3 ಲಕ್ಷದಿಂದ 12 ಕೋಟಿ ವಹಿವಾಟು; ಉತ್ಪನ್ನಗಳ ಹಿಂದಿರುವ ಮಹಾಶಕ್ತಿ ಆಶಾ!

By Kannadaprabha NewsFirst Published Jun 20, 2020, 8:38 AM IST
Highlights

ಆಶಾ ಕೆಮಿಕಲ್ಸ್‌ ಸಂಸ್ಥೆಯ ಹೆಮ್ಮೆಯ ಉತ್ಪನ್ನಗಳ ಹೆಸರು ಫೆä್ಲೕರೋಮಾ. ಮನೆ ಸ್ವಚ್ಛತೆಗೆ ಬಳಸುವ ಈ ಉತ್ಪನ್ನಗಳು ಇದೀಗ ಭಾರಿ ಜನಪ್ರೀತಿ ಗಳಿಸಿಕೊಂಡಿವೆ. 26 ವರ್ಷಗಳ ಹಿಂದೆ 3 ಲಕ್ಷ ಬಂಡವಾಳದೊಂದಿಗೆ ಆರಂಭವಾದ ಈ ಕಂಪನಿ ಇದೀಗ ವಾರ್ಷಿಕ 12 ಕೋಟಿ ವಹಿವಾಟು ನಡೆಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಈ ಸಾಧನೆಯ ಹಿಂದೆ ಇರುವುದು ಈ ಶತಮಾನದ ಮಾದರಿ ಮಹಿಳೆ ಆಶಾ ಎನ್‌ಆರ್‌.

ಬೆಂಗಳೂರು ಹೊರವಲಯದ ಮಾಗಡಿ ರಸ್ತೆಯೊಳಗಿರುವ ಆಶಾ ಕೆಮಿಕಲ್ಸ್‌ಗೆ ಭೇಟಿ ನೀಡಿದರೆ ವಿಶಾಲ ಜಾಗದಲ್ಲಿ ನಾನಾ ಬಗೆಯ ಫೆä್ಲೕರೋಮಾ ಬ್ರ್ಯಾಂಡ್‌ನ ಕ್ಲೀನಿಂಗ್‌ ಪರಿಕರಗಳ ತಯಾರಿಯನ್ನು ನೋಡಬಹುದು. ಅಲ್ಲೊಬ್ಬ ಹೆಣ್ಣುಮಗಳು ಕೆಲಸಗಾರರಿಗೆ ಮಾರ್ಗದರ್ಶನ ನೀಡುತ್ತಾ, ಮುಂದಿನ ಪ್ಲಾನ್‌ ಬಗ್ಗೆ ಆಲೋಚಿಸುತ್ತಾ ಚುರುಕಾಗಿ ಓಡಾಡಿಕೊಂಡಿರುತ್ತಾರೆ. ಈಕೆಯೇ ‘ಆಶಾ ಕೆಮಿಕಲ್ಸ್‌’ ನ ಹಿಂದಿನ ರೂವಾರಿ ಆಶಾ ಎನ್‌ಆರ್‌.

ಬಾಚಣಿಗೆ ಸ್ವಚ್ಛಗೊಳಿಸೋದೆ ದೊಡ್ಡ ತಲೆನೋವಾ? ಇಲ್ಲಿದೆ ಸುಲಭ ವಿಧಾನ 

ಆಶಾ ಅವರ ಪತಿ ಅರುಣ್‌ ಕುಮಾರ್‌ ಕೆ ಆರ್‌ ಅವರು ಮಾರ್ಕೆಟಿಂಗ್‌ ಹೊಣೆಗಾರಿಕೆ ಹೊತ್ತು ಪತ್ನಿಯ ಕನಸಿಗೆ ನೀರೆರೆಯುತ್ತಿದ್ದಾರೆ. 1994ರಲ್ಲಿ ಕೇವಲ 3 ಲಕ್ಷ ರು. ಬಂಡವಾಳದಲ್ಲಿ ಆರಂಭವಾದ ಆಶಾ ಕೆಮಿಕಲ್ಸ್‌ನ ಕನಸಿನ ಸಾಮ್ರಾಜ್ಯ ಇಂದು ವಾರ್ಷಿಕ 12 ಕೋಟಿ ರು. ವಹಿವಾಟು ದಾಖಲಿಸುವುದರೊಂದಿಗೆ ಉದ್ಯಮ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ಹೊರಟಿದೆ. ಅಂದು ಕೇವಲ ಒಂದು ಉತ್ಪನ್ನದ ಜೊತೆಗೆ ಜೊತೆಗೆ ಶುರುವಾದ ಉದ್ಯಮ ಇಂದು 25 ಕ್ಲೀನಿಂಗ್‌ ಉತ್ಪನ್ನಗಳನ್ನು ತಯಾರಿಸುವ ಜೊತೆಗೆ 205 ಡಿಸ್ಟ್ರಿಬ್ಯೂಟ​ರ್‍ಸ್ ಮೂಲಕ ಇಡೀ ರಾಜ್ಯಕ್ಕೇ ನಂಬರ್‌ 1 ಸ್ಥಾನದಲ್ಲಿ ಕಾರ್ಯಾಚರಿಸುತ್ತಿದೆ. ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲೂ ಫೆä್ಲೕರೋಮಾ ಉತ್ಪನ್ನಗಳು ಲಭ್ಯವಿವೆ. ಮೂರ್ನಾಲ್ಕು ಸೆಗ್ಮೆಂಟ್‌ಗಳಲ್ಲಿ ಈ ಕ್ಲೀನಿಂಗ್‌ ಉತ್ಪನ್ನಗಳನ್ನು ವಿಭಾಗಿಸಲಾಗಿದೆ. ಕಿಚನ್‌ ಕ್ಲೀನಿಂಗ್‌, ಫೆä್ಲೕರ್‌ ಕ್ಲೀನಿಂಗ್‌, ಬಾತ್‌ರೂಮ್‌ ಟಾಯ್ಲೆಟ್‌ ಕ್ಲೀನಿಂಗ್‌ ಹೀಗೆ ಮನೆ, ಆಫೀಸ್‌, ಹಾಸ್ಪಿಟಲ್‌ಗಳ ಸ್ವಚ್ಛತೆಗಾಗಿ ಬೇರೆ ಬೇರೆ ಬಗೆಯ ಉತ್ಪನ್ನಗಳು ಈ ಫೆä್ಲೕರೋಮಾ ಬ್ರ್ಯಾಂಡ್‌ನಲ್ಲಿ ಲಭ್ಯ.

ಮಹತ್ವಾಕಾಂಕ್ಷಿ ಉದ್ಯಮಿಯ ಸಾಧನೆ ಪುಟಗಳು

ಆಶಾ ಬ್ಯುಸಿನೆಸ್‌ ಹಿನ್ನೆಲೆಯಿಂದ ಬಂದವರಲ್ಲ. ಇವರ ತಂದೆ ತಾಯಿ ಸರ್ಕಾರಿ ಉದ್ಯೋಗಿಗಳು. ಆದರೆ ಆಶಾ ಅವರ ಮನೆಯ ಆಸುಪಾಸಿನಲ್ಲಿ ಅನೇಕ ಉದ್ಯಮಿಗಳಿದ್ದರು. ಈ ಎಳೆಯ ಪೋರಿಗೆ ಅವರ ಶ್ರೀಮಂತಿಕೆ ಕಂಡು ಅಚ್ಚರಿಯಾಗುತ್ತಿತ್ತು.

‘ಅವರೆಲ್ಲ ಹೆಚ್ಚು ಹಣ ಮಾಡ್ತಿದ್ದರು, ಹೆಚ್ಚು ದುಡಿಯುತ್ತಲೂ ಇದ್ದರು. ಇದೆಲ್ಲಾ ಹೇಗೆ ಸಾಧ್ಯ ಅಂತ ಚಿಕ್ಕವಳಿದ್ದಾಗ ಅಚ್ಚರಿಯಾಗುತ್ತಿತ್ತು. ಅದರ ಜೊತೆಗೆ ನಾನೂ ಅವರ ಥರ ಆಗಬೇಕೆಂಬ ಆಸೆಯೂ ಮೊಳೆಯುತ್ತಿತ್ತು. ಆ ಕನಸನ್ನು ದೊಡ್ಡವಳಾಗೋ ತನಕವೂ ಪೋಷಿಸುತ್ತಾ ಬಂದೆ. ಆದರೆ ಪರಿಸ್ಥಿತಿ ನಾನಂದುಕೊಂಡ ಹಾಗಿರಲಿಲ್ಲ’ ಅನ್ನುತ್ತಾರೆ ಆಶಾ. ಇವರು ಬಿಎಸ್‌ಸಿ ಮುಗಿಸಿ ತನ್ನ ಕನಸಿನ ಉದ್ಯಮ ಜಗತ್ತಿನ ಬಗ್ಗೆ ತರಬೇತಿ ಪಡೆಯಬೇಕು ಅಂತ ಟ್ರೈನಿಂಗ್‌ಗೆ ಬಂದರೆ ಅಲ್ಲಿಯವರು ಇವರನ್ನು ನಿರಾಸೆ ಮಾಡಿ ಹಿಂದಕ್ಕೆ ಕಳಿಸುತ್ತಾರೆ, ಯಾವುದಾದರೂ ಉದ್ಯೋಗ ಹಿಡಿಯುವಂತೆ ಅಥವಾ ಓದು ಮುಂದುವರಿಸುವಂತೆ ಸಲಹೆ ನೀಡುತ್ತಾರೆ. ಅದರಂತೆ ಇವರು ಕಂಪೆನಿಯಲ್ಲಿ ಕೆಮಿಸ್ಟ್‌ ಆಗಿ ಕೆಲಸಕ್ಕೆ ಸೇರುತ್ತಾರೆ. ಆದರೂ ಉದ್ಯಮಿಯಾಗಿ ಸ್ವತಂತ್ರ ಉದ್ದಿಮೆ ನಡೆಸುವ ಕನಸು ಜೀವಂತವಾಗಿರುತ್ತದೆ. ಮುಂದೆ ಮದುವೆಯಾದ ಬಳಿಕ ಪತಿಯ ಮುಂದೆ ತಮ್ಮ ಕನಸನ್ನು ಬಿಚ್ಚಿಡುತ್ತಾರೆ. ಪತಿ ಅರುಣ್‌ ಅವರದೂ ಸಮಾನ ಆಸಕ್ತಿ. ಅವರಾಗಲೇ ಖಾಸಗಿ ಕಂಪೆನಿಯಲ್ಲಿ ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲಸ ಮಾಡಿ ಅನುಭವವಿದ್ದವರು. ಸ್ವತಂತ್ರ ಉದ್ದಿಮೆ ನಡೆಸುವ ಬಗ್ಗೆ ಅವರಿಗೂ ಆಸಕ್ತಿ ಇತ್ತು. ಆಶಾ ಅವರು ಉತ್ಪನ್ನಗಳ ತಯಾರಿಕೆ, ನಿರ್ವಹಣೆಗೆ ಮುಂದಾದರೆ, ಅರುಣ್‌ ಅವರು ಮಾರ್ಕೆಟಿಂಗ್‌ ಮೂಲಕ ಬೆನ್ನೆಲುಬಾಗಿ ನಿಲ್ಲುತ್ತಾರೆ.

ಸ್ವಚ್ಛತೆ ಕಾಪಾಡೋ ಕೊರೋನಾ ವಾರಿಯರ್ಸ್‌ಗೆ 10 ತಿಂಗಳಿಂದ ವೇತನವಿಲ್ಲ 

ಆರಂಭದಲ್ಲಿ ಇವರ ಬಳಿ ಎರಡು ಆಯ್ಕೆಗಳಿದ್ದವು. ಒಂದು ಆಹಾರ ಉತ್ಪನ್ನ ತಯಾರಿಕೆ ಇನ್ನೊಂದು ಕೆಮಿಕಲ್ಸ್‌ ಉತ್ಪಾದನೆ. ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿ ಅನೇಕ ಸವಾಲುಗಳಿದ್ದವು. ಹೀಗಾಗಿ ಕೆಮಿಕಲ್ಸ್‌ ಉದ್ಯಮವೇ ಹೆಚ್ಚು ಸೂಕ್ತ ಎಂದು ಆ ಉದ್ಯಮ ಆರಂಭಿಸಲು ಮುಂದಾದರು. ‘ಆ ಕಾಲದಲ್ಲಿ ಹೆಣ್ಮಗಳೊಬ್ಬಳು ಧೈರ್ಯವಾಗಿ ಮುಂದೆ ಬಂದು ತಾನೊಂದು ಉದ್ಯಮ ಶುರು ಮಾಡುತ್ತೇನೆ ಅಂದರೆ ಲೋನ್‌ ಕೊಡಲು ಯಾವ ಬ್ಯಾಂಕ್‌ಗಳೂ ಮುಂದೆ ಬರುತ್ತಿರಲಿಲ್ಲ. ಆಕೆಯ ಜೊತೆಗೆ ತಂದೆಯೋ, ಗಂಡನೋ ಬಂದು ಆಕೆ ಮಾಡಬಲ್ಲಳು ಅಂತ ಧೈರ್ಯ ನೀಡಿ ಕನ್ವಿನ್ಸ್‌ ಮಾಡಿಸಿದರೆ ಮಾತ್ರ ಸಾಲ ಸಿಗುತ್ತಿತ್ತು. ಈಗ ಸಾಲವೇನೋ ಮೊದಲಿಗಿಂತ ಸಲೀಸಾಗಿ ಸಿಗುತ್ತಿದೆ. ಆದರೆ ಸವಾಲುಗಳು ಇದ್ದೇ ಇವೆ’ ಎನ್ನುತ್ತಾರೆ ಆಶಾ. ಆರಂಭಿಕವಾಗಿ ಉದ್ಯೋಗಿನಿ ಸ್ಕೀಮ್‌ ಮೂಲಕ ಸಾಲ ಪಡೆದು, ಸುಮಾರು 3 ಲಕ್ಷ ರು. ಬಂಡವಾಳ ಒಟ್ಟು ಮಾಡಿ ಆಶಾ ಹಾಗೂ ಅರುಣ್‌ ಅವರು ಹೊಸ ಉದ್ಯಮ ಶುರು ಮಾಡಿಯೇ ಬಿಡುತ್ತಾರೆ. ಹೀಗೆ ‘ಆಶಾ ಕೆಮಿಕಲ್ಸ್‌’ನ ಹುಮ್ಮಸ್ಸಿನ ನಡಿಗೆ ಆರಂಭವಾಗುತ್ತದೆ. ಹೀಗೆ ಮುಂದಡಿಯಿಟ್ಟಈ ದಂಪತಿ ಉದ್ಯಮರಂಗದಲ್ಲಿ ಈವರೆಗೆ ಹಿಂತಿರುಗಿ ನೋಡಿಲ್ಲ.

ಈ ಮಟ್ಟಿನ ಯಶಸ್ಸು ಹೇಗೆ ಸಾಧ್ಯವಾಯಿತು?

ಈ ಪ್ರಶ್ನೆಗೆ ಅರುಣ್‌ ಅವರು ನೀಡುವ ಉತ್ತರ ಹೀಗಿದೆ- ‘ಒಂದೇ ಉತ್ಪನ್ನದಿಂದ ಹೆಚ್ಚು ಲಾಭ ಪಡೆಯೋದು ಕಷ್ಟಅಂತ ಅನಿಸಿದ್ದೇ ಹೊಸ ಹೊಸ ಉತ್ಪನ್ನಗಳನ್ನು ಶುರು ಮಾಡಿದೆವು. ಬೇರೆ ಎಜನ್ಸಿಗಳು ಅಥವಾ ಮಧ್ಯವರ್ತಿಗಳ ಹಿಂದೆ ಹೋಗದೇ ನಾವೇ ನೇರ ಶಾಪ್‌ಗಳನ್ನು ಸಂಪರ್ಕಿಸಿ ಉತ್ಪನ್ನಗಳನ್ನು ಮಾರಾಟಕ್ಕಿಟ್ಟಿವು. ನಮ್ಮ ಉತ್ಪನ್ನಗಳ ಗುಣಮಟ್ಟಉತ್ತಮವಾಗಿತ್ತು, ಬೆಲೆಯೂ ನ್ಯಾಯಬದ್ಧವಾಗಿತ್ತು, ಪ್ಯಾಕಿಂಗ್‌ ಚೆನ್ನಾಗಿತ್ತು. ಹೀಗಾಗಿ ಗ್ರಾಹಕರನ್ನು ತಲುಪೋದು ಕಷ್ಟಆಗಲಿಲ್ಲ.

ಒಬ್ಬ ವ್ಯಕ್ತಿಯಿಂದ ಶುರುವಾದ ಉದ್ಯಮದಲ್ಲಿ ಈಗ 205 ಜನ ಡಿಸ್ಟ್ರಿಬ್ಯೂಟ​ರ್‍ಸ್ ಇದ್ದಾರೆ. ಇಡೀ ರಾಜ್ಯದಲ್ಲಿ ನಾವು ನಂ.1 ಸ್ಥಾನದಲ್ಲಿ ನಲ್ಲಿ ಇದ್ದೇವೆ. 26 ಸೇಲ್ಸ್‌ ರೆಪ್‌ಗಳಿದ್ದಾರೆ. ಯಾವ ಹಳ್ಳಿಯಲ್ಲೂ ನಮ್ಮ ಉತ್ಪನ್ನ ಲಭ್ಯವಾಗುತ್ತಿದೆ. 3.5 ಲಕ್ಷ ರು.ನಲ್ಲಿ ಶುರುವಾದ ಉದ್ಯಮ ಈಗ 12 ಕೋಟಿ ರು.ಗೆ ಬಂದು ನಿಂತಿದೆ. ಮುಂದಿನ ಹತ್ತು ವರ್ಷದಲ್ಲಿ ಇದನ್ನು 100 ಕೋಟಿಗೆ ಏರಿಸುವ ವಿಶ್ವಾಸ ಇದೆ.

ಉದ್ಯಮದಲ್ಲಿ ನೀವು ಬೆಳವಣಿಗೆ ಸಾಧಿಸಬೇಕು ಅಂದರೆ ಹೆಚ್ಚೆಚ್ಚು ಇನ್‌ವೆಸ್ಟ್‌ ಮಾಡುತ್ತಾ ಹೋಗಬೇಕು. ಲಾಭವನ್ನು ಮತ್ತೆ ಉದ್ಯಮಕ್ಕೇ ಹಾಕಬೇಕು. ಖರ್ಚು ಹೆಚ್ಚಾದಂತೆ ನಮ್ಮ ಗುರಿಯೂ ವಿಸ್ತಾರವಾಗುತ್ತದೆ’ ಎನ್ನುತ್ತಾರವರು.

ಬ್ಲೀಚ್‌ ಬಳಸಿ ಆದ್ರೆ ಈ ರೀತಿ ಅಲ್ಲ!

ಇತರೇ ಕಂಪೆನಿಗಳು ಅದರಲ್ಲೂ ಮಲ್ಟಿನ್ಯಾಶನಲ್‌ ಕಂಪೆನಿಗಳ ಜೊತೆಗೆ ಹೇಗೆ ಸ್ಪರ್ಧೆ ಎದುರಿಸುತ್ತೀರಿ ಅಂದರೆ, ‘ಅವರಿಗೆ ನಾವು ಸ್ಪರ್ಧಿಗಳೇ ಹೊರತು, ನಮಗೆ ಅವರು ಸ್ಪರ್ಧಿಗಳಲ್ಲ’ ಅನ್ನುತ್ತಾರೆ ಅರುಣ್‌. ‘ಅವರಿಂದ ಗುಣಮಟ್ಟದ ವಸ್ತುವನ್ನು, ಉತ್ತಮ ಬೆಲೆಯಲ್ಲಿ ಕೊಡುವುದು ಸಾಧ್ಯ ಅಂದರೆ ಅದು ನಮಗೂ ಸಾಧ್ಯವಾಗಬೇಕು. ಏಕೆಂದರೆ ನಮ್ಮ ದೇಶಾದ್ಯಂತ ಸರಬರಾಜಾಗುವ ಕಚ್ಚಾವಸ್ತುಗಳಲ್ಲಿ ವ್ಯತ್ಯಾಸ ಇರೋದಿಲ್ಲ. ಯಾವುದೋ ದೇಶದಿಂದ ಬಂದವರು ನಮ್ಮ ದೇಶದಲ್ಲಿ ವ್ಯಾಪಾರ ಮಾಡೋದಕ್ಕಿಂತ ಚೆನ್ನಾಗಿ ನಾವು ಬ್ಯುಸಿನೆಸ್‌ ಮಾಡಬಹುದು. ಆದರೆ ಜನ ಇತ್ತೀಚೆಗೆ ಬ್ರ್ಯಾಂಡ್‌ಗೆ ಫೇವರ್‌ ಆಗುತ್ತಿದ್ದಾರೆ. ನಮ್ಮ ನೆಲದ ಉದ್ಯಮಗಳು ಎಷ್ಟೇ ಉತ್ತಮ ಗುಣಮಟ್ಟದ ಉತ್ಪನ್ನ ನೀಡಿದರೂ ಬ್ರ್ಯಾಂಡ್‌ ವಾಲ್ಯೂ ಇಲ್ಲದೇ ಜನರ ಗಮನ ಅಷ್ಟಾಗಿ ಸೆಳೆಯುತ್ತಿಲ್ಲ. ಆದರೆ ನಾವು ಫೆä್ಲೕರೋಮಾ ಬ್ರ್ಯಾಂಡ್‌ ಮೂಲಕ ಸಾಕಷ್ಟುಪ್ರಚಾರ ಕಾರ್ಯವನ್ನೂ ನಡೆಸಿ ಮುನ್ನೆಲೆಗೆ ಬರುತ್ತಿದ್ದೇವೆ’ ಅನ್ನುತ್ತಾರೆ.

ಉದ್ಯಮಕ್ಕಿಳಿದ ಮೇಲೆ ಸ್ತ್ರೀ ಪುರುಷ ಅಂತೆಲ್ಲ ಇರಲ್ಲ!

‘ನೀವೊಬ್ಬ ಉದ್ಯಮಿ ಅಂತ ಗುರುತಿಸಿಕೊಂಡ ಮೇಲೆ ನಿಮ್ಮ ಕ್ಷೇತ್ರದ ಬಗ್ಗೆ ಜ್ಞಾನ ಹೆಚ್ಚಿಸುತ್ತಲೇ ಹೋಗಬೇಕು. ಹೊಸದನ್ನು ಸೃಷ್ಟಿಸಬೇಕು, ಅಪ್‌ಡೇಟ್‌ ಆಗಬೇಕು. ಹೆಣ್ಣು ಅನ್ನುತ್ತಾ ಅಪ್‌ಡೇಟ್‌ ಆಗದಿದ್ದರೆ, ನಿಮ್ಮನ್ನು ಬದಿಗೆ ಸರಿಸಿ ಉಳಿದವರು ಮುಂದಕ್ಕೋಗುತ್ತಾ ಇರುತ್ತಾರೆ. ಆದರೆ ಹೆಣ್ಣುಮಕ್ಕಳಿಗಾಗಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಕೆ ಮಾಡಿಕೊಳ್ಳಿ’ ಅಂತ ಸಲಹೆ ನೀಡುತ್ತಾರೆ ಆಶಾ. ಉದ್ಯಮ ರಂಗಕ್ಕೆ ಇಳಿಯಬಯಸುವವರಿಗೆ ಅವರು ಸದಾ ಪ್ರೋತ್ಸಾಹ ನೀಡುತ್ತಾರೆ. ಜೊತೆಗೆ ಇಲ್ಲಿರುವ ಚಾಲೆಂಜ್‌ಗಳ ಬಗ್ಗೆ ತಿಳಿಸುತ್ತಾರೆ. ಇವರ ಫ್ಯಾಕ್ಟರಿಯಲ್ಲಿ ಅತೀ ಹೆಚ್ಚು ಹೆಣ್ಣುಮಕ್ಕಳಿಗೆ ಉದ್ಯೋಗ ನೀಡುವ ಮೂಲಕ ಸ್ತ್ರೀ ಸಬಲೀಕರಣಕ್ಕೆ ಮುಂದಾಗಿದ್ದಾರೆ. ಜೊತೆಗೆ ಇಲ್ಲಿರುವ ಅಷ್ಟೂಜನ ಕೆಲಸಗಾರರಿಗೆ ಪಿಎಫ್‌, ಇಎಸ್‌ಐ ಸೌಲಭ್ಯ ಆರಂಭದಿಂದಲೂ ನೀಡುತ್ತಾ ಬಂದಿದ್ದಾರೆ. ಹಾಗಾಗಿ ಕೆಲಸಗಾರರೂ ಶ್ರಮ ವಹಿಸಿ ದುಡಿಯುತ್ತಾರೆ.

‘ಆಶಾ ಕೆಮಿಕಲ್ಸ್‌’ ನಿಂದ ‘ಫೆä್ಲರೋಮಾ’ ಬ್ರ್ಯಾಂಡ್‌ ಸೃಷ್ಟಿಸಿ ಉದ್ಯಮ ಲೋಕದಲ್ಲಿ ಭರವಸೆ ಮೂಡಿಸಿರುವ ಆಶಾ ಅವರಿಗೆ ಕನ್ನಡ ಪ್ರಭ, ಸುವರ್ಣ ನ್ಯೂಸ್‌ ನೀಡುವ ‘ಉಜ್ವಲ ಉದ್ಯಮಿ ಪ್ರಶಸ್ತಿ’ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳು ಸಂದಿವೆ.

click me!