ನೇಪಾಳದಲ್ಲಿ ಜೆಡ್ ತಲೆಮಾರಿನವರ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದ್ದು, ಸಂಸತ್ತಿಗೆ ಬೆಂಕಿ ಹಚ್ಚಿ, ರಾಜಕಾರಣಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಸಂಸತ್ತು ಹೊತ್ತಿ ಉರಿಯುತ್ತಿದ್ದರೆ ಒಬ್ಬ ಅದರ ಮುಂದೆಯೇ ಡ್ಯಾನ್ಸ್ ಮಾಡಿ ರೀಲ್ಸ್ ಮಾಡಿದ್ದಾನೆ.
ನೇಪಾಳದಲ್ಲಿ ದೇಶದ ಸಂಸತ್‌ಗೆ ಬೆಂಕಿ ಇಟ್ಟ ಜೆನ್ ಜೆಡ್ ತಲೆಮಾರು:
ಜೆನ್ ಜೆಡ್ ಸಮುದಾಯದ ಜನರ ಆಕ್ರೋಶದ ಬೆಂಕಿ ಪುಟ್ಟ ದೇಶ ನೇಪಾಳ ಅಕ್ಷರಶಃ ಅಗ್ನಿಕುಂಡವಾಗಿದೆ. ಸೋಶಿಯಲ್ ಮೀಡಿಯಾ ನಿಷೇಧ ತೆರವಿಗೆ ಆಗ್ರಹಿಸಿ ಬೀದಿಗಿಳಿದ ಯುವ ಸಮುದಾಯ ತನ್ನ ದೇಶ ಎಂಬ ಹೆಮ್ಮೆಯನ್ನು ಮರೆತು ದೇಶದ ಅವಿಭಾಜ್ಯ ಅಂಗ ಎನಿಸಿದ ಸಂಸತ್‌ಗೆ ಬೆಂಕಿ ಇಟ್ಟು ಅಟ್ಟಹಾಸ ಮೆರೆದಿದ್ದಾರೆ. ಬರೀ ಇಷ್ಟೇ ಅಲ್ಲ, ದೇಶದ ಸಚಿವರು ಸಂಸದರು ಶಾಸಕರನ್ನು ಅಟ್ಟಾಡಿಸಿ ಹಲ್ಲೆ ಮಾಡುತ್ತಿದ್ದು, ಜೆಡ್ ತಲೆಮಾರಿನ ಆಕ್ರೋಶದ ಅಲೆಗೆ ಅಲ್ಲಿನ ರಾಜಕಾರಣಿಗಳು ವಿಲ ವಿಲ ಒದ್ದಾಡುತ್ತಿದ್ದಾರೆ. ರಾಜಕಾರಣಿಗಳನ್ನೇ ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಇಳಿದಿರುವ ಜೆಡ್ ತಲೆಮಾರು ಅಲ್ಲಿ ರಾಜಕಾರಣಿಗಳ ಮನೆಗೆ ನುಗ್ಗಿ ಅವರನ್ನು ಥಳಿಸುತ್ತಿದ್ದಾರೆ. ದೇಶದ ಮಾಜಿ ಪ್ರಧಾನಿಯ ಪತ್ನಿಯೇ ಈ ಬೆಂಕಿಯಲ್ಲಿ ಸಜೀವ ದಹನಗೊಂಡರು ಎಂದರೇ ನೀವೇ ಊಹಿಸಿಕೊಳ್ಳಿ ಈ ಜೆನ್ ಜೆಡ್ ಕಿಡ್‌ಗಳ ಆಕ್ರೋಶ ಎಂತಹದು ಎಂಬುದು...
ಉರಿಯುವ ಬೆಂಕಿ ಮುಂದೆ ಇನ್‌ಫ್ಲುಯೆನ್ಸರ್‌ಗಳ ಡಾನ್ಸ್:
ಇಂಗ್ಲೀಷ್‌ನಲ್ಲಿ ಒಂದು ಪ್ರಸಿದ್ಧ ಗಾದೆ ಇದೆ When Rome was burning Nero was playing flute ಅಂದರೆ ರೋಮ್ ಹೊತ್ತಿ ಉರಿಯುತ್ತಿದ್ರೆ ಚಕ್ರವರ್ತಿಯಾದ ನೀರೋ ಕೊಳಲು ನುಡಿಸುತ್ತಿದ್ನಂತೆ ಅಂತ. ಅದೇ ರೀತಿ ಇದೆ ನೇಪಾಳದ ಸಂಸತ್‌ನ ಮುಂಭಾಗದ ದೃಶ್ಯ. ಹೌದು ನೇಪಾಳದ ಸಂಸತ್ ಹೊತ್ತಿ ಉರಿಯುತ್ತಿದ್ದರೆ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಓರ್ವ ಅದರ ಮುಂದೆ ನಿಂತು ರೀಲ್ಸ್‌ಗೆ ಡಾನ್ಸ್ ಮಾಡುತ್ತಿದ್ದು, ದೇಶದ ಸಂಸತ್‌ನ ಮೌಲ್ಯದ ಅರಿವೇ ಇಲ್ಲದಂತಾಗಿದೆ ಅಲ್ಲಿನ ಜನರೇಷನ್ ಜೆಡ್‌ಗೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
Keh Ke Peheno(@coolfunnytshirt)ಎಂಬುವವರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನೇಪಾಳದಲ್ಲಿ ಜನರೇಷನ್ ಝಡ್ ತಮ್ಮ ಸಂಸತ್ತನ್ನು ಸುಟ್ಟುಹಾಕಿದ ನಂತರ ನೃತ್ಯದ ವೀಡಿಯೊ ರೀಲ್‌ಗಳನ್ನು ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋ ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನ ವೀಕ್ಷಿಸಿದ್ದು ಹಲವು ಕಾಮೆಂಟ್ ಮಾಡಿದ್ದಾರೆ. ನೇಪಾಳಿ ಯುವಕರು ಅಥವಾ ಜನರೇಷನ್ ಜೆಡ್ ಕೂಡ ಭಾರತೀಯ ಯುವಕರಂತೆಯೇ ರೀಲ್ಸ್ ವೈರಸ್‌ನಿಂದ ಬಳಲುತ್ತಿದ್ದಾರೆ. ಬಾಧಿತ ವ್ಯಕ್ತಿಯ ಪರಿಸ್ಥಿತಿ ಏನೇ ಇರಲಿ, ಪ್ರತಿ ಕ್ಷಣವೂ ಇವರು ರೀಲ್ಸ್ ಮಾಡುವ ಬಗ್ಗೆ ಯೋಚಿಸುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೆಲ್ಲವನ್ನು ಮಾಡಿ ಒಂದು ವಾರದ ನಂತರ ತಿನ್ನುವುದಕ್ಕೆ ಏನೂ ಸಿಗುತ್ತಿಲ್ಲ ಎಂಬುದರ ಅರಿವಾಗುತ್ತದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳನ್ನು ಬ್ಯಾನ್ ಮಾಡಿರುವುದನ್ನು ಖಂಡಿಸಿ ನೇಪಾಳದಲ್ಲಿ ಜೆನ್ ಜೆಡ್ ಸಮುದಾಯ ಪ್ರತಿಭಟನೆಗೆ ಇಳಿದಿದೆ. ಆದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವುದನ್ನು ಗಮನಿಸಿದ ನೇಪಾಳ ಸರ್ಕಾರ ನಿನ್ನೆ ರಾತ್ರಿಯೇ ತುರ್ತು ಸಂಪುಟ ಸಭೆ ನಡೆಸಿ ಈ ನಿಷೇಧವನ್ನು ಹಿಂಪಡೆಯಲು ಮುಂದಾಗಿತ್ತು ಹಾಗೂ ಆ ಬಗ್ಗೆ ಘೋಷಣೆಯನ್ನು ಮಾಡಿತ್ತು. ಆದರೆ ಪ್ರತಿಭಟನಾಕಾರರ ಅಕ್ರೋಶ ಮಾತ್ರ ಇನ್ನು ತಣ್ಣಗಾಗಿಲ್ಲ, ನಿನ್ನೆ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಒಟ್ಟು 19 ಜನ ಪ್ರಾಣ ಕಳೆದುಕೊಂಡಿದ್ದರು. ಇಂದು ಮಾಜಿ ಪ್ರಧಾನಿಯ ಮನೆಗೂ ನುಗ್ಗಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಈ ದುರಂತದಲ್ಲಿ ನೇಪಾಳದ ಮಾಜಿ ಪ್ರಧಾನಿ ಝಲನಾಥ್ ಖನಾಲ್ ಅವರ ಪತ್ನಿ ರಾಜಲಕ್ಷ್ಮಿ ಚಿತ್ರಾಕರ್ ಸಜೀವ ದಹನಗೊಂಡ ದುರಂತ ಘಟನೆಯೂ ನಡೆದಿದೆ.
