ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪತಿ ವಿಪಿನ್ ಭಾಟಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಘಟನೆ ನಡೆದಿದೆ.

ನವದೆಹಲಿ: ವರದಕ್ಷಿಣೆ ಪ್ರಕರಣದಲ್ಲಿ ಪತ್ನಿಗೆ ಕಿರುಕುಳ ನೀಡಿ ಪುಟ್ಟ ಮಗುವಿನ ಮುಂದೆಯೇ ಆಕೆಗೆ ಬೆಂಕಿ ಹಚ್ಚಿ ಕೊಂದ ಪಾಪಿ ಪತಿ ವಿಪಿನ್ ಭಾಟಿ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ. ಗ್ರೇಟರ್‌ ನೋಯ್ಡಾದಲ್ಲಿರುವ ಗಂಡನ ಮನೆಯಲ್ಲಿ ನಿನ್ನೆ 28 ವರ್ಷದ ನಿಕ್ಕಿ ಭಾಟಿ(ನಿಕ್ಕಿ ಪಾಯ್ಲಾ) ಳನ್ನು ಆಕೆಯ ಅತ್ತೆ ಹಾಗೂ ಗಂಡನೇ ಆಕೆಯ ಕೂದಲನ್ನು ಹಿಡಿದೆಳೆದು ಅಮಾನವೀಯವಾಗಿ ಥಳಿಸಿ ಬೆಂಕಿ ಹಚ್ಚಿದ್ದರು. ಆಗಸ್ಟ್‌ 28ರಂದು ಘಟನೆ ನಡೆದಿದ್ದು, ನಿಕ್ಕಿ ಭಾಟಿ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಕೆ ಸಾವನ್ನಪ್ಪಿದ್ದರು.

ಕಸ್ಡಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡೇಟು:

ನಿಕ್ಕಿ ಭಾಟಿ ಹಾಗೂ ವಿಪಿನ್ ಭಾಟಿಯ ಪುಟ್ಟ ಮಗನ ಕಣ್ಣೆದುರೇ ಈ ಘಟನೆ ನಡೆದಿತ್ತು. ಅಪ್ಪನೇ ಅಮ್ಮನ ಮೇಲೆ ಏನೋ ಸುರಿದು ಬೆಂಕಿ ಹಚ್ಚಿದರು ಎಂದು ಈ ಪುಟ್ಟ ಬಾಲಕ ತನ್ನ ಬಂಧುಗಳ ಮುಂದೆ ಕಣ್ಣೀರಿಟ್ಟಿದ್ದು, ಮನಕಲುಕುವಂತಿತ್ತು. ಇದರ ಜೊತೆಗೆ ನಿಕ್ಕಿ ಭಾಟಿ ತನಗೆ ಬೆಂಕಿ ಹಚ್ಚಿದ ನಂತರ ದೇಹದಲ್ಲಿ ಉರಿಯುತ್ತಿರುವ ಜ್ವಾಲೆಯೊಂದಿಗೆ ಮೆಟ್ಟಿಲಿಳಿದು ಬರುತ್ತಿರುವ ವೀಡಿಯೋ ವೈರಲ್ ಆಗಿ ಜನರ ರಕ್ತ ಕುದಿಯುವಂತೆ ಮಾಡಿತ್ತು. ಇದಾದ ನಂತರ ಪೊಲೀಸರು ನಿಕ್ಕಿ ಭಾಟಿಯ ಪತಿ ವಿಪಿನ್ ಭಾಟಿಯನ್ನು ಬಂಧಿಸಿದ್ದರು. ಆದರೆ ಆತ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎನ್ನಲಾಗಿದ್ದು, ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡಿಕ್ಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

9 ವರ್ಷಗಳ ಹಿಂದೆ ಮದುವೆ: ಹಲವು ದುಬಾರಿ ಉಡುಗೊರೆ ನೀಡಿದರು ತೀರದ ಧನದಾಹ:

ನಿಕ್ಕಿ ಭಾಟಿ ಗಂಭೀರ ಸುಟ್ಟಗಾಯಳಿಂದ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ನಿಕ್ಕಿ ಭಾಟಿ ಅವರ ಹಿರಿಯಕ್ಕ ಕಾಂಚನಾಳನ್ನು ಕೂಡ ವಿಪಿನ್ ಭಾಟಿಯ ಕುಟುಂಬಕ್ಕೆ ಮದುವೆ ಮಾಡಿಕೊಡಲಾಗಿತ್ತು. ವಿಪಿನ್‌ನ ಅಣ್ಣ ರೋಹಿತ್‌ನನ್ನು ಕಾಂಚನಾ ಅವರು ಮದುವೆಯಾಗಿದ್ದರು. 2016ರಲ್ಲಿ ನಿಕ್ಕಿಯನ್ನು ರೋಹಿತ್‌ನ ಸೋದರ ವಿಪಿನ್‌ಗೆ ಕೊಟ್ಟು ಮದುವೆ ಮಾಡಲಾಗಿದ್ದು, ವಿಪಿನ್ ಹಾಗೂ ನಿಕ್ಕಿ ಮದುವೆಯಾಗಿ 9 ವರ್ಷಗಳೇ ಕಳೆದಿದ್ದು, ಒಬ್ಬ ಮಗನೂ ಇದ್ದಾನೆ. ಮದುವೆಯ ವೇಳೆ ದುಬಾರಿ ಸ್ಕಾರ್ಫಿಯೋ ಕಾರಿನ ಜೊತೆ ಅಮೂಲ್ಯ ವಸ್ತುಗಳನ್ನು ಕೂಡ ನಿಕ್ಕಿ ಕುಟುಂಬದವರು ವಿಪಿನ್ ಕುಟುಂಬದವರಿಗೆ ನೀಡಿದ್ದರು. ಆದರೆ ಮದುವೆಯ ನಂತರ ಮತ್ತಷ್ಟು ಧನದಾಹಿಗಳಾದ ವಿಪಿನ್ ಕುಟುಂಬದವರು, 36 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ನಿಕ್ಕಿಗೆ ಕಿರುಕುಳ ನೀಡುತ್ತಿದ್ದರು ಎಂದು ನಿಕ್ಕಿ ಸೋದರಿ ಕಾಂಚನಾ ಆರೋಪಿಸಿದ್ದಾರೆ.

ಒಬ್ಬಳಿಗೆ ವರದಕ್ಷಿಣೆ ಸಿಕ್ತು ಇನ್ನೊಬ್ಬಳಿಗೆ ಏನೂ ಸಿಕ್ತು? ನೀನು ಸತ್ತರೆ ನಾವು ಬೇರೆ ಮದುವೆಯಾಗಬಹುದು ಎಂದು ಅತ್ತೆ ಮನೆಯವರು ಕಿರುಕುಳ ನೀಡುತ್ತಿದ್ದರು ಎಂದು ನಿಕ್ಕಿ ಅಕ್ಕ ಕಾಂಚನಾ ದೂರಿದ್ದಾರೆ. ನಿಕ್ಕಿ ನೀಡಿದ ಚಿತ್ರಹಿಂಸೆಯ ವೀಡಿಯೋಗಳನ್ನು ಕಾಂಚಾನಾ ಅವರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಅವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ವೀಡಿಯೋಗಳು ಒಂದಕ್ಕಿಂತ ಒಂದು ಬೀಭತ್ಸವಾಗಿದ್ದು, ಒಂದು ವೀಡಿಯೋದಲ್ಲಿ ನಿಕ್ಕಿಯ ಕೂದಲನ್ನು ಹಿಡಿದು ಅತ್ತೆ ಹಾಗೂ ವಿಪಿನ್ ಎಳೆದಾಡಿ ಅವಳ ಮೇಲೆ ಹಲ್ಲೆ ಮಾಡಿದ್ದಾರೆ. ಮತ್ತೊಂದು ವೀಡಿಯೋದಲ್ಲಿ ನಿಕ್ಕಿಗೆ ಬೆಂಕಿ ಹಚ್ಚಿದ ನಂತರ ಆಕೆ ಮನೆಯ ಮಹಡಿಯಿಂದ ಮೆಟ್ಟಿಲುಗಳ ಮೂಲಕ ಉರಿಯುತ್ತಿರುವ ಬೆಂಕಿಯೊಂದಿಗೆ ಇಳಿದುಕೊಂಡು ಬರುವುದನ್ನು ನೋಡಬಹುದಾಗಿದೆ.

ಘಟನೆ ಬಳಿಕ ಅತ್ತೆ ಮಾವ ಭಾವ ಪರಾರಿ:

ಘಟನೆಯ ಬಳಿಕ ನಿಕ್ಕಿಯ ಅತ್ತೆ ದಯಾ, ಭಾವ ರೋಹಿತ್, ಮಾವ ಸತ್ಯವೀರ್ ಮನೆಯಿಂದ ಪರಾರಿಯಾಗಿದ್ದಾರೆ. ತಮ್ಮ ಮಗಳ ದಾರುಣ ಸಾವಿನ ಬಗ್ಗೆ ಮಾತನಾಡಿದ ನಿಕ್ಕಿ ತಂದೆ ಭಿಕಾರಿ ಸಿಂಗ್ ಪಾಯ್ಲಾ ಆರೋಪಿಗೆ ಗುಂಡಿಕ್ಕುವಂತೆ ಹೇಳಿದ್ದಾರೆ. ತನ್ನ ಮಗಳನ್ನು ಕೊಂದವರನ್ನು ಸುಮ್ಮನೇ ಬಿಡಬಾರದು ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಅವರ ಮನೆಯನ್ನು ಧ್ವಂಸ ಮಾಡಬೇಕು. ನನ್ನ ಮಗಳು ಬ್ಯೂಟಿಪಾರ್ಲರ್ ನಡೆಸುತ್ತಾ ತನ್ನ ಮಗನನ್ನು ಸಾಕುತ್ತಿದ್ದಳು. ಈ ಕೃತ್ಯದಲ್ಲಿ ಇಡೀ ಕುಟುಂಬವೇ ಭಾಗಿಯಾಗಿದೆ ಎಂದು ಹೇಳಿದ್ದರು. ಆದರೆ ಇದಾದ ನಂತರ ಪೊಲೀಸ್ ಕಸ್ಟಡಿಯಿಂದ ವಿಪಿನ್ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಆತನ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ.

ಬೆಂಕಿ ಹಚ್ಚುವ ಮೊದಲು ನಿಕ್ಕಿಯನ್ನು ಸುಡಲು ಆಕೆಯ ಮೈಗೆ ಸುರಿದ ಉರಿಯಬಲ್ಲ ದ್ರವವನ್ನು ಹೊಂದಿರುವ ಬಾಟಲಿಯನ್ನು ಮಹಜರು ಮಾಡಲು ಇಂದು ಆರೋಪಿ ವಿಪಿನ್‌ನನ್ನು ಪೊಲೀಸರು ಆತನ ಮನೆಗೆ ಕರೆದೊಯ್ದರು. ಈ ವೇಳೆ ಆತ ಪೊಲೀಸರ ಪಿಸ್ತೂಲ್ ಕಸಿದುಕೊಂಡು ಗುಂಡು ಹಾರಿಸಿದ, ಈ ವೇಳೆ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆತನ ಕಾಲಿಗೆ ಗುಂಡಿಕ್ಕಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್ ಹೇಳಿದ್ದಾರೆ. ಆದರೆ ಘಟನೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿಪಿನ್ ನಾನು ಏನು ಮಾಡಲಿಲ್ಲ, ಆಕೆ ಅವಳಾಗಿಯೇ ಸತ್ತಳು, ಗಂಡ ಹೆಂಡತಿಯ ಮಧ್ಯೆ ಎಲ್ಲಾ ಕಡೆ ಜಗಳ ನಡೆಯುತ್ತದೆ. ಇದು ದೊಡ್ಡ ವಿಷಯ ಅಲ್ಲ ಎಂದು ಹೇಳಿದ್ದಾನೆ.

2016ರ ಡಿಸೆಂಬರ್‌ 10ರಂದು ಮದುವೆ ನಡೆದಿತ್ತು. ಆ ಸಮಯದಲ್ಲಿ ಟಾಪ್ ಮಾಡೆಲ್ ಸ್ಕಾರ್ಪಿಯೋ ಉಡುಗೊರೆ ನೀಡಿದ್ದರು. ಒಂದು ರಾಯಲ್ ಎನ್‌ಫೀಲ್ಡ್ ಬುಲೆಟ್‌ನ್ನು ನೀಡಿದ್ದರು, ಇದರ ಜೊತೆಗೆ ಹಣ ಚಿನ್ನಾಭರಣವನ್ನು ನೀಡಿದ್ದರು. ಅಲ್ಲದೇ ಪ್ರತಿ ಕಾರ್ವಾಚೌತ್ ಸಮಯದಲ್ಲಿ ನಮ್ಮ ಪೋಷಕರು ಉಡುಗೊರೆಗಳನ್ನು ಕಳಹಿಸುತ್ತಿದ್ದರು. ನಮ್ಮ ಪೋಷಕರು ಅವರಿಂದ ಸಾಧ್ಯವಾದ ಎಲ್ಲವನ್ನು ನೀಡುತ್ತಿದ್ದರು ಆದರೆ ನನ್ನ ಅತ್ತೆ ಮಾವನವರಿಗೆ ಏನು ಮಾಡಿದರು ಸಮಾಧಾನ ಆಗುತ್ತಿರಲಿಲ್ಲ ಎಂದು ಮೃತ ನಿಕ್ಕಿ ಅವರ ಸೋದರಿ ಕಾಂಚನ ಅವರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕಾಯಬೇಕಾದವನೇ ಮೇಯಲೆತ್ನಿಸಿದ: ರೈಲಿನಲ್ಲಿ ಮಲಗಿದ ಮಹಿಳೆಯನ್ನು ಅಸಭ್ಯವಾಗಿ ಮುಟ್ಟಿದ ರೈಲ್ವೆ ಪೊಲೀಸ್

ಇದನ್ನೂ ಓದಿ: ಕೆ ಡ್ರಾಮಾದಲ್ಲಿ ಅರಬ್, ಭಾರತೀಯ ಸಂಸ್ಕೃತಿಯ ಅವಹೇಳನ: ಕ್ಷಮೆ ಕೇಳಿದ ಎಂಬಿಸಿ

ಇದನ್ನೂ ಓದಿ:ಅಪ್ಪನೇ ಅಮ್ಮನ ಮೇಲೆ ಏನೋ ಸುರಿದು ಬೆಂಕಿ ಹಚ್ಚಿದರು: ಕಣ್ಣೆದುರೇ ನಡೆದ ಭಯಾನಕ ದೃಶ್ಯವನ್ನು ವಿವರಿಸಿದ ಮಗು