ಸರಿಸುಮಾರು ಮೂರು ದಶಕಗಳಿಂದ ಇಬ್ಬರು ಸಹೋದರರ ಅಚ್ಚರಿಯ ಸಾಹಸ. ಬುಲೆಟ್ ಲುಕ್ ಬದಲಾಗದಂತೆ ಸಹೋದರರ ಸಹವಾಸ.
- ಆರ್‌ಕೆಬಿ
122 ವರ್ಷಗಳಿಂದ ನಿರಂತರವಾಗಿ ದ್ವಿಚಕ್ರವಾಹನ ಉತ್ಪಾದಿಸುತ್ತಿರುವ ವಿಶ್ವದ ಏಕೈಕ ಕಂಪನಿ, ಇಂಗ್ಲೆಂಡಿನಲ್ಲಿ ಸ್ಥಾಪನೆಯಾಗಿ ಒಂದೊಮ್ಮೆ ಅದರ ವಸಾಹತು ದೇಶವಾಗಿದ್ದ ಭಾರತದಲ್ಲಿ ಭದ್ರ ನೆಲೆಯೂರಿರುವ ದ್ವಿಚಕ್ರವಾಹನ ಕಂಪನಿ ರಾಯಲ್ ಎನ್‌ಫೀಲ್ಡ್, 91 ವರ್ಷಗಳಿಂದ ನಿರಂತರ ಉತ್ಪಾದನೆಯಾಗುತ್ತಿರುವ ಏಕೈಕ ಬೈಕು ಬುಲೆಟ್ 350,... ಹೀಗೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊತ್ತುಕೊಂಡಿರುವ ವಿಶ್ವಖ್ಯಾತ ದ್ವಿಚಕ್ರವಾಹನ ಸಂಸ್ಥೆ, ತನ್ನ ಅಭಿಮಾನಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಮಾಡಿರುವ, ಮಾಡುತ್ತಲೇ ಇರುವ ಕಸರತ್ತುಗಳು ಒಂದೆರಡಲ್ಲ. 'ಎಲ್ಲವೂ ಬದಲಾಗಬೇಕು. ಆದರೆ, ಏನೂ ಬದಲಾಗಬಾರದು' ಎಂಬುದು ನಮ್ಮ ಮುಂದೆ ಸದಾ ಇರುವ ಸವಾಲು ಎಂಬುದು ಕಂಪನಿಯ ಸಿಇಒ ಬಿ.ಗೋವಿಂದರಾಜನ್ ಸ್ಪಷ್ಟೋಕ್ತಿ. ಅದನ್ನು ಅವರು ವಿವರಿಸುವುದು ಹೀಗೆ... 'ನಾವು ನಿರಂತರವಾಗಿ ಗ್ರಾಹಕರ ಜೊತೆಗೆ ಸಂಪರ್ಕ, ಒಡನಾಟ ಹೊಂದಿರುತ್ತೇವೆ. ರಾಯಲ್ ಎನ್‌ಫೀಲ್ಡ್ ಹೇಗಿತ್ತೋ, ಹಾಗೆಯೇ ಇರಬೇಕು ಎಂಬುದು ಬಹುತೇಕ ಗ್ರಾಹಕರ ಅಭಿಮತ. ಆದರೆ, ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡದೆ ಹೋದರೆ ನಾವು ಮಾರುಕಟ್ಟೆಯಲ್ಲಿ ನಿಂತ ನೀರಾಗುತ್ತೇವೆ. ಹಾಗಾಗಿ, ನಮ್ಮ ತಂತ್ರಜ್ಞರಲ್ಲಿ ನಾವು ಹೇಳುವುದಿಷ್ಟು. ಬೈಕಿನ ಒಳಭಾಗದ ತಾಂತ್ರಿಕತೆಯನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸುತ್ತಾ ಹೋಗಿ. ಆದರೆ, ರಾಯಲ್ ಎನ್‌ಫೀಲ್ಡ್ ಬೈಕುಗಳ ಒಟ್ಟಾರೆ ಸ್ವರೂಪ ಬದಲಾಗಬಾರದು. ಉದಾಹರಣೆಗೆ, ಅದರ ಗುಡು ಗುಡು ಸದ್ದು, ಬುಲೆಟ್ ಹಾಗೂ ಕ್ಲಾಸಿಕ್ 350 ಬೈಕುಗಳ ಹುಲಿ-ಕಣ್ಣು, ಪೆಟ್ರೋಲ್ ಟ್ಯಾಂಕಿನ ನೀರ ಹನಿ ವಿನ್ಯಾಸ... ಇವೆಲ್ಲ ನಮ್ಮ ದ್ವಿಚಕ್ರವಾಹನದ ಹೆಗ್ಗುರುತುಗಳು. ಇವುಗಳು ರಾಯಲ್ ಎನ್‌ಫೀಲ್ಡ್ ಗ್ರಾಹಕರ ಅಚ್ಚುಮೆಚ್ಚಿನ ವಿಷಯಗಳು. ಇವುಗಳನ್ನು ಯಾವ ಕಾರಣಕ್ಕೂ ಬದಲಿಸುವುದಿಲ್ಲ.'
ಹೀಗೆ ಬದಲಿಸದೆ ಉಳಿದಿರುವ ಅಂಶಗಳಲ್ಲಿ ಅತ್ಯಂತ ಅಚ್ಚರಿ ಹಾಗೂ ಆಸಕ್ತಿ ಮೂಡಿಸುವ ಅಂಶವೊಂದಿದೆ. ಎಲ್ಲವನ್ನೂ ಸ್ವಯಂಚಾಲಿತ ಯಂತ್ರೋಪಕರಣಗಳ ನೆರವಿನಿಂದಲೇ ಮಾಡುವ ಈ ಕಾಲದಲ್ಲಿ ಒಂದು ಕೆಲಸವನ್ನು ಮಾತ್ರ ರಾಯಲ್ ಎನ್‌ಫೀಲ್ಡ್ ಸಂಸ್ಥೆ ಯಾವುದೇ ಯಂತ್ರೋಪಕರಣವಿಲ್ಲದೆ ಮಾಡಿಸುತ್ತದೆ.
undefined
ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ನೆಲೆ ನಿಂತ ಕಥೆ
ಟ್ಯಾಂಕಿಗೆ ಕೈಯಲ್ಲೇ ಪೇಂಟಿಂಗ್
ಬುಲೆಟ್ 350 ಬೈಕಿಗೀಗ 91 ವರ್ಷ ವಯಸ್ಸು. 1932ರಲ್ಲಿ ಇಂಗ್ಲೆಂಡಿನಲ್ಲಿ ಬಿಡುಗಡೆಯಾದ ಬೈಕು, 1955ರಲ್ಲಿ ಮೊತ್ತಮೊದಲ ಬಾರಿ ಭಾರತದಲ್ಲಿ ಉತ್ಪಾದನೆಯಾಯಿತು. 2023 ಆದರೂ ಇನ್ನೂ ಉತ್ಪಾದನೆಯಾಗುತ್ತಲೇ ಇದೆ. ಹೀಗೆ 91 ವರ್ಷಗಳಿಂದ ನಿರಂತರವಾಗಿ ಉತ್ಪಾದನೆಯಾಗುತ್ತಿರುವ ಬೈಕು ವಿಶ್ವದಲ್ಲಿ ಇನ್ನೊಂದಿಲ್ಲ. ಇಂತಹ ಸುದೀರ್ಘ ಇತಿಹಾಸವಿರುವ ಬುಲೆಟ್ 350 ಬೈಕಿನ ಟ್ಯಾಂಕಿಗೆ ಈಗಲೂ ಕೈಯಿಂದ ಬಣ್ಣ ಬಳಿಯುತ್ತಾರೆ ಎಂದರೆ ಎಂಥವರಿಗೂ ಅಚ್ಚರಿಯಾಗದೆ ಇರದು. ಹಾಗಂತ ಟ್ಯಾಂಕಿಗೆ ಇಡಿಯಾಗಿ ಕೈಯಿಂದ ಬಣ್ಣ ಬಳಿಯುವುದಿಲ್ಲ. ಅದನ್ನು ಯಂತ್ರವೇ ಮಾಡುವುದು. ಆದರೆ, ಟ್ಯಾಂಕಿನ ಎಡ, ಬಲ ಹಾಗೂ ಮೇಲ್ಭಾಗದಲ್ಲಿ ಅಂಡಾಕಾರದ ಸ್ವರ್ಣರೇಖೆಗಳಿರುತ್ತವೆ. ಈ ರೇಖೆಗಳನ್ನು ಯಾವುದೇ ಯಂತ್ರ ಬಳಸದೆ ಕುಂಚ ಕಲಾವಿದರು ಕೈಯಲ್ಲೇ ಎಳೆಯುತ್ತಾರೆ. ಇನ್ನೂ ವಿಶೇಷವೆಂದರೆ ಪ್ರತಿನಿತ್ಯ ಕೆಲಸ ಆರಂಭಿಸುವ ಮೊದಲು ಈ ಕಲಾವಿದರು ಸ್ವತಃ ಬಣ್ಣವನ್ನು ಹದಗೊಳಿಸುತ್ತಾರೆ. ಯಾವುದೇ ಯಂತ್ರದ ಅಳತೆಗೋಲು ಬಳಸದಿದ್ದರೂ, ಸ್ವರ್ಣರೇಖೆಯ ಬಣ್ಣದಲ್ಲಿ ಒಂಚೂರೂ ಬದಲಾವಣೆ ಆಗುವುದಿಲ್ಲ ಎಂಬುದು ಅಚ್ಚರಿಯೇ ಸರಿ!
ಜೈ - ಕಿಶೋರ್ ಸೋದರರ ಸಾಹಸ
ಸರಿಸುಮಾರು 1995ರಿಂದ ಇಬ್ಬರು ಸೋದರರು ಕೈಗೊಂಡಿರುವ ಸಾಹಸೀ ಕೆಲಸವಿದು. ಚೆನ್ನೈನವರೇ ಆದ (ಹಿಂದಿನ ಮದ್ರಾಸ್) ಜೈ ಕುಮಾರ್ ಹಾಗೂ ಕಿಶೋರ್ ಕುಮಾರ್ ಬುಲೆಟ್ ಟ್ಯಾಂಕುಗಳಿಗೆ ಕೈಯಲ್ಲೇ ಬಣ್ಣದ ಗೀರು ಹಾಕುತ್ತಾರೆ. ತೀರಾ ಇತ್ತೀಚಿನವರೆಗೂ ರಾಯಲ್ ಎನ್‌ಫೀಲ್ಡ್ ಫ್ಯಾಕ್ಟರಿಯಿಂದ ಹೊರಹೋಗುವ ಪ್ರತಿಯೊಂದು ಬುಲೆಟ್ ಬೈಕಿನ ಟ್ಯಾಂಕಿಗೂ ಇವರಿಬ್ಬರೇ ಸ್ವರ್ಣರೇಖೆ ಎಳೆಯುತ್ತಿದ್ದರು ಎಂಬುದು ಕೌತುಕದ ವಿಷಯ.
ಪೇಂಟರ್‌ಗಳಿಗೆ ಫಿಟ್ನೆಸ್, ಡಯಟ್
ಹತ್ತಿರ ಹತ್ತಿರ 3 ದಶಕಗಳ ಕಾಲ ಈ ಕೆಲಸ ಮಾಡಲು ಜೈ-ಕಿಶೋರ್ ಸೋದರರು ಅನೇಕ ತ್ಯಾಗ ಮಾಡಿದ್ದಾರೆ. ಕಣ್ಣುಗಳು ಮತ್ತು ದೇಹದ ಇತರೆ ಅಂಗಾಂಗಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಉತ್ತಮವಾದ ಆಹಾರವನ್ನೇ ಸೇವಿಸುತ್ತಾರೆ. ಮದ್ಯ, ಧೂಮಪಾನಗಳ ಹತ್ತಿರವೂ ಸುಳಿಯುವುದಿಲ್ಲ. ಮನೆಯಿಂದ ಫ್ಯಾಕ್ಟರಿ ಹಾಗೂ ಮತ್ತೆ ಮನೆಗೆ ನಿತ್ಯ ಸುಮಾರು 140 ಕಿಲೋಮೀಟರುಗಳಷ್ಟು ಬೈಕಲ್ಲೇ ಸಂಚರಿಸಿದರೂ ದೈಹಿಕ ಕ್ಷಮತೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತಾರೆ. ನಿತ್ಯವೂ ನಿಯಮಿತವಾಗಿ ವ್ಯಾಯಾಮ ಮಾಡುತ್ತಾರೆ. ಏಕೆಂದರೆ, ಈ ಕೆಲಸಕ್ಕೆ ಏಕಾಗ್ರತೆ ಹಾಗೂ ಸ್ಥಿರತೆ ಅತಿಮುಖ್ಯ.
ಹೊಸ ಅವತಾರದಲ್ಲಿ ಹಳೇ ಗುಡು ಗುಡು! ನವ ವಿನ್ಯಾಸದ ರಾಯಲ್ ಎನ್‌ಫೀಲ್ಡ್ ಬುಲೆಟ್ 350
ನಿತ್ಯ ಒಬ್ಬರಿಂದ 100 ಟ್ಯಾಂಕಿಗೆ ಪೇಂಟ್
ಎಂಟು ತಾಸುಗಳ ಒಂದು ಪಾಳಿಯಲ್ಲಿ ಅಂದಾಜು 100 ಟ್ಯಾಂಕುಗಳಿಗೆ ಗೀಟೆಳೆಯುತ್ತಾರೆ ಈ ಸೋದರರು. ಆದರೆ, ಬೈಕುಗಳಿಗೆ ಬೇಡಿಕೆ ಹೆಚ್ಚಿದಂತೆಲ್ಲ ಇವರ ಮೇಲೆ ಒತ್ತಡವೂ (Stress) ಹೆಚ್ಚಾಗಿದೆ. ಅದಕ್ಕೆಂದೇ ಒಂದಷ್ಟು ಕುಂಚ ಕಲಾವಿದರನ್ನು ಈಚೆಗೆ ತಮ್ಮ ಬಳಗಕ್ಕೆ ಸೇರಿಸಿಕೊಂಡಿದ್ದಾರೆ. ಅವರಿಗೆ ತರಬೇತಿ ನೀಡಿ ಇನ್ನೊಂದು ಪೀಳಿಗೆಗೆ ಈ ಕಲೆಯನ್ನು ದಾಟಿಸುವ ಪ್ರಯತ್ನ ಮಾಡಿದ್ದಾರೆ. ಈಗ ನಿತ್ಯ ಅಂದಾಜು 500ರಿಂದ 600 ಟ್ಯಾಂಕುಗಳಿಗೆ ಪೇಂಟ್ ಮಾಡಲಾಗುತ್ತಿದೆ. ಇಡೀ ದಿನ ನಿಂತುಕೊಂಡೇ ಟ್ಯಾಂಕುಗಳಿಗೆ ಗೆರೆ ಎಳೆಯುವ ಕೆಲಸ ನೋಡುಗರನ್ನು ನಿಬ್ಬೆರಗಾಗಿಸುವುದಂತೂ ನಿಜ.