ವಿವಾಹಿತ ಪುರುಷನೊಂದಿಗೆ ವಯಸ್ಕ ಮಹಿಳೆ ವಾಸಿಸುವುದನ್ನು ತಡೆಯುವ ಯಾವುದೇ ಕಾನೂನು ಇಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಸ್ಪಷ್ಟಪಡಿಸಿದೆ. ಮಹಿಳೆಯು ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ಬದುಕುವ ಹಕ್ಕನ್ನು ಹೊಂದಿದ್ದಾಳೆ ಮತ್ತು ನೈತಿಕತೆಯ ವಿಷಯಗಳಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದಿದೆ

ವಿವಾಹಿತ ಪುರುಷನೊಂದಿಗೆ ವಯಸ್ಕ ಮಹಿಳೆ ವಾಸಿಸುವುದನ್ನು ತಡೆಯುವ ಯಾವುದೇ ಕಾನೂನು ಭಾರತದಲ್ಲಿ ಇಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಗೆ ಸಂಬಂಧಿಸಿದಂತೆ ನಡೆಸುತ್ತಿದ್ದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಪ್ರದೀಪ್ ಮಿತ್ತಲ್ ಅವರ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. ವಿವಾಹಿತನಾಗಿರುವ ಕಾರಣಕ್ಕೆ ವಯಸ್ಕ ಮಹಿಳೆ ಆತನೊಂದಿಗೆ ವಾಸಿಸಿದರೆ ಅದು ಅಪರಾಧ ಎನ್ನುವ ಕಾನೂನು ಇಲ್ಲ. ಅದನ್ನು ತಡೆಯುವ ಯಾವುದೇ ಕಾನೂನು ಇಲ್ಲ ಎಂದು ಕೋರ್ಟ್ ಹೇಳಿದೆ.

ಕೇಸ್‌ ಹಾಕಿದರೆ ಮಾತ್ರ ಕ್ರಮ

ಒಂದು ವೇಳೆ ಮಹಿಳೆ ಆ ಪುರುಷನನ್ನು ಮದುವೆಯಾದರೆ, ಅವನ ಮೊದಲ ಹೆಂಡತಿ ಮಾತ್ರ ದ್ವಿಪತ್ನಿತ್ವದ ಪ್ರಕರಣವನ್ನು ದಾಖಲಿಸಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಹಿಂದೂ ಆದವರು ಕೂಡ ಒಂದಕ್ಕಿಂತ ಹೆಚ್ಚು ಮದುವೆಯಾಗಿದ್ದರೂ ಕಾನೂನು ಏನೂ ಮಾಡಲ್ವಾ? ವಿಐಪಿಗಳು ಎಂದು ಕಾನೂನು ಸುಮ್ಮನೇ ಕುಳಿತುಕೊಳ್ಳತ್ತಾ? ಪ್ರಭಾವಶಾಲಿಗಳಿಗೆ ಒಂದು ಕಾನೂನು, ಸಾಮಾನ್ಯ ಜನರಿಗೆ ಇನ್ನೊಂದು ಕಾನೂನಾ ಎಂದು ಹಲವರು ಸಂದರ್ಭಗಳಲ್ಲಿ ಜನರು ಕೇಳುವುದು ಉಂಟು. ಆದರೆ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿ ಎರಡನೆಯ ಮದುವೆಯಾದರೆ, ಆತನ ಮೊದಲ ಪತ್ನಿ ದ್ವಿಪತ್ನಿತ್ವದ ಕೇಸು ದಾಖಲು ಮಾಡಿದರೆ ಮಾತ್ರ, ಆಗ ಕೇಸ್‌ ಆಗುತ್ತದೆಯೇ ವಿನಾ, ಮದುವೆಯಾದ ಮಾತ್ರಕ್ಕೆ ಅವರನ್ನು ಅಪರಾಧಿಯಾಗಿ ಮಾಡುವ ಕಾನೂನು ಇಲ್ಲ ಎನ್ನುವುದು ಇದರ ಅರ್ಥ.

ಇದನ್ನೂ ಓದಿ: ಪೂಜೆ ಮಾಡಲು ನನ್ನ ಧರ್ಮ ಅನುಮತಿ ಕೊಡಲ್ಲ: ಪ್ರಚಾರಕ್ಕಾಗಿ ಆ ತಪ್ಪು ಮಾಡಲಾರೆ ಎಂದ ಬಾಲಿವುಡ್​ ನಟ

ನೈತಿಕತೆ ಬಗ್ಗೆ ಕೋರ್ಟ್ ಹೇಳಲ್ಲ

ಮದುವೆಯಾದ ಪುರುಷನೊಂದು ಓರ್ವ ಮಹಿಳೆ ವಾಸವಾಗಿದ್ದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ನಡೆಸಿತು. "ನೈತಿಕತೆಗೆ ಸಂಬಂಧಿಸಿದ ವಿಷಯಗಳಲ್ಲಿ ಈ ನ್ಯಾಯಾಲಯವು ಪಾಂಟಿಫೈ ಮಾಡಲು ಸಾಧ್ಯವಿಲ್ಲ ಮತ್ತು ಆಕೆ ಯಾರೊಂದಿಗೆ ಇರಲು ಬಯಸುತ್ತಾಳೋ ಅವರೊಂದಿಗೆ ಇರಲು ಹಕ್ಕಿದೆ ಎಂದು ಕೋರ್ಟ್ ಹೇಳಿದೆ.

ಯಾರೊಂದಿಗೆ ಬದುಕಬೇಕು ಎನ್ನೋ ಹಕ್ಕಿದೆ

ಮಹಿಳೆಯು ತನ್ನದೇ ಆದ ಮನಸ್ಸನ್ನು ಹೊಂದಿದ್ದು, ಯಾರೊಂದಿಗೆ ಬದುಕಬೇಕು ಎಂಬುದನ್ನು ನಿರ್ಧರಿಸುವ ಹಕ್ಕನ್ನು ಹೊಂದಿದ್ದಾಳೆ ಮತ್ತು ನೈತಿಕತೆಗೆ ಸಂಬಂಧಿಸಿದ ವಿಷಯಗಳಲ್ಲಿ ನ್ಯಾಯಾಲಯವು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ವಯಸ್ಕ ಮಹಿಳೆಯು ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಹೊಂದಿದ್ದಾಳೆ. ಈಗಾಗಲೇ ಮದುವೆಯಾಗಿರುವ ಪುರುಷನೊಂದಿಗೆ ವಾಸಿಸುವ ವಯಸ್ಕ ಮಹಿಳೆಯನ್ನು ತಡೆಯುವ ಯಾವುದೇ ಕಾನೂನು ಭಾರತದಲ್ಲಿ ಇಲ್ಲ. ನ್ಯಾಯಾಲಯವು ನೈತಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಮತ್ತು ಮಹಿಳೆಯ ತನ್ನ ಆಯ್ಕೆಯನ್ನು ಆರಿಸಿಕೊಳ್ಳುವ ಹಕ್ಕನ್ನು ಗೌರವಿಸುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: 'ವಿಷ ಕೊಡಿ' ಎಂದು ಅವಲತ್ತುಕೊಂಡಿದ್ದ Darshan: ನಟ ರಮೇಶ್​ ಅರವಿಂದ್​ ರಿಯಾಕ್ಷನ್​ ಏನು?