wife pours hot oil on husband: ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ, ಅಕ್ರಮ ಸಂಬಂಧದ ಶಂಕಿಸಿ ಪತ್ನಿಯೊಬ್ಬಳು ತನ್ನ ಪತಿಯ ಮೇಲೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾಳೆ. ಗ್ಯಾಸ್ ಸಿಲಿಂಡರ್ ಪೂರೈಕೆದಾರನಾಗಿದ್ದ ಪತಿಗೆ ಮಹಿಳೆಯರಿಂದ ಬರುತ್ತಿದ್ದ ಕರೆಗಳೇ ಈ ಅನುಮಾನಕ್ಕೆ ಕಾರಣ. ಘಟನೆ ನಂತರ ಪತ್ನಿ ಬಂಧನ
ಬೆಳಗಾವಿ (ಅ.8): ಬೇರೆ ಮಹಿಳೆಯ ಜೊತೆಗೆ ತನ್ನ ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಪಟ್ಟು ಸುಡುವ ಎಣ್ಣೆಯನ್ನು ಆತನ ಮೈಮೇಲೆ ಎರಚಿರುವ ಘಟನೆ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮಚ್ಚೆ ರಾಮನಗರದ ನಿವಾಸಿ ಸುಭಾಷ ಪಾಟೀಲ (55) ಗಾಯಗೊಂಡ ವ್ಯಕ್ತಿ. ಸುಭಾಷ ಪತ್ನಿ ವೈಶಾಲಿ ಕಾಯ್ದ ಎಣ್ಣೆ ಎರಚಿದ ಮಹಿಳೆ. ಸುಡುವ ಎಣ್ಣೆ ಮೈಮೇಲೆ ಬೀಳುತ್ತಿದ್ದಂತೆ ಹೊರಗೆ ಓಡಿ ಬಂದ ಸುಭಾಷ್ ಉರಿ ತಾಳಲಾರದೇ ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಉರುಳಾಡಿದ್ದಾರೆ. ಬಳಿಕ ಕುಟುಂಬಸ್ಥರು ಮತ್ತು ಸ್ಥಳೀಯರು ಸುಭಾಷ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮನೆ ಮನೆಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಕೆಲಸ ಮಾಡುವ ಸುಭಾಷ ಪಾಟೀಲ ಎಂದಿನಂತೆ ಸೋಮವಾರ ಕೆಲಸ ಮುಗಿಸಿ, ಮನೆಗೆ ಬಂದು ಕುರ್ಚಿ ಮೇಲೆ ಕುಳಿತಿದ್ದರು. ಈ ವೇಳೆ ಶಾಂಡಿಗೆ ಮಾಡಲು ಕಾಯಿಸಿಟ್ಟಿದ್ದ ಎಣ್ಣೆಯನ್ನು ಪತಿಯ ತಲೆ ಮತ್ತು ಮೈಮೇಲೆ ಸುರಿದ ವೈಶಾಲಿ ವಿಕೃತಿ ಮೆರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊಪ್ಪಳದ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಬರ್ಬರ ಕೊಲೆ!
ಮನೆಮನೆಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಿಕೊಂಡಿದ್ದ ಸುಭಾಷ್ ಅವರಿಗೆ ಸಿಲಿಂಡರ್ ಖಾಲಿಯಾಗಿದೆ ಅಂತ ಅನೇಕ ಮಹಿಳೆಯರು ಫೋನ್ ಮಾಡುತ್ತಿದ್ದರು. ಇದರಿಂದ ತನ್ನ ಗಂಡ ಬೇರೆ ಮಹಿಳೆಯರ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎನ್ನುವ ಅನುಮಾನ ವೈಶಾಲಿ ಅವರಿಗೆ ಬಂದಿತ್ತು. ಇದೇ ಅನುಮಾನಕ್ಕೆ ಹಲವಾರು ಬಾರಿ ಗಂಡ ಮತ್ತು ಹೆಂಡತಿ ಮಧ್ಯೆ ಗಲಾಟೆ ಕೂಡ ನಡೆದಿದ್ದವು. ಕಳೆದ ಹತ್ತು ತಿಂಗಳಿನಿಂದ ಮನೆ ಬಿಟ್ಟು ಹೋಗಿದ್ದ ವೈಶಾಲಿ, ಮೂರನೇ ಮಗಳ ಮದುವೆ ತಯಾರಿ ಸಂಬಂಧ ಈಗಷ್ಟೇ ಗಂಡನ ಮನೆಗೆ ಬಂದಿದ್ದಳು.
ಒಳ್ಳೆಯ ಕಡೆ ಸಂಬಂಧ ನೋಡಿ ಮದುವೆ ಮಾಡಿಕೊಡಬೇಕು ಎಂದು ನಿರ್ಧರಿಸಲಾಗಿತ್ತು. ಅಲ್ಲದೇ ಪದೇ ಪದೇ ಮಹಿಳೆಯರು ಸಿಲಿಂಡರ್‌ಗಾಗಿ ತನ್ನ ಗಂಡನಿಗೆ ಫೋನ್ ಮಾಡುವುದು ವೈಶಾಲಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಕಾಯ್ದ ಎಣ್ಣೆಯನ್ನು ಗಂಡನ ಮೇಲೆ ಸುರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಆರೋಪಿ ವೈಶಾಲಿ ಪಾಟೀಲಳನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಶುರು ಮಾಡಿದ್ದಾರೆ.ಸುಭಾಷ್ ಹಾಗೂ ವೈಶಾಲಿ ದಂಪತಿಗೆ ಮೂವರು ಹೆಣ್ಣು ಮಕ್ಕಳು. ಅದರಲ್ಲಿ ಇಬ್ಬರಿಗೆ ಮದುವೆ ಆಗಿದ್ದು, ಮೂರನೇ ಮಗಳ ಮದುವೆಗಾಗಿ ಮನೆಯಲ್ಲಿ ತಯಾರಿ ನಡೆಸಿದ್ದರು. ಇದರ ನಡುವೆ ಈ ರೀತಿ ಘಟನೆ ಆಗಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ವೈಶಾಲಿ ಅವರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅರಮನೆ ಮೈದಾನ ಎದುರಲ್ಲೇ ಭೀಕರ ಕೊಲೆ; ಹಾಡಹಗಲೇ ಕಾರು ಅಡ್ಡಗಟ್ಟಿ, ಖಾರದಪುಡಿ ಎರಚಿ ಹತ್ಯೆ!
ಬೆಳಗಾವಿಯ ಶ್ರೀ ರಾಮ ನಗರ ಮಚ್ಚೆಯಲ್ಲಿ ಸೋಮವಾರ ಪತ್ನಿ ಪತಿಯ ಮೇಲೆ ಬಿಸಿ ಎಣ್ಣೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಸಾಕ್ಷ್ಯಾಧಾರಗಳ ಮೇಲೆ ವೈಶಾಲಿ ಪಾಟೀಲಳನ್ನು ದಸ್ತಗಿರಿ ಮಾಡಲಾಗಿದೆ. ಪತಿ ಪತ್ನಿಯ ಜಗಳದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ತನಿಖೆ ಮುಂದುವರೆದಿದೆ.
-ಭೂಷಣ ಭೂಷಣ್ ಗುಲಾಬರಾವ ಬೊರಸೆ ನಗರ ಪೊಲೀಸ ಆಯುಕ್ತ
