ಮಲೆನಾಡ ಕಾರ್ಟೂನ್‌ ನನ್ನ ಇಮೇಜನ್ನೇ ಬದಲಿಸಿತು : ಪೂಜಾ ಹರೀಶ್‌

By Suvarna NewsFirst Published Jul 16, 2021, 3:31 PM IST
Highlights

ಪೂಜಾ ಹರೀಶ್‌ ತೀರ್ಥಹಳ್ಳಿ ಮೂಲದವರು. ಒಂದೂವರೆ ತಿಂಗಳ ಹಿಂದಿಂದ ಬೇಜಾರು ಕಳೆಯಲು ಆರಂಭಿಸಿದ್ದು ಮಲೆನಾಡ ಕಾರ್ಟೂನ್‌. ಇಂದು ಬಹಳ ಜನಪ್ರಿಯತೆ ಗಳಿಸಿಕೊಳ್ಳೋ ಜೊತೆಗೆ ಅವರ ಇಮೇಜನ್ನೂ ಬದಲಿಸಿದೆ. ಮಲೆನಾಡನ್ನು ಬಹಳ ಪ್ರೀತಿಸುವ ಈ ಹೆಣ್ಣು ಮಗಳ ಜೊತೆಗೆ ಸಣ್ಣ ಮಾತುಕತೆ.

ಅಪ್ಪಟ ಮಲೆನಾಡ ಭಾಷೆಯಲ್ಲಿ, ಮಲೆನಾಡ ಮಳೆ ಹಾಗೂ ಖಾದ್ಯಗಳ ವೈಭೋಗವನ್ನು ಹೇಳುವ, ಮಲೆನಾಡಿಗರ ಅಚ್ಚು ಮೆಚ್ಚಿನ ಕಾರ್ಟೂನ್‌ಗಳು ಈಗೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅದರಲ್ಲಿಯೂ ಮಲೆನಾಡಿಗರ ಗ್ರೂಪಲ್ಲಂತೂ ಅದರದ್ದೆ ಚರ್ಚೆ. ವಿಶ್ವದ ನಾನಾ ಮೂಲೆಯಲ್ಲಿದ್ದವರಿಗೂ ಊರಿನಲ್ಲಿದ್ದು, ಸಂಭಾಷಣೆ ಕೇಳುತ್ತಿರುವಂತೆ ಮಾಡುವ ಈ ಕಾರ್ಟೂನ್ ರೂವಾರಿ ಪೂಜಾ ಹರೀಶ್ ಜೊತೆ ಮಾತುಕಥೆ.

- ಬಾನಿ

- ಮಲೆನಾಡ ಕಾರ್ಟೂನ್‌ ಮಾಡುವ ಹಿಂದಿನ ಕತೆ ಹೇಳಿ?
ಖಂಡಿತಾ. ಮದುವೆಗೂ ಮೊದಲು ವಿಧಾನಸೌಧದಲ್ಲಿ ಉದ್ಯೋಗಿಯಾಗಿದ್ದೆ. ಮದುವೆ ಆದ ಮೇಲೆ ಕೆಲಸ ಬಿಟ್ಟೆ. ಒಂಥರಾ ನಿರರ್ಥಕತೆ ಫೀಲ್ ಶುರುವಾಯ್ತು. ನಮ್ಮನೇಲಿ ನನ್ನ ಗಂಡ ಕೆಲಸ ಮಾಡ್ತಾರೆ, ನನ್ನ ತಂಗಿ ಉದ್ಯೋಗಿ. ಆದರೆ ನಾನು ಮಾತ್ರ ಬರೀ ಮನೆ, ಅಡುಗೆ ಅಷ್ಟಕ್ಕೇ ಸೀಮಿತವಾಗ್ತಿದ್ದೀನಿ ಅಂತ ಅನಿಸ್ತಿತ್ತು. ಇದರಿಂದ ಹೊರಗೆ ಬರಬೇಕು ಅಂತಾದ್ರೆ ಏನಾದ್ರೂ ಹೊಸತು ಟ್ರೈ ಮಾಡಬೇಕು ಅಂತನಿಸಿತು. ಮೊದಲು ಮಲೆನಾಡ ಅಡುಗೆ ಯೂಟ್ಯೂಬ್ ಚಾನೆಲ್‌ ಮಾಡೋಣ ಅಂದುಕೊಂಡೆ. ಆದರೆ ಅಂಥದ್ದನ್ನ ಈಗಾಗಲೇ ಬಹಳ ಮಂದಿ ಮಾಡಿದ್ದಾರೆ. ನನಗೆ ಕಾರ್ಟೂನ್‌ ವ್ಯಾಮೋಹ ಬಹಳ ಇದೆ. ಈಗಲೂ ಹತ್ತಾರು ಕಾರ್ಟೂನ್‌ ನೋಡ್ತಿರ್ತೀನಿ. ಜೊತೆಗೆ ಡ್ರಾಯಿಂಗ್ ಅಭ್ಯಾಸವೂ ಇದೆ. ಆದರೆ ಅನಿಮೇಶನ್‌ ಬರಲ್ಲ. ಆದರೆ ನನಗಿದ್ದ ಒಂದು ಅಡ್ವಾಂಟೇಜ್ ಅಂದರೆ ನನ್ನ ಗಂಡ ಕ್ರಿಯೇಟಿವ್‌ ಡಿಸೈನರ್‌. ಅವರ ಬಳಿ ಕೇಳಿದೆ, ಅವರು ಟ್ವಿನ್ ಕ್ರಾಫ್ಟ್ ಬಗ್ಗೆ ಹೇಳಿ ಇದರಲ್ಲೇನಾದ್ರೂ ಟ್ರೈ ಮಾಡು, ಸರಿ ಹೋಗಿಲ್ಲ ಅಂದರೆ ಬೇರೆ ಆ್ಯಪ್ಸ್ ಹುಡುಕೋಣ ಅಂದರು. ಹಾಗೆ ಮೊದಲಿಗೆ ಮಕ್ಕಳಿಗಾಗಿ ಸಣ್ಣ ಕಾರ್ಟೂನ್ ಮಾಡಿದೆ. ಆಮೇಲೆ ಮಲೆನಾಡ ಕಾರ್ಟೂನ್ ಶುರುಮಾಡಿದೆ.

 

 

- ನಿಮ್ಮ ಮೊದಲ ಕಡುಬು ಕಾಂಸೆಪ್ಟ್ ಸಖತ್ ಕ್ಲಿಕ್ ಆಯ್ತು, ಆಗ ಧೈರ್ಯ ಬಂದಿರ್ಬೇಕು?
ಹೌದು. ನಾನು ಟ್ವಿನ್‌ ಕ್ರಾಫ್ಟ್‌ ಮೂಲಕ ಮೊದಲು ರೂಪಿಸಿದ ಮಲೆನಾಡ ಕಾರ್ಟೂನ್‌ ಅದು. ನೋಡು ನೋಡುತ್ತಿದ್ದ ಹಾಗೇ ಅದು ಬಹಳ ಫೇಮಸ್ ಆಗೋಯ್ತು. ಆದರೆ ಅದನ್ನು ಯಾರು ಮಾಡಿದ್ದು ಅಂತ ಯಾರಿಗೂ ಗೊತ್ತಿಲ್ಲ. ಹಲವರು ಇದನ್ನು ಯಾರು ಮಾಡಿದ್ದು ಅಂತ ಸೋಷಿಯಲ್‌ ಮೀಡಿಯಾದಲ್ಲೆಲ್ಲ ಕೇಳಲಾರಂಭಿಸಿದರು. ಯಾವ್ಯಾವುದೋ ವಾಟ್ಸಾಪ್‌ ಗ್ರೂಪ್‌ಗಳಲ್ಲೆಲ್ಲ ಹರಿದಾಡಿತು. ಗೆಳತಿಯರು, ಪರಿಚಯದವರೆಲ್ಲ ಮೆಚ್ಚಿ ಮಾತಾಡಿದರು. ಜನಪ್ರಿಯ ವೆಬ್‌ಸೈಟ್‌ಗಳಲ್ಲೂ ಈ ಕುರಿತ ಸುದ್ದಿ ಬಂತು. ಹೀಗೆ ಮೊದಲ ಪ್ರಯತ್ನದಲ್ಲೇ ಹೊಡೆದ ಸಿಕ್ಸರ್‌ನಿಂದ ಕೇವಲ ಒಂದು ತಿಂಗಳಲ್ಲಿ ಯೂಟ್ಯೂಬ್‌ನಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಸಬ್‌ಸ್ಕ್ರೈಬರ್ಸ್ ಸಿಕ್ಕರು. ಸೋಷಿಯಲ್‌ ಮೀಡಿಯಾಗಳಲ್ಲೂ ಸಾವಿರಾರು ಫಾಲೋವರ್ಸ್ ಇದ್ದಾರೆ. ಮೊದ ಮೊದಲು ವಾರಕ್ಕೆ ಎರಡು ಕಾರ್ಟೂನ್ ಹಾಕ್ತಿದ್ದೆ. ಎನಿಮೇಶನ್‌ ಗೊತ್ತಿಲ್ಲದ ಕಾರಣ ಪೈಂಟ್ ಮಾಡಿ ಹಿನ್ನೆಲೆಯಲ್ಲಿ ಮಲೆನಾಡ ಮನೆಯ ಪರಿಸರ ಚಿತ್ರಿಸುತ್ತಿದ್ದೆ. ಮಂಚ, ಮೇಲೆ ಬಟ್ಟೆ ನೇತಾಕಿರೋದು, ಮನೆಯ ವಿನ್ಯಾಸವನ್ನೆಲ್ಲ ನಾನೇ ಪೇಂಟ್ ಮಾಡಿದ್ದು.
 

- ಈ ಕಡುಬು ಅಂದ್ರೆ ಮಲೆನಾಡಿನ ಕೆಲವು ಮಂದಿ ಬೆಚ್ಚಿ ಬೀಳ್ತಾರೆ, ನಿಮ್ಮನ್ನು ಕಾಡಿದ ಕಡುಬಿನ ಬಗ್ಗೆ ಹೇಳ್ತೀರಾ?
ಹೌದು, ಮಲೆನಾಡಿಂದ ಬಂದವರಿಗೆ ಈ ಕಡುಬಿನ ಮಹಾತ್ಮೆ ಗೊತ್ತೇ ಇರುತ್ತೆ. ಮನೆಯಲ್ಲಿ ಪ್ರತಿ ದಿನ ಕಡುಬು, ವಾರಕ್ಕೊಮ್ಮೆ, ಅದೂ ನಾವು ಮಕ್ಕಳು ಗಲಾಟೆ ಮಾಡಿದರೆ ದೋಸೆ, ಚಿತ್ರಾನ್ನ. ನಮಗೆಲ್ಲ ಕಡುಬು ತಿಂದೂ ತಿಂದೂ ಬಹಳ ಜಿಗುಪ್ಸೆ ಬರೋದು. ನನ್ನ ತಂಗಿಯಂತೂ ಅಳ್ತಾ ಇದ್ದಳು. ಅಮ್ಮಾ, ಇವತ್ತೊಂದು ದಿನ ಕಡುಬು ಬಿಟ್ಟು ಬೇರೇನಾದ್ರೂ ಮಾಡು ಅಂತಿದ್ಲು. ಆದರೆ ಚಿಕನ್ ಮಾಡಿದಾಗ ಈ ಕಡುಬೇ ಇರಬೇಕು.

- ಇದ್ರಲ್ಲಿ ಬರೋ ಸುಶೀಲಕ್ಕ, ಇತರೇ ಪಾತ್ರಗಳೆಲ್ಲ ನಿಜದಲ್ಲಿ ಯಾರು?
ನಮ್ಮಮ್ಮ, ದೊಡ್ಡಮ್ಮ, ದೊಡ್ಡಪ್ಪ, ನಮ್ಮೂರಿನ ಜನರೇ ಈ ಪಾತ್ರಗಳಿಗೆ ಸ್ಫೂರ್ತಿ. ನಾನು ತೀರಾ ಹಳ್ಳಿಯಲ್ಲಿ ಬೆಳೆದವಳಲ್ಲ. ನನ್ನಜ್ಜ ಶಿರಸ್ತೇದಾರರಾಗಿದ್ದವರು. ಮದುವೆಯಾಗಿ ಹೋದ ಮನೆಲೂ ಮಾವ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾಗಿದ್ದವರು. ನಮ್ಮ ಭಾಷೆಯಲ್ಲಿ ಅಪ್ಪಟ ಮಲೆನಾಡಿನ ಸೊಗಡು ಇರಲಿಲ್ಲ. ಆದರೆ ಅಜ್ಜಿಮನೆಯಲ್ಲಿ ಅಪ್ಪಟ ಮಲೆನಾಡಿನ ಭಾಷೆ. ನಾನು ಅಲ್ಲಿಂದ ಈ ಪದಗಳನ್ನೆಲ್ಲ ಕಲಿತದ್ದು. ಜೊತೆಗೆ ಮಾವನಿಗೆ ಇಂಥಾ ಹತ್ತಾರು ಗ್ರಾಮೀಣ ಸೊಗಡುಗಳು ಗೊತ್ತಿದ್ದವು. ಈಗ ಜನಪ್ರಿಯವಾಗಿರುವ ಹತ್‌ಮೀನು ಕಾಂಸೆಪ್ಟ್ ಬಗ್ಗೆ ಅವರೇ ತಿಳಿಸಿದ್ದು. ನನ್ನ ಧ್ವನಿಗೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಅಲ್ಲಿ ಆಡುವ ಪ್ರತೀ ಮಾತನ್ನೂ ಕಣ್ಣು ಮುಚ್ಚಿ ಕೇಳ್ತಿದ್ರೆ ಮನೇಲೇ ಕೂತ ಫೀಲ್ ಬರುತ್ತೆ ಅನ್ನುವ ಪ್ರತಿಕ್ರಿಯೆ ಬರುತ್ತಿದೆ. ಜೊತೆಗೆ ಎಷ್ಟೋ ಜನ ಹಳ್ಳಿ ಮಂದಿ ಸಿಟಿಯಲ್ಲಿ ಓದಲು ಬಂದಾಗ ಶಿಷ್ಟ ಭಾಷೆ ಮಾತನಾಡಲೇ ಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ, ಇಲ್ಲವಾದರೆ ಅವರು ನಗೆಪಾಟಲಿಗೆ ಗುರಿಯಾಗಬೇಕು. ಹಾಗೆ ನೋವುಂಡವರಿಗೂ ನನ್ನ ಕಾರ್ಟೂನು ಮುಲಾಮಿನಂತೆ ಕೆಲಸ ಮಾಡಿದೆ. ಅವರ ಮುಖದಲ್ಲಿ ನಗು ತರಿಸಿದೆ.

- ನಿಮ್ಮ ಇತರ ಕಾರ್ಟೂನ್‌ಗಳ ಬಗ್ಗೆ ಹೇಳಿ?
ಮಲ್ನಾಡಿನ್ ನಟ್ಟಿ ಗದ್ದೆ, ಹತ್‌ ಮೀನಿನ್ ಕತೆ, ಹೆಗ್ಗಲ್ ಅಳಬಿ ಹುಡ್ಕುಕೆ ಯಾರ್‌ ಯಾರ್‌ ಬತ್ತಿರ, ನಿಮ್ಮನಿಲು ಅಜ್ಜಿ ಹಿಂಗೇನಾ ಮರ್ರೆ ಹೀಗೆ ಹಲವಿವೆ. ಅದರಲ್ಲಿ `ಸುಶೀಲಕ್ಕ ಸರ್ಫೆಸಿ ಆ್ಯಕ್ಟ್ ಬಗ್ಗೆ ಹೇಳ್ತಾ ಅದೆ..' ಅನ್ನೋದು ಸರ್ಫೇಸಿ ಆ್ಯಕ್ಟ್ ಬಗ್ಗೆ ತಿಳುವಳಿಕೆ ಮೂಡಿಸೋ ಕಾರ್ಟೂನ್‌. ಇದನ್ನು ಕೃಷಿಕ ಪತ್ರಿಕೆಯವರು ನೀಡಿದ ಮಾಹಿತಿಯ ಅನುಸಾರ ರೂಪಿಸಿರೋದು. ಸರ್ಫೇಸಿ ಕಾಯ್ದೆಗೆ ತಿದ್ದುಪಡಿ ತರೋದಕ್ಕೆ ರೈತರು ಪ್ರಧಾನಿ, ಮುಖ್ಯಮಂತ್ರಿಗಳಿಗೆ ಅಂಚೆಪತ್ರ ಬರೆಯುವ ಆಂದೋಲನ ಶುರುವಾಗಿದೆ. ಅದರ ಬಗ್ಗೆ ಈ ಕಾರ್ಟೂನ್‌ನಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಿದ್ದೇನೆ.. ಈಗ ರೆಡಿಯಾಗ್ತಿರೋದು ದೈಯ್ದ ಕತೆ. ಮಲೆನಾಡಿನ ಒಂದು ವಿಶಿಷ್ಟ ಆಚರಣೆ ಮೇಲೆ ಮಾಡಿರೋ ಕಾರ್ಟೂನ್‌ ಇದು.

ಮಿಸ್ ಇಂಡಿಯಾ ಫೈನಲಿಸ್ಟ್ ಈಗ IAS ಆಫೀಸರ್..!
 

click me!