
ವಾಷಿಂಗ್ಟನ್(ನ.03): ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ಅಮೆರಿಕ ಅಧ್ಯಕ್ಷ ಚುನಾವಣೆಗೆ ಮಂಗಳವಾರ (ಭಾರತೀಯ ಕಾಲಮಾನ ರಾತ್ರಿ) ಅಂತಿಮ ಸುತ್ತಿನ ಮತದಾನ ನಡೆಯಲಿದೆ. ಹಾಲಿ ಅಧ್ಯಕ್ಷರಾಗಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮೊಕ್ರಟಿಕ್ ಪಕ್ಷದ ಹುರಿಯಾಳು ಜೋ ಬೈಡನ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಫಲಿತಾಂಶದ ಬಗ್ಗೆ ಭಾರಿ ರೋಚಕತೆ ಇದೆ.
74 ವರ್ಷದ ಟ್ರಂಪ್ ಹಾಗೂ 77 ವರ್ಷದ ಬೈಡನ್ ಅವರು ಸೋಮವಾರ ಕಡೆಯ ಕ್ಷಣದವರೆಗೂ ಮತದಾರರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಟ್ರಂಪ್ ಅವರು ಉತ್ತರ ಕರೋಲಿನಾದಿಂದ ವಿಸ್ಕಾನ್ಸಿನ್‌ವರೆಗೆ 5 ರಾರಯಲಿಗಳಲ್ಲಿ ಭಾಷಣ ಮಾಡಿದ್ದರೆ, ಬೈಡನ್ ಅವರು ತಮ್ಮ ಬಹುಪಾಲು ಸಮಯವನ್ನು ಪೆನ್ಸಿಲ್ವೇನಿಯಾಗೆ ಮೀಸಲಿಟ್ಟಿದ್ದರು.
ಸುಮಾರು 25 ಕೋಟಿ ಮತದಾರರ ಪೈಕಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಈಗಾಗಲೇ 9.3 ಕೋಟಿ ಮಂದಿ ಹಕ್ಕು ಚಲಾಯಿಸಿದ್ದಾರೆ. ಉಳಿದವರು ಮಂಗಳವಾರ ಮತದಾನ ಮಾಡಲಿದ್ದಾರೆ. ಮತದಾನ ಮುಕ್ತಾಯವಾಗುತ್ತಿದ್ದಂತೆ ಎಣಿಕೆ ಆರಂಭವಾಗಲಿದ್ದು, ಯಾರು ಗೆಲ್ಲಲಿದ್ದಾರೆ ಎಂಬ ಕುರಿತು ಬುಧವಾರ ಸ್ಪಷ್ಟಚಿತ್ರಣ ಹೊರಬೀಳಲಿದೆ.
ಮತ ಎಣಿಕೆ ವಿಳಂಬ?
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿ 9.3 ಕೋಟಿ ಮಂದಿ ಅಂಚೆ ಮತ ಹಾಗೂ ನೇರ ಮತ ಮೂಲಕ ಮೊದಲೇ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಅಂಚೆ ಮತಗಳ ಸಂಖ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಮತ ಎಣಿಕೆ ವಿಳಂಬವಾಗಬಹುದು ಎನ್ನಲಾಗುತ್ತಿದೆ. ಉಳಿದಂತೆ ಸಮೀಕ್ಷೆ, ಮುನ್ನಡೆ ಆಧರಿಸಿ ಯಾರು ಮುಂದಿದ್ದಾರೆ ಎಂಬ ಚಿತ್ರಣ ಶೀಘ್ರವಾಗಿ ದೊರೆಯಲಿದೆ.
ಭಾರತೀಯ ಮೂಲದ ಕಮಲಾ ಉಪಾಧ್ಯಕ್ಷೆ ಆಗ್ತಾರಾ?
ಜೋ ಬೈಡೆನ್ ಗೆದ್ದರೆ ಅಮೆರಿಕ ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಆಯ್ಕೆಯಾಗಲಿದ್ದಾರೆ. ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಅಮೆರಿಕದ ಅತ್ಯುನ್ನತ ಹುದ್ದೆ ದೊರೆಯಲಿದೆ.
ಟ್ರಂಪ್‌ರನ್ನು ಇನ್ನೂ ನಾಲ್ಕು ವರ್ಷ ಸಹಿಸಿಕೊಳ್ಳಲು ಆಗದು. ಗಂಟು- ಮೂಟೆ ಕಟ್ಟಿಕೊಂಡು ಮನೆಗೆ ಹೋಗುವ ಕಾಲ ಟ್ರಂಪ್‌ಗೆ ಬಂದಿದೆ.
- ಜೋ ಬೈಡನ್, ಡೆಮಾಕ್ರಟಿಕ್ ಅಭ್ಯರ್ಥಿ
ವಿದೇಶಗಳು ಹಾಗೂ ಕಂಪನಿಗಳು ಈಗ ಅಮೆರಿಕವನ್ನು ಗೌರವದಿಂದ ಕಾಣುತ್ತಿವೆ. ಮತ ಹಾಕಲು ಹೋದಾಗ ಇದನ್ನು ಮರೆಯಬೇಡಿ.
- ಡೊನಾಲ್ಡ್ ಟ್ರಂಪ್, ರಿಪಬ್ಲಿಕನ್ ಅಭ್ಯರ್ಥಿ
ಚುನಾವಣೆ ಹೇಗೆ ನಡೆಯುತ್ತೆ?
ಅಮೆರಿಕದಲ್ಲಿ 50 ರಾಜ್ಯಗಳಿದ್ದು, ಆ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ದೇಶಾದ್ಯಂತ ಒಟ್ಟಾರೆ 538 ಪ್ರತಿನಿಧಿಗಳು ಇರುತ್ತಾರೆ. ಮತದಾರರು ಆ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಈ ಪ್ರತಿನಿಧಿಗಳಲ್ಲಿ 270 ಮಂದಿ ಯಾರನ್ನು ಬೆಂಬಲಿಸುತ್ತಾರೋ ಅವರೇ ಅಮೆರಿಕ ಅಧ್ಯಕ್ಷರಾಗುತ್ತಾರೆ. ಈ ಪ್ರತಿನಿಧಿಗಳು ಆಯಾ ಪಕ್ಷದ ಜತೆ ಗುರುತಿಸಿಕೊಳ್ಳುವುದರಿಂದ ಅವರು ಗೆಲ್ಲುತ್ತಿದ್ದಂತೆ ಯಾರು ನೂತನ ಅಧ್ಯಕ್ಷ ಎಂಬ ಚಿತ್ರಣ ಲಭಿಸಲಿದೆ. ಆದರೆ ಎಲೆಕ್ಟೋರಲ್ (ಪ್ರತಿನಿಧಿ) ಎಂದು ಕರೆಯುವ ಇವರೆಲ್ಲಾ ತಮ್ಮ ಆಯ್ಕೆಯ ಅಧ್ಯಕ್ಷರ ಆಯ್ಕೆಗೆ ಡಿ.14ರಂದು ತಮ್ಮ ತಮ್ಮ ರಾಜ್ಯಗಳಲ್ಲಿ ಮತ ಚಲಾಯಿಸುತ್ತಾರೆ. 2021ರ ಜ.6ರಂದು ಅಮೆರಿಕ ಸಂಸತ್‌ನಲ್ಲಿ ಪ್ರತಿನಿಧಿಗಳ ಮತ ಲೆಕ್ಕ ಹಾಕಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ. ಜ.20ಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ