BJP leader murdered in Gangavati: ಗಂಗಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬರ ಅವರನ್ನು ತಡರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸ್ನೇಹಿತರೊಂದಿಗೆ ಊಟ ಮುಗಿಸಿ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ, ಕಾರಲ್ಲಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳಿಂದ ಹತ್ಯೆ ಮಾಡಿದ್ದಾರೆ.
ಕೊಪ್ಪಳ (ಅ.8): ತಡರಾತ್ರಿ ಸ್ನೇಹಿತರೊಂದಿಗೆ ಊಟ ಮಾಡಿ ಗಂಗಾವತಿಗೆ ತೆರಳುತ್ತಿದ್ದ ವೇಳೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನ ಕಾರಿನಲ್ಲಿ ಹಿಂಬಾಲಿಸಿ ಬಂದ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಗಂಗಾವತಿ ನಗರದಲ್ಲಿ ನಡೆದಿದೆ.
ವೆಂಕಟೇಶ ಕುರುಬರ (31) ಹತ್ಯೆಯಾದ ಯುವಕ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಾಗಿದ್ದ ವೆಂಕಟೇಶ್. ವೆಂಕಟೇಶ ಕುರುಬರ ದೇವಿಕ್ಯಾಂಪ್‌ನಿಂದ ಸ್ನೇಹಿತರೊಂದಿಗೆ ಊಟ ಮಾಡಿ ಬೈಕ್‌ನಲ್ಲಿ ಗಂಗಾವತಿಗೆ ತೆರಳುತ್ತಿದ್ದರು. ಕೊಪ್ಪಳ ರಸ್ತೆಯ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ಮದ್ಯರಾತ್ರಿ 2 ಗಂಟೆ ಸುಮಾರಿಗೆ ಈ ಹತ್ಯೆ ನಡೆದಿದೆ. ಬೈಕ್‌ಗೆ ಗುದ್ದಿ ಅಡ್ಡಗಟ್ಟಿದ ಗುಂಪು, ಲಾಂಗ್ ಮತ್ತು ಮಚ್ಚುಗಳಿಂದ ವೆಂಕಟೇಶನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ.
ಇದನ್ನೂ ಓದಿ: ಅರಮನೆ ಮೈದಾನ ಎದುರಲ್ಲೇ ಭೀಕರ ಕೊಲೆ; ಹಾಡಹಗಲೇ ಕಾರು ಅಡ್ಡಗಟ್ಟಿ, ಖಾರದಪುಡಿ ಎರಚಿ ಹತ್ಯೆ!
ಘಟನೆಯ ಸ್ಥಳಕ್ಕೆ ಡಿವೈಎಸ್‌ಪಿ ಸಿದ್ದನಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಕೊಲೆ ಮಾಡಲು ಬಳಸಿದ ಕಾರು ಪತ್ತೆ:
ವೆಂಕಟೇಶ ಕೊಲೆ ಮಾಡಲು ಆರೋಪಿಗಳು ಬಳಕೆ ಮಾಡಿದ ಟಾಟಾ ಇಂಡಿಕಾ KA 01 AC 8729 ನಂಬರ್‌ನ ಕಾರು ಗಂಗಾವತಿಯ ಎಚ್ ಆರ್ ಎಸ್ ಕಾಲೋನಿಯಲ್ಲಿ ಪತ್ತೆಯಾಗಿದೆ. ಆರೋಪಿಗಳು ಬೆಂಗಳೂರು ಪಾಸಿಂಗ್ ಇರುವ ಕಾರು ಬಳಕೆ ಮಾಡಿದ್ದಾರೆ. ಕಾರ್ ಟೈರ್ ಬ್ಲಾಸ್ಟ್ ಆಗಿದ್ದರಿಂದ ಕಾರು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಕಾರಿನಲ್ಲಿ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಸ್ಥಳಕ್ಕೆ ಬೆರಳಚ್ಚು, ಶ್ವಾನದಳ ತಂಡದೊಂದಿಗೆ ತನಿಖೆ ಮುಂದುವರಿದಿದೆ.
