Heart Attack in Women: ಹೃದಯಾಘಾತಕ್ಕಿಂತ ಮೊದಲು ಮಹಿಳೆಯರಲ್ಲಿ ಕಾಣಿಸುತ್ತೆ ಈ ಲಕ್ಷಣ

By Suvarna News  |  First Published Mar 12, 2023, 7:00 PM IST

ಈಗ ಹೃದಯಾಘಾತದಕ್ಕೆ ವಯಸ್ಸಿನ ಮಿತಿಯಿಲ್ಲ. ಎಲ್ಲ ವಯಸ್ಸಿನ ಮಹಿಳೆಯರಿಗೆ ಹೃದಯ ಬಡಿತ ನಿಲ್ಲುವ ಸಾಧ್ಯತೆಯಿರುತ್ತದೆ. ಹೃದಯಾಘಾತ ನಿಮ್ಮನ್ನು ಕಾಡ್ಬಾರದು ಅಂದ್ರೆ ಅದ್ರ ಲಕ್ಷಣ ಹಾಗೂ ಅದ್ರಿಂದ ರಕ್ಷಣೆ ಪಡೆಯೋದು ಹೇಗೆ ಎಂಬುದು ನಿಮಗೆ ತಿಳಿದಿರಬೇಕು. 
 


ಈಗಷ್ಟೆ ಮಾತನಾಡಿದ್ರು, ಸ್ವಲ್ಪ ಹೊತ್ತಲ್ಲೇ ಸಾವಿನ ಸುದ್ದಿ ಬಂತು. ಹೃದಯಾಘಾತದಿಂದ ಸಾವನ್ನಪ್ಪಿದ್ದಾರಂತೆ. ಈ ಮಾತು ಈಗಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರ್ತಿದೆ. ಜಿಮ್ ನಲ್ಲಿ, ಪಾರ್ಕ್ ನಲ್ಲಿ, ಬಿಎಂಟಿಸಿ ಬಸ್ ನಲ್ಲಿ, ಮನೆಯಲ್ಲಿ, ಡಾನ್ಸ್ ಮಾಡ್ತಾ, ಮದುವೆ ಮನೆಯಲ್ಲಿ ಹೀಗೆ ಎಲ್ಲೆಂದರಲ್ಲಿ ಹೃದಯಾಘಾತದ ಪ್ರಕರಣ ದಿನ ದಿನಕ್ಕೂ ಹೆಚ್ಚಾಗ್ತಿದೆ. ಇದು ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲೂ ಭಯಹುಟ್ಟಿಸಿದೆ.

ಮೊನ್ನೆಯಷ್ಟೇ ಖ್ಯಾತ ನಟ ಸತೀಶ್ ಕೌಶಿಕ್ (Satish Kaushik) ಹೃದಯಾಘಾತ (Heart Attack) ದಿಂದ ನಿಧನರಾಗಿದ್ದಾರೆ. 2022 ಹಾಗೂ 2023ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. 25 ವರ್ಷಕ್ಕಿಂತ ಕೆಳಗಿರುವ ಜನರು ಕೂಡ ಈ ಹೃದಯಾಘಾತಕ್ಕೆ ಬಲಿಯಾಗ್ತಿದ್ದಾರೆ. ಕೆಟ್ಟ ಜೀವನಶೈಲಿ (Lifestyle) ಇದಕ್ಕೆ ಮುಖ್ಯ ಕಾರಣ ಎನ್ನಲಾಗ್ತಿದೆ. ಕೊರೊನಾ ಲಸಿಕೆ ನಂತ್ರ ಹೃದಯಾಘಾತದ ಸಂಖ್ಯೆ ಏರಿಕೆಯಾಗಿದೆ ಎಂಬ ವರದಿ ಕೂಡ ಹೊರಬಿದ್ದಿದೆ. ಅದೇನೇ ಇರಲಿ, ಹೃದಯಾಘಾತಕ್ಕಿಂತ ಮೊದಲು ನಮ್ಮಲ್ಲಿ ಕೆಲ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಅದನ್ನು ಗುರುತಿಸಿ ತಕ್ಷಣ ಚಿಕಿತ್ಸೆ ಪಡೆಯಬೇಕು. ಮಹಿಳೆ ಹಾಗೂ ಪುರುಷ ಇಬ್ಬರಲ್ಲೂ ರೋಗಲಕ್ಷಣಗಳು ಭಿನ್ನವಾಗಿರುತ್ತವೆ. ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ. 

Latest Videos

undefined

ಭಾರತದ ಯಾವ ನಗರ ಮಹಿಳೆಯರಿಗೆ ಹೆಚ್ಚು ಸೇಫ್‌..ಬೆಂಗಳೂರಿಗೆ ಎಷ್ಟನೇ ಸ್ಥಾನ?

ಅನೇಕ ಮಹಿಳೆಯರಿಗೆ ಕಾಣಿಸಲ್ಲ ಹೃದಯದ ನೋವು : ಪುರುಷರಲ್ಲಿ ಹೃದಯಾಘಾತದ ಸಾಮಾನ್ಯ ಲಕ್ಷಣವೆಂದರೆ ಹೃದಯ ನೋವು. ಆದರೆ ಅನೇಕ ಮಹಿಳೆಯರಿಗೆ ಹೃದಯಾಘಾತವಾಗುವ ಮೊದಲು ಎದೆನೋವು ಉಂಟಾಗುವುದಿಲ್ಲ. ಕೆಲ ಮಹಿಳೆಯರಿಗೆ ಎದೆಯಿಂದ ಬೆನ್ನಿನವರೆಗೆ ನೋವು, ದವಡೆ ಮತ್ತು ತೋಳುಗಳ ನೋವು ಕಾಣಿಸುತ್ತದೆ. ಈ ರೋಗ ಲಕ್ಷಣ ಪುರುಷರಲ್ಲೂ ಕಾಣಿಸುತ್ತದೆ. ಹೃದಯಾಘಾತಕ್ಕೊಳಗಾಗುವ ಮಹಿಳೆಯರು ಬೆನ್ನು, ಕುತ್ತಿಗೆ ಮತ್ತು ದವಡೆ ನೋವಿನಿಂದ ಬಳಲುತ್ತಾರೆ ಎಂದು ಕೆಲ ಅಧ್ಯಯನಗಳು ಹೇಳಿವೆ. 

ಮಹಿಳೆಯರಲ್ಲಿ ಕಾಣಿಸುತ್ತೆ ಈ  ರೋಗಲಕ್ಷಣ : ಹೃದಯಾಘಾತದ ಸಮಯದಲ್ಲಿ  ಮಹಿಳೆಯರು ವಾಕರಿಕೆ, ವಾಂತಿ, ದವಡೆ, ಕುತ್ತಿಗೆ ಅಥವಾ ಮೇಲಿನ ಬೆನ್ನಿನಲ್ಲಿ ನೋವು, ಎದೆಯ ಕೆಳಭಾಗ ಅಥವಾ ಹೊಟ್ಟೆಯಲ್ಲಿ ನೋವು, ಉಸಿರಾಟದ ತೊಂದರೆ, ಮೂರ್ಛೆ, ಅಜೀರ್ಣ ಮತ್ತು ತೀವ್ರ ಆಯಾಸವನ್ನು ಅನುಭವಿಸಬಹುದು. ಇದಲ್ಲದೆ, ನಿದ್ರೆಯ ತೊಂದರೆಗಳು, ಆತಂಕ, ತಲೆತಿರುಗುವಿಕೆ, ಅಜೀರ್ಣ, ಅನಿಲ ರಚನೆಯ ಲಕ್ಷಣಗಳನ್ನು ಸಹ ಕಾಣಬಹುದು.

ಈಗಿನ ಹುಡುಗೀರೇಕೆ ಬೇಗ ಋತುಮತಿಯಾಗ್ತಾರೆ? ಇದು ಆರೋಗ್ಯವೋ, ಅನಾರೋಗ್ಯವೋ?

50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಅಪಾಯ ಹೆಚ್ಚು : ಋತುಬಂಧವು ಮಹಿಳೆಯರಲ್ಲಿ ಅನೇಕ ಆರೋಗ್ಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದ್ರಲ್ಲಿ ಹೃದಯದ ಸಮಸ್ಯೆ ಕೂಡ ಸೇರಿದೆ. ವರದಿಗಳ ಪ್ರಕಾರ, 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಹೃದಯಾಘಾತದ ಸಾವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ದೇಹದ ತೂಕ ಹೆಚ್ಚಾಗುವುದು, ವ್ಯಾಯಾಮದ ಕೊರತೆ, ಧೂಮಪಾನ, ಸಂಸ್ಕರಿಸಿದ ಆಹಾರ ಸೇವನೆಯಂತಹ ಸಮಸ್ಯೆಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ.  

ಹೃದಯಾಘಾತಕ್ಕೆ ಕಾರಣವೇನು? : ಪುರುಷರು ಅಥವಾ ಮಹಿಳೆಯರಿಬ್ಬರಲ್ಲೂ ಹೃದ್ರೋಗ ಕಾಣಿಸಿಕೊಳ್ಳಲು ಮುಖ್ಯ ಕಾರಣ ಅಧಿಕ ರಕ್ತದೊತ್ತಡ,  ಹೆಚ್ಚಾಗುವ ಕೊಲೆಸ್ಟ್ರಾಲ್‌, ಮಧುಮೇಹ, ಧೂಮಪಾನ, ವ್ಯಾಯಾಮ ಮಾಡದಿರುವುದು, ಕಿಡ್ನಿ ಕಾಯಿಲೆ ಮುಖ್ಯ ಕಾರಣವಾಗಿದೆ. 

ಹೃದಯಾಘಾತವನ್ನು ತಪ್ಪಿಸಲು ಮಹಿಳೆಯರು ಏನು ಮಾಡ್ಬೇಕು? : ಮಹಿಳೆಯರು ಹೃದಯಾಘಾತವನ್ನು ತಪ್ಪಿಸಿ ಆರೋಗ್ಯವಾಗಿರಬೇಕೆಂದ್ರೆ ಕೆಲ ನಿಯಮ ಪಾಲನೆ ಮಾಡ್ಬೇಕು. ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬೇಕು. ಪೌಷ್ಟಿಕಾಂಶಗಳಿಂದ ಕೂಡಿದ ಆಹಾರವನ್ನು ಸೇವಿಸಬೇಕು. ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು. ತೂಕವನ್ನು ಕಾಪಾಡಿಕೊಳ್ಳಬೇಕು. ಪ್ರತಿ ದಿನ ವಾಕಿಂಗ್ ಮಾಡಬೇಕು. ಪ್ರತಿದಿನ 15 ನಿಮಿಷಗಳ ಕಾಲ ಧ್ಯಾನ ಮತ್ತು ಯೋಗ ಮಾಡಬೇಕು. ಮಧುಮೇಹದಿಂದ ಬಳಲುತ್ತಿದ್ದರೆ ಸಕ್ಕರೆಯ ಪ್ರಮಾಣವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬೇಕು. ರಕ್ತ ಸಂಬಂಧಿಗಳಲ್ಲಿ ಹೃದಯದ ಸಮಸ್ಯೆಯಿದ್ರೆ ಆರಂಭದಿಂದಲೇ ಚಿಕಿತ್ಸೆ ಪಡೆಯಬೇಕು. 

click me!