
ಗಂಡನ ಮನೆಗೆ ಮದುವೆಯಾಗಿ ಹೋದಾಗ ಸೊಸೆಯಾದವಳು ಸ್ವಲ್ಪ ಏನಾದ್ರೂ ತಪ್ಪು ಮಾಡಿದ್ರೆ, ಹೆಚ್ಚಿನ ಮನೆಯಲ್ಲಿ ಅವಳು ಕೇಳಿಸಿಕೊಳ್ಳಬೇಕಾದ ಡೈಲಾಗ್ ಒಂದೇ. ನಿಮ್ಮ ಅಮ್ಮ ಏನೂ ಕಲಿಸಿಲ್ವಾ, ಅಮ್ಮನ ಮನೆಯಲ್ಲಿ ಇದೇ ಕಲಿತೀರೋದಾ? ಅಮ್ಮ ಸರಿಯಾಗಿ ಕಲಿಸಿದ್ರೆ ಹೀಗೆ ಮಾಡ್ತಿರಲಿಲ್ಲ, ಅಮ್ಮ ಸರಿ ಕಲಿಸದೇ ಫ್ರೀ ಬಿಟ್ಟಿರೋದಕ್ಕೆ ಹೀಗೆ ಆಗಿದ್ದು... ಇತ್ಯಾದಿ ಇತ್ಯಾದಿ. ಅದರಲ್ಲಿಯೂ ಹೊಸದಾಗಿ ಮದುವೆಯಾಗಿ ಹೋದ ಬಹುತೇಕ ಯುವತಿಯರು ಈ ಡೈಲಾಗ್ಗಳನ್ನು ಅತ್ತೆ-ಮಾವನ ಬಾಯಿಯಿಂದಲೋ ಅಥ್ವಾ ಗಂಡನ ಬಾಯಿಯಿಂದಲೋ ಒಂದಲ್ಲಾ ಒಂದು ಬಾರಿ ಕೇಳಿಸಿಕೊಂಡಿರುತ್ತಾರೆ. ಇದರ ಬಗ್ಗೆ ಖ್ಯಾತ ಕರಿಕಥಾಗಾರ್ತಿ, ಹರಿಕಥೆ ಕ್ಷೇತ್ರದಲ್ಲಿ ಬಹುದೊಡ್ಡ ಖ್ಯಾತಿ ಗಳಿಸಿರುವ ಜಯ ಕಿಶೋರಿ ತುಂಬಾ ಚೆನ್ನಾಗಿ ಹೇಳಿದ್ದು, ಅದರ ವಿಡಿಯೋ ಈಗ ವೈರಲ್ ಆಗಿದೆ.
ಜಯ ಕಿಶೋರಿ ಅವರು ಹೇಳಿದ್ದೇನೆಂದರೆ, ಗಂಡನ ಮನೆಯಲ್ಲಿ ಹೆಚ್ಚಾಗಿ ಕೇಳುವ ಡೈಲಾಗ್ ನಿನ್ನ ಅಮ್ಮ ಏನೂ ಕಲಿಸಿಲ್ವಾ ಅನ್ನೋದು. ಈ ಮಾತನ್ನು ಕೇಳಿದಾಗಲೆಲ್ಲಾ ನನಗೆ ಒಂದೇ ಯೋಚನೆ ಹೊಳೆಯುತ್ತದೆ, ಅಮ್ಮನ ಮನೆ ಎನ್ನೋದು ಅಮ್ಮನ ಮನೆಯೋ ಅಥವಾ ಟ್ರೇನಿಂಗ್ ಸೆಂಟರೋ ಎನ್ನುವುದು. ಈ ಡೈಲಾಗ್ ಅತ್ತೆಯ ಮನೆಯವರು ತಮ್ಮ ಕಾಪಿರೈಟ್ ಎಂದುಕೊಂಡು ಬಿಟ್ಟಹಾಗಿದೆ... ಎಂದಿದ್ದಾರೆ. ಈ ಚಿಕ್ಕ ಭಾಷಣದ ತುಣುಕು ಸಕತ್ ವೈರಲ್ ಆಗಿದ್ದು, ಈ ಮಾತಿಗೆ ಸಹಸ್ರಾರು ಮಂದಿ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಇದು ನಿಜ ಎನ್ನುತ್ತಿದ್ದಾರೆ. ತಮಗೂ ಇಂಥ ಅನುಭವ ಆಗಿರುವ ಬಗ್ಗೆ ಕೆಲವು ಮಹಿಳೆಯರು ಹೇಳಿಕೊಂಡಿದ್ದರೆ, ಅತ್ತೆಯ ಮನೆಯಲ್ಲಿ ಅಮ್ಮನ ಬಗ್ಗೆ ಇಂಥ ಮಾತುಗಳನ್ನು ಕೇಳುವಾಗ ತುಂಬಾ ಕೋಪ ಬರುತ್ತದೆ ಎಂದಿದ್ದಾರೆ ಕೆಲವರು. ಇನ್ನು ಕೆಲವರು, ಯಾವುದೇ ಹೆಣ್ಣಿಗೆ ಅಮ್ಮನ ಬಗ್ಗೆ ಮಾತನಾಡಿದರೆ ಸಿಟ್ಟು ಬರುವುದು ಸಹಜ. ಇದೇ ಕಾರಣಕ್ಕೆ ಆಕೆಯನ್ನು ಅಮ್ಮನ ಹೆಸರಿನಲ್ಲಿ ರೇಗಿಸಿ, ಹೀಯಾಳಿಸುವುದರೆಂದರೆ ಅತ್ತೆಯ ಮನೆಯವರಿಗೆ ಏನೋ ಒಂಥರಾ ಖುಷಿ ಕೊಡುತ್ತದೆ ಎಂದಿದ್ದಾರೆ.
ಒಂದು ಪೌರಾಣಿಕ ಕಥೆಗೆ ಲಕ್ಷ ರೂಪಾಯಿ ಚಾರ್ಜ್ ಮಾಡುವ Jaya Kishori ಯಾರು? ಹರಿಕಥೆಗೂ ಇದೆ ಡಿಮ್ಯಾಂಡ್!
ಅಂದಹಾಗೆ ರಾಜಸ್ಥಾನದ ಜಯ ಕಿಶೋರಿ ಅವರು ಹರಿಕಥಾ ಕ್ಷೇತ್ರದಲ್ಲಿ ಎತ್ತಿದ ಕೈ. ಇನ್ಸ್ಟಾಗ್ರಾಮ್, ಫೇಸ್ಬುಕ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಅವರ ಸುದ್ದಿ, ಅವರ ಪ್ರವಚನಗಳು ಹರಿದಾಡುತ್ತಿರುತ್ತವೆ. ಹಾಗಾಗಿ ಅನೇಕ ಕನ್ನಡಿಗರಿಗೆ ಅವರ ಪರಿಚಯವಿದೆ. ಇವರ ಮೂಲ ಹೆಸರು ಜಯಾ ಶರ್ಮಾ. ಜುಲೈ 13, 1995 ರಂದು ರಾಜಸ್ಥಾನದ ಸಣ್ಣ ಹಳ್ಳಿಯಾದ ಸುಜನ್‌ಗಢದಲ್ಲಿ ಜನಿಸಿದ ಜಯಾ ಕಿಶೋರಿ ಸದ್ಯ ಕೊಲ್ಕತ್ತಾ (Kolkata) ದಲ್ಲಿ ನೆಲೆಸಿದ್ದಾರೆ. ಜಯಾ ಕಿಶೋರಿ ಬಿ.ಕಾಂ ವ್ಯಾಸಂಗದ ಜೊತೆಗೆ ಅಧ್ಯಾತ್ಮಕ್ಕೂ ಸಮಯ ಮೀಸಲಿಟ್ಟಿದ್ದರು. ಬಾಲ್ಯದಲ್ಲೇ ಭಜನೆ, ಗೀತಾ ವಾಚನವನ್ನೂ ಮಾಡುತ್ತಿದ್ದ ಜಯಾ ಕಿಶೋರಿ, ಆಧ್ಯಾತ್ಮಿಕತೆಗೆ ಹೆಚ್ಚು ಒಲವು ತೋರಿಸುತ್ತಾರೆ. ವೇದ, ಭಗವದ್ಗೀತೆ, ಶಾಸ್ತ್ರಗಳನ್ನೂ ಜಯಾ ಕಿಶೋರಿ ಅಧ್ಯಯನ ಮಾಡಿದ್ದಾರೆ.
ಜಯಾ ಕಿಶೋರಿ ಅವರ ಆಧ್ಯಾತ್ಮಿಕ ಪ್ರಯಾಣವು ಕೇವಲ 6-7 ವರ್ಷ ವಯಸ್ಸಿನಲ್ಲಿ ಪ್ರಾರಂಭವಾಯಿತು. ಕುಟುಂಬದಲ್ಲಿ ಅವರ ಅಜ್ಜಿ ಅವರ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದರು. ಅವರ ಅಜ್ಜಿಯರು ಅವರಿಗೆ ಶ್ರೀಕೃಷ್ಣನ ಕಥೆಗಳನ್ನು ಹೇಳುತ್ತಿದ್ದರು. ಕೇವಲ 9 ನೇ ವಯಸ್ಸಿನಲ್ಲಿ, ಕಿಶೋರಿ ಅವರು ಲಿಂಗಾಷ್ಟಕಂ, ಶಿವ ತಾಂಡವ ಸ್ತೋತ್ರಂ, ಮಧುರಾಷ್ಟಕಾಮ್ರ, ಶಿವಪಂಚಾಕ್ಷರ ಸ್ತೋತ್ರಂ, ದಾರಿದ್ರಯ್ ದಹನ್ ಶಿವ ಸ್ತೋತ್ರಂ ಮುಂತಾದ ಅನೇಕ ಸ್ತೋತ್ರಗಳನ್ನು ಕಂಠಪಾಠ ಮಾಡಿದ್ದರು. ಸಂಗೀತವನ್ನೂ ಹಾಡಲು ಆರಂಭಿಸಿದರು. ಕೇವಲ 10 ನೇ ವಯಸ್ಸಿನಲ್ಲಿ ಜಯಾ ಸಂಪೂರ್ಣ ಸುಂದರಕಾಂಡವನ್ನು ಪ್ರದರ್ಶಿಸಿದರು. ಅಲ್ಲಿಂದಲೇ ಅವರ ಆಧ್ಯಾತ್ಮಿಕ ಪಯಣ ಶುರುವಾಯ್ತು. ಜಯಾ ಕಿಶೋರಿ ಒಂದು ಕಥೆಗೆ ಲಕ್ಷ ರೂಪಾಯಿ ಶುಲ್ಕ ಪಡೆಯುತ್ತಾರೆ. ಆದರೆ ಅವರು ತಮ್ಮ ಗಳಿಕೆಯ ಹೆಚ್ಚಿನ ಭಾಗವನ್ನು ದಾನ (Donation) ಮಾಡುತ್ತಾರೆ. ತಮಗಾಗಿ ಜಯಾ ಕಿಶೋರಿ ಹೆಚ್ಚು ಖರ್ಚು ಮಾಡೋದಿಲ್ಲ. ಕಥೆಗಾರ್ತಿ ಜಯ ಕಿಶೋರಿ ಅವರು ಯಾವುದೇ ಕಥೆಯನ್ನು ಬರೆಯುವ ಮೊದಲು ಮುಂಗಡವನ್ನು ತೆಗೆದುಕೊಳ್ಳುತ್ತಾರೆ ಮತ್ತು ಕಥೆಯನ್ನು ಪೂರ್ಣಗೊಳಿಸಿದ ನಂತರ ಅವರು ಪೂರ್ಣ ಮೊತ್ತವನ್ನು ತೆಗೆದುಕೊಳ್ಳುತ್ತಾರೆ. ಪ್ರೀತಿಪಾತ್ರರಿಗೆ ಮತ್ತು ಬಡವರಿಗೆ ಉಚಿತವಾಗಿ ಕಥೆಗಳನ್ನು ಹೇಳುತ್ತಾರೆ. ಕೋರಿಕೆ ಮೇರೆಗೆ ಕೆಲವರಿಗೆ ಅವರು ಉಚಿತವಾಗಿ ಕಥೆ ಹೇಳ್ತಾರೆ.
ಮನಸೂರೆಗೊಳ್ಳುವಂತೆ ಭಜನೆ, ಕಥೆ ಹೇಳೋ ಜಯ ಕಿಶೋರಿ… ಕೋಟ್ಯಾಧಿಪತಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.