Economic Crisis ಲಂಕಾ ಹಾದಿಯಲ್ಲಿ ಪಾಕಿಸ್ತಾನ, ಆರ್ಥಿಕ ಬಿಕ್ಕಟ್ಟಿನಿಂದ ತುಪ್ಪ, ಖಾದ್ಯ ತೈಲ ಬೆಲೆ ದಾಖಲೆಯ ಗರಿಷ್ಠ ಮಟ್ಟ!

By Suvarna NewsFirst Published Jun 1, 2022, 7:46 PM IST
Highlights
  • ಶ್ರೀಲಂಕಾ ಬಳಿಕ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ
  • ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ, ಖಾದ್ಯ ತೈಲ, ತುಪ್ಪ ಕೈಗೆಟುಕುತ್ತಿಲ್ಲ
  • ಪರಿಸ್ಥಿತಿ ನಿರ್ವಹಣಗೆ ಹಲವು ನಿರ್ಬಂಧ ಹೇರಿದ ಪಾಕ್ ಸರ್ಕಾರ

ಇಸ್ಲಾಮಾಬಾದ್(ಜೂ.01): ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ದೇಶ ದೀವಾಳಿಯಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಂಕಾ ಬಳಿಕ ಇದೀಗ ಪಾಕಿಸ್ತಾನದ ಸರದಿ. ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಾ, ಆದಾಯದ ಬಹುಪಾಲನ್ನು ಸೇನೆಗೆ ಖರ್ಚು ಮಾಡುವ ಪಾಕಿಸ್ತಾನದಲ್ಲಿ ಇದೀಗ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಖಾದ್ಯ ತೈಲ, ತುಪ್ಪ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ದಾಖಲೆ ಮಟ್ಟಕ್ಕೆ ತಲುಪಿದೆ.

ಇಂದು(ಜೂ.1) ಪಾಕಿಸ್ತಾನದಲ್ಲಿ ಖಾದ್ಯ ತೈಲ ಬೆಲೆ ಒಂದೇ ಸಮನೆ 208 ರೂಪಾಯಿ ಹಾಗೂ ತುಪ್ಪದ ಬೆಲೆ 213 ರೂಪಾಯಿ ಹೆಚ್ಚಿಸಲಾಗಿದೆ.ಇದರಿಂದ ಖಾದ್ಯ ತೈಲ 1 ಕೆಜಿಗೆ 555 ರೂಪಾಯಿ ಆಗಿದ್ದರೆ, 1 ಕೆಜಿ ತುಪ್ಪದ ಬೆಲೆ 605 ರೂಪಾಯಿ ಆಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ಬೆಲೆ 500 ರಿಂದ 540 ರೂಪಾಯಿ ಇದೆ. ಈಗಾಗಲೇ ಪಾಕಿಸ್ತಾನ ಸರ್ಕಾರ ವಿದೇಶಿ ವಿನಿಮಯ ಸರಿದೂಗಿಸಲು ಆಮದು ಮೇಲೆ ನಿರ್ಬಂಧ ಹೇರಿದೆ. ಆದರೂ ಪರಿಸ್ಥಿತಿ ಹದಗೆಡುತ್ತಿದೆ.

ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 30 ರೂಪಾಯಿ ಏರಿಕೆ!

ಇಂಡೋನೇಷಿಯಾದ ತಾಳೆ ಎಣ್ಣೆ ರಫ್ತು ನಿಷೇಧ ಮಾಡಿದ ಬಳಿಕ ಪಾಕಿಸ್ತಾನದಲ್ಲಿ ಖಾದ್ಯ ತೈಲ ಹಾಗೂ ತುಪ್ಪದ ಬೆಲೆ ಶೇಕಡಾ 300ರಷ್ಟು ಏರಿಕೆಯಾಗಿದೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ. 

ಪಾತಾಳಕ್ಕೆ ಕುಸಿದ ಪಾಕಿಸ್ತಾನ ರೂಪಾಯಿ
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಪಾಕಿಸ್ತಾನ ರೂಪಾಯಿ ಕಂಡು ಕೇಳರಿಯದ ಕುಸಿತ ಕಂಡಿದೆ. ಕಳೆದ ಎರಡು ವರ್ಷದಲ್ಲಿ ದಾಖಲೆ ಪ್ರಮಾಣದ ಕುಸಿತ ಕಂಡಿದೆ. ಪಾಕಿಸ್ತಾನದ ಹಣಕಾಸು ಅನಿಶ್ಚಿತತೆಯ ಕಾರಣ ರೂಪಾಯಿ ಅತೀ ದೊಡ್ಡ ಮಾಸಿಕ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಜೊತೆ ಪಾಕಿಸ್ತಾನ ಪ್ಯಾಕೇಜ್ ಮಾತುಕತೆ ನಡೆಸುತ್ತಿದೆ. ಇದರ ನಡುವೆ ರೂಪಾಯಿ ಶೇರಡಾ 7 ರಷ್ಟು ಕುಸಿತ ಕಂಡಿದೆ. 

ಆರ್ಥಿಕ ಬಿಕ್ಕಟ್ಟು, ವಿದೇಶಿ ಸಾಲ, ವಿದೇಶಿ ವಿನಿಮಯ ಕೊರತೆ, ರೂಪಾಯಿ ಕುಸಿತ ಸೇರಿದಂತೆ ಹಲವು ಸಮಸ್ಯೆಗಳು ಪಾಕಿಸ್ತಾನ ಎದುರಿಸುತ್ತಿದೆ. ಇದರ ನಡುವೆ ಮುಂದಿನ ಹಣಕಾಸು ವರ್ಷದಲ್ಲಿ ಅಮೆರಿದಿಂದ ಪಡೆದಿರುವ 21 ಶತಕೋಲಿ ವಿದೇಶಿ ಸಾಲವನ್ನು ಮರುಪಾವತಿಸಬೇಕಿದೆ. ವಿದೇಶಿ ವಿನಿಮಯ ಕೊರತೆ ಎದುರಿಸುತ್ತಿರುವ ಪಾಕಿಸ್ತಾನ ತಲೆ ಮೇಲೆ ಕೈಹೊತ್ತು ಕೂತಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಜೊತೆ ಸಾಲಕ್ಕೆ ಮಾತುಕತೆ ನಡೆಸುತ್ತಿದೆ.

ದುಡ್ಡಿಲ್ಲ, ತೈಲವೂ ಇಲ್ಲ..ಇಂಧನ ಉಳಿಸೋಕೆ ಉದ್ಯೋಗಿಗಳಿಗೆ ರಜೆ ನೀಡಲಿರುವ ಪಾಕಿಸ್ತಾನ!

ಪಾಕಿಸ್ತಾನದ ಅಂತಾರಾಷ್ಟ್ರೀಯ ಬಾಂಡ್‌ಗಳು ಮೌಲ್ಯ ಕಳೆದುಕೊಂಡಿದೆ. ವಿದೇಶಿ ಸಾಲ ಸದ್ಯಕ್ಕೆ ಕೈಗೆ ಸಿಗುವಂತಿಲ್ಲ. IMF ಒಪ್ಪಂದ ಅಂತಿಮವಾಗಿಲ್ಲ. ಹೀಗಾಗಿ ಪಾಕಿಸ್ತಾನ ದಿಕ್ಕೇ ತೋಚದಂತಾಗಿದೆ. ಶ್ರೀಲಂಕಾಗೆ ಹಾದಿಯಲ್ಲೇ ಪಾಕಿಸ್ತಾನ ಸಾಗುತ್ತಿದೆ. ಪಾಕಿಸ್ತಾನ ಇದೀಗ ಒಬ್ಬಂಟಿಯಾಗಿದೆ. ಚೀನಾದಿಂದ ಪಡೆದ ಸಾಲ ಹಿಂತಿರುಗಿಸಿಲ್ಲ, ಅಮೆರಿಕ ಸಾಲ ಮುಂದಿನ ಹಣಕಾಸು ವರ್ಷದಲ್ಲಿ ಪಾವತಿಸಬೇಕಿದೆ. ಭಾರತ ನೆರವಿಗೆ ಬರುವುದಿಲ್ಲ, ಲಂಕಾ ದಿವಾಳಿಯಾಗಿದೆ. ನೇಪಾಳ ಶಕ್ತಿ ಕಳದುಕೊಂಡಿದೆ. ಹೀಗಿರುವಾಗಿ ಪಾಕಿಸ್ತಾನ ಪರಿಸ್ಥಿತಿ ನಿಯಂತ್ರಿಸಲು ಹಣದುಬ್ಬರ ನಿಯಂತ್ರಣ ಒಂದೇ ಮುಂದಿರುವ ಮಾರ್ಗ. ಆದರೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೀಗಿರುವಾಗಿ ಹಣದುಬ್ಬರ ನಿಯಂತ್ರಣವೂ ಕಷ್ಟ ಸಾಧ್ಯವಾಗಿದೆ.
 

click me!