Assam workers in Bhagamandala: ಕೊಡಗಿನ ಭಾಗಮಂಡಲ ತ್ರಿವೇಣಿ ಸಂಗಮದ ಬಳಿ ತಲಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಆಚರಿಸುವ ಹಬ್ಬದ ಕಟ್ಟುಪಾಡಿಗೆ ಅಸ್ಸಾಂ ಕಾರ್ಮಿಕರು ಮೀನು ಹಿಡಿದು ಧಕ್ಕೆ.. ಈ ಘಟನೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು, ಕಾರ್ಮಿಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ
ಕೊಡಗು(ಅ.8): ಕೊಡಗು ಜಿಲ್ಲೆಯ ಭಾಗಮಂಡಲ ತ್ರಿವೇಣಿ ಸಂಗಮದ ಬಳಿ ಅಸ್ಸಾಂ ಮೂಲದ ಕಾರ್ಮಿಕರು ಕಾವೇರಿ ನದಿಯಲ್ಲಿ ಮೀನು ಹಿಡಿದ ಘಟನೆಯಿಂದ ತಲಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಆಚರಿಸಲಾಗುವ ಹಬ್ಬದ ಕಟ್ಟುಪಾಡಿಗೆ ಧಕ್ಕೆಯಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 4 ರಿಂದ ಅಕ್ಟೋಬರ್ 17 ರವರೆಗೆ ತೀರ್ಥೋದ್ಭವದ ಸಂದರ್ಭದಲ್ಲಿ ಐದು ಗ್ರಾಮಗಳಲ್ಲಿ ಹಬ್ಬದ ಕಟ್ಟು ಆಚರಣೆಯಿದೆ. ಈ ಸಮಯದಲ್ಲಿ ಪ್ರಾಣಿ ಬಲಿ, ಮಾಂಸಾಹಾರ ಸೇವನೆ ಸಂಪೂರ್ಣ ನಿಷಿದ್ಧವಾಗಿದೆ. ಆದರೆ, ಅಸ್ಸಾಂ ಕಾರ್ಮಿಕರು ಕಾವೇರಿ ನದಿಯಲ್ಲಿ ಮೀನು ಹಿಡಿದಿರುವುದು ಗ್ರಾಮದ ಕಟ್ಟುಪಾಡಿಗೆ ಭಂಗ ತಂದಿದೆ. ಕೊಡಗು ಜಿಲ್ಲೆಯಲ್ಲಿ ಅಸ್ಸಾಂ ಕಾರ್ಮಿಕರ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಪಂಚಾಯತ್ ಪಿಡಿಓ ಭಾಗಮಂಡಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೊಡಗು: ಬಾಂಗ್ಲಾ ಕಾರ್ಮಿಕರಿಂದ ಕೊಡಗಿನ ಅಸ್ತಿತ್ವಕ್ಕೆ ಧಕ್ಕೆ: ರಘು ಹೆಬ್ಬಾಲೆ
ಕಟ್ಟುಪಾಡಿಗೆ ಧಕ್ಕೆ ತಂದ ಅಸ್ಸಾಂ ಕಾರ್ಮಿಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಮುಂದಿನ ಕ್ರಮಕ್ಕಾಗಿ ಕಾಯುತ್ತಿದ್ದಾರೆ.
