾಷ್ಟ್ರಗಳ ಜತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ತೈಲ ಬೆಲೆಯನ್ನು ಇಳಿಕೆ ಮಾಡಿದೆ. ಇದರ ಪರಿಣಾಮ ಕಚ್ಚಾ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.30ರಷ್ಟುಕುಸಿದಿದೆ. ತೈಲ ಆಮದಿನ ಮೇಲೆ ಭಾರತ ಅವಲಂಬನೆಯಾಗಿದ್ದರೂ, ಬೆಲೆ ಕುಸಿತ ಆರ್ಥಿಕತೆ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಸೆನ್ಸೆಕ್ಸ್‌ ಕುಸಿದಿದೆ ಎನ್ನಲಾಗುತ್ತಿದೆ.

2. ಕೊರೋನಾ ವೈರಸ್‌ ದಾಳಿ

ಎರಡೂವರೆ ತಿಂಗಳಲ್ಲಿ ವಿಶ್ವಾದ್ಯಂತ 3800 ಮಂದಿಯನ್ನು ಬಲಿ ಪಡೆದಿರುವ ಕೊರೋನಾ ವೈರಸ್‌ ಇನ್ನಷ್ಟುವ್ಯಾಪಿಸುತ್ತಲೇ ಇದೆ. ಜಾಗತಿಕ ವಹಿವಾಟು, ಪ್ರವಾಸೋದ್ಯಮ ಹಾಗೂ ವ್ಯಾಪಾರಕ್ಕೆ ತೊಂದರೆಯಾಗಿ, ಭಾರಿ ನಷ್ಟವಾಗುತ್ತಿದೆ. ಇದರಿಂದಾಗಿ ಜಾಗತಿಕ ಪ್ರಗತಿಗೆ ಅಡ್ಡಿಯಾಗಿದೆ.

3. ಯಸ್‌ ಬ್ಯಾಂಕ್‌ ಬಿಕ್ಕಟ್ಟು

ಯಸ್‌ ಬ್ಯಾಂಕ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ದೇಶದ ಬ್ಯಾಂಕಿಂಗ್‌ ವಲಯದ ಆರ್ಥಿಕ ಸ್ಥಿರತೆಯ ಬಗ್ಗೆಯೇ ಹೂಡಿಕೆದಾರರಲ್ಲಿ ಆತಂಕ ವ್ಯಕ್ತವಾಗಿದೆ. ಆ ಬ್ಯಾಂಕಿನ ಪುನಾರಚನೆ ಪ್ರಕ್ರಿಯೆ ಬಾಂಡ್‌ ಹಾಗೂ ಮ್ಯೂಚುವಲ್‌ ಫಂಡ್‌ ಮಾರುಕಟ್ಟೆಗೆ ಹಾನಿಯುಂಟು ಮಾಡಬಹುದು ಎಂಬ ವಾದವೂ ಇದೆ. ಇದರ ಜತೆಗೆ ವಿದೇಶಿ ಹೂಡಿಕೆದಾರರಿಂದ ಭಾರಿ ಪ್ರಮಾಣದಲ್ಲಿ ಷೇರು ಮಾರಾಟ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ಅಲ್ಲೋಲ ಕಲ್ಲೋಲವೂ ಭಾರತೀಯ ಪೇಟೆ ಮೇಲೆ ಪರಿಣಾಮ ಬೀರಿದೆ.

ಕೊರೋನಾ, ಕಚ್ಚಾತೈಲ, ಯಸ್‌ ಬ್ಯಾಂಕ್‌ ಕಾರಣ

ಷೇರು ಸೂಚ್ಯಂಕ ಪತನಕ್ಕೆ ಕಚ್ಚಾ ತೈಲ ಬೆಲೆ ಶೇ.30 ಕುಸಿತ, ಕೊರೋನಾ ವೈರಸ್‌ನಿಂದ ಜಾಗತಿಕ ಆರ್ಥಿಕತೆಗೆ ಹೊಡೆತ ಹಾಗೂ ಯಸ್‌ ಬ್ಯಾಂಕ್‌ನಲ್ಲಿ ಎದುರಾಗಿರುವ ಆರ್ಥಿಕ ಸಂಕಷ್ಟ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

click me!