
ವಾಷಿಂಗ್ಟನ್(ಮೇ.02): ‘ನಿಮಗೆ ಕೊರೋನಾ ಲಸಿಕೆ ಬೇಕೇ? ಹಾಗಿದ್ದರೆ ನಿಮ್ಮ ದೇಶದ ದೂತಾವಾಸ ಕಟ್ಟಡ, ಸೇನಾ ನೆಲೆ, ವಿದೇಶಿ ಮೀಸಲಿನ ಒಂದು ಭಾಗವನ್ನು ನಮ್ಮಲ್ಲಿ ಒತ್ತೆಯಿಡಿ!’
ಹೀಗೆಂದು ಅಮೆರಿಕ ಮೂಲದ ಬಹುರಾಷ್ಟ್ರೀಯ ಔಷಧ ಕಂಪನಿ ಫೈಝರ್ ಬೇರೆ ಬೇರೆ ದೇಶಗಳಿಗೆ ಷರತ್ತು ವಿಧಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ತನಿಖಾ ಪತ್ರಕರ್ತರ ಸಂಘಟನೆ ಈ ವಿಷಯವನ್ನು ಬಹಿರಂಗಪಡಿಸಿದ್ದು, ಫೈಝರ್ ಕಂಪನಿಯು ಬಡ ದೇಶಗಳ ಮೇಲೆ ಲಸಿಕೆಯ ಹೆಸರಿನಲ್ಲಿ ದಬ್ಬಾಳಿಕೆ ನಡೆಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಟೀಕೆ ಕೇಳಿಬಂದಿದೆ.
ಅಮೆರಿಕದಲ್ಲಿ ಈಗಾಗಲೇ ಕೋಟ್ಯಂತರ ಜನರಿಗೆ ಫೈಜರ್ ಲಸಿಕೆ ನೀಡಲಾಗಿದೆ. ಭಾರತದಲ್ಲೂ ಕೂಡ ಈ ಕಂಪನಿ ತನ್ನ ಲಸಿಕೆಯ ತುರ್ತು ಬಳಕೆಗೆ ಮೂರ್ನಾಲ್ಕು ತಿಂಗಳ ಹಿಂದೆ ಅನುಮತಿ ಕೇಳಿತ್ತು. ಆದರೆ, ಭಾರತ ಸರ್ಕಾರ ಅನುಮತಿ ನೀಡಿರಲಿಲ್ಲ. ಸರ್ಕಾರದ ಆ ನಡೆಗೆ ಟೀಕೆ ವ್ಯಕ್ತವಾಗಿತ್ತು. ಆದರೆ, ಭಾರತ ಸರ್ಕಾರಕ್ಕೂ ಫೈಝರ್ ಕಂಪನಿ ಇಂತಹುದೇ ದುಬಾರಿ ಷರತ್ತು ವಿಧಿಸಿದ್ದರಿಂದಲೇ ಲಸಿಕೆಗೆ ಅನುಮತಿ ನೀಡಿಲ್ಲದಿರಬಹುದು ಎಂದು ಈಗ ವಿಶ್ಲೇಷಿಸಲಾಗುತ್ತಿದೆ.
ಆಸ್ತಿ ಒತ್ತೆ ಕೇಳುವುದು ಏಕೆ:
ಲಸಿಕೆ ಪಡೆದ ಜನರು ತಮಗೆ ಅದರಿಂದೇನಾದರೂ ಅಡ್ಡ ಪರಿಣಾಮ ಉಂಟಾದರೆ ಲಸಿಕೆ ತಯಾರಕ ಕಂಪನಿಯಿಂದ ಕೋಟ್ಯಂತರ ರು. ಪರಿಹಾರ ಕೇಳಬಹುದು. ತುರ್ತು ಸಂದರ್ಭದಲ್ಲಿ ಬಹಳ ಕಡಿಮೆ ಅವಧಿಯಲ್ಲಿ ಲಸಿಕೆ ತಯಾರಿಸಿ ಬಿಡುಗಡೆ ಮಾಡುವ ಕಂಪನಿಗಳು ಇಂತಹ ಪರಿಹಾರದ ಮನವಿ ಬಂದರೆ ಇಕ್ಕಟ್ಟಿಗೆ ಸಿಲುಕುತ್ತವೆ. ಹೀಗಾಗಿ ಲಸಿಕೆ ಬೇಕು ಅಂತಾದರೆ ಇಂತಹ ಪರಿಹಾರವನ್ನು ಸರ್ಕಾರವೇ ನೀಡಬೇಕು ಎಂದು ಅವು ಷರತ್ತು ವಿಧಿಸುತ್ತವೆ. ಆದರೆ, ಫೈಝರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ನಾಳೆ ನೀವು ಪರಿಹಾರ ನೀಡದಿದ್ದರೆ ನಮಗೆ ಸಮಸ್ಯೆಯಾಗುತ್ತದೆ, ಹೀಗಾಗಿ ನಿಮ್ಮ ಸಾರ್ವಭೌಮ ಆಸ್ತಿಗಳನ್ನು ನಮ್ಮಲ್ಲಿ ಒತ್ತೆಯಿಡಿ’ ಎಂದು ದಕ್ಷಿಣ ಅಮೆರಿಕದ ಬಡ ದೇಶಗಳ ಮೇಲೆ ದಬ್ಬಾಳಿಕೆ ನಡೆಸಿದೆ ಎನ್ನಲಾಗಿದೆ. ಈ ಕಾರಣಕ್ಕೇ ಬ್ರೆಜಿಲ್ ಹಾಗೂ ಅರ್ಜೆಂಟೀನಾ ದೇಶಗಳು ಫೈಝರ್‌ನ ಲಸಿಕೆಯನ್ನೇ ನಿರಾಕರಿಸಿವೆ.
ಸದ್ಯ 100ಕ್ಕೂ ಹೆಚ್ಚು ದೇಶಗಳ ಜೊತೆಗೆ ಫೈಜರ್ ತನ್ನ ಲಸಿಕೆ ಮಾರಾಟದ ಬಗ್ಗೆ ಮಾತುಕತೆ ನಡೆಸುತ್ತಿದೆ. ಆದರೆ, ಯಾವ ದೇಶಕ್ಕೆ ಏನೇನು ಷರತ್ತು ವಿಧಿಸಿದೆ ಎಂಬುದು ತಿಳಿದುಬಂದಿಲ್ಲ. ಸದ್ಯ ದಕ್ಷಿಣ ಅಮೆರಿಕದ ಚಿಲಿ, ಕೋಲಂಬಿಯಾ, ಕೋಸ್ಟಾರಿಕಾ, ಡೊಮಿನಿಕ್ ರಿಪಬ್ಲಿಕ್, ಈಕ್ವೆಡಾರ್, ಮೆಕ್ಸಿಕೋ, ಪನಾಮಾ, ಪೆರು ಹಾಗೂ ಉರುಗ್ವೆ ಜೊತೆ ಒಪ್ಪಂದ ಮಾಡಿಕೊಂಡು ಅಲ್ಲಿಗೆ ಲಸಿಕೆ ಪೂರೈಸುತ್ತಿದೆ. ಯಾವುದೇ ದೇಶದ ಜೊತೆಗೆ ಒಪ್ಪಂದ ಮಾಡಿಕೊಳ್ಳುವಾಗಲೂ ಫೈಝರ್ ಆ ಒಪ್ಪಂದವನ್ನು ಬಹಿರಂಗಪಡಿಸಬಾರದು ಎಂದೂ ಷರತ್ತು ವಿಧಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ