
ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸೋದು ಈಗ ಬಹುತೇಕ ಎಲ್ಲರ ಗುರಿಯಾಗಿದೆ. ಉನ್ನತ ಹುದ್ದೆಗೆ ಏರಬೇಕು, ಯಶಸ್ವಿ ಉದ್ಯೋಗಿಯಾಗ್ಬೇಕು, ಸಾಧನೆ ಮಾಡ್ಬೇಕು, ಕೈತುಂಬ ಸಂಬಳ ಪಡೆಯಬೇಕು ಎಂಬುದು ಈಗ ಎಲ್ಲರ ಆಸೆ. ಇದೇ ಕಾರಣಕ್ಕೆ ಅವರು ಒಂದಿಷ್ಟು ರಾಜಿ ಮಾಡಿಕೊಳ್ತಾರೆ. ಕೆಲಸದ ಕಾರಣಕ್ಕೆ ರಾತ್ರಿ ನಿದ್ದೆಗಡೆಲು ಸಿದ್ಧವಿರ್ತಾರೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಪ್ರಸ್ತುತ ತುಂಬಾ ಸಾಮಾನ್ಯವಾಗಿದೆ. ಪುರುಷರು ಅಥವಾ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಹಿಂಜರಿಯೋದಿಲ್ಲ. ಕಚೇರಿಯಿರಲಿ ಅಥವಾ ಮನೆಯಿರಲಿ, ಅನೇಕರಿಗೆ ರಾತ್ರಿ ಕೆಲಸ ಮಾಡುವುದು ಸುಲಭ. ಇದೇ ಕಾರಣಕ್ಕೆ ರಾತ್ರಿ ಪಾಳಿಯನ್ನು ಆಯ್ಕೆ ಮಾಡಿಕೊಳ್ತಾರೆ.
ರಾತ್ರಿ (Night) ಯಲ್ಲಿ ನಿದ್ರೆ (Sleep) ಬಿಟ್ಟರೆ ಕೆಲಸ ಮಾಡುವುದು ಸುಲಭ. ಕೆಲ ಕಚೇರಿಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚುವರಿ ಸಂಬಳ (Salary), ಸೌಲಭ್ಯ ಸಿಗುತ್ತದೆ. ಆದರೆ ರಾತ್ರಿ ಪಾಳಿ ಮತ್ತು ಸ್ತನ ಕ್ಯಾನ್ಸರ್ ನಡುವೆ ಆಳವಾದ ಸಂಪರ್ಕವಿದೆ. ದೀರ್ಘಕಾಲ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಬಹು ಪಟ್ಟು ಹೆಚ್ಚಾಗುತ್ತದೆ. ಅಷ್ಟಕ್ಕೂ ಈ ಎರಡಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.
ಲಾಕ್‌ಡೌನ್ ಸಮಯದಲ್ಲಿ ಹುಟ್ಟಿದ ಮಕ್ಕಳು ಸಿಕ್ಕಾಪಟ್ಟೆ ಸ್ಲೋ ನಾ?
ರಾತ್ರಿ ಪಾಳಿ ಮತ್ತು ಸ್ತನ ಕ್ಯಾನ್ಸರ್ ಸಂಪರ್ಕ : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದು ಅನೇಕರಿಗೆ ತಿಳಿದಿದೆ. ರಾತ್ರಿ ಪಾಳಿ ಮಾಡುವವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಆರೋಗ್ಯ ಸಮಸ್ಯೆಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಸೇರಿದೆ. ರಾತ್ರಿ ಕೆಲಸ ಮಾಡುವಾಗ ದೇಹ ಬೆಳಕಿಗೆ ಒಡ್ಡಿಕೊಂಡಿರುತ್ತದೆ. ಇದು ನಿಮ್ಮ ಸಿರ್ಕಾಡಿಯನ್ ಲಯದಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ಇದು ಪ್ರೋಲ್ಯಾಕ್ಟಿನ್, ಗ್ಲುಕೊಕಾರ್ಟಿಕಾಯ್ಡ್ಗಳು, ಅಡ್ರಿನೊಕಾರ್ಟಿಕೊಟ್ರೋಪಿಕ್ ಹಾರ್ಮೋನ್, ಕಾರ್ಟಿಕೊಲಿಬೆರಿನ್, ಸಿರೊಟೋನಿನ್ ಮತ್ತು ಮೆಲಟೋನಿನ್ ಸೇರಿದಂತೆ ನಿಮ್ಮ ದೇಹದಲ್ಲಿನ ಹಲವಾರು ಹಾರ್ಮೋನುಗಳ ಸ್ರವಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಈಸ್ಟ್ರೊಜೆನ್ ಮಟ್ಟ ಹೆಚ್ಚಾಗುತ್ತದೆ . ಇದ್ರಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ರಾತ್ರಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮುಟ್ಟಿನಲ್ಲಿ ಏರುಪೇರು, ಮಕ್ಕಳ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ರಾತ್ರಿ ಕೆಲಸ ಮಾಡುವ ಮಹಿಳೆಯರು ಒತ್ತಡ ಕಡಿಮೆ ಮಾಡಿಕೊಳ್ಳಲು ಧೂಮಪಾನ ಮಾಡ್ತಾರೆ. ಇದರಿಂದಾಗಿ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ.
ರಾತ್ರಿ ಪಾಳಿ ಮತ್ತು ಕ್ಯಾನ್ಸರ್ ನಡುವಿನ ಸಂಬಂಧವನ್ನು ತಿಳಿಯಲು ಅನೇಕ ಸಂಶೋಧನೆ ನಡೆದಿವೆ. ಇದರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಅನೇಕ ರೀತಿಯ ಕ್ಯಾನ್ಸರ್ ಅಪಾಯ ಹೆಚ್ಚು ಎಂಬುದು ಸಾಬೀತಾಗಿದೆ. ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ ನಡೆಸಿದ ಸಂಶೋಧನೆ ಪ್ರಕಾರ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಚರ್ಮದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಸೇರಿದಂತೆ ಕೆಲವು ರೀತಿಯ ಕ್ಯಾನ್ಸರ್ ಬರುವ ಅಪಾಯವಿದೆ ಎಂಬುದು ಪತ್ತೆಯಾಗಿದೆ. ಇನ್ನೊಂದು ವರದಿ ಪ್ರಕಾರ, ರಾತ್ರಿ ಬೆಳಕಿನಲ್ಲಿ ಕೆಲಸ ಮಾಡುವುದು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಹಾನಿಕಾರಕ ಎಂಬ ಅಂಶ ಹೊರಬಿದ್ದಿದೆ.
HEALTH TIPS : ಬೆಳಗ್ಗೆ ಹೊಟ್ಟೆ ಸರಿಯಾಗಿ ಕ್ಲೀನ್ ಆಗ್ತಿಲ್ವಾ ? ಹೀಗೆ ಮಾಡಿ
ಸ್ತನ ಕ್ಯಾನ್ಸರ್ ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೊದಲನೇಯದಾಗಿ ಸಾಧ್ಯವಾದಷ್ಟು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದನ್ನು ತಪ್ಪಿಸಬೇಕು. ಹಾಗೆ ನಿದ್ರೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬೇಡಿ. ದಿನಕ್ಕೆ ಕನಿಷ್ಠ 7-8 ಗಂಟೆ ನಿದ್ದೆ ಮಾಡಿ. ಆಹಾರದ ಬಗ್ಗೆ ವಿಶೇಷ ಗಮನ ನೀಡಿ. ಆರೋಗ್ಯಕರ ಮತ್ತು ಸಮತೋಲಿತ ಆಹಾರ ಸೇವನೆ ಮಾಡಿ. ದೈಹಿಕ ಚಟುವಟಿಕೆ ಅವಶ್ಯಕ. ವರ್ಷಕ್ಕೊಮ್ಮೆ ಇಡೀ ದೇಹದ ತಪಾಸಣೆ ಮಾಡಿ. ಸ್ತನದಲ್ಲಿ ಯಾವುದೇ ಬದಲಾವಣೆ ಕಂಡು ಬಂದ್ರೂ ವೈದ್ಯರನ್ನು ಭೇಟಿಯಾಗಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.