ಕೊರೋನಾ ವೈರಸ್‌ಗೆ ಅಮೆರಿಕದ ಔಷಧ ಯಶಸ್ವಿ?

By Kannadaprabha NewsFirst Published May 1, 2020, 12:01 PM IST
Highlights

ಕೊರೋನಾ ವೈರಸ್‌ಗೆ ಮದ್ದು ಅರೆಯುವಲ್ಲಿ ಅಮೆರಿಕದಲ್ಲಿರುವ ಭಾರತೀಯ ಮೂಲದ ವೈದ್ಯರ ತಂಡ ಯಶಸ್ವಿಯಾಗಿದೆ. ಶೀಘ್ರವೇ ಈ ಔಷಧ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ವಾಷಿಂಗ್ಟನ್(ಮೇ.01)‌: ಕೊರೋನಾಕ್ಕೆ ಸೂಕ್ತ ಔಷಧ ಕಂಡುಹಿಡಿಯಲು ವಿಶ್ವದಾದ್ಯಂತ ಭಾರೀ ಯತ್ನ ನಡೆಯುತ್ತಿರುವಾಗಲೇ, ಭಾರತೀಯ ಮೂಲದ ವೈದ್ಯರೊಬ್ಬರ ನೇತೃತ್ವದಲ್ಲಿ ಅಮೆರಿಕ ಮೂಲದ ಕಂಪನಿ ಅಭಿವೃದ್ಧಿಪಡಿಸಿರುವ ರೆಮಿಡಿಸಿವಿರ್‌ ಎಂಬ ಔಷಧ ಉತ್ತಮ ಫಲ ನೀಡುವ ಮೂಲಕ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಗಿಲೀಡ್‌ ಸೈನ್ಸಸ್‌ ಎಂಬ ಅಮೆರಿಕ ಮೂಲದ ಕಂಪನಿಯಲ್ಲಿ ಭಾರತೀಯ ಮೂಲದ ಡಾ. ಅರುಣಾ ಸುಬ್ರಮಣಿಯನ್‌ ನೇತೃತ್ವದ ತಂಡ ಅಭಿವೃದ್ಧಿಪಡಿಸಿರುವ ರೆಮಿಡಿಸಿವಿರ್‌ ಔಷಧವು, ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಿದೆ. ಯಾವುದೇ ಔಷಧವು ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನದ ಹಂತ ಇದಾಗಿರುವುದರಿಂದ, ಶೀಘ್ರವೇ ಈ ಔಷಧ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ.

ಜೊತೆಗೆ ಅಮೆರಿಕದಲ್ಲಿ ಈವರೆಗೆ ಸೋಂಕಿತರಿಗೆ ನೀಡಿದ ಯಾವುದೇ ಔಷಧದ ಪೈಕಿ, ಮೊದಲ ಬಾರಿಗೆ ರೋಗಿಗಳಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದ ಮೊದಲ ಉದಾಹರಣೆ ಇದಾಗಿರುವ ಕಾರಣ, ಈ ಔಷಧಿ ಬಗ್ಗೆ ಅಮೆರಿಕನ್ನರಲ್ಲಿ ಭಾರೀ ನಿರೀಕ್ಷೆ ವ್ಯಕ್ತವಾಗಿದೆ.

ಹಲವು ತಿಂಗಳುಗಳಿಂದಲೇ ಈ ಔಷಧವನ್ನು ವಿವಿಧ ದೇಶಗಳಲ್ಲಿ ಕೊರೋನಾ ಸೋಂಕಿತರಿಗೆ ಪ್ರಾಯೋಗಿಕ ಪರೀಕ್ಷೆಯ ರೂಪವಾಗಿ ನೀಡಲಾಗುತ್ತಿತ್ತಾದರೂ, ಅದೇ ಔಷಧವನ್ನು ಕಡಿಮೆ ಪ್ರಮಾಣದಲ್ಲಿ ನೀಡಿದರೆ ಅದರ ಪರಿಣಾಮ ಹೇಗಿರಬಹುದು ಎಂಬ ಅಧ್ಯಯನ ನಡೆಸಲಾಗಿತ್ತು. ಈ ಅಧ್ಯಯನದ ಅನ್ವಯ ಈ ಹಿಂದೆ ಸೋಂಕಿತರು 10 ದಿನಗಳ ಕಾಲ ರೆಮಿಡಿಸಿವಿರ್‌ ಔಷಧ ಪಡೆದರೆ ಸಿಗುತ್ತಿದ್ದ ಫಲಿತಾಂಶವು, ಇದೀಗ ಕೇವಲ 5 ದಿನಗಳ ಡೋಸ್‌ನಲ್ಲೇ ಗುಣಮುಖವಾಗಿದ್ದು ಕಂಡುಬಂದಿದೆ. ಈ ರೀತಿ ಚಿಕಿತ್ಸೆ ಪಡೆದವರ ಪೈಕಿ ಶೇ.50ರಷ್ಟು ರೋಗಿಗಳು, ಕೇವಲ 2 ವಾರದಲ್ಲಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ವೈದ್ಯ ಡಾ.ಅರುಣಾ ಸುಬ್ರಮಣಿಯನ್‌ ತಿಳಿಸಿದ್ದಾರೆ.

ಕೊರೋನಾ ವಿರುದ್ಧ ಹೋರಾಟ: ಮಹಾಮಾರಿ ವೈರಸ್‌ ಕೊಲ್ಲಲು ಕನ್ನಡಿಗನಿಂದ ಸಿಕ್ತಾ ಔಷಧಿ..?

ಇನ್ನು ರೋಗ ನಿಯಂತ್ರಣದಲ್ಲಿ ರೆಮಿಡಿಸಿವಿರ್‌ ಮತ್ತು ಪ್ಲಾಸಿಬೋ ಎಂಬ ಇನ್ನೊಂದು ಔಷಧಗಳ ಪ್ರಯೋಗದ ನಡುವಿನ ವರದಿ ಕೂಡಾ ರೆಮಿಡಿಸಿವಿರ್‌ ಪರವಾಗಿಯೇ ಬಂದಿದೆ. ಪ್ಲಾಸಿಬೋ ಔಷಧ ಪಡೆದವರಲ್ಲಿ ಚೇತರಿಕೆಗೆ 15 ದಿನ ಬೇಕಾಗಿದ್ದರೆ, ರೆಮಿಡಿಸಿವಿರ್‌ ಔಷಧ ಸೇವಿಸಿದವರು 11 ದಿನಕ್ಕೆ ಚೇತರಿಕೆ ಕಂಡಿದ್ದಾರೆ. ಅಂದರೆ ಪ್ಲಾಸಿಬೋಗಿಂತ ಶೇ.30ರಷ್ಟು ಅಧಿಕ ವೇಗದಲ್ಲಿ ಚೇತರಿಕೆ ಸಾಧ್ಯವಾಗಿದೆ. ಹೀಗಾಗಿ ತಕ್ಷಣಕ್ಕೆ ಅಮೆರಿಕದಲ್ಲಿ ಕೊರೋನಾ ನಿಗ್ರಹಕ್ಕೆ ಲಭ್ಯವಿರುವ ಅತ್ಯಂತ ಉತ್ತಮ ಔಷಧ ಇದಾಗಿರುವ ಕಾರಣ, ತಕ್ಷಣಕ್ಕೆ ಇದನ್ನು ದೇಶಾದ್ಯಂತ ಬಳಸಲು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರವು ಇದನ್ನು ಬಳಸಲು ಅನುಮತಿ ನೀಡುವ ಸಾಧ್ಯತೆ ಇದೆ ಎಂದು ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ಔಷಧ ಏನು ಮಾಡುತ್ತೆ?

ರೆಮಿಡಿಸಿವಿರ್‌, ಕೊರೋನಾ ಸೋಂಕನ್ನು ನಿಗ್ರಹ ಮಾಡುವ ಶಕ್ತಿಯನ್ನು ಹೊಂದಿಲ್ಲ. ಬದಲಾಗಿ ಇತರೆ ಪ್ರತಿರೋಧಕ ಔಷಧಗಳಂತೆ ಕೋರೋನಾದ ಜೀವಕೋಶಗಳು ವಿಭಜನೆಗೊಂಡು ಮತ್ತಷ್ಟು ಹೊಸ ಜೀವಕೋಶಗಳಾಗುವುದನ್ನು ಅಥವಾ ಇತರೆ ಆರೋಗ್ಯವಂಥ ಜೀವಕೋಶಗಳಿಗೆ ತಗಲುವುದನ್ನು ತಡೆಯುತ್ತದೆ. ಈ ಮೂಲಕ ರೋಗಿ ಚೇತರಿಸಿಕೊಳ್ಳಲು ಬೇಕಾದ ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ

click me!