ವರದಕ್ಷಿಣೆಗಾಗಿ ಸೊಸೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿ ಪತಿ ವಿಪಿನ್ ಭಾಟಿ ಎನ್‌ಕೌಂಟರ್ ನಂತರ, ಆತನ ತಾಯಿ ದಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನೆದುರೇ ನಡೆದ ಈ ಭೀಕರ ಘಟನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವರದಕ್ಷಿಣೆಗಾಗಿ ಮಗನೊಂದಿಗೆ ಸೇರಿ ಸೊಸೆಗೆ ಬೆಂಕಿ ಹಚ್ಚಿ ಆಕೆಯ ಸಾವಿಗೆ ಕಾರಣವಾದ ಅತ್ತೆಯನ್ನೂ ಈಗ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಆಗಸ್ಟ್ 21ರಂದು ನೋಯ್ಡಾದಲ್ಲಿ ಅಮ್ಮ ಮಗ ಸೇರಿ ಸೊಸೆಗೆ ಆಕೆಯ ಪುಟ್ಟ ಮಗನೆದುರೇ ಬೆಂಕಿ ಹಚ್ಚಿದ್ದರು. ಈ ಭಯಾನಕ ಕೃತ್ಯ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದ್ದಲ್ಲದೇ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವರದಕ್ಷಿಣೆ ನಿಷೇಧಿತವಾದ ದೇಶದಲ್ಲಿ ಅದೂ ಹಳ್ಳಿಯೂ ಅಲ್ಲ ಸುಶಿಕ್ಷಿತರೇ ನೆಲೆಸಿರುವ ಮಹಾನಗರಿ ನೋಯ್ಡಾದಲ್ಲಿ ಇಂತಹದೊಂದು ಭೀಭತ್ಸ ಕೃತ್ಯ ಸಂಭವಿಸಿರುವುದು ಕೇಳಿ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಪಿನ್ ಭಾಟಿಯನ್ನು ಪೊಲೀಸರು ಬಂಧಿಸಿದ್ದರು. ಇಂದು ಆತನನ್ನು ಘಟನಾ ಸ್ಥಳ ಮಹಜರು ನಡೆಸಲು ಕರೆದುಕೊಂಡು ಬಂದ ವೇಳೆ ಆತ ಪೊಲೀಸರ ಗನ್ ಕಸಿದುಕೊಂಡು ಗುಂಡು ಹಾರಿಸಲು ಯತ್ನಿಸಿದಾಗ ಎನ್‌ಕೌಂಟರ್ ನಡೆಸಿದ ಪೊಲೀಸರು ಆತನ ಕಾಲಿಗೆ ಗುಂಡಿಕ್ಕಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ದಯಾ ಎಂಬ ಹೆಸರಿನ ಆದರೆ ದಯೆಯೇ ಇಲ್ಲದ ಆತನ ರಕ್ಕಸಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಾಗಿದ್ದ ರೋಹಿತ್ ಭಾಟಿ ಹಾಗೂ ಮಾವ ಸತ್ಯವೀರ್ ಪರಾರಿಯಾಗಿದ್ದು, ಅವರ ಪತ್ತೆಗೆ ತೀವ್ರ ಶೋಧ ನಡೆಯುತ್ತಿದೆ.

ಘಟನೆಯ ಹಿನ್ನೆಲೆ

2016ರಲ್ಲಿ ಉತ್ತರ ಪ್ರದೇಶ ಮೂಲದ ನಿಕ್ಕಿ ಪಾಯ್ಲಾ ಎಂಬಾಕೆಯನ್ನು ಗ್ರೇಟರ್ ನೋಯ್ಡಾದ ವಿಪಿನ್ ಭಾಟಿ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಇದಕ್ಕೂ ಮೊದಲು ನಿಕ್ಕಿ ಪಾಯ್ಲಾಳ ಅಕ್ಕ ಕಾಂಚನಾ ಎಂಬುವವರನ್ನು ಕೂಡ ಇದೇ ಕುಟುಂಬಕ್ಕೆ ಅಂದರೆ ವಿಪಿನ್ ಅಣ್ಣನಾದ ರೋಹಿತ್‌ ಭಾಟಿ ಜೊತೆ ಮದುವೆ ಮಾಡಲಾಗಿತ್ತು. ಮದುವೆಯ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಟಾಪ್ ಮಾಡೆಲ್ ಸ್ಕಾರ್ಫಿಯೋ ಕಾರು, ರಾಯಲ್ ಎನ್‌ಫೀಲ್ಡ್ ಬುಲೆಟ್ ಚಿನ್ನಾಭರಣ ನಗದು ಸೇರಿದಂತೆ ಅನೇಕ ಬೆಲೆಬಾಳುವ ವಸ್ತುಗಳನ್ನು ನೀಡಲಾಗಿತ್ತು. ಆದರೆ ವಿಪಿನ್ ಭಾಟಿ ಹಾಗೂ ಆತನ ಪೋಷಕರ ಧನದಾಹ ಅಲ್ಲಿಗೆ ತೀರಿರಲಿಲ್ಲ, ಅವರು ತವರು ಮನೆಯಿಂದ 36 ಲಕ್ಷ ರೂಪಾಯಿಯನ್ನು ತರುವಂತೆ ಇಬ್ಬರೂ ಸೋದರಿಯರಿಗೆ ಕಿರುಕುಳ ನೀಡುತ್ತಿದ್ದರು. ಒಬ್ಬಳ ಪಾಲಿನ ವರದಕ್ಷಿಣೆ ಬಂತು ಇನ್ನೊಬ್ಬಳಿಗೆ ಏನು ಸಿಕ್ತು ಎಂದು ಆಕೆಯ ಅತ್ತೆ ಸೊಸೆಯರಿಗೆ ಕೇಳುತ್ತಾ ಕಿರುಕುಳ ನೀಡುತ್ತಿದ್ದರು ಎಂದು ಕೊಲೆಯಾದ ನಿಕ್ಕಿ ಭಾಟಿ ಅವರ ಅಕ್ಕ ಕಾಂಚನಾ ದೂರಿದ್ದಾರೆ.

ಈ ವರದಕ್ಷಿಣೆ ಕಿರುಕುಳದ ಕಾರಣಕ್ಕೆ ಶುರುವಾದ ಗಲಾಟೆ ಗುರುವಾರ ಆಗಸ್ಟ್ 21ರಂದು ವಿಕೋಪಕ್ಕೆ ತಿರುಗಿದ್ದು, ವಿಪಿನ್ ಹಾಗೂ ಆತನ ತಾಯಿ ದಯಾ ಇಬ್ಬರು ಸೇರಿ ನಿಕ್ಕಿ ಭಾಟಿ ಮೇಲೆ ಹಲ್ಲೆ ಮಾಡಿ ಆಕೆಯ ಕೂದಲನ್ನು ಹಿಡಿದು ಎಳೆದಾಡಿದ್ದಾರೆ ನಂತರ ಆಕೆಯ ಮೇಲೆ ಏನೋ ಸುರಿದು ಲೈಟರ್ ಹೊತ್ತಿಸಿ ಬೆಂಕಿ ಹಚ್ಚಿದ್ದಾರೆ. ಇದರಿಂದ ಶೇಕಡಾ 70 ರಷ್ಟು ಸುಟ್ಟಗಾಯಗಳಾದ ನಿಕ್ಕಿ ಭಾಟಿ ಅವರನ್ನು ನೆರೆಹೊರೆಯ ಮನೆಯವರು ಮೊದಲಿಗೆ ಸಮೀಪದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಲ್ಲಿಂದ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಲಾಗಿತ್ತು. ಆದರೆ ಮಾರ್ಗಮಧ್ಯೆಯೇ ನಿಕ್ಕಿ ಅವರು ಕೊನೆಯುಸಿರೆಳೆದಿದ್ದರು.

ಆದರೆ ಈ ಘಟನೆಯ ಬೀಭತ್ಸ ದೃಶ್ಯಾವಳಿಗಳು ಅನೇಕರನ್ನು ರಕ್ತಕುದಿಯುವಂತೆ ಮಾಡಿತ್ತು. ಬೆಂಕಿ ಹತ್ತಿಕೊಂಡಿದ್ದ ನಿಕ್ಕಿ ಭಾಟಿ ಬೆಂಕಿಜ್ವಾಲೆಯಂತೆ ಮೆಟ್ಟಿಲ್ಲಿಳಿದು ನಡೆದುಕೊಂಡು ಬರುತ್ತಿರುವ ದೃಶ್ಯ ನೋಡಿದವರ ಹೃದಯ ಬಿರಿಯುವಂತೆ ಮಾಡಿತ್ತು. ಇದರ ಜೊತೆಗೆ ಬೆಂಕಿ ಹಚ್ಚುವುದಕ್ಕೂ ಮೊದಲು ಆಕೆಗೆ ಗಂಡ ಹಾಗೂ ಅತ್ತೆ ಆಕೆಯ ಕೂದಲನ್ನು ಹಿಡಿದು ಎಳೆದಾಡಿ ಹಲ್ಲೆ ಮಾಡುತ್ತಿರುವ ದೃಶ್ಯವೂ ನೋಡುಗರ ಎದೆಯೊಡೆಯುವಂತೆ ಮಾಡಿತ್ತು. ಜನ ಪೊಲೀಸ್ ಠಾಣೆಯ ಮುಂದೆ ಸೇರಿ ನಿಕ್ಕಿಗೆ ನ್ಯಾಯ ಕೊಡಿಸುವಂತೆ ಪ್ರತಿಭಟನೆ ನಡೆಸಿದರು.

ಅಪ್ಪನೇ ಲೈಟರ್‌ನಿಂದ ಅಮ್ಮನಿಗೆ ಬೆಂಕಿ ಹಚ್ಚಿದರು:

ನಿಕ್ಕಿ ಭಾಟಿ ಅವರ ಪುಟ್ಟ ಮಗುವಿನೆ ಮುಂದೆಯೇ ಈ ಕೃತ್ಯ ನಡೆದಿತ್ತು. ಘಟನೆಯನ್ನು ಕಣ್ಣಾರೆ ಕಂಡು ಬೆದರಿದ ಪುಟ್ಟ ಮಗು ತನ್ನ ಕಣ್ಣೆದುರೇ ನಡೆದ ಅಮ್ಮನ ಕೊಲೆಯನ್ನು ಇಂಚಿಂಚಾಗಿ ಅಲ್ಲಿದ್ದವರ ಬಳಿ ನಡುಗುವ ದನಿಯಿಂದಲೇ ಹೇಳಿದ್ದು, ನೋಡುಗರ ಕಣ್ಣಾಲಿ ತೇವಗೊಳ್ಳುವಂತೆ ಮಾಡಿತು. ಅಮ್ಮನನ್ನು ಥಳಿಸಿದರು. ನಂತರ ಅಪ್ಪ ಆಕೆಯ ಮೇಲೆ ಏನೋ ಸುರಿದು ಲೈಟರ್‌ನಿಂದ ಬೆಂಕಿ ಹಚ್ಚಿದರು ಎಂದು ಆ ಕಂದ ಅಳುತ್ತಲೇ ಹೇಳಿದ್ದನು ಕೇಳಿ ಅಲ್ಲಿದ್ದ ಕುಟುಂಬ ಸದಸ್ಯರು ಬಂಧುಗಳು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ನೋಯ್ಡಾದಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪ್ರಕರಣ: ಪೊಲೀಸರಿಂದ ಗಂಡನಿಗೆ ಗುಂಡೇಟು

ಇದನ್ನೂ ಓದಿ: ಮದುವೆ ವೇಳೆ ಸ್ಕಾರ್ಪಿಯೋ ಗಾಡಿ ನೀಡಿದರು ತೀರದ ದಾಹ: ಮಗುವಿನೆದುರೇ ಪತ್ನಿಗೆ ಬೆಂಕಿ ಹಚ್ಚಿದ ಗಂಡ