ಬೇಡದ ವಸ್ತುಗಳಿವೆಯೇ ಮನೆಯಲ್ಲಿ?: ಬಿಸಾಡದೆ ಅಂದವಾಗಿಡುವ ಟಿಪ್ಸ್ ಇಲ್ಲಿವೆ

Published : Oct 31, 2019, 05:32 PM IST
ಬೇಡದ ವಸ್ತುಗಳಿವೆಯೇ ಮನೆಯಲ್ಲಿ?: ಬಿಸಾಡದೆ ಅಂದವಾಗಿಡುವ  ಟಿಪ್ಸ್ ಇಲ್ಲಿವೆ

ಸಾರಾಂಶ

ಹೆಚ್ಚಿನವರ ಮನೆಯಲ್ಲಿ ಅಗತ್ಯಕ್ಕಿಂತ ಅನಗತ್ಯ ವಸ್ತುಗಳ ಸಂಖ್ಯೆಯೇ ಜಾಸ್ತಿ. ಆ ಬಗ್ಗೆ ಗಮನ ಹರಿಸಿರುವುದಿಲ್ಲ ಅಷ್ಟೇ. ಅವೆಲ್ಲವನ್ನೂ ಅಗತ್ಯ ಇರುವವರಿಗೆ ನೀಡುವುದೋ, ಬಿಸಾಡುವುದೋ, ಮರುಮಾರಾಟ ಮಾಡುವುದೋ ಮಾಡಿ ಮನೆಯನ್ನು ಸುಂದರವಾಗಿರಿಸಿಕೊಳ್ಳಿ. 

ವಾರ್ಡ್ರೋಬ್ ತೆಗೆದ್ರೆ ಬಟ್ಟೆಗಳು ಬುತು ಬುತು ಉದುರುತ್ವೆ, ಸ್ಟೋರ್ ರೂಂನಲ್ಲಿ ಅಪ್ಪಅವ್ವ ಬಿಟ್ಟು ಮತ್ತೆಲ್ಲ ಇದೆ, ಹಳೆಯ ಮೊಬೈಲ್ ಫೋನ್‌ಗಳದೇ ಒಂದು ಅಂಗಡಿ ತೆಗೆಯಬಹುದೆಂಬಷ್ಟು ಚಾರ್ಜರ್ ಸಮೇತ ಬೀರುವಿನಲ್ಲಿ ಕುಳಿತಿವೆ, ಮಕ್ಕಳು ದೊಡ್ಡವರಾದ ಮೇಲೆ ಉಳಿದ ಅವರ ಹಳೆಯ ತೊಟ್ಟಿಲು, ಹಾಸಿಗೆ ಬಟ್ಟೆಗಳು, ವಾಕರ್ ಇತ್ಯಾದಿ ಕೋಣೆಯ ಬಹುಪಾಲನ್ನು ತಿಂದಿವೆ, ಚಪ್ಪಲಿಗಳಂತೂ ಹುಟ್ಟಿದ ಇಸವಿ ಮರೆತು ಗತಕಾಲದಿಂದಲೂ ಉಪಯೋಗವಿಲ್ಲದೆ ಆ್ಯಂಟಿಕ್ ಶೋಪೀಸ್‌ನಂತಾಗಿವೆ, ಮನೆಯಲ್ಲಿ ಸಾಮಾನುಗಳು ತುಂಬಿಕೊಂಡು ಸಂತೆ ಮಾರ್ಕೆಟ್‌ನಂತಾಗಿದ್ಯೇ? ಹಾಗಿದ್ದರೆ ಅವುಗಳನ್ನು ಹೇಗೆ ಖಾಲಿ ಮಾಡುವುದು, ಯಾವುದು ಕಸದ ಬುಟ್ಟಿಗೆ, ಯಾವುದು ಮರು ಮಾರಾಟಕ್ಕೆ, ಯಾವುದು ದಾನಕ್ಕೆ, ಯಾವುದು ರಿಸೈಕಲ್‌ಗೆ ಎಂದು ಇಲ್ಲಿದೆ ನೋಡಿ...

1. ಫ್ರೀ ಯಾರ್ಡ್ ಸೇಲ್
ನಿಮಗೆ ಬೇಡದ್ದರಿಂದ ಫಟಾಫಟ್ ಮುಕ್ತರಾಗಬೇಕೆಂದರೆ ಅದನ್ನು ಮನೆಯ ಹೊರಗೆ ಅಥವಾ ಯಾವುದಾದರೂ ಉದ್ಯಾನದ ಬಳಿ ಇಟ್ಟು 'ಫ್ರೀ' ಬೋರ್ಡ್ ಹಾಕಿಬಿಡಿ. ಎಲ್ಲವೂ ಖಾಲಿಯಾಗಲಿಲ್ಲವೆಂದರೂ ಶೇ.50ರಷ್ಟಾದರೂ ಖಾಲಿಯಾಗುತ್ತದೆ. ಜೊತೆಗೆ, ನಿಮಗೆ ಬೇಡದ್ದು, ಮತ್ಯಾರಿಗೋ ಅಗತ್ಯವಿರುವವರಿಗೆ ಸಿಗುತ್ತದೆ. 

ಕಿಟಕಿ ಪರದೆ ಹೇಳುತ್ತೆ ಅನೇಕ ಕಥೆ

2. ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಸೈಕಲ್
ಎಷ್ಟೇ ಹೊಸ ಟೆಕ್ನಾಲಜಿ ಎಂದು ಕೊಂಡಿದ್ದರೂ ವರ್ಷ ಕಳೆವಷ್ಟರಲ್ಲಿ ಹಳತಾಗಿಬಿಟ್ಟಿರುತ್ತದೆ. ಹೀಗಾಗಿ, ಮತ್ತೆ ಮತ್ತೆ ಹೊಸತನ್ನು ಕೊಳ್ಳುವ ಚಟ ಹಲವರಿಗೆ. ಆದರೆ ಇದರಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳು ತ್ಯಾಜ್ಯವಾಗಿ ಮನೆಯನ್ನು ತುಂಬುತ್ತವೆ. ಬಹುತೇಕ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಸಕ್ಕೆಸೆಯಬಾರದು. ಏಕೆಂದರೆ ಅವುಗಳಲ್ಲಿ ಅಪಾಯಕಾರಿ ವಿಷವುಳ್ಳ ಕೆಮಿಕಲ್ಸ್ ಮರ್ಕ್ಯುರಿ, ಲೆಡ್, ಕ್ರೋಮಿಯಂ ಮುಂತಾದವಿರುತ್ತವೆ. ಹಾಗಾಗಿ, ಹಳೆಯ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಚಾರ್ಜರ್‌ಗಳು, ಹಳೆ ಟಿವಿ, ಐರನ್ ಬಾಕ್ಸ್ ಮುಂತಾದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಅವುಗಳ ರಿಸೈಕ್ಲಿಂಗ್ ಸರ್ವೀಸ್‌ಗೆ ಕೊಡಿ. ಯಾವ ಬ್ರ್ಯಾಂಡ್‌ದಾದರೂ ಸರಿ, ಎಷ್ಟು ಹಳೆಯದಾದರೂ ಸರಿ ಅವು ರಿಸೈಕಲ್‌ಗೆ ಯೋಗ್ಯವಾಗಿರುತ್ತವೆ. ಈ ಬಗ್ಗೆ ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ ಸ್ಟೋರ್‌ಗಳಲ್ಲಿ ವಿಚಾರಿಸಬಹುದು. ಜೀರೋವೇಸ್ಟ್.ಕೋ.ಇನ್, ಅಟೆರೋಬೇ.ಕಾಂ ಮುಂತಾದ ಸಂಸ್ಥೆಗಳು ನಿಮ್ಮ ಇ-ತ್ಯಾಜ್ಯಕ್ಕೆ ಹಣವನ್ನು ಕೂಡಾ ನೀಡುತ್ತವೆ. 

3. ಮರದ ವಸ್ತುವನ್ನು ಗೊಬ್ಬರವಾಗಿಸಿ
ಮನೆ ಕಟ್ಟಲು ತಂದ ಮರ ಉಳಿದಿದ್ದರೆ, ಅದನ್ನು ಪುಡಿಯಾಗಿಸಿ, ನಿಮ್ಮ ತೋಟ, ಗದ್ದೆ, ಉದ್ಯಾನದ ಮಣ್ಣಿಗೆ ಸೇರಿಸಬಹುದು. ಇದು ಮಣ್ಣಿಗೆ ಪೋಷಕಸತ್ವಗಳನ್ನು ಸೇರಿಸಿ ಉದ್ಯಾನಕ್ಕೆ ಹೆಚ್ಚು ಆರೋಗ್ಯದ ಕಳೆ ತರುತ್ತದೆ. 

4. ಬೇಡದ ಬಟ್ಟೆಗಳ ವಿಲೇವಾರಿ
ಬಟ್ಟೆಗಳು ಎಷ್ಟು ಕೊಂಡರೂ ತೃಪ್ತಿ ಎಂಬುದು ದೂರದ ಮಾತೇ. ಹಾಗಂಥ ಇಡಲು ಜಾಗವೇ ಇಲ್ಲದಷ್ಟು ಬಟ್ಟೆ ತುಂಬಿಕೊಂಡರೂ ಅವುಗಳಲ್ಲಿ ಬಳಸುವುದು ಕೆಲವನ್ನು ಮಾತ್ರ. ಹಾಗಾಗಿ, ಮೂರು ತಿಂಗಳಿಗೊಮ್ಮೆ ಬಟ್ಟೆಗಳ ವಿಲೇವಾರಿ ಮಾಡುತ್ತಿರಿ. ಹೊಚ್ಚ ಹೊಸ ಬಟ್ಟೆಯಾಗಿದ್ದು, ಫಿಟ್ಟಿಂಗ್ ಸರಿಯಾಗಿಲ್ಲ ಎಂಬ ಕಾರಣಕ್ಕೋ, ಆ ಸ್ಟೈಲ್ ನಿಮಗೆ ಸೂಟ್ ಆಗುವುದಿಲ್ಲ ಎಂದೋ ಬದಿಗೆ ಕುಳಿತಿದ್ದರೆ ಅಂಥವನ್ನು ರಿಸೇಲ್ ಮಾಡಿ. ಈಗಂತೂ ಹಲವಾರು ಆ್ಯಪ್‌ಗಳು ಇಂಥ ರಿಸೇಲ್‌ಗೆ ಸಹಾಯ ಮಾಡುತ್ತವೆ. ಫೇಸ್‌ಬುಕ್ ಪೇಜ್‌ಗಳು ಕೂಡಾ ಇವೆ. ಇಲ್ಲದಿದ್ದಲ್ಲಿ ಅವನ್ನು ಹಾಗೂ ಬಳಸಿಯೂ ಚೆನ್ನಾಗಿರುವ ಬಟ್ಟೆಗಳನ್ನು ಅನಾಥಾಶ್ರಮಗಳಿಗೆ, ಅಗತ್ಯ ಉಳ್ಳವರಿಗೆ, ತಮ್ಮತಂಗಿಯರಿಗೆ ದಾನ ಮಾಡಬಹುದು. ಇನ್ನೂ ಹಳೆಯದಾಗಿದ್ದರೆ ಮನೆಯಲ್ಲಿ ಧೂಳು ಹೊಡೆಯಲು, ಕಾರ್ ತೊಳೆಯಲು ಬಳಕೆಗೆ ಹಾಕಿಕೊಳ್ಳಬಹುದು. ಪ್ಯಾಂಟ್ ಓಲ್ಡ್ ಫ್ಯಾಶನ್ ಆಗಿದ್ದರೆ ಅದನ್ನು ಅರ್ಧಕ್ಕೆ ಕತ್ತರಿಸಿ ಹಾಫ್ ಪ್ಯಾಂಟ್ ಅಥವಾ ಚಡ್ಡಿ ಮಾಡಿಕೊಳ್ಳಬಹುದು. ಈಗೀಗ ಬ್ರಾಂಡ್ ಫ್ಯಾಕ್ಟರಿಯಂಥ ಕೆಲವು ಮಳಿಗೆಗಳು ವರ್ಷದಲ್ಲಿ ಒಂದೆರಡು ವಾರಗಳ ಕಾಲ ನಿಮ್ಮ ಹಳೆಯ ಬಟ್ಟೆಗೆ ದರ ನಿಗದಿ ಮಾಡಿ ಖರೀದಿಸುತ್ತವೆ. ಅಂಥ ಸಮಯದಲ್ಲಿ ಇದನ್ನು ಬಳಸಿಕೊಳ್ಳುವುದು ಕೂಡಾ ಉತ್ತಮ ಆಯ್ಕೆ. ಹಲವು ಹಳೆಯ ಸೀರೆಗಳನ್ನು ನೀಡಿ ಅದರಲ್ಲಿ ಒಂದು ಬೆಡ್‌ಶೀಟ್, ಮ್ಯಾಟ್‌‍ಗಳನ್ನು ಮಾಡಿಸಬಹುದು. ಸ್ವೆಟರ್, ಕೋಟ್‌ಗಳನ್ನು ಕಾರ್ಮಿಕರಿಗೆ, ರಸ್ತೆ ಬದಿಯಲ್ಲಿ ಮಲಗುವವರಿಗೆ ನೀಡಿ. 

5. ಏಣಿಯನ್ನು ಸ್ಟೋರೇಜ್ ಆಗಿಸಿ
ಹಳೆಯ ಬಳಕೆಗೆ ಯೋಗ್ಯವಲ್ಲದ ಏಣಿಯಿದ್ದರೆ ಅದನ್ನು ಬುಕ್‌ಶೆಲ್ಫ್ ಆಗಿಸಿ ಬದಲಾಯಿಸಬಹುದು, ಇಲ್ಲವೇ ಸ್ವಲ್ಪ ಬದಲಾಯಿಸಿದರೆ ಡೆಕೋರೇಟಿವ್ ಸ್ಟೋರೇಜ್ ಆಗುತ್ತದೆ.

ಒತ್ತಡ ಕಳೆಯೋಕೆ ವಾಸ್ತು ನಿಯಮಗಳು

6. ಪುಸ್ತಕಗಳು
ನೋಟ್ಸ್, ಶಾಲಾ ಪುಸ್ತಕಗಳನ್ನು ಆಯಾ ತರಗತಿ ಮುಗಿದ ಬಳಿಕ ಜೂನಿಯರ್ಸ್‌ಗೆ ಕೊಡುವುದು ಉತ್ತಮ. ಮಕ್ಕಳ ಕತೆಪುಸ್ತಕಗಳು, ಕ್ವಿಜ್ ಬುಕ್ಸ್, ಸೈನ್ಸ್ ಪುಸ್ತಕ ಮುಂತಾದವನ್ನು ಹತ್ತಿರದ ಸರ್ಕಾರಿ ಶಾಲೆಯ ಲೈಬ್ರರಿಗೆ ಕೊಡಬಹುದು. ಇನ್ನು ಅಭ್ಯಾಸ ಮಾಡಲು ಬಳಸಿದ ನೋಟ್‌ಪುಸ್ತಕಗಳನ್ನು ನೀಡಿ ಬಫ್ ಶೀಟ್ ಮಾಡಿಸಬಹುದು. 

7. ಹಳೆಯ ಶೂಗಳನ್ನು ನೈಕಿಗೆ ಕೊಡಿ
ಹಳೆಯ ಶೂಗಳನ್ನು ಯಾರಿಗೂ ಕೊಡಲು ಮನಸ್ಸಾಗುವುದಿಲ್ಲ, ಹಾಗಾಗಿ, ಅವನ್ನು ನೈಕಿ ಸ್ಟೋರ್‌ಗಳಿಗೆ ಕೊಡಿ. ಯಾವುದೇ ಬ್ರ್ಯಾಂಡ್‌ದಾದರೂ ಸರಿ, ನೈಕಿ ಸ್ಟೋರ್‌ಗಳಲ್ಲಿ ರಿಯೂಸ್ ಎ ಶೂ ಪ್ರೋಗ್ರಾಂ ಇರುತ್ತದೆ. ಇಲ್ಲಿ ಅವರು ಹಳೆಯದನ್ನು ಹೊಸತಾಗಿಸುತ್ತಾರೆ. 

8. ಪ್ಲ್ಯಾಸ್ಟಿಕ್‌ ಬ್ಯಾಗ್‌ಗಳು
ಮನೆಯಲ್ಲಿ ಪ್ಲ್ಯಾಸ್ಟಿಕ್ ಬ್ಯಾಗ್‌ಗಳು ತುಂಬಿದ್ದರೆ ಅವನ್ನು ಹತ್ತಿರದ ದಿನಸಿ ಅಂಗಡಿಗೆ ನೀಡಬಹುದು. 

9. ಮಕ್ಕಳ ವಸ್ತುಗಳು
ಮಕ್ಕಳ ಆಟಿಕೆಗಳನ್ನು, ಬಟ್ಟೆಗಳನ್ನು ಎರಡನೇ ಮಗುವಿಗೂ ಬಳಸಿ. ತದನಂತರದಲ್ಲಿ ರಸ್ತೆಯಲ್ಲಿ ಕಾಣುವ ಬಡಮಕ್ಕಳಿಗೆ ನೀಡಬಹುದು. ತೊಟ್ಟಿಲು, ವಾಕರ್‌ನಂಥ ವಸ್ತುಗಳನ್ನೂ ಅವರಿಗೆ ನೀಡಬಹುದು. ಇಲ್ಲದಿದ್ದರೆ, ಕುಟುಂಬದಲ್ಲಿ ಹುಟ್ಟುವ ಯಾವುದೇ ಮಗುವಿನ ಪೋಷಕರಿಗೆ ನೀಡಬಹುದು. 

ಇವೆಲ್ಲವನ್ನೂ ಒಮ್ಮೆಯೇ ಮಾಡಬೇಕೆಂದಿಲ್ಲ. ವರ್ಷದಲ್ಲಿ ದಿನಕ್ಕೊಂದರಂತೆ ಒಂದು ವಸ್ತುವನ್ನು ಕಡಿಮೆ ಮಾಡುವ ಯೋಜನೆ ಹಾಕಿಕೊಳ್ಳಬಹುದು. ಆಗ ಹೊಸ ವರ್ಷ ಬರುವಷ್ಟರಲ್ಲಿ 365 ವಸ್ತುಗಳು ಮನೆಯಿಂದ ಜಾಗ ಖಾಲಿ ಮಾಡಿರುತ್ತವೆ. ಇಷ್ಟೆಲ್ಲ ಆದ ಮೇಲೂ ಮನೆ ಮತ್ತೆ ಸಂತೆಯಾಗದಿರದಂತೆ  ನೋಡಿಕೊಳ್ಳಲು ಹೊಸತು ಕೊಳ್ಳುವಾಗ ಎರೆಡೆರಡು ಬಾರಿ ಯೋಚಿಸುವುದು ಉತ್ತಮ. ಅಂಗಡಿಗಳಿಗೆ ತೆರಳುವಾಗ ಬಟ್ಟೆಯ ಬ್ಯಾಗ್ ತೆಗೆದುಕೊಂಡು ಹೋಗುವುದು, ಅನಗತ್ಯ ವಸ್ತುಗಳನ್ನು ಕೊಳ್ಳದೇ ಇರುವುದು ಅಭ್ಯಾಸ ಮಾಡಿಕೊಳ್ಳಿ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!
ಮಾಡೆಲ್ ಮಗಳ ಯಶಸ್ಸು: ಮಾಲ್‌ನಲ್ಲಿ ಬಿಲ್‌ಬೋರ್ಡ್ ಮೇಲೆ ಮಗಳ ಫೋಟೋ ನೋಡಿ ಭಾವುಕರಾದ ಪೋಷಕರು