ಹಲವಾರು ಭಾಷೆಗಳಲ್ಲಿ ನಟಿಸಿದ್ದ ನಟಿ ಸನಾ ಖಾನ್ ಈಗ ಎದೆಹಾಲಿನ ಮಹತ್ವವನ್ನು ಸಾರಿದ್ದಾರೆ. ಸ್ತನ್ಯಪಾನದಿಂದ ತಾವು 15ಕೆ.ಜಿ. ತೂಕ ಇಳಿಸಿಕೊಂಡಿರುವ ಬಗ್ಗೆ ತಿಳಿಸಿದ್ದಾರೆ.
ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡದ 'ಕೂಲ್' ಸಿನಿಮಾದಲ್ಲಿ ನಟಿಸಿರುವ ನಟಿ ಸನಾ ಖಾನ್ ಸಿನಿಮಾ ಬಿಟ್ಟು ಹಿಜಾಬ್ ಧರಿಸುವ ನಿರ್ಧಾರಕ್ಕೆ ಬಂದು ಮೂರು ವರ್ಷಗಳ ಹಿಂದೆ ಬಹಳ ಸುದ್ದಿಯಾಗಿದ್ದರು. ಬಾಲಿವುಡ್ (Bollywood) ಸಿನಿಮಾಗಳ ಜೊತೆಗೆ ಸನಾ ಖಾನ್ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೂಲ್ (Cool) ಸಿನಿಮಾದಲ್ಲಿ ಸನಾ ನಟಿಸಿದ್ದಾರೆ. ಇಷ್ಟೆಲ್ಲಾ ಉತ್ತುಂಗದಲ್ಲಿ ಇರುವಾಗಲೇ ಸಿನಿಮಾ ಬಿಡುವ ನಿರ್ಧಾರ ಮಾಡಿದ್ದು, ಅವರ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಸಿನಿಮಾರಂಗ ತೊರೆಯುವ ನಿರ್ಧಾರದ ಬಗ್ಗೆ ಮಾತನಾಡಿದ್ದ ಸನಾ ಖಾನ್ ಸಮಾಜ ಸೇವೆ ಮಾಡಲು ಮತ್ತು ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ಬಣ್ಣದ ಲೋಕ ಬಿಡುತ್ತಿದ್ದೇನೆ ಎಂದಿದ್ದರು. ಹೆಸರು, ಖ್ಯಾತಿ, ಹಣ ಬಿಟ್ಟು ಹಿಜಾಬ್ ಧರಿಸಲು ಪ್ರಾರಂಭಿಸಿದ್ದೇಕೆ ಎಂದು ಹೇಳಿದ್ದ ಅವರು, 'ನನ್ನ ಹಳೆಯ ಜೀವನದಲ್ಲಿ ಹಣ, ಹೆಸರು, ಖ್ಯಾತಿ ಎಲ್ಲಾ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೆ ಮನಸ್ಸಿಗೆ ಶಾಂತಿ ಇರಲಿಲ್ಲ. ನಾನು ಎಲ್ಲವನ್ನೂ ಹೊಂದಿದ್ದೆ ಆದರೆ ಸಂತೋಷ ಇರಲಿಲ್ಲ, ಅದು ತುಂಬಾ ಕಠಿಣವಾಗಿತ್ತು. ಆದ್ದರಿಂದ ಈ ಹಾದಿ ಹಿಡಿದೆ ಎಂದಿದ್ದರು.
ಹೀಗೆ ಮಿನಿ ಸ್ಕರ್ಟ್, ಬಿಕಿನಿ ಎಲ್ಲವನ್ನೂ ಬಿಟ್ಟು ಹಿಜಾಬ್ ಧರಿಸಿದ್ದ 34 ವರ್ಷದ ನಟಿ ಸನಾ ಈಗ ಮಗುವಿನ ತಾಯಿ. ಈಕೆ, 2020ರ ನವೆಂಬರ್ 20 ರಂದು ಗುಜರಾತ್‌ನ ಅಂಕಲೇಶ್ವರದ ಮುಫ್ತಿ ಅನಾಸ್ ಸೈಯದ್ (Mufti Anas Sayed)ಅವರನ್ನು ವಿವಾಹವಾದರು. ಅನಾಸ್ ಸೈಯದ್ ಸೌಂದರ್ಯವರ್ಧಕ, ಪರ್ಸನಲ್ ಕೇರ್ ಲೈನ್ ನ ಸಂಸ್ಥಾಪರಾಗಿದ್ದಾರೆ. ಕಳೆದ ಜೂನ್ನಲ್ಲಿ ಈ ದಂಪತಿ ಮಗುವಿನ ಪಾಲಕರಾಗಿದ್ದಾರೆ. ಇದೀಗ ನಟಿ ಎದೆಹಾಲಿನ ಮಹತ್ವವನ್ನು ಸಾರಿದ್ದಾರೆ. ಆಗಸ್ಟ್ 1ರಿಂದ 7ನೇ ತಾರೀಖಿನವರೆಗೆ ಎದೆಹಾಲಿನ ಸಪ್ತಾಹ ಆಚರಿಸುತ್ತಿರುವ ಈ ಹೊತ್ತಿನಲ್ಲಿ ನಟಿ ತಮ್ಮ ಮಗುವಿಗೆ ಎದೆಹಾಲನ್ನು ಉಣಿಸುತ್ತಿರುವ ಕಾರಣ ತಮ್ಮ ತೂಕವೂ ಹೇಗೆ ಕಮ್ಮಿಯಾಯಿತು ಎನ್ನುವ ಬಗ್ಗೆ ಶೇರ್ ಮಾಡಿದ್ದಾರೆ. 'ನಿಮ್ಮ ಮಗುವಿಗೆ ಆಹಾರ ನೀಡುವುದು ವಿಶ್ವದ ಅತ್ಯಂತ ಸುಂದರವಾದ ಭಾವನೆಗಳಲ್ಲಿ ಒಂದಾಗಿದೆ. ಇದು ನಿಮ್ಮನ್ನು ಮಗುವಿನೊಂದಿಗೆ ಇನ್ನಷ್ಟು ಸಂಪರ್ಕಿಸುತ್ತದೆ ಮತ್ತು ಇದು ನಿಜವಾಗಿಯೂ ಮಾಂತ್ರಿಕವಾಗಿದೆ' ಎಂದು ಸನಾ ಹೇಳಿದ್ದಾರೆ. 'ನಾನು ಹಾಲುಣಿಸಲು ಪ್ರಾರಂಭಿಸಿದಾಗ, ನಾನು ಈ ದೇಹದಲ್ಲಿ ಇಷ್ಟು ವರ್ಷಗಳ ಕಾಲ ಹೇಗೆ ವಾಸಿಸುತ್ತಿದ್ದೇನೆ ಎಂದು ಅಚ್ಚರಿಯಾಗುತ್ತದೆ. ತಾಯಿಯಾದ ನಂತರವೇ ಹಾಲು ಉತ್ಪಾದಿಸಲು ಪ್ರಾರಂಭವಾಗುವುದು ಎಷ್ಟು ಅಚ್ಚರಿಯಲ್ಲವೆ ಎಂದು ಪ್ರಶ್ನಿಸಿದ್ದಾರೆ.
SANA KHAN: ನಟನೆ ಬಿಟ್ಟು ಹಿಜಾಬ್ ಧರಿಸಿದ ಕನ್ನಡದ 'ಕೂಲ್' ನಟಿಯೀಗ ಗರ್ಭಿಣಿ
ಮಗುವಿಗೆ ಹಾಲುಣಿಸುವುದು ಮಗುವಿನ ಆರೋಗ್ಯ ಮಾತ್ರವಲ್ಲ, ಸ್ತನ್ಯಪಾನವು ತಾಯಂದಿರಿಗೂ ಪ್ರಯೋಜನವನ್ನು ನೀಡುತ್ತದೆ ಎಂದಿದ್ದಾರೆ ನಟಿ. ಇದರಿಂದ ತಮಗಾಗಿರುವ ಪ್ರಯೋಜನದ ಕುರಿತು ಮಾತನಾಡಿರುವ ಸನಾ, ಎದೆಹಾಲನ್ನು ಮಗುವಿಗೆ ನೀಡುವ ಮೂಲಕ ನನ್ನ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡಿದೆ ಎಂದಿದ್ದಾರೆ. ತೂಕವನ್ನು ಕಳೆದುಕೊಳ್ಳುವುದು ಮತ್ತು ಹೆರಿಗೆಯ ನಂತರ ಆಕಾರವನ್ನು ಮರಳಿ ಪಡೆಯುವುದು ನನ್ನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂಬ ಅರ್ಥವಲ್ಲ, ಬದಲಿಗೆ ತೂಕವನ್ನು ಪಾಲಿಸಿಕೊಂಡು ಬರುವುದು ಆರೋಗ್ಯಕರವಾಗಿದೆ. ಆದರೆ ನಾನು ಸ್ತನ್ಯಪಾನ ಮಾಡಿಸುವುದರಿಂದಲೇ ಒಂದು ತಿಂಗಳಲ್ಲಿ ಸುಮಾರು 15 ಕೆಜಿ ತೂಕವನ್ನು ಕಳೆದುಕೊಳ್ಳಲು ನನಗೆ ಸಹಾಯ ಮಾಡಿದೆ. ನನಗೂ ಆಶ್ಚರ್ಯವಾಯಿತು ಆದರೆ ಸ್ತನ್ಯಪಾನವು ತೂಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದಿದ್ದಾರೆ ನಟಿ.
ಹೆರಿಗೆಯ ನಂತರ 30-45 ದಿನಗಳ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ. ಈ ಸಮಯದಲ್ಲಿ, ನಾನು ಸರಿಯಾಗಿ ತಿನ್ನುವ ಮೂಲಕ ಮತ್ತು ನನ್ನ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವ ಮೂಲಕ ನನ್ನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದೇನೆ, ಏಕೆಂದರೆ ಇದು ಹಾಲುಣಿಸಲು ಸಹಾಯ ಮಾಡುತ್ತದೆ. ಕೆಲವರು ಇದನ್ನು ಮಿಥ್ಯೆ ಎಂದು ಕರೆಯಬಹುದು, ಆದರೆ ನೀವು ಸೇವಿಸುವ ಯಾವುದೇ ಸೇವನೆಯು ನಿಮ್ಮ ದೇಹದ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿಸಬಲ್ಲುದು, ದೇಹಕ್ಕೆ ಏನಾದರೂ ಸಮಸ್ಯೆಗಳು ಬಂದರೆ ಹಾಲಿನ ಮೇಲೆ ಪರಿಣಾಮ ಬೀರುವ ಕಾರಣ, ಔಷಧಗಳು, ಅತಿ ತಂಪು ಪಾನೀಯಗಳು ಅಥವಾ ಅನಾರೋಗ್ಯಕರವಾದ ಯಾವುದನ್ನಾದರೂ ತೆಗೆದುಕೊಳ್ಳುವುದನ್ನು ತಪ್ಪಿಸುತ್ತೇನೆ ಎಂದಿದ್ದಾರೆ ಸನಾ ಖಾನ್ (Sana Khan) .
JAILER ಚಿತ್ರಕ್ಕೆ ರಜನಿಕಾಂತ್ ಈ ಪರಿ ಸಂಭಾವನೆನಾ? ಶಿವರಾಜ್ಕುಮಾರ್, ತಮನ್ನಾ ಪಡೆದದ್ದೆಷ್ಟು?