ನೈಜೀರಿಯಾದ ಮಕ್ಕಳಿಗೆ ʼಭಾರತದ ರಾಷ್ಟ್ರಭಾಷೆ ಕನ್ನಡʼ ಕಲಿಸಿದ ಡಾ.ಬ್ರೋ ವಿಡಿಯೋ ಇದೀಗ ವೈರಲ್!
ಡಾ. ಬ್ರೋ ಅಥವಾ ಗಗನ್ ಶ್ರೀನಿವಾಸ್ ನಿಮಗೆ ಗೊತ್ತು. ಹತ್ತಾರು ದೇಶಗಳನ್ನು ಸುತ್ತಿ ವಿಡಿಯೋ ಮಾಡಿ ಪ್ರಕಟ ಮಾಡುವ ಈತನ ಇತ್ತೀಚಿನ ಒಂದು ವಿಡಿಯೋ, ನೈಜೀರಿಯಾದ ಶಾಲಾ ಮಕ್ಕಳಿಗೆ ʼರಾಷ್ಟ್ರಭಾಷೆʼ ಕಲಿಸಿದ ವಿಡಿಯೋ ವೈರಲ್ ಆಗಿದೆ.
ಡಾ. ಬ್ರೋ ಅಥವಾ ಗಗನ್ ಶ್ರೀನಿವಾಸ್ ಸದ್ಯಕ್ಕೆ ನೈಜೀರಿಯಾ ದೇಶದಲ್ಲಿದ್ದಂತೆ ಕಾಣುತ್ತದೆ. ಯಾಕೆಂದರೆ ಒಂದು ವಾರದಿಂದ ಅವರ ಯುಟ್ಯೂಬ್ ಮತ್ತಿತರ ಹ್ಯಾಂಡಲ್‌ಗಳಲ್ಲಿ ನೈಜೀರಿಯಾದ ಪ್ರವಾಸದ ವಿವರಗಳನ್ನು ಅಪ್‌ಡೇಟ್ ಮಾಡುತ್ತಿದ್ದಾರೆ. ಇವುಗಳಲ್ಲಿ ಒಂದು ವಿಡಿಯೋ ಎಲ್ಲರ ಗಮನ ಸೆಳೆದಿದೆ. ಮಾತ್ರವಲ್ಲ, ಕನ್ನಡಿಗರ ಮನಸ್ಸನ್ನೂ ಗೆದ್ದಿದೆ.
ಅದರಲ್ಲಿ ಬೇರೇನಿಲ್ಲ. ಗಗನ್ ಶ್ರೀನಿವಾಸ್ ನೈಜೀರಿಯದ ಯಾವುದೋ ಪುಟ್ಟ ಸ್ಕೂಲಿನ ತರಗತಿಯೊಂದರ ಮಕ್ಕಳಿಗೆ ಪಾಠ ಹೇಳಿಕೊಡ್ತಿದಾರೆ. ಅವರೆಲ್ಲಾ ನೈಜೀರಿಯಾದ ಕರಿಯರ ಮಕ್ಕಳು. ಆ ಶಾಲೆಯೂ ನೈಜೀರಿಯಾದ ಹಾಗೇ ಇದೆ. ಅಂದರೆ ಯಾವುದೋ ಬಡ, ಕಳಪೆ ಕಟ್ಟಡದಲ್ಲಿ ಇರುವಂತಿದೆ. ಬ್ರೋ ʼನಾನೀಗ ನಿಮಗೆ ಇಂಡಿಯಾದ ನ್ಯಾಷನಲ್ ಲ್ಯಾಂಗ್ವೇಜ್ ಹೇಳಿಕೊಡ್ತೀನಿʼ ಎಂದು ಹೇಳ್ತಾರೆ. ಬಹುಶಃ ಹಿಂದಿ ಹೇಳಿಕೊಡಬಹುದು ಎಂದು ನೀವಂದುಕೊಂಡಿದ್ದರೆ, ತಪ್ಪು. ʼಅ, ಆ, ಇ, ಈʼ ಎಂದು ಕನ್ನಡದ ಅಕ್ಷರಮಾಲೆಯನ್ನು ಅಂ, ಅಃ ವರೆಗೆ ಹೇಳಿಕೊಡ್ತಾರೆ.
ಡಾ. ಬ್ರೋನ ಈ ನಡವಳಿಕೆ ಕನ್ನಡದ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ʼʼನೈಜೀರಿಯಾಗೆ ಹೋಗಿ ಕನ್ನಡ ಬಾವುಟ ಹಾರಿಸಿದ್ದೀಯಲ್ಲ ಗುರು" "ಕನ್ನಡವನ್ನು ಭಾರತದ ರಾಷ್ಟ್ರಭಾಷೆ ಅಂತ ಕರೆದಿದ್ದಕ್ಕೆ ಥ್ಯಾಂಕ್ ಬ್ರೋ" ಎಂದೆಲ್ಲ ನೆಟ್ಟಿಗರು ಧನ್ಯವಾದ ಹೇಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗ್ತಿದೆ.
ಡಾ. ಬ್ರೋ ಈ ವರೆಗೂ ಬರೋಬ್ಬರಿ 20ಕ್ಕೂ ಅಧಿಕ ದೇಶಗಳನ್ನು ಸುತ್ತಾಡಿದ್ದಾರೆ. ಅದನ್ನೇ ಮುಂದುವರಿಸುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಒಂದು ಟ್ರಾವೆಲ್ ಏಜೆನ್ಸಿಯನ್ನು ಓಪನ್ ಮಾಡಿದ್ದು, ತಮ್ಮ ಜೊತೆ ಇತರರನ್ನೂ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ಯುಟ್ಯೂಬ್, ಇನ್‌ಸ್ಟಾ, ಟ್ವಿಟರ್ ಇತ್ಯಾದಿಗಳಲ್ಲಿ ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಹೊಂದಿರುವ ಡಾ ಬ್ರೋಗೆ ಲಕ್ಷಾಂತರ ಆದಾಯವಿದೆ.
ಅವರೇ ಹೇಳಿಕೊಂಡಂತೆ ಬ್ರೋ ಒಂದು ತಿಂಗಳಿಗೆ 1 ಲಕ್ಷ 80 ಸಾವಿರ (2100 ಡಾಲರ್) ಗಳಿಸುತ್ತಿದ್ದಾರೆ. ಗಳಿಕೆಯ ಜತೆಗೆ ವಿದೇಶಕ್ಕೆ ಹೋಗಲು ಖರ್ಚಾಗುವ ಮೊತ್ತ ಫ್ಲೈಟ್ ಚಾರ್ಜ್‌ಗೆ ಸುಮಾರು 50 ಸಾವಿರ, ಆ ದೇಶಕ್ಕೆ ಹೋದಾಗ ಅಲ್ಲಿನ ಖರ್ಚು 60 ಸಾವಿರ. ಕೆಲವೊಂದಿಷ್ಟು ಗ್ಯಾಡ್ಜೆಟ್ಸ್‌ಗಳ ಇಎಂಐ ಹೊರತಪಡಿಸಿದರೆ, ಒಂದು ಹತ್ತಿಪ್ಪತ್ತು ಸಾವಿರ ಕೈಗೆ ಬರುತ್ತೆ. ಇದು ಯೂಟ್ಯೂಬ್ ಕೊಡುವ ಮೊತ್ತ. ಇದರಾಚೆಗೆ ಆಡ್ಸ್ ರೆವೆನ್ಯೂವ್ ಬೇರೆ ಬರುತ್ತೆ ಎಂದಿದ್ದಾರೆ ಡಾ. ಬ್ರೋ.
ಭಾರತದ ಈ ಬ್ಯುಸಿ ರೈಲು ನಿಲ್ದಾಣದಲ್ಲಿ 1ನೇ ಪ್ಲಾಟ್‌ಫಾರಂ ಇಲ್ಲ
ಗಗನ್ ತಂದೆ ಶ್ರೀನಿವಾಸ, ತಾಯಿ ಪದ್ಮಾ. ಬೆಂಗಳೂರಿನ ಹೊರವಲಯದ ಊರಲ್ಲಿ ಹುಟ್ಟಿದ ಗಗನ್, ಬ್ರಾಹ್ಮಣ ಕುಟುಂಬದವರು. ಚಿಕ್ಕ ವಯಸ್ಸಿನಿಂದಲೇ ದೇವಸ್ಥಾನದ ಪೌರೋಹಿತ್ಯ, ಸಂಧ್ಯಾವಂದನೆ, ಧ್ಯಾನ, ಮಂತ್ರ, ಹೋಮ ಹವನ.. ಇದರಲ್ಲಿಯೇ ಇದ್ದರು. ದೇವಸ್ಥಾನದ ಪೂಜೆ, ದೇವಸ್ಥಾನದ ನಿರ್ವಹಣೆ, ಯಾರದ್ದಾದರೂ ಮದುವೆ, ಗೃಹಪ್ರವೇಶ ನೆರವೇರಿಸಿಕೊಡುತ್ತಿದ್ದರು. ಫಸ್ಟ್ ಪಿಯು ಸೈನ್ಸ್ ಫೇಲ್ ಆಗಿ, ನಂತರ ಕೆ.ಆರ್ ಪುರದ ವಿಶ್ವೇಶ್ವರಪುರ ಕಾಲೇಜಿನಲ್ಲಿ ಬಿಕಾಂ ಮಾಡಿದ ಗಗನ್‌ಗೆ ಇಂದು ತಿರುಗಾಟವೇ ಉದ್ಯೋಗ.
ಶಾಪ, ನದಿ ನೀರು ಮುಟ್ಟಲೂ ಹೆದರ್ತಾರೆ ಇಲ್ಲಿಯ ಜನ
ವಿಶೇಷ ಅಂದರೆ ಗಗನ್ ಸಸ್ಯಾಹಾರಿ. ಪಾಕಿಸ್ತಾನ, ಅಫಘಾನಿಸ್ತಾನದಲ್ಲಿದ್ದಾಗಲೂ ನಾನ್‌ವೆಜ್ ಮುಟ್ಟಿಲ್ಲವಂತೆ. ಹೆಸರು ಕಾಳು, ಕಾಬೂಲ್ ಕಡಲೆ, ಕಡಲೆ ಬೀಜ, ಕಡಲೆ ಕಾಳು ಈ ಮೂರನ್ನು ರಾತ್ರಿಯಿಡಿ ನೆನೆಸಿ ತಿಂದರಂತೆ. ಬ್ಯಾಗ್‌ನಲ್ಲಿ ಕ್ಯಾರೆಟ್, ಸೌತೆಕಾಯಿ ಇಟ್ಕೊಂಡು ಸುತ್ತಾಡ್ತರಂತೆ. ಹೋದಲ್ಲೆಲ್ಲ ಎಣ್ಣೆ ಪದಾರ್ಥ ಮುಟ್ಟಲ್ಲ. ಬೀದಿ ಬದಿ ಆಹಾರ ತಿನ್ನಲ್ಲ.. ಒಂದೇ ರೀತಿ ಆಹಾರ ಸೇವಿಸುತ್ತೇನೆ ಎನ್ನುತ್ತಾರೆ.