ಸಾಮಾಜಿಕ ಜಾಲತಾಣಗಳಲ್ಲಿ ಹಳೆ ತಲೆಮಾರಿನ ಆದರೆ ಪ್ರಸ್ತುತ ಬಳಕೆಯಲ್ಲಿ ಇಲ್ಲದ ಕೆಲ ವಸ್ತುಗಳು ಕೆಲ ಆಟಿಕೆಗಳು ಕೆಲ ಪುಸ್ತಕಗಳು ಮಾಸ ಪತ್ರಿಕೆಗಳು ಆಗಾಗ ವೈರಲ್ ಆಗಿ ಆ ತಲೆಮಾರಿನ ಅಥವಾ ಒಂದು ಕಾಲದಲ್ಲಿ ಅದನ್ನು ಬಳಕೆ ಮಾಡಿದವರನ್ನು ಭಾವುಕಗೊಳಿಸುತ್ತಿರುತ್ತವೆ. ಅಲ್ಲದೇ ಈಗಿನ ತಲೆಮಾರಿನ ಮಕ್ಕಳಿಗೆ ಅವು ಅಚ್ಚರಿ ಮೂಡಿಸುತ್ತವೆ. ಆ ಜಮಾನ ಹೀಗೂ ಇತ್ತ ಎಂದು ಈ ತಲೆಮಾರಿನವರು ಯೋಚಿಸಿದರೆ ಆ ತಲೆಮಾರಿನವರು ಅಂದಿನ ಬದುಕೇ ಎಷ್ಟು ಚೆನ್ನಾಗಿತ್ತು ಎಂದು ಹಲಬುತ್ತಾ ತಮ್ಮ ಹಳೆ ಜಮಾನಕ್ಕೆ ಜಾರುತ್ತಾರೆ. ಅದೇ ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ ಹಿಂದೆ ಮನೆಯ ದೈನಂದಿನ ಚಟುವಟಿಕೆಯಲ್ಲಿ ಅಗತ್ಯವಾಗಿ ಬಳಸುತ್ತಿದ್ದ ಕೆಲ ಉಪಕರಣಗಳು ಮೂಲೆ ಸೇರಿರುವ ಫೋಟೋವೊಂದು ವೈರಲ್ ಆಗಿದ್ದು, ಅನೇಕರನ್ನು ನೋಸ್ಟಾಲಾಜಿಯ ಫೀಲ್‌ಗೆ ದೂಡಿದೆ.
ಪೋಸ್ಟ್‌ನಲ್ಲೇನಿದೆ?
ಫೇಸ್‌ಬುಕ್‌ನ ಪರಿಸರ ಪರಿವಾರ ಎಂಬ ಪೇಜ್‌ನಿಂದ ಈ ಫೋಟೋ ಪೋಸ್ಟ್ ಆಗಿದ್ದು, ಅದರಲ್ಲಿ ಈ ಹಿಂದೆ ಪ್ರತಿ ಮನೆಯಲ್ಲಿ ಬಳಸುತ್ತಿದ್ದ ವಸ್ತುಗಳಾದ ರಾಗಿ ಬೀಸುವ ಕಲ್ಲು, ಮಣ್ಣಿನ ಒಲೆ, ತಾಮ್ರದ ಬಿಂದಿಗೆ ತಾಮ್ರದ ಹಂಡೆ, ಒನಕೆ ಸೇರಿದಂತೆ ಅಡುಗೆ ಹಾಗೂ ಆಹಾರ ತಯಾರಿಗೆ ಬಳಸುವ ಹಲವು ಪಾತ್ರೆ ಸಾಮಾನುಗಳು ಅದರಲ್ಲಿವೆ. ಅಖಿಲ ಭಾರತ ಪುರಾತನ ಮಹಿಳಾ ಜಿಮ್ ಮತ್ತು ಫಿಟ್‌ನೆಸ್ ಸೆಂಟರ್ ಎಂದು ಬರೆದು ತರಬೇತುದಾರರು ಅಮ್ಮ ಹಾಗೂ ಅತ್ತೆ ಎಂದು ಕೆಳಭಾಗದಲ್ಲಿ ಬರೆಯಲಾಗಿದೆ. ಈ ಫೋಟೋ ನೋಡಿದ ಅನೇಕರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ವೋಗ್ ನಿಯತಕಾಲಿಕೆಯ ಅತ್ಯಂತ ಹಿರಿಯ ಮಾಡೆಲ್ ಈ 106 ವರ್ಷದ ಟ್ಯಾಟೂ ಅರ್ಟಿಸ್ಟ್
ಅನೇಕರು ತಮ್ಮ ಹಳೆ ದಿನಗಳನ್ನು ನೆನೆದಿದ್ದಾರೆ. ಮೊದಲೆಲ್ಲಾ ಇವುಗಳ ಬಳಕೆಯನ್ನು ನಿತ್ಯವೂ ಮಾಡುವ ಕಾರಣ ಹೆಣ್ಣು ಮಕ್ಕಳಿಗೆ ಯಾವ ಜಿಮ್‌ಗಳ ಅಗತ್ಯವೂ ಬರುತ್ತಿರಲಿಲ್ಲ, ಆರೋಗ್ಯವೂ ಚೆನ್ನಾಗಿತ್ತು, ದೈಹಿಕ ವ್ಯಾಯಾಮವಂತೂ ಚೆನ್ನಾಗಿಯೇ ಇದುದ್ದರಿಂದ ರೋಗ ರುಜಿನಗಳು ಹತ್ತಿರ ಸುಳಿಯುತ್ತಿರಲಿಲ್ಲ, ವೈದ್ಯರ ಭೇಟಿಯಂತೂ ದೂರದ ಮಾತೇ ಆಗಿತ್ತು. ಆದರೆ ಆಧುನಿಕತೆಯ ಭರಾಟೆಯಲ್ಲಿ ಇವುಗಳೆಲ್ಲಾ ಮನೆಯ ಅಟ್ಟ ಸೇರಿದ್ದು, ಬಳಸುವವರಿಲ್ಲದೇ ಧೂಳು ಮುತ್ತಿವೆ. ಒರಳಯ ಕಲ್ಲು ಇದ್ದ ಜಾಗದಲ್ಲಿ ಮಿಕ್ಸಿ ಬಂದಿದ್ದು, ಒಲೆ ಇದ್ದ ಜಾಗದಲ್ಲಿ ಗ್ಯಾಸ್ ಸ್ಟವ್ ಬಂದಿವೆ. ಅವಿಭಕ್ತ ಕುಟುಂಬ ವಿಭಕ್ತವಾಗಿದ್ದು, ದೊಡ್ಡ ಹಂಡೆಯಲ್ಲಿ ಅನ್ನ ಮಾಡುತ್ತಿದ್ದ ಮನೆಯಲ್ಲಿ ಪುಟ್ಟ ಕುಕ್ಕರ್ ಬಂದಿದೆ. ಹೀಗೆ ಕಾಲಕ್ಕೆ ತಕ್ಕಂತೆ ಲೈಫ್‌ಸ್ಟೈಲ್ ಬದಲಾಗಿರುವುದನ್ನು ಈ ಫೋಟೋ ಸೂಚ್ಯವಾಗಿ ತೋರಿಸುತ್ತಿದೆಯಷ್ಟೇ.
ಜಾನಪದ ವೇದಗಳಿಗಿಂತ ಪುರಾತನ: ಡಾ. ರಾಜೇಶ್ವರಿದೇವಿ
ಇನ್ನು ಹಿಂದೆಲ್ಲಾ ಮನೆಯ ಹೆಣ್ಣು ಮಕ್ಕಳು ಇದೆಲ್ಲಾವನ್ನು ಬಳಸಿ ಮನೆಯ ಕೆಲಸ ಮಾಡಬೇಕಾಗುತ್ತಿತ್ತು, ಮನೆಯ ಹಿರಿಯ ಹೆಂಗಸರೆನ್ನಿಸಿದ ಅತ್ತೆ ಅಮ್ಮಂದಿರು ಮಕ್ಕಳಿಗೆ ಸೊಸೆಯರಿಗೆ ಇದರ ಬಳಕೆಯ ಬಗ್ಗೆ ಹೇಳಿಕೊಡುತ್ತಿದ್ದರು. ಅದಕ್ಕೆ ಇಲ್ಲಿ ತರಬೇತಿದಾರರು ಅಮ್ಮ ಅತ್ತೆ ಎಂದು ಬರೆದಿದ್ದಾರೆ. ಈ ಪೋಸ್ಟ್ ನೋಡಿದ ಒಬ್ಬರು ಇವೆಲ್ಲವೂ ನಮ್ಮ ಮನೆಯಲ್ಲಿ ಇದೆ. ಇವೆಲ್ಲವನ್ನು ನಾನು ಬಳಸಿದ್ದೇನೆ. ಆದರೆ ಯಾರಿಂದಲೂ ತರಬೇತಿ ಪಡೆದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಆಹಾರದ ಜೊತೆಗೆ ಪತ್ತೆಯಾಯ್ತು 5000 ವರ್ಷ ಹಳೆಯ ರೆಫ್ರಿಜರೇಟರ್
ಈ ಉಪಕರಣಗಳು ಇಂದು ಕಾಣಸಿಗುವುದು ಬಲು ಅಪರೂಪ ಹಳ್ಳಿಗಳ ಪುರಾತನ ಕಾಲದ ಅವಿಭಕ್ತ ಕುಟುಂಬವಿರುವ ಹಿರಿಯರು ಇರುವ ಹಳೆಯ ಮನೆಗಳಲ್ಲಷ್ಟೇ ಇದನ್ನು ಕಾಣಲು ಸಾಧ್ಯ. ಇದ್ದರೂ ಇದರ ಬಳಕೆಯಂತೂ ತೀರಾ ವಿರಳ. ಒಟ್ಟಿನಲ್ಲಿ ಈ ಫೋಟೋ ಅನೇಕರಿಗೆ ಗತಕಾಲದ ನೆನಪು ಮಾಡಿರುವುದಂತೂ ನಿಜ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.