Gangavati BJP leader murder case four: ಗಂಗಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರರನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಕೊಲೆಯ ಹಿಂದೆ ಇಸ್ಪೀಟ್ ದಂಧೆಗೆ ಸಂಬಂಧಿಸಿದ ವೈಷಮ್ಯವಿರಬಹುದೆಂದು ಶಂಕಿಸಲಾಗಿದ್ದು, ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. 

ಕೊಪ್ಪಳ (ಅ.8): ಗಂಗಾವತಿಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬರ (Venkatesh Kurubar) ಅವರನ್ನು ತಡರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಊಟ ಮುಗಿಸಿ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ, ಕಾರಿನಲ್ಲಿ ಹಿಂಬಾಲಿಸಿದ ಗುಂಪೊಂದು ವೆಂಕಟೇಶ್‌ರನ್ನು ಕೊಲೆಗೈದಿದೆ.

ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಾದ ಭೀಮ ಅಲಿಯಾಸ್ ಭರತ್, ಸಲೀಂ, ವಿಜಯ್, ಧನರಾಜ್ ಕಂಪ್ಲಿ ಪೊಲೀಸರಿಗೆ ತಾವಾಗಿಯೇ ಶರಣಾಗಿದ್ದಾರೆ. ಆದರೆ, ಇನ್ನಿಬ್ಬರು ಆರೋಪಿಗಳಾದ ಕಾರ್ತಿಕ್ ಮತ್ತು ಲಕ್ಷ್ಮಣ ತಲೆಮರೆಸಿಕೊಂಡಿದ್ದಾರೆ. ಗಂಗಾವತಿ ಪೊಲೀಸರು ಶರಣಾದ ಆರೋಪಿಗಳನ್ನು ಕಂಪ್ಲಿ ಠಾಣೆಯಿಂದ ಕರೆತರುತ್ತಿದ್ದಾರೆ.

ಇದನ್ನೂ ಓದಿ: ಕೊಪ್ಪಳದ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಬರ್ಬರ ಕೊಲೆ!

ಹತ್ಯೆಯ ಹಿಂದೆ ಇಸ್ಪೀಟ್ ದಂಧೆ ಕರಾಳ ಮುಖ:

ಪೊಲೀಸ್ ತನಿಖೆಯ ಪ್ರಕಾರ, ಈ ಕೊಲೆಯ ಹಿಂದೆ ಇಸ್ಪೀಟ್ ದಂಧೆಗೆ ಸಂಬಂಧಿಸಿದ ಎರಡು ಗುಂಪುಗಳ ನಡುವಿನ ಕೋಲ್ಡ್ ವಾರ್ ಕಾರಣವಿರಬಹುದೆಂದು ಶಂಕಿಸಲಾಗಿದೆ. ಗಂಗಾವತಿಯಲ್ಲಿ ಇಸ್ಪೀಟ್ ದಂಧೆಯ ವಿಚಾರದಲ್ಲಿ ಗುಂಪುಗಳ ನಡುವೆ ತಿಕ್ಕಾಟ ನಡೆಯುತ್ತಿದ್ದು, ಈ ಘರ್ಷಣೆಯೇ ವೆಂಕಟೇಶ್‌ರ ಹತ್ಯೆಗೆ ಕಾರಣವಾಗಿರಬಹುದೆಂದು ಪೊಲೀಸರು ತಿಳಿದಿದ್ದಾರೆ.

ಕುಟುಂಬದ ಆಕ್ರಂದನ

ಈ ಘಟನೆಯಿಂದ ವೆಂಕಟೇಶ್‌ರ ಕುಟುಂಬ ಆಘಾತಕ್ಕೊಳಗಾಗಿದೆ. ತಮ್ಮ ಏಕೈಕ ಮಗನನ್ನು ಕಳೆದುಕೊಂಡ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಕೊಲೆ ಘಟನೆ ಗಂಗಾವತಿ ಪಟ್ಟಣವನ್ನೇ ಬೆಚ್ಚಿಬಿಳಿಸಿದೆ. ಸ್ಥಳೀಯರು ಮತ್ತು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರಿಂದ ಕಾವೇರಿ ತುಲಾ ಸಂಕ್ರಮಣ ಕಟ್ಟುಪಾಡಿಗೆ ಧಕ್ಕೆ, ಗ್ರಾಮಸ್ಥರ ಆಕ್ರೋಶ

ಪೊಲೀಸರ ತನಿಖೆ

ಗಂಗಾವತಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪರಾರಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಕೊಲೆಯ ಖಚಿತ ಕಾರಣ ಮತ್ತು ಇತರ ಸಂಬಂಧಿತ ವಿವರಗಳಿಗಾಗಿ ತನಿಖೆ ಚುರುಕುಗೊಳಿಸಲಾಗಿದೆ. ಈ ಘಟನೆಯಿಂದ ಗಂಗಾವತಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಸ್ಥಳೀಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.