ಭಾರತದ ಮೇಲಿನ ತೆರಿಗೆ ಹೇರಿಕೆ ನಂತರ ಭಾರತ ಚೀನಾದತ್ತ ಮುಖ ಮಾಡಿದ ಹಿನ್ನೆಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲು ಆಸಕ್ತಿ ತೋರಿಸಿದ್ದಾರೆ.
ಭಾರತದ ಜೊತೆ ಮಾತುಕತೆ ನಡೆಸಲು ಆಸಕ್ತಿ ತೋರಿದ ಟ್ರಂಪ್:
ಭಾರತದ ಮೇಲೆ ದುಪ್ಪಟ್ಟು ತೆರಿಗೆ ಹೇರಿ ತೆರಿಗೆ ಸಮರಕ್ಕೆ ಇಳಿದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅತ್ತ ಭಾರತ, ಚೀನಾ ಹಾಗೂ ರಷ್ಯಾದೊಂದಿಗೆ ವ್ಯಾಪಾರ ಒಪ್ಪಂದವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದು, ಈಗ ಭಾರತದ ಪ್ರಧಾನಿ ಜೊತೆಗೆ ಮಾತುಕತೆಗೆ ಕಾಯುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ತನ್ನ ಆತ್ಮೀಯ ಸ್ನೇಹಿತ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಲು ಕಾಯುತ್ತಿರುವುದಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಎರಡು ದೇಶಗಳ ನಡುವಣ ವ್ಯಾಪಾರಿ ಸಂಬಂಧಿ ಅಡೆತಡೆಗಳನ್ನು ನಿವಾರಿಸಲು ಅವರ ಸರ್ಕಾರವೂ ಭಾರತದೊಂದಿಗೆ ಮಾತುಕತೆ ಮುಂದುವರೆಸಲಿದೆ ಎಂದು ಟ್ರಂಪ್ ಧೃಡಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಟ್ರಂಪ್ ಪೋಸ್ಟ್:
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ನಮ್ಮ ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ಅಡೆತಡೆಗಳನ್ನು ಪರಿಹರಿಸಲು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮಾತುಕತೆಗಳನ್ನು ಮುಂದುವರಿಸುತ್ತಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಮುಂಬರುವ ವಾರಗಳಲ್ಲಿ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ ಎರಡೂ ಮಹಾನ್ ದೇಶಗಳಿಗೆ ಯಶಸ್ವಿ ತೀರ್ಮಾನಕ್ಕೆ ಬರಲು ಯಾವುದೇ ತೊಂದರೆ ಇರುವುದಿಲ್ಲ ಎಂದು ನನಗೆ ಖಚಿತವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಮೋದಿ ನನ್ನ ಆತ್ಮೀಯ ಸ್ನೇಹಿತ:
ಭಾರತದ ಪ್ರಧಾನಿ ಚೀನಾಗೆ ಭೇಟಿ ನೀಡಿ ಅಲ್ಲಿ ರಷ್ಯಾ ನಾಯಕ ಪುಟಿನ್ ಭೇಟಿ ಮಾಡಿದ ಬಳಿಕ ಭಾರತ-ಅಮೆರಿಕ ನಡುವಣ ಸಂಬಂಧಗಳ ಬಗ್ಗೆ ಸ್ವಲ್ಪ ಮೃದು ಧೋರಣೆ ತಳೆದಿರುವ ಟ್ರಂಪ್, ಭಾರತ ಹಾಗೂ ಅಮೆರಿಕಾ ನಡುವಣ ಸಂಬಂಧ ತುಂಬಾ ವಿಶೇಷ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಭಾರತದ ಪ್ರಧಾನಿ ಮೋದಿ ತಮ್ಮ ಆತ್ಮೀಯ ಸ್ನೇಹಿತ ಎಂದು ಮತ್ತೆ ಪುರುಚ್ಚರಿಸಿದ್ದಾರೆ.
ಇದಕ್ಕೂ ಮೊದಲು, ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ನಾನು ಯಾವಾಗಲೂ ಸ್ನೇಹಿತನಾಗಿರುತ್ತೇನೆ. ನಾನು ಯಾವಾಗಲೂ (ಪ್ರಧಾನಿ) ಮೋದಿ ಅವರೊಂದಿಗೆ ಸ್ನೇಹಿತನಾಗಿರುತ್ತೇನೆ. ಅವರು ಒಬ್ಬ ಉತ್ತಮ ಪ್ರಧಾನಿ. ನಾನು ಯಾವಾಗಲೂ ಸ್ನೇಹಿತನಾಗಿರುತ್ತೇನೆ, ಆದರೆ ಈ ನಿರ್ದಿಷ್ಟ ಕ್ಷಣದಲ್ಲಿ ಅವರು ಮಾಡುತ್ತಿರುವುದು ನನಗೆ ಇಷ್ಟವಿಲ್ಲ. ಆದರೆ ಭಾರತ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಬಹಳ ವಿಶೇಷವಾದ ಸಂಬಂಧವನ್ನು ಹೊಂದಿವೆ ಎಂದರು.
ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಭಾವನೆಗಳನ್ನು ಮತ್ತು ನಮ್ಮ ದೇಶದ ಜೊತೆಗಿನ ಸಂಬಂಧಗಳ ಬಗ್ಗೆ ಅವರ ಸಕಾರಾತ್ಮಕ ಮೌಲ್ಯಮಾಪನವನ್ನು ನಾನು ಆಳವಾಗಿ ಮೆಚ್ಚುತ್ತೇನೆ ಮತ್ತು ಸಂಪೂರ್ಣವಾಗಿ ಪರಸ್ಪರ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೊ ಮಾತ್ರ ಭಾರತದ ಮೇಲೆ ಕೆಂಡಕಾರುವುದನ್ನು ಮುಂದುವರೆಸಿದ್ದಾರೆ. ಅಮೆರಿಕದೊಂದಿಗಿನ ವ್ಯಾಪಾರ ಮಾತುಕತೆಗಳ ಯಾವುದೇ ಹಂತದಲ್ಲಿ ನವದೆಹಲಿ ಸರಿಯಾಗಿ ಸ್ಪಂದಿಸದಿದ್ದರೆ ಈ ಮಾತುಕತೆ ಒಳ್ಳೆಯದಾಗಿ ಕೊನೆಗೊಳ್ಳುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೇರಬೇಕು ಎಂದು ಬಯಸಿರುವ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ರಷ್ಯಾದಿಂದ ಭಾರತ ತೈಲ ಖರೀದಿಸಬಾರದು ಎಂದು ಒತ್ತಡ ಹೇರಿತ್ತು. ಆದರೆ ಇದಕ್ಕೆ ಮಣಿಯದ ಭಾರತದ ಮೇಲೆ 25 ಶೇಕಡಾ ಹೆಚ್ಚುವರಿ ತೆರಿಗೆ ಹೇರಿತ್ತು. ಗಣೇಶ ಚತುರ್ಥಿ ದಿನದಂದೇ ಈ ತೆರಿಗೆ ಜಾರಿಗೆ ಬಂದಿತ್ತು. ಇದರಿಂದ ಭಾರತದ ಅಮೆರಿಕಾಗೆ ರಪ್ತು ಆಗುವ ವಸ್ತುಗಳಿಗೆ 25 ಶೇಕಡಾ ಹೆಚ್ಚುವರಿ ತೆರಿಗೆ ಸೇರಿಸಿ ಒಟ್ಟು 50 ಶೇಕಡಾ ತೆರಿಗೆ ವಿಧಿಸಿತ್ತು. ಇದು ಭಾರತ ಹಾಗೂ ಅಮೆರಿಕಾದ ನಡುವೆ ಸಂಬಂಧ ಹಳಸುವುದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮೊದಲ ಬಾರಿ ಐಸ್‌ಕ್ರೀಂ ರುಚಿ ನೋಡಿದ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ: ವೈರಲ್ ವೀಡಿಯೋ
ಇದನ್ನೂ ಓದಿ: ನೇಪಾಳ ವಿದೇಶಾಂಗ ಸಚಿವೆಗೆ ಮುಖ ಮೂತಿ ನೋಡದೇ ಥಳಿಸಿದ ಜೆನ್ ಜೆಡ್ ಪ್ರತಿಭಟನಾಕಾರರು
ಇದನ್ನೂ ಓದಿ: ನೇಪಾಳ: ದೇಶದ ಸಂಸತ್‌ಗೆ ಬೆಂಕಿ ಇಟ್ಟು ಉರಿಯುವ ಬೆಂಕಿ ಮುಂದೆ ಡಾನ್ಸ್ ರೀಲ್ ಮಾಡಿದ ಸೋಶಿಯಲ್ ಮೀಡಿಯಾ ಸ್ಟಾರ್
