ಭಾರತದ ಮೇಲೆ ಚೀನಾಕ್ಕೆ ಸಿಟ್ಟೇಕೆ?

By Kannadaprabha NewsFirst Published May 29, 2020, 1:34 PM IST
Highlights

ವಿಶ್ವವೆಲ್ಲಾ ಕೊರೋನಾ ಜೊತೆಗೆ ಯುದ್ಧ ನಡೆಸುತ್ತಿದ್ದರೆ, ಚೀನಾ ಮಾತ್ರ ತನ್ನ ಸೈನ್ಯವನ್ನು ಲಡಾಖ್‌ನ ಗಡಿಯಲ್ಲಿ ಸಕ್ರಿಯಗೊಳಿಸಿದೆ. ಇದಕ್ಕೆ ಮುಖ್ಯ ಕಾರಣ ಲಡಾಖ್‌ನ ಬಹುತೇಕ ಹಿಮಯುಕ್ತ ಗಡಿವರೆಗೆ ಭಾರತ 12 ತಿಂಗಳು ಉಪಯೋಗಿಸಬಹುದಾದ ರಸ್ತೆ ನಿರ್ಮಿಸುತ್ತಿರುವುದು. 

ವಿಶ್ವವೆಲ್ಲಾ ಕೊರೋನಾ ಜೊತೆಗೆ ಯುದ್ಧ ನಡೆಸುತ್ತಿದ್ದರೆ, ಚೀನಾ ಮಾತ್ರ ತನ್ನ ಸೈನ್ಯವನ್ನು ಲಡಾಖ್‌ನ ಗಡಿಯಲ್ಲಿ ಸಕ್ರಿಯಗೊಳಿಸಿದೆ. ಇದಕ್ಕೆ ಮುಖ್ಯ ಕಾರಣ ಲಡಾಖ್‌ನ ಬಹುತೇಕ ಹಿಮಯುಕ್ತ ಗಡಿವರೆಗೆ ಭಾರತ 12 ತಿಂಗಳು ಉಪಯೋಗಿಸಬಹುದಾದ ರಸ್ತೆ ನಿರ್ಮಿಸುತ್ತಿರುವುದು. ಇಲ್ಲಿಯವರೆಗೆ ಚೀನಾ ಬೇಸ್‌ ಕ್ಯಾಂಪ್‌ನಿಂದ ಒಂದು ಗಂಟೆಯಲ್ಲಿ ಸೇನೆ ಜಮಾವಣೆ ನಡೆಸಬಹುದಾಗಿದ್ದರೆ, ಭಾರತಕ್ಕೆ ಮೂರು ದಿನ ಬೇಕಾಗುತ್ತಿತ್ತು.

ರಸ್ತೆ ನಿರ್ಮಿಸಿ ಭಾರತ ಅಕ್ಸಾಯ್‌ ಚಿನ್‌ ಮೇಲೆ ಮುಂದೆ ಮತ್ತೆ ಹಕ್ಕು ಕೇಳಬಹುದು ಎನ್ನುವುದು ಚೀನಾಗಿರುವ ದೊಡ್ಡ ಆತಂಕ. ಇನ್ನು ಕಳೆದ ಡಿಸೆಂಬರ್‌ನಲ್ಲಿ ಪಾಕ್‌ನ ನೀಲಂ ಕಣಿವೆಯಲ್ಲಿ ಭಾರತದ ಸೇನೆ ನಡೆಸಿದ ದಾಳಿ ಮತ್ತು ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ್ದು ಚೀನಾದ ನಿದ್ದೆಗೆಡಿಸಿತ್ತು.

ಚೀನಾ-ಭಾರತದ ಶಾಂತಿಗೆ ಟ್ರಂಪ್‌ ಮಧ್ಯಸ್ಥಿಕೆ ಆಫರ್‌ ತಿರಸ್ಕರಿಸಿದ ಮೋದಿ

ಇವತ್ತು ಕೊರೋನಾ ಕಾರಣದಿಂದ ಸಿಟ್ಟಿಗೆದ್ದಿರುವ ಅಮೆರಿಕ ಸೇರಿದಂತೆ ಪಶ್ಚಿಮದ ದೇಶಗಳು ಸೌತ್‌ ಚೀನಾ ಸಮುದ್ರವನ್ನು ಸುತ್ತುವರೆದರೆ ಚೀನಾಕ್ಕೆ ಗ್ವಾದರ್‌ ಬಂದರು ಮೂಲಕ ಹಿಂದೂ ಮಹಾ ಸಾಗರಕ್ಕೆ ತಲುಪಲು ಪಾಕ್‌ನ ಸಹಾಯ ಬೇಕೇ ಬೇಕು. ಹೀಗಾಗಿ ಪಾಕ್‌ಗೆ ಸಹಾಯ ಮಾಡಲು ಕೂಡ ಚೈನಾ ಗಡಿಯಲ್ಲಿ ಟೆನ್ಷನ್‌ ಜಾಸ್ತಿ ಮಾಡಿದೆ. ಚೀನಾ, ಪಾಕಿಸ್ತಾನ ಕೂಡಿಕೊಂಡು ಭಾರತದ ಮೇಲೆ ಸೈನಿಕ ದಾಳಿ ಮಾಡಬಹುದಾದ ಗಡಿ ಎಂದರೆ ಅದು ಕೇವಲ ಲಡಾಖ್‌ ಮತ್ತು ಅಕ್ಸಾಯ್‌ಚಿನ್‌ ಮಾತ್ರ.

ಅಕ್ಸಾಯ್‌ ಚಿನ್‌ ಕೈಬಿಟ್ಟಿದ್ದು ಹೇಗೆ?

ಬ್ರಿಟಿಷರ ಕೈಯಲ್ಲಿ ಭಾರತ ಇದ್ದಾಗ 1865ರಲ್ಲಿ ವಿಲಿಯಂ ಜಾನ್ಸನ್‌ ನಡೆಸಿದ ಗಡಿ ಸರ್ವೇ ಪ್ರಕಾರ ಅಕ್ಸಾಯ್‌ ಚಿನ್‌ ಭಾರತಕ್ಕೆ ಸೇರಿತ್ತು. ಆದರೆ 1899ರಲ್ಲಿ ಬ್ರಿಟಿಷ್‌ ಸರ್ವೆಯರ್‌ ಮೆಕ್‌ ಡೊನಾಲ್ಡ್‌ ಪ್ರಕಾರ ಅಕ್ಸಾಯ್‌ಚಿನ್‌ ಚೈನಾಕ್ಕೆ ಸೇರಿದ್ದು ಎಂದು ಹೇಳಲಾಯಿತು. ಅಲ್ಲಿಂದ ಶುರು ಆಗಿದ್ದು ಗಡಿ ಜಗಳ. ಆದರೆ 1951ರಲ್ಲಿ ಏಕಾಏಕಿ ಟಿಬೆಟ್‌ಗೆ ಅಕ್ಸಾಯ್‌ಚಿನ್‌ ಮಾರ್ಗವಾಗಿ ಶಿನ್‌ ಜಿಯಾಂಗ್‌ನಿಂದ ಚೀನಾ 179 ಕಿಲೋಮೀಟರ್‌ ಉದ್ದದ ರಸ್ತೆ ನಿರ್ಮಿಸಲು ತೊಡಗಿದಾಗ ಹಿಂದಿ, ಚೀನಿ ಭಾಯಿ ಭಾಯಿ ಎಂದು ನೆಹರು ತಲೆಕೆಡಿಸಿಕೊಳ್ಳಲು ಹೋಗಲಿಲ್ಲ.

6 ವರ್ಷದಲ್ಲಿ ಅಂದರೆ 1957ರಲ್ಲಿ ರಸ್ತೆ ತಯಾರು ಆದರೂ ಭಾರತ ಸರ್ಕಾರ ಪ್ರತಿಭಟನೆ ಕೂಡ ಮಾಡದೆ ಸುಮ್ಮನೆ ಇದ್ದಾಗ ಅಕ್ಸಾಯ್‌ಚಿನ್‌ ಚೀನಾದ ವಶಕ್ಕೆ ಹೋಯಿತು. ಅಕ್ಸಾಯ್‌ಚಿನ್‌ ಸೆಂಟ್ರಲ್‌ ಏಷ್ಯಾದ ಅತ್ಯಂತ ಎತ್ತರದ ಪ್ರದೇಶ. ಹೀಗಾಗಿಯೇ ಚೀನಾಕ್ಕೆ ಈ ಪ್ರದೇಶ ಬೇಕಿತ್ತು. 1962ರಲ್ಲಿ ಚೀನಾ ಭಾರತದ ಮೇಲೆ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್‌ಚಿನ್‌ ಕಡೆಯಿಂದ ದಾಳಿ ನಡೆಸಿತ್ತು.

ಯುದ್ಧ ಮುಗಿದ ಮೇಲೆ ಅರುಣಾಚಲ ಪ್ರದೇಶದಿಂದೇನೋ ಹಿಂದೆ ಹೋಯಿತು. ಆದರೆ ಅಕ್ಸಾಯ್‌ಚಿನ್‌ನಿಂದ ಕಾಲು ತೆಗೆಯಲಿಲ್ಲ. ಇದಕ್ಕೆ ಮುಖ್ಯ ಕಾರಣ ಎತ್ತರದಲ್ಲಿರುವ ಅಕ್ಸಾಯ್‌ಚಿನ್‌ ಮೂಲಕ ಕಾಶ್ಮೀರ, ಲಡಾಖ್‌, ಹಿಮಾಚಲದ ಮೇಲೆ ಕಣ್ಣಿಡಬಹುದು ಎಂದು. ಶತ್ರುಗಳ ಮೇಲೆ ಯುದ್ಧ ಮಾಡಬೇಕೆಂದರೆ ಅವರ ಮನೆಗೇ ನುಗ್ಗಿ ಎಂದು ಯುದ್ಧ ತಂತ್ರದಲ್ಲಿ ಹೇಳಿದೆ. ಚೀನಾ ಮತ್ತೆ ಮತ್ತೆ ಇದನ್ನೇ ಮಾಡಿ ತೋರಿಸುತ್ತಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!