ನವದೆಹಲಿ(ಜು.20): ಗೆಳೆಯರೊಂದಿಗೆ ಪಾರ್ಟಿ ಮಾಡುತ್ತಿದ್ದಾಗ ಹೋಟೆಲ್ ಮಾಲೀಕ ನನ್ನನ್ನು ಕಣ್ಣಲ್ಲೆ ರೇಪ್ ಮಾಡಿದ ಎಂದು ಆರೋಪಿಸಿದ್ದ ಬಾಲಿವುಡ್ ನಟಿ ಇಶಾ ಗುಪ್ತಾ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಶಾ ಗುಪ್ತಾ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ, ಹೋಟೆಲ್ ಮಾಲೀಕ ರೋಹಿತ್ ವಿಗ್ ನಟಿಯ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ  ದಾಖಲಿಸಿದ್ದಾರೆ.

ಹೋಟೆಲ್ ಉದ್ಯಮಿ ರೋಹಿತ್ ವಿಗ್ ತಮ್ಮ ವಕೀಲ ವಿಕಾಸ್ ಪಹ್ವಾರ್ ಮೂಲಕ ಇಶಾ ಗುಪ್ತಾ ವಿರುದ್ಧ ಸಾಕೇತ್ ಕೋರ್ಟ್ ನಲ್ಲಿ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. 

ನಟಿಯ ಸುಳ್ಳು ಆರೋಪದಿಂದಾಗಿ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದ ನಿತ್ಯ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದು, ಇದರಿಂದ ತಮ್ಮ ಹಾಗೂ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ ಎಂದು ರೋಹಿತ್ ಹೇಳಿದ್ದಾರೆ.

ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ನಟಿಯಿಂದ ತಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೋಹಿತ್ ವಿಗ್ ಕೋರಿದ್ದು, ನ್ಯಾಯಾಲಯ ಪ್ರಕರಣವನ್ನು ಆ.28ಕ್ಕೆ ಮುಂದೂಡಿದೆ. 

ಇತ್ತೀಚಿಗಷ್ಟೇ ಇಶಾ ಗುಪ್ತಾ ರೆಸ್ಟೋರೆಂಟ್ ಮಾಲೀಕ ರೋಹಿತ್ ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡರು ಎಂದು ಸಾಮಾಜಿಕ ಜಾಲತಾಣದಲ್ಲಿ ದುಖಃ ತೋಡಿಕೊಂಡಿದ್ದರು.