ಸಂಜಯ್ ಕಪೂರ್ ಅವರ ನಿಧನದ ನಂತರ, ಅವರ 30,000 ಕೋಟಿ ರೂಪಾಯಿಗಳ ಆಸ್ತಿಯನ್ನು ಪಡೆಯಲು ಕುಟುಂಬದ ಸದಸ್ಯರ ನಡುವೆ ಕಾನೂನು ಹೋರಾಟ ಆರಂಭವಾಗಿದೆ. ತಾಯಿ, ಪತ್ನಿ ಮತ್ತು ಮಕ್ಕಳು ಆಸ್ತಿಯಲ್ಲಿ ತಮ್ಮ ಪಾ ಲು ಕೇಳಿದ್ದು, ಈ ಸುದ್ದಿ ತೀವ್ರ ಕುತೂಹಲವನ್ನು ಸೃಷ್ಟಿಸಿದೆ.

ಕರೀಷ್ಮಾ ಕಪೂರ್ ಮಕ್ಕಳ ನಂತರ ಸಂಜಯ್‌ ಕಪೂರ್ ತಾಯಿಯಿಂದಲೂ ಆಸ್ತಿಗಾಗಿ ಅರ್ಜಿ:

ಉದ್ಯಮಿ ಸಂಜಯ್‌ ಕಪೂರ್ ನಿಧನದ ನಂತರ ಅವರ ಕುಟುಂಬದ ಆಸ್ತಿ ಕಲಹ ಕೋರ್ಟ್ ಮೆಟ್ಟಿಲೇರಿದೆ. ಮೂರು ಮದುವೆಯಾಗಿದ್ದ ಸಂಜಯ್‌ ಕಪೂರ್ ಅವರ ಮೊದಲ ಪತ್ನಿ ನಂದಿತಾ ಮೆಹ್ತಾನಿಯೊಬ್ಬರು ಈ ಹೋರಾಟದ ಭಾಗವಾಗಿಲ್ಲ, ಏಕೆಂದರೆ 1996ರಲ್ಲಿ ಸಂಜಯ್‌ ಕಪೂರ್ ಜೊತೆ ಮದುವಯಾಗಿದ್ದ ಅವರು 2000ನೇ ಇಸವಿಯಲ್ಲಿ ಸಂಜಯ್ ಅವರಿಂದ ದೂರಾಗಿ ವಿಚ್ಛೇದನ ಪಡೆದಿದ್ದರು. ಈ ದಾಂಪತ್ಯದಲ್ಲಿ ಯಾವುದೇ ಮಕ್ಕಳಿಲ್ಲ, ಇದಾದ ನಂತರ ಸಂಜಯ್‌ ಕಪೂರ್ ಅವರು ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಅವರನ್ನು 2003ರಲ್ಲಿ ಮದುವೆಯಾಗಿದ್ದು, ಸುಮಾರು 13ವರ್ಷಗಳ ಕಾಲ ಜೊತೆಗಿದ್ದು 2016ರಲ್ಲಿ ಪರಸ್ಪರ ದೂರಾದ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. 19 ವರ್ಷದ ಸಮೈರಾ ಹಾಗೂ 13 ವರ್ಷದ ಮಗ ಕಿಯಾನ್ ರಾಜ್. ಇದಾದ ನಂತರ 2017ರಲ್ಲಿ ಸಂಜಯ್‌ ಕಪೂರ್ ಮತ್ತೊಬ್ಬ ಬಾಲಿವುಡ್ ನಟಿ ಹಾಗೂ ಮಾಡೆಲ್ ಪ್ರಿಯಾ ಸಚ್‌ದೇವ್‌ನ್ನು ಮದುವೆಯಾಗಿದ್ದು, ಈಕೆಗೂ ಸಂಜಯ್‌ ಕಪೂರ್‌ಗೂ ಓರ್ವ ಅಪ್ರಾಪ್ತ ಮಗನಿದ್ದಾನೆ. ಇವರ ಜೊತೆ ಸಂಜಯ್‌ ಕಪೂರ್ ಅವರ ತಾಯಿ ರಾಣಿ ಕಪೂರ್ ಅವರು ಕೂಡ ಕೋರ್ಟ್ ಮೆಟ್ಟಿಲೇರಿದ್ದು, ತನ್ನ ಮಗನ ಆಸ್ತಿಯಲ್ಲಿ ಪಾಲು ಕೇಳಿದ್ದಾರೆ. ಜೊತೆಗೆ ಸಂಜಯ್‌ ಕಪೂರ್ ವಿಧವೆ ಪತ್ನಿ ಪ್ರಿಯಾ ಸಚ್‌ದೇವ್‌ ಅವರು ಹೇಳುತ್ತಿರುವ 2025ರ ಮಾರ್ಚ್‌ನಲ್ಲಿ ಸಂಜಯ್‌ ಕಪೂರ್ ಬರೆದಿದ್ದಾರೆ ಎನ್ನಲಾದ ವೀಲ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈಗ ಸಂಜಯ್ ಕಪೂರ್ ಆಸ್ತಿ ಮೂವರು ಮಕ್ಕಳು ಹಾಗೂ ತಾಯಿ ನಾಲ್ವರು ಪಾಲು ಕೇಳಿದ್ದು, ಎಲ್ಲರೂ ಪ್ರತ್ಯೇಕ ಪ್ರತ್ಯೇಕವಾಗಿ ವಕೀಲರನ್ನು ನೇಮಿಸಿ ಅಖಾಡಕ್ಕೆ ಇಳಿದಿದ್ದಾರೆ.

ಮಗನ ವ್ಹೀಲ್ ಬಗ್ಗೆ ತಾಯಿಯ ಅನುಮಾನ:

ಸಂಜಯ್ ಕಪೂರ್ ಅವರ ತಾಯಿ 80 ವರ್ಷದ ರಾಣಿ ಕಪೂರ್ ಅವರು ತಮ್ಮ ಪುತ್ರ ಬರೆದಿಟ್ಟಿದ್ದಾನೆ ಎನ್ನಲಾದ ವ್ಹೀಲ್‌ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದು, ಆ ವ್ಹೀಲ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದಿದ್ದಾರೆ. ಬುಧವಾರ ಈ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆಯಲ್ಲಿ ಸಂಜಯ್‌ ಕಪೂರ್ ಅವರ ತಾಯಿ ರಾಣಿ ಕಪೂರ್ ಅವರ ಪರ ವಕೀಲ ಮಾತನಾಡಿ 80 ವರ್ಷ ರಾಣಿ ಅವರಿಗೆ ಅವರ ಮೃತರಾದ ಪುತ್ರನ ವ್ಹೀಲ್‌ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡಲಾಗಿಲ್ಲ ಎಂದಿದ್ದಾರೆ.

ಸಂಜಯ್‌ ಕಪೂರ್ ಬರೆದಿದ್ದಾರೆ ಎನ್ನಲಾದ ವ್ಹೀಲ್‌ನಲ್ಲಿ ನಂಬಲಾಗದ್ದು ಏನೋ ಇದೆ 10 ಸಾವಿರ ಕೋಟಿ ಆಸ್ತಿ ನನ್ನದಾಗಬೇಕಿತ್ತು ಎಂದು ಅವರ ತಾಯಿ ಹೇಳಿದ್ದಾಗಿ ಅವರ ಪರ ವಕೀಲ ಕೋರ್ಟ್‌ಗೆ ಹೇಳಿದ್ದಾರೆ. ಅವರು ಅವರ ಪುತ್ರನ ವ್ಹೀಲ್‌ಗೆ ಸಂಬಂಧಿಸಿದಂತೆ 15ಕ್ಕೂ ಹೆಚ್ಚು ಇ-ಮೇಲ್ ಮಾಡಿದ್ದು, ಆದರೆ ಒಂದೇ ಒಂದು ಮೇಲ್‌ಗೂ ವ್ಹೀಲ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಕೋರ್ಟ್ ಅವರ ಪರ ವಕೀಲ ಹೇಳಿದ್ದಾರೆ.

ರಾಣಿ ಕಪೂರ್ ಪರ ಹಿರಿಯ ವಕೀಲ ವೈಭವ್ ಗಗ್ಗರ್ ಕೋರ್ಟ್‌ಗೆ ಹಾಜರಾಗಿದ್ದರು. ಅಲ್ಲದೇ ತಮ್ಮ ಪುತ್ರನ ಒಡೆತನದ ಸೋನಾ ಕೋಮ್‌ಸ್ಟರ್‌ನ ಹಲವು ಆಸ್ತಿಗಳನ್ನು ಮಾರಾಟ ಮಾಡಲಾಗಿದೆ. ಅದನ್ನು ಯಾರು ಮಾರಿದ್ದಾರೆ ಎಂಬುದೇ ನಮಗೆ ಗೊತ್ತಿಲ್ಲ. ಅದಕ್ಕೆ ಸಂಬಂಧಿಸಿದ 500 ಕೋಟಿಯ ಮೌಲ್ಯದ ಶೇರುಗಳನ್ನು ಸಿಂಗಾಪುರದ ಸಂಸ್ಥೆಯೊಂದಕ್ಕೆ ಮಾರಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ನನ್ನ ಜೊತೆ ಹಂಚಿಕೊಂಡಿಲ್ಲ ಎಂದು ರಾಣಿ ಕಪೂರ್ ಪರ ವಕೀಲ ಕೋರ್ಟ್‌ಗೆ ಹೇಳಿದ್ದಾರೆ.

ಸಂಜಯ್ ಕಪೂರ್ ಸಾವಿಗೂ ಮುನ್ನ ಹೊಂದಿದ್ದ ಆಸ್ತಿಯೆಲ್ಲಾ ಘೋಷಣೆ ಮಾಡಿ: ಕೋರ್ಟ್‌

ಹೀಗೆ ಕುಟುಂಬ ಸದಸ್ಯರೆಲ್ಲಾ ಆಸ್ತಿ ಮೇಲಿನ ಹಕ್ಕಿಗಾಗಿ ಬೇರೆ ಬೇರೆಯಾಗಿ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಸಂಜಯ್ ಕಪೂರ್ ಅವರ ಮರಣದ ದಿನಾಂಕವಾದ ಜೂನ್ 12 ರವರೆಗೆ ಅವರು ಹೊಂದಿದ್ದ ಎಲ್ಲಾ ಆಸ್ತಿಗಳನ್ನು ನ್ಯಾಯಾಲಯದ ಮುಂದೆ ಘೋಷಿಸುವಂತೆ ಪ್ರಕರಣದಲ್ಲಿ ಭಾಗಿಯಾದ ಪಾರ್ಟಿಗಳಿಗೆ ಸೂಚಿಸಿದೆ.

ಮಲತಾಯಿ ಪ್ರಿಯಾ ಸಚ್‌ದೇವ್ ವ್ಹೀಲ್ ಪೋರ್ಜರಿ ಮಾಡಿದ್ದಾರೆ ಎಂದ ಕರೀಷ್ಮಾ ಮಕ್ಕಳು

ಸಂಜಯ್ ಕಪೂರ್ ಅವರ 2ನೇ ಪತ್ನಿ ಕರೀಷ್ಮಾ ಕಪೂರ್ ಅವರ ಮಕ್ಕಳಾದ ಸಮೈರಾ ಹಾಗೂ ಕಿಯಾನ ರಾಜ್ ಕಪೂರ್ ಅವರು ಸಂಜಯ್ ಕಪೂರ್ ಅವರ 2ನೇ ಪತ್ನಿ ಪ್ರಿಯಾ ಸಚ್‌ದೇವ್ ವಿರುದ್ಧ ಆಸ್ತಿಯಲ್ಲಿ ಪಾಲು ಕೇಳಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಈ ಘೋಷಣೆ ಮಾಡಿದೆ. ಪ್ರಿಯಾ ಸಚ್‌ದೇವ್ ಅವರು ಸಂಜಯ್ ಕಪೂರ್ ಅವರ ವ್ಹೀಲ್‌ನ್ನು ಪೋರ್ಜರಿ ಮಾಡಿದ್ದಾರೆ ಎಂದು ಕರೀಷ್ಮಾ ಮಕ್ಕಳು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಮಾರ್ಚ್ 21, 2025 ರ ದಿನಾಂಕದಂದು ಸಂಜಯ್‌ ಕಪೂರ್ ಮಾಡಿದ್ದಾರೆ ಎನ್ನಲಾದ ವ್ಹೀಲ್‌ನಲ್ಲಿ ಇರುವ ತಮ್ಮ ಮಲತಾಯಿ ಪ್ರಿಯಾ ಸಚ್‌ದೇವ್ ಹಾಗೂ ಆಕೆಯ ಪುತ್ರ, ಹಾಗೂ ತಮ್ಮ ತಂದೆ ಸಂಜಯ್ ಕಪೂರ್ ತಾಯಿ ರಾಣಿ ಕಪೂರ್ ಹಾಗೂ ಈ ವ್ಹೀಲ್‌ನ ಕಾರ್ಯನಿರ್ವಾಹಕ ಎನ್ನಲಾದ ಶ್ರದ್ಧಾ ಸೂರಿ ಮರ್ವಾ ಅವರ ಹೆಸರನ್ನು ಸೇರಿಸಲಾಗಿದೆ. ಇದಕ್ಕೂ ಮೊದಲು ರಾಣಿ ಕಪೂರ್ ಅವರು ತಮ್ಮ ಮಗನ ಸಾವಿನ ಹಿಂದೆ ಬೇರೆ ಯಾರದೋ ಕೈವಾಡ ಇದೆ ಎಂಬ ಅನುಮಾನ ವ್ಯಕ್ತಪಡಿಸಿದ್ದರು.

ಕರಿಷ್ಮಾ ಕಪೂರ್ ಅವರ ಇಬ್ಬರು ಮಕ್ಕಳ ಪರವಾಗಿ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಾದ ಮಂಡಿಸಿದರೆ, ಪ್ರಿಯಾ ಸಚ್‌ದೇವ್ ಕಪೂರ್ ಪರವಾಗಿ ಹಿರಿಯ ವಕೀಲರಾದ ರಾಜೀವ್ ನಾಯರ್ ಮತ್ತು ಶೈಲ್ ಟ್ರೆಹಾನ್ ವಾದ ಮಂಡಿಸಿದ್ದಾರೆ. ಹಾಗೆಯೇ ಹಿರಿಯ ವಕೀಲ ವೈಭವ್ ಗಗ್ಗರ್ ಅವರು ಸಂಜಯ್ ಕಪೂರ್ ಅವರ ತಾಯಿ ರಾಣಿ ಕಪೂರ್ ಅವರನ್ನು ಪ್ರತಿನಿಧಿಸಿದರೆ, ಮತ್ತೊಬ್ಬ ಹಿರಿಯ ವಕೀಲ ಅಖಿಲ್ ಸಿಬಲ್ ಅವರು ಪ್ರಿಯಾ ಕಪೂರ್ ಮತ್ತು ಸಂಜಯ್ ಕಪೂರ್ ಅವರ ಅಪ್ರಾಪ್ತ ಮಗನ ಪರವಾಗಿ ವಾದ ಮಂಡಿಸಿದ್ದಾರೆ. ಮುಂದಿನ ವಿಚಾರಣೆ ಆಕ್ಟೋಬರ್ 9ಕ್ಕೆ ನಡೆಯಲಿದೆ.

ಇದನ್ನೂ ಓದಿ: ನಿಂಬೆಹಣ್ಣಿನ ಮೇಲೆ ಓಡಿಸಲು ಹೋಗಿ ದುರಂತ: ಶೋರೂಮ್‌ನ ಮೊದಲ ಮಹಡಿಯಿಂದ ಕೆಳಗೆ ಬಿದ್ದ ಹೊಸ ಮಹೀಂದ್ರ ಥಾರ್

ಇದನ್ನೂ ಓದಿ: ಮೊದಲ ಬಾರಿ ಐಸ್‌ಕ್ರೀಂ ರುಚಿ ನೋಡಿದ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ: ವೈರಲ್ ವೀಡಿಯೋ

ಇದನ್ನೂ ಓದಿ: ನನ್ನ ಆತ್ಮೀಯ ಗೆಳೆಯ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಡೋನಾಲ್ಡ್ ಟ್ರಂಪ್‌

ಇದನ್ನೂ ಓದಿ: ನೇಪಾಳ ವಿದೇಶಾಂಗ ಸಚಿವೆಗೆ ಮುಖ ಮೂತಿ ನೋಡದೇ ಥಳಿಸಿದ ಜೆನ್ ಜೆಡ್ ಪ್ರತಿಭಟನಾಕಾರರು

ಇದನ್ನೂ ಓದಿ: ನೇಪಾಳ: ದೇಶದ ಸಂಸತ್‌ಗೆ ಬೆಂಕಿ ಇಟ್ಟು ಉರಿಯುವ ಬೆಂಕಿ ಮುಂದೆ ಡಾನ್ಸ್ ರೀಲ್ ಮಾಡಿದ ಸೋಶಿಯಲ್ ಮೀಡಿಯಾ ಸ್ಟಾರ್‌