ಅಮ್ಮನಾದ ಬಳಿಕದ ಸವಾಲುಗಳು ಸುಲಭವಿಲ್ಲ, ಆದರೆ ನೀವು ಒಂಟಿಯಲ್ಲ!

By Web DeskFirst Published Nov 4, 2019, 6:12 PM IST
Highlights

ಅಮ್ಮಾ ಎಂದು ಕರೆವ ಕೂಸು ಕೈಯ್ಯಲಿದೆ. ಪೂರ್ತಿ ನಿಮ್ಮ ಮೇಲೆಯೇ ಅವಲಂಬಿತವಾಗಿರುವ ಹೂವಿನ ಎಸಳಿನಂಥ ಈ ಪುಟ್ಟ ಜೀವವನ್ನು ಜತನ ಮಾಡುವ ಜವಾಬ್ದಾರಿ- ಆಗಾಗ ಒಂದಿಷ್ಟು ನೆಗೆಟಿವ್ ಅನುಭವಗಳನ್ನೂ ತರುತ್ತದೆ. ಆದರೆ, ಖುಷಿಯಿಂದಿರಿ, ಇವೆಲ್ಲ ಕೆಲ ದಿನಗಳ ಕಷ್ಟವಷ್ಟೇ.

ಮೊದಲ ಬಾರಿ ಅಮ್ಮನಾಗುವ ಖುಷಿಗಾಗಿ ಅದೆಷ್ಟು ವರ್ಷಗಳಿಂದ ಹಂಬಲಿಸಿರುತ್ತೀರೋ?! ಹಾಗೆ ಕನಸು ನನಸಾಗಿ ಕೂಸು ಕೈಲಿರುವ ಈ ಹೊತ್ತು, ಈ ಹೊಸ ಜವಾಬ್ದಾರಿ, ಹೊಸ ಜೀವನ ಅಂದುಕೊಂಡಷ್ಟು ಸುಲಭದ್ದಲ್ಲ, ಕೇವಲ ಸಂತೋಷವೇ ಹಾದಿ ತುಂಬಾ ಚೆಲ್ಲಿಲ್ಲ ಎಂಬುದು ಅರಿವಾಗತೊಡಗಿದೆ. ಬದುಕಿನ ಬೇರೆಲ್ಲ ಕೆಲಸಗಳನ್ನು ಗಂಟುಮೂಟೆ ಕಟ್ಟಿಟ್ಟು 24/7 ಮಗುವಿನ ಲಾಲನೆ ಪಾಲನೆಯೇ ಕೆಲಸ.

ಆರೋಗ್ಯಕರವಾಗಿರಲಿ ಮಕ್ಕಳ ಡಯಟ್‌, ದೂರವಿರಲಿ ಬ್ರೆಡ್ ಬಿಸ್ಕೇಟ್ ಡೋನಟ್!

ಮಗು ಬೆಳೆಯುವುದನ್ನು ನೋಡುವುದು ಅತ್ಯಂತ ಸಂತೋಷದ ವಿಷಯವೇ. ಆದರೂ, ಒಂದು ಕ್ಷಣವೂ ನಮಗಾಗಿ ಸಿಗದೆ, ಪತಿಯೊಂದಿಗೆ ಮುಂಚಿನಂತೆ ಮಾತನಾಡಲಾಗದೆ, ನಿದ್ದೆಯಿಲ್ಲದ ಕಣ್ಣುಗಳು, ಹೊರ ಹೋಗಲಾಗುವುದಿಲ್ಲ, ಎಲ್ಲೇ ಹೋದರೂ ಮಗುವನ್ನು ಹೊತ್ತೇ ತಿರುಗಬೇಕು, ನಮ್ಮ ಬಗ್ಗೆ ನಮಗೆ ಯೋಚಿಸಲು ಕೊಂಚವೂ ಪುರುಸೊತ್ತಿಲ್ಲದ, ಬೇರೆ ಎಲ್ಲರ ಗಮನ ನಮ್ಮಿಂದ ಮಗುವಿಗೆ ಶಿಫ್ಟ್ ಆದ ಈ ಹೊತ್ತಿನಲ್ಲಿ ಆಗಾಗ ಸುಮ್ಮನೇ ಅಳು ಬರುವುದು, ಖಿನ್ನತೆ, ಒಂಟಿತನ ಕಾಡುವುದು ಎಲ್ಲವೂ ಸಾಮಾನ್ಯ. ಆದರೆ, ಈ ಹಾದಿಯಲ್ಲಿ ನಾವು ಒಂಟಿಯಲ್ಲ ಎಂಬ ವಿಷಯ ಸ್ವಲ್ಪ ಸಮಾಧಾನದಾಯಕ. ಮೊದಲ ಬಾರಿ ತಾಯಿಯಾದ ಮಹಿಳೆಯರು ಅನುಭವಿಸುವ ಕೆಲ ನೆಗೆಟಿವ್ ಅನುಭವಗಳಿವು,

1. ನಿದ್ರೆ ಎಂಬ ಮರೀಚಿಕೆ.

ಮುಂಚೆ ನಿದ್ರೆಯ ಅವಧಿಯಲ್ಲಿ 20 ನಿಮಿಷ ಕಡಿಮೆಯಾದರೂ ಆಕಾಶ ತಲೆ ಮೇಲೆ ಬಿದ್ದಂತಾಡುತ್ತಿದ್ದ ನಿಮಗೀಗ 20 ನಿಮಿಷವಾದರೂ ಆರಾಮಾಗಿ ನಿದ್ರೆ ಮಾಡಲು ಸಿಗುವುದೇ ಎಂದು ಕನವರಿಸುವಂತಾಗಿದೆ. ಪ್ರತಿ ಗಂಟೆಗೆರಡು ಬಾರಿ ಏಳು, ಮಗುವಿಗೆ ಹಾಲೂಡಿಸು, ಬಟ್ಟೆ ಬದಲಿಸು, ಹೊಟ್ಟೆ ನೋವಾಗುತ್ತಿದೆಯೇ ಪರೀಕ್ಷಿಸು, ತೊಟ್ಟಿಲು ತೂಗು ಎಂದು ಒಂದಾದ ಮೇಲೊಂದು ಕಾರಣ ನಿಮ್ಮನ್ನೆಚ್ಚರಿಸುತ್ತದೆ.

ಮಕ್ಕಳ ತಪ್ಪಿಗೆ ಶಿಕ್ಷೆ, ಹೇಗಿರಬೇಕು ಪೋಷಕರ ನಿರೀಕ್ಷೆ?

ಇದೇನು ಒಂದೆರಡು ದಿನಗಳ ಮಾತಲ್ಲ, ಹಲವಾರು ತಿಂಗಳು ಹೀಗೇ ಮುಂದುವರಿಯುವಷ್ಟರಲ್ಲಿ ತಲೆನೋವು, ಸಿಡುಕುತನ, ಮರೆವು, ಖಿನ್ನತೆ ಮುಂತಾದವು ಆವರಿಸಿಕೊಳ್ಳಬಹುದು. ಅದರಲ್ಲೂ ಮನೆಯ ಉಳಿದೆಲ್ಲರೂ ಒಳ್ಳೆಯ ನಿದ್ರೆ ಮಾಡುತ್ತಿದ್ದು, ತಾನು ಮಾತ್ರ ಎಲ್ಲವನ್ನೂ ತ್ಯಾಗ ಮಾಡಬೇಕಾಗಿದೆ ಎಂಬ ಯೋಚನೆಗಳು ಮತ್ತಷ್ಟು ನಿದ್ರೆಗೆಡಿಸುತ್ತವೆ. ಆದರೆ, ತಾಳ್ಮೆ ಕೆಡಬೇಡಿ. ಬೆಳಗಿನ ಹೊತ್ತಿನಲ್ಲಿ ಮಗು ಮಲಗಿದಾಗಲೆಲ್ಲ ನೀವೂ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಾಧ್ಯವಾದಷ್ಟು ಕೆಲಸಗಲಿಗೆ ಕುಟುಂಬಸ್ಥರ ಸಹಾಯ ಪಡೆಯಿರಿ.

2. ಹಾಲೂಡಿಸುವುದು ಹಾಲು ಕುಡಿದಷ್ಟು ಸುಲಭವಲ್ಲ

ಎದೆಹಾಲು ಕುಡಿಸುವುದು ಸರಳ ವಿಷಯವೇನಲ್ಲ. ಮಗುವನ್ನು ತಪ್ಪಾಗಿರಿಸಿಕೊಂಡರೆ ನೋವಾಗುವುದು ಖಚಿತ. ಇನ್ನು ಕೆಲವೊಮ್ಮೆ ಹಾಲು ತುಂಬಿ ಕಂಕುಳೆಲ್ಲ ನೋವು ಬಂದರೆ ಮತ್ತೆ ಕೆಲವೊಮ್ಮೆ ಪದೇ ಪದೆ ಹಾಲು ಕುಡಿಸಿ ನೋವು ಬರುತ್ತದೆ. ಇನ್ನು ಹಾಲಿಲ್ಲದೆ ಸಮಸ್ಯೆಯೂ ಆಗಬಹುದು. ದಿನವಿಡೀ ಪದೇ ಪದೆ ಹಾಲೂಡಿಸಬೇಕಾದ್ದರಿಂದ ಇದೊಂದು ಕಿರಿಕಿರಿಯ ಕೆಲಸ ಎನಿಸಲಾರಂಭವಾಗಬಹುದು.

ಮಕ್ಕಳು ಮೊಬೈಲ್ ಯೂಸ್ ಮಾಡ್ತಾರಂತ ಬೀಗಬೇಡಿ, ಅನಾರೋಗ್ಯಕ್ಕಿದು ದಾರಿ

ಎಲ್ಲಾದರೂ ಹೊರ ಹೋದರೆ, ನೆಂಟರಿಷ್ಟರ ಮನೆಗೆ ಹೋದರೆ ಖಾಸಗಿ ಕೋಣೆ ಹುಡುಕುವುದೇ ಕೆಲಸವಾಗುತ್ತದೆ. ಆದರೆ, ಈಗ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪೌಷ್ಠಿಕ ಆಹಾರ ಸೇವನೆ ಹಾಗೂ ಮಗುವಿನ ಬೆಳವಣಿಗೆಯತ್ತಲೇ ಹೆಚ್ಚು ಗಮನ ಹರಿಸಿ. ಇನ್ನೊಂದು ವರ್ಷದಲ್ಲಿ ಮಗು ಹಾಲಿನ ವಿಷಯಕ್ಕೆ ಈ ಮಟ್ಟಿನ ಅವಲಂಬನೆಯಿಂದ ಹೊರಬಂದಿರುತ್ತದೆ. 

3. ಇಷ್ಟದ ಬಟ್ಟೆ ಧರಿಸುವುದು ಕಷ್ಟದ ಮಾತು

ಗರ್ಭಿಣಿಯಾಗಿದ್ದಾಗ ನಿಮ್ಮ ಬಟ್ಟೆಗಳ್ಯಾವುದೂ ಅಳತೆಗೆ ಆಗದೆ ಹೋದಾಗೆಲ್ಲ, ಮಗು ಚೆನ್ನಾಗಿ ಬೆಳೆಯುತ್ತಿದೆಯೆಂದು ಖುಷಿ ಪಡುತ್ತಿದ್ದಿರಿ. ಇದೆಲ್ಲ ಕೆಲ ದಿನಗಳ ಮಾತು ಎಂದು ಸಮಾಧಾನಗೊಂಡಿದ್ದಿರಿ. ಆದರೆ ಈಗ ಮಗುವಾದ ಬಳಿಕವೂ ಹಳೆಯ ಯಾವ ಬಟ್ಟೆಯೂ ಹಿಡಿಯುತ್ತಿಲ್ಲ, ಜೊತೆಗೆ, ಪ್ರತಿ ಬಾರಿ ಬಟ್ಟೆ ಧರಿಸುವಾಗಲೂ ಮಗುವಿಗೆ ಹಾಲೂಡಿಸಲು ಇದು ಸರಿಯಾಗುತ್ತದೆಯೇ, ಮಗುವಾದ ಮೇಲೆ ಉಳಿದ ಹೊಟ್ಟೆಯನ್ನು ಈ ಬಟ್ಟೆ ಮರೆ ಮಾಚುತ್ತದೆಯೇ ಎಂದು ಯೋಚಿಸುವಂತಾಗಿದೆ. ಇದರಿಂದ ಮುಂಚಿನಂತೆ ಸ್ಟೈಲ್ ಆಗಿರಲು ಆಗುತ್ತಿಲ್ಲ ಎಂದು ಬೇಸರವಾಗಬಹುದು.

ಅಮ್ಮನಾದರೂ ರೊಮ್ಯಾಂಟಿಕ್ ಆಗಿರೋದು ಹೇಗೆ?

ಆದರೆ, ಚಿಂತಿಸದಿರಿ, ವರ್ಷವಾಗುವಷ್ಟರಲ್ಲಿ ನೀವು ಬಹುತೇಕ ಮುಂಚಿನ ಅಳತೆಗೆ ಹಿಂದಿರುಗಿರುತ್ತೀರಿ. ಸೊಂಟದ ಸುತ್ತಳತೆಯೂ ಇಳಿಯುತ್ತದೆ. ಸ್ವಲ್ಪ ವ್ಯಾಯಾಮ, ಹಾಗೂ ಸರಿಯಾದ ಆಹಾರ ಅಭ್ಯಾಸ ಮಾಡಿಕೊಳ್ಳಿ. ಇಷ್ಟಕ್ಕೂ ಇಷ್ಟರ ಮಟ್ಟಿನ ಬದಲಾವಣೆಗಳನ್ನು ಒಪ್ಪಿಕೊಳ್ಳುವಷ್ಟು ಯೋಗ್ಯ ಉಡುಗೊರೆಯಾಗಿ ನಿಮ್ಮ ಕಂದ ಕೈಗೆ ಬಂದಿದೆ ಎಂದ ಮೇಲೆ ಅಷ್ಟೊಂದು ಚಿಂತಿಸುವ ಅಗತ್ಯವಿಲ್ಲ. 

4. ಏಕಾಂಗಿಭಾವ

ಮಗುವಿನ ಜವಾಬ್ದಾರಿಯನ್ನು ಪತಿ ಹಾಗೂ ಕುಟುಂಬದವರು ಹಂಚಿಕೊಳ್ಳುತ್ತಿಲ್ಲ, ನನ್ನನ್ನು ಈಗ ಯಾರೂ ಪ್ರೀತಿಸುತ್ತಿಲ್ಲ, ಯಾರಿಗೂ ನನ್ನ ಭಾವನೆಗಳ ಬಗ್ಗೆ ಯೋಚನೆಯಿಲ್ಲ, ಎಲ್ಲರಿಗೂ ಮಗುವಷ್ಟೇ ಅಗತ್ಯ, ನಾನಲ್ಲ, ನಾನು ಒಂಟಿ ಎಂಬೆಲ್ಲ ಭಾವಗಳು ಈ ಬಾಣಂತನದ ಅವಧಿಯಲ್ಲಿ ಕಾಡುತ್ತವೆ. ಹೆಣ್ಣುಮಕ್ಕಳ ಈ ಒಂಟಿತನವನ್ನು ಹೆಚ್ಚಿನ ಪತಿರಾಯರು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಾರೆ. ಅಂಥದರ ನಡುವೆ ಮಗುವಿನ ಅಳುವನ್ನೂ ಕೆಲವೊಮ್ಮೆ ನಿಮ್ಮಿಂದ ಸಂಭಾಳಿಸಲು ಆಗುತ್ತಿಲ್ಲ ಎಂದರೆ ಮತ್ತಷ್ಟು ದುಃಖ ಆವರಿಸುತ್ತದೆ. ನಿಮ್ಮ ಈ ಭಾವನೆಗಳ ಕುರಿತು ಪತಿ ಹಾಗೂ ತಾಯಿಯೊಂದಿಗೆ ಹಂಚಿಕೊಳ್ಳಿ. 

click me!