ಗ್ರೇಟರ್ ನೋಯ್ಡಾದಲ್ಲಿ ವರದಕ್ಷಿಣೆಗಾಗಿ ಪತ್ನಿಗೆ ಗಂಡ ಮತ್ತು ಅತ್ತೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮಗುವಿನ ಕಣ್ಣೆದುರೇ ಈ ಕೃತ್ಯ ನಡೆದಿದೆ.

ಭಾರತದಲ್ಲಿ ವರದಕ್ಷಿಣೆ ನಿಷೇಧಗೊಂಡು ಹಲವು ವರ್ಷಗಳೇ ಕಳೆದಿವೆ. ಆದರೆ ವರದಕ್ಷಿಣೆಗಾಗಿ ಕೆಲವು ಕಡೆಗಳಲ್ಲಿ, ಕೆಲವು ಕುಟುಂಬಗಳಲ್ಲಿ ಹೆಣ್ಣಿಗೆ ನೀಡುತ್ತಿರುವ ಕಿರುಕುಳ ಕೊನೆಯಾಗಿಲ್ಲ. ವರದಕ್ಷಿಣೆ ತರಲಿಲ್ಲ ಎಂದು ಪತ್ನಿಗೆ ಪತಿ ಹಾಗೂ ಆತನ ತಾಯಿ ಬೆಂಕಿ ಹಚ್ಚಿದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ. ಪುಟ್ಟ ಮಗುವಿನ ಮುಂದೆಯೇ ಗಂಡ ಹಾಗೂ ಅತ್ತೆ ಇಬ್ಬರು ಸೇರಿ ಸೊಸೆಯ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ನಂತರ ಆಕೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚಿದ ನಂತರ ಆಕೆ ಸುಡುವ ಜ್ವಾಲೆಯಂತೆ ಮೆಟ್ಟಿಲಿಳಿದುಕೊಂಡು ಬರುತ್ತಿರುವ ಭಯಾನಕ ವೀಡಿಯೋ ವೈರಲ್ ಆಗಿದ್ದು, ಗಂಡ ಹಾಗೂ ಮನೆಯವರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಮದುವೆಯ ವೇಳೆ ಕಾರು ಸೇರಿ ಸಾಕಷ್ಟು ಅಮೂಲ್ಯ ವಸ್ತುಗಳ ನೀಡಿದ್ದರೂ ತೀರದ ಗಂಡನ ಮನೆಯವರ ದಾಹ:

ನಿಕ್ಕಿ ಪಾಯಲ್ ಎಂಬ 28 ವರ್ಷದ ಮಹಿಳೆ, ಗಂಡ ಹಾಗೂ ಆತನ ಮನೆಯವರಿಂದಲೇ ವರದಕ್ಷಿಣೆಗಾಗಿ ಬೆಂಕಿ ಹಚ್ಚಲ್ಪಟ್ಟು ಕೊಲೆಯಾದ ಮಹಿಳೆ. ಈಕೆಯನ್ನು 2016ರಲ್ಲಿ ಅಂದರೆ 9 ವರ್ಷಗಳ ಹಿಂದೆ ವಿಪಿನ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯ ಸಮಯದಲ್ಲೇ ಇವರಿಗೆ ವರದಕ್ಷಿಣೆಯಾಗಿ ತವರು ಮನೆಯಿಂದ ಸ್ಕಾರ್ಫಿಯೋ ಗಾಡಿಯೂ ಸೇರಿದಂತೆ ಅಮೂಲ್ಯವಾದ ಹಲವು ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ ಈ ಪಾಪಿಗಳ ಧನದಾಹ ಅಷ್ಟಕ್ಕೆ ಮುಕ್ತಾಯವಾಗಿಲ್ಲ, ಅವರು ಸುಮಾರು 36 ಲಕ್ಷ ಹಣ ತವರಿನಿಂದ ತರುವಂತೆ ನಿಕ್ಕಿ ಪಾಯಲ್‌ಗೆ ಹಿಂಸೆ ನೀಡುತ್ತಿದ್ದರು ಎಂದು ನಿಕ್ಕಿ ಪಾಯಲ್ ಮನೆಯವರು ಆರೋಪಿಸಿದ್ದಾರೆ.

ಪುಟ್ಟ ಮಗುವಿನ ಕಣ್ಣೆದುರೇ ಅಮ್ಮನಿಗೆ ಬೆಂಕಿ ಹಚ್ಚಿದ ಪಾಪಿಗಳು

ನಿಕ್ಕಿಯ ಹಿರಿಯ ಸೋದರಿಯನ್ನು ಇದೇ ಕುಟುಂಬಕ್ಕೆ ಮದುವೆ ಮಾಡಲಾಗಿತ್ತು. ಆಕೆಗೂ ಇದೇ ರೀತಿಯ ಹಿಂಸೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇನ್ನು ನಿಕ್ಕಿಗೆ ಆಕೆಯ ಪುಟ್ಟ ಮಗುವಿನ ಕಣ್ಣೆದುರೆ ಆತನ ತಂದೆ ಹಾಗೂ ಅಜ್ಜಿ ಅಮ್ಮನಿಗೆ ಬೆಂಕಿ ಹಚ್ಚಿದ್ದಾರೆ. ಮೊದಲಿಗೆ ಅವರು ಅಮ್ಮನ ಮೇಲೆ ಏನೋ ಹಾಕಿ ನಂತರ ಆಕೆಯ ಕೆನ್ನೆಗೆ ಬಾರಿಸಿದರು. ಬಳಿ ಲೈಟರ್ ಉರಿಸಿ ಬೆಂಕಿ ಹಚ್ಚಿದರು ಎಂದು ಬಾಲಕ ಕಣ್ಣೀರಿಡುತ್ತಲೇ ಅಲ್ಲಿದ್ದವರ ಬಳಿ ಹೇಳಿದ್ದಾನೆ. ಇದೇ ವೇಳೆ ನಿನ್ನ ಅಮ್ಮನನ್ನು ಅಪ್ಪನೇ ಕೊಂದರ ಎಂದು ಕೇಳಿದ್ದಕ್ಕೆ ಬಾಲಕ ಹೌದು ಎಂದು ತಲೆಯಲ್ಲಾಡಿಸಿದ್ದಾನೆ.

ನಿಕ್ಕಿ ಪಾಯಲ್‌ನ ಗಂಡ ವಿಪಿನ್ ಭಾಟಿ ಗ್ರೇಟರ್ ನೋಯ್ಡಾದ ಸಿರ್ಸಾ ನಿವಾಸಿಯಾಗಿದ್ದಾನೆ. ಇವರ ಮದುವೆಯಾಗಿ 9 ವರ್ಷಗಳೇ ಕಳೆದಿತ್ತು. ಈಕೆಯ ಹಿರಿಯ ಸೋದರಿ ಕಾಂಚನಾ ಎಂಬುವವರನ್ನು ಕೂಡ ಇದೇ ಕುಟುಂಬಕ್ಕೆ ಮದುವೆ ಮಾಡಿ ಕೊಡಲಾಗಿದೆ. ತನ್ನನ್ನು ತನ್ನ ಅತ್ತೆಮನೆಯವರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ನಮ್ಮನ್ನು ಹಿಂಸಿಸಲಾಗುತ್ತಿತ್ತು, ನಮ್ಮ ಅತ್ತೆ ಮಾವ ಮದುವೆಯ ಸಮಯದಲ್ಲಿ ಅದು ಸಿಗಲಿಲ್ಲ ಇದು ತರಲಿಲ್ಲ ಎಂದು ಹೇಳುತ್ತಲೇ ಇದ್ದರು. ಅವರು ನಮ್ಮ ತವರು ಮನೆಯಿಂದ 36 ಲಕ್ಷ ರೂ.ಗಳನ್ನು ತರುವಂತೆ ಕೇಳಿದರು. ಗುರುವಾರ ಬೆಳಗಿನ ಜಾವ 1.30 ರಿಂದ 4 ಗಂಟೆಯ ನಡುವೆ ನನ್ನ ಮೇಲೆಯೂ ಹಲ್ಲೆ ನಡೆಸಲಾಯಿತು. ಅವರು ನನಗೆ, 'ಒಬ್ಬರಿಗೆ ವರದಕ್ಷಿಣೆ ಸಿಕ್ಕಿದೆ, ಇನ್ನೊಬ್ಬರಿಗೆ ಏನು ಸಿಕ್ಕಿದೆ? ನೀನು ಸತ್ತರೆ ಒಳ್ಳೆಯದು. ನಾವು ಮತ್ತೆ ಮದುವೆಯಾಗುತ್ತೇವೆ ಎಂದು ಹೇಳುತ್ತಿದ್ದರು ಎಂದು ಕಾಂಚನ್ ಹೇಳಿದ್ದಾರೆ.

ನಿಕ್ಕಿಯನ್ನು ಉಳಿಸಲು ಪ್ರಯತ್ನಿಸಿದೆ ಆದರೆ ಸಾಧ್ಯವಾಗಲಿಲ್ಲ. ನನ್ನ ತಂಗಿ ಅನುಭವಿಸಿದ ನೋವು ಹಿಂಸೆಯನ್ನೇ ಅವರೂ ಅನುಭವಿಸಬೇಕು ಎಂದು ನಾನು ಬಯಸುತ್ತೇನೆ ಎಂದು ಕಾಂಚನಾ ಹೇಳಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಘಟನೆಯ ಒಂದು ವೀಡಿಯೊದಲ್ಲಿ ನಿಕ್ಕಿಯ ಪತಿ ಮತ್ತು ಅತ್ತೆ ಆಕೆಯ ಕೂದಲನ್ನು ಹಿಡಿದು ಎಳೆದು ಥಳಿಸುತ್ತಿರುವುದು ರೆಕಾರ್ಡ್ ಆಗಿದೆ, ಇನ್ನೊಂದು ವೀಡಿಯೊದಲ್ಲಿ ಆಕೆ ದೇಹದ ಮೇಲೆ ತೀವ್ರವಾದ ಸುಟ್ಟ ಗಾಯಗಳೊಂದಿಗೆ ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು. ಮತ್ತೊಂದು ವೀಡಿಯೋದಲ್ಲಿ ಬೆಂಕಿ ಉರಿಯುತ್ತಿರುವಾಗಲೇ ಆಕೆ ಮೆಟ್ಟಲಿಳಿದು ಕೆಳಗೆ ಬರುವುದನ್ನು ಕಾಣಬಹುದು.

ಹೀಗೆ ಬೆಂಕಿಯಿಂದಾಗಿ ತೀವ್ರ ಸುಟ್ಟಗಾಯಕ್ಕೊಳಗಾದ ಆಕೆಯನ್ನು ನೆರೆಹೊರೆಯ ಮನೆಯವರ ಸಹಾಯದಿಂದ ಫೋರ್ಟಿಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಪರಿಸ್ಥಿತಿಯ ಗಂಭೀರತೆ ಅರಿತು ಆಕೆಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲು ಅಲ್ಲಿ ಸೂಚಿಸಿದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದಳು.

ಆಕೆಯ ಸೋದರಿ ನೀಡಿದ ದೂರಿನ ಮೇರೆಗೆ, ಕಸ್ನಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಪತಿ ವಿಪಿನ್, ಭಾವ ರೋಹಿತ್ ಭಾಟಿ, ಅತ್ತೆ ದಯಾ ಮತ್ತು ಮಾವ ಸತ್ವೀರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆಕೆಯ ಪತಿಯನ್ನು ಬಂಧಿಸಲಾಗಿದೆ. ಪೊಲೀಸರು ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇತ್ತ ಘಟನೆಯಿಂದ ತೀವ್ರ ಆಕ್ರೋಶಗೊಂಡ ಜನ ನಿಕ್ಕಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಕಸ್ನಾ ಪೊಲೀಸ್ ಠಾಣೆಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅಲ್ಲಿ ಜನ 'ಜಸ್ಟೀಸ್ ಫಾರ್ ನಿಕ್ಕಿ' ಎಂದು ಬರೆದಿರುವ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

Scroll to load tweet…

Scroll to load tweet…