ಶಾಸಕ ಸಂಗಮೇಶ್ ಪುತ್ರನಿಂದ ಮಹಿಳಾ ಅಧಿಕಾರಿಗೆ ನಿಂದನೆ; ಕೆಆರ್‌ಎಸ್ ದೂರು, ಮಹಿಳಾ ಆಯೋಗ ಕ್ರಮಕ್ಕೆ ಮುಂದಾಗುತ್ತಾ?
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ಅವರನ್ನು ನಿಂದಿಸಿದ ಶಾಸಕ ಸಂಗಮೇಶ್ ಪುತ್ರ ಬಿ. ಎಸ್. ಬಸವೇಶ್ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ. ನ್ಯಾಯಯುತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ಬೆಂಗಳೂರು (ಫೆ.13): ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ಅವರನ್ನು ಅವ್ಯಾಚ್ಯವಾಗಿ ನಿಂದಿಸಿದ ಶಾಸಕ ಸಂಗಮೇಶ್ ಪುತ್ರ ಬಿ. ಎಸ್. ಬಸವೇಶ್ ವಿರುದ್ಧ ನ್ಯಾಯಯುತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ.
ಯಾವುದೇ ಪ್ರಭಾವಕ್ಕೊಳಗಾಗದೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್ ದೂರಿನಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಹಿಳಾ ಅಧಿಕಾರಿಗೆ ಬೆದರಿಕೆ ಕೇಸ್ ಗೆ ಮಹಿಳಾ ಆಯೋಗ ಎಂಟ್ರಿ | Suvarna News | Kannada News
ಮಹಿಳಾ ಅಧಿಕಾರಿ ತಮ್ಮ ಕರ್ತವ್ಯ ನಿರ್ವಹಿಸಿ ಅಕ್ರಮವನ್ನು ತಡೆಯಲು ಮುಂದಾಗಿರುವ ಸಂದರ್ಭದಲ್ಲಿ ನಿಂದನೆ ಮಾಡಿರುವುದು ಅಕ್ಷಮ್ಯ. ಮಹಿಳೆಯರ ಬಗ್ಗೆ ಗೌರವವಿಲ್ಲದ, ಸಮಾನತೆ, ಕರ್ತವ್ಯಪ್ರಜ್ಞೆ, ಹೊಣೆಗಾರಿಕೆ ಇಲ್ಲದೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಸ್ವತಃ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವುದು ಮತ್ತು ಅದಕ್ಕೆ ಬೆಂಬಲವಾಗಿ ನಿಂತಿರುವುದು ಸ್ಪಷ್ಟವಾಗಿದೆ. ಭದ್ರಾವತಿ ಕ್ಷೇತ್ರದಲ್ಲಿ ನಡೆಯುವ ಅನೇಕ ಅಕ್ರಮ ಚಟುವಟಿಕೆಗಳಿಗೆ ಇವರ ಬೆಂಬಲವಿರುವ ಕಾರಣ ಪೊಲೀಸರು ಮತ್ತು ಜಿಲ್ಲಾಡಳಿತವು ಯಾವುದೇ ಕ್ರಮ ವಹಿಸುತ್ತಿಲ್ಲ. ಪೊಲೀಸರನ್ನು ಬಳಸಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸುವುದು, ಜಾತಿ ನಿಂದನೆ ಪ್ರಕರಣ ದಾಖಲಿಸಿ ಹೆದರಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ಅದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಂಗಮೇಶ್ ಪುತ್ರ ಬಸವೇಶ್ ವಿರುದ್ಧ ಕ್ರಮ ಆಗ್ಬೇಕು, ಬಿಜೆಪಿ ಪ್ರತಿಭಟನೆ । Bhadravathi MLA Son Controversy
ಶಾಸಕ ಸಂಗಮೇಶ್ ಪುತ್ರ ಬಸವೇಶ್ ಮಹಿಳಾ ಅಧಿಕಾರಿಯನ್ನು ನಿಂದಿಸಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಸಂಬಂಧ ಪಕ್ಷದ ಮಹಿಳಾ ಘಟಕವು ಮಹಿಳಾ ಆಯೋಗಕ್ಕೆ ದೂರು ನೀಡಿದೆ.
-ಎಲ್.ಜೀವನ್, ರಾಜ್ಯ ಸಂಘಟನಾ ಕಾರ್ಯದರ್ಶಿ, ಕೆಆರ್‌ಎಸ್.