ಮಕ್ಕಳಿಗೆ ರಂಗಶಿಬಿರ ಎಷ್ಟುಮುಖ್ಯ ಅನ್ನುವುದನ್ನು ಇಲ್ಲಿ ಲೇಖಕಿ ಹೇಳಿದ್ದಾರೆ. ಮಿಕ್ಕೆಲ್ಲ ಸಮ್ಮರ್‌ಕ್ಯಾಂಪುಗಳಿಗಿಂತ ರಂಗತರಬೇತಿ ಶಿಬಿರ ಮಕ್ಕಳ ಮನಸ್ಸನ್ನು ರೂಪಿಸುವ ಕುರಿತು ಬರೆದಿದ್ದಾರೆ.
ಡಾ|ಕೆ.ಎಸ್. ಪವಿತ್ರ
ಮಕ್ಕಳಿಗೆ ಶಾಲೆಗೆ ರಜೆ ಬಂತೆಂದರೆ ಅಪ್ಪ-ಅಮ್ಮ ಹೆದರಲಾರಂಭಿಸುತ್ತಾರೆ. ಹೊರಗೆ ಇಬ್ಬರೂ ಕೆಲಸ ಮಾಡುವ ಅಪ್ಪ-ಅಮ್ಮಂದಿರಿಗಂತೂ ವಿವಿಧ ಪ್ರಾಯೋಗಿಕ ಸಮಸ್ಯೆಗಳು ಎದುರಾಗುತ್ತವೆ. ಅಜ್ಜ-ಅಜ್ಜಿಯರಿಗೆ ‘ಮಕ್ಕಳು ಆರಾಮವಾಗಿ, ‘ಏನೂ’ ಮಾಡದೆ ಮನೆಯಲ್ಲಿದ್ದುಕೊಳ್ಳಲಿ’ ಎನಿಸುತ್ತದೆ. ಆದರೆ ಮಕ್ಕಳು ‘ಏನೂ’ ಮಾಡದಿರುವುದು ಎಂದರೆ ಮನೆಯನ್ನು ಪೂರ್ತಿ ಅಸ್ತವ್ಯಸ್ತ ಮಾಡಿ, ಜಗಳವಾಡಿಕೊಳ್ಳುವುದು ಎಂಬುದು ಬಹಳ ಜನರ ಮನೆಯಲ್ಲಿ ಕಂಡು ಬರುವಂತಹದ್ದು. ‘ನಮಗೆ ಮಕ್ಕಳು ಅಂದರೆ ತುಂಬಾ ಇಷ್ಟ, ಎಷ್ಟುಮಕ್ಕಳನ್ನು ಬೇಕಾದರೆ ತಾವು ನಿಭಾಯಿಸುತ್ತೇವೆ’ ಎಂದುಕೊಳ್ಳುವವರಿಗೂ ಕೂಡ, ಮಕ್ಕಳ ಜಗಳ-ಅವರು ಇಡೀ ಮನೆಯನ್ನು ಹರಡುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದು ಹೆಚ್ಚೆಂದರೆ ನಾಲ್ಕಾರು ದಿನಗಳು ಮಾತ್ರ. ಇಂದಿನ ದಿನಗಳಲ್ಲಂತೂ ಅಜ್ಜ-ಅಜ್ಜಿಯ ಮನೆ, ಅಪ್ಪ-ಅಮ್ಮನ ಮನೆ ಒಂದೇ ಆಗಿರುವ ಸಾಧ್ಯತೆಯೇ ಹೆಚ್ಚು. ಹೀಗಿರುವಾಗ ಅಪ್ಪ - ಅಮ್ಮ ಶಿಬಿರಗಳನ್ನು ಹುಡುಕಿ ಹೇಗೋ ಒಂದು ಶಿಬಿರಕ್ಕೆ ಸೇರಿಸಿ ‘ಅಬ್ಬಾ’ ಎಂದು ಸಮಾಧಾನದ ನಿಟ್ಟುಸಿರು ಬಿಡಬೇಕಾಗುತ್ತದೆ.
undefined
ನಾಟಕಗಳನ್ನು ನೋಡುವುದು, ಮಾಡುವುದು ನನಗೆ ಬಾಲ್ಯದಿಂದಲೂ ಆಕರ್ಷಕವೆನಿಸುವ ಚಟುವಟಿಕೆ. ಮನೋವೈದ್ಯೆಯಾದ ಮೇಲೆ ಮನೋಚಿಕಿತ್ಸೆಯ ತರಗತಿಗಳಲ್ಲಿ ‘ರೋಲ್-ಪ್ಲೇ’ ವಿವಿಧ ಪಾತ್ರಗಳನ್ನು ಮಾಡಿ ರೋಗಿಯ ಬಳಿ ನಮ್ಮ ಸಹಾನುಭೂತಿಯನ್ನು ಸರಿಯಾಗಿ ವ್ಯಕ್ತಿಪಡಿಸುವ ರೀತಿಯನ್ನೂ ಅಭ್ಯಾಸ ಮಾಡಿಸುತ್ತಿದ್ದದ್ದು ನನಗೆ ಸ್ವಾರಸ್ಯಕರ ಎನಿಸಿತ್ತು. ಮುಂದೆ ಮಕ್ಕಳ ಮನೋವೈದ್ಯಕೀಯವನ್ನು ಅಭ್ಯಸಿಸುವಾಗ ಆಟ-ಚಿತ್ರಕಲೆ-ಹಾಡು-ನೃತ್ಯ ಎಲ್ಲವನ್ನೂ ಒಳಗೊಂಡ ರಂಗ ಚಟುವಟಿಕೆಗಳು ಮಕ್ಕಳ ಮನಸ್ಸು -ಬುದ್ಧಿಗಳ ಬೆಳವಣಿಗೆಗೆ ಎಷ್ಟುಪೂರಕ ಎಂಬುದು ಅರಿವಾಯಿತು. ನನ್ನ ಬಾಲ್ಯದಲ್ಲಿ ನಾಟಕಗಳನ್ನು ನೋಡಿದ-ಮಾಡಿದ ಅನುಭವಗಳು, ಈಗ ನನ್ನ ಮಕ್ಕಳು ನಾಟಕಗಳನ್ನು ನೋಡುವಾಗ-ಸಿದ್ಧತೆ ಮಾಡುವಾಗ ಅವರು ವ್ಯಕ್ತಪಡಿಸುವ ಭಾವನೆಗಳು-ನಡವಳಿಕೆಗಳು ಸಂಶೋಧನೆ-ಶಾಸ್ತ್ರಗಳಿಂದ ಲಭಿಸಿದ ನನ್ನ ಜ್ಞಾನವನ್ನು ಪ್ರಾಯೋಗಿಕವಾಗಿ ನಿರೂಪಿಸಿವೆ.
ನಿಮ್ಮ ಸುತ್ತಮುತ್ತಲಲ್ಲಿರುವ ರಂಗ ಕಲಾವಿದರನ್ನು ಒಮ್ಮೆ ಗಮನಿಸಿ/ನೆನಪಿಸಿಕೊಂಡು ನೋಡಿ. ಅವರಲ್ಲಿ ಬಹುಜನ ನಟ-ನಟಿಯರಾಗಿ ಅಭಿನಯ ಮಾಡುವುದರೊಂದಿಗೆ, ಹಲವು ಕೌಶಲಗಳನ್ನು ಬಲ್ಲವರಾಗಿರುತ್ತಾರೆ. ಭಾಷೆಯನ್ನು ಬೇಕಾದಂತೆ ದುಡಿಸಿಕೊಳ್ಳುವ, ಸಂಭಾಷಣೆ ಬರೆಯುವ ಕೌಶಲ, ಚಿತ್ರ ಕಲೆಯ ತಂತ್ರಗಳು, ಇರುವ ವೇಷಭೂಷಣದಲ್ಲಿಯೇ ಕಿಂಚಿತ್ ಬದಲಾವಣೆಯಿಂದ ರಂಜನೀಯವಾಗಿ ಮಾಡುವ ಪ್ರತಿಭೆ, ಗಟ್ಟಿಯಾಗಿ/ಮಧುರವಾಗಿ/ನಾಟಕಗಳಿಗೆ ಹೊಂದುವಂತೆ ಹಾಡುವ ಕುಶಲತೆ, ಹಾಸ್ಯಮಯವಾಗಿ ಮಾತನಾಡುವುದು ಇವೆಲ್ಲವನ್ನೂ ಅವರಲ್ಲಿ ನಾವು ನೋಡುತ್ತೇವೆ. ಕೆಲವರಿಗೆ ಅದು ಅವರ ವ್ಯಕ್ತಿತ್ವದಲ್ಲಿ ಅಡಕವಾಗಿ ಅದು ಅವರ ಸ್ವಭಾವವೇ ಆಗಿದ್ದಿರಬಹುದಾದರೂ, ಬಹು ಜನರಲ್ಲಿ ಇವು ಕಾಲಕ್ರಮೇಣ ರೂಢಿಯಾಗಿ ಅವರನ್ನು ರಂಗ ಕಲಾವಿದರನ್ನಾಗಿಸಿರುತ್ತದೆ.
ನಾಟಕದ ಚಟುವಟಿಕೆಗಳಿಂದ ಮಕ್ಕಳು ಹೊಸ ಕಲ್ಪನೆಗಳಿಗೆ, ಹೊಸ ಯೋಚನೆಗಳಿಗೆ, ಹೊಸ ಸಾಮರ್ಥ್ಯಗಳಿಗೆ ತೆರೆದುಕೊಳ್ಳುತ್ತಾರೆ. ಯಾವುದೇ ರಂಗ ಶಿಬಿರದಲ್ಲಿ ಮಕ್ಕಳ ಬುದ್ಧಿಯನ್ನು-ಸೃಜನಶೀಲತೆಯನ್ನು ಪ್ರಚೋದಿಸಿರುವ ಆಟಗಳಿರುವ ಕಾರಣ ಇದೇ. ಬಹುಜನ ಅಪ್ಪ-ಅಮ್ಮಂದಿರು ಭಾವಿಸುವಂತೆ ನಾಟಕ ಎಂದರೆ ಅದು ‘ಓದಿ’ಗೆ ಸಂಬಂಧಿಸಿದ್ದಲ್ಲ ಎಂಬ ಭಾವನೆ ತಪ್ಪು! ನಾಟಕದ ಕೌಶಲಗಳನ್ನು ಕಲಿಯುವ ಮಗು ತನ್ನ ಪಾಠವನ್ನೂ ಸಂಭಾಷಣೆ -ಆಟ-ಸನ್ನಿವೇಶಗಳಿಂದ ಕಲ್ಪಿಸಿಕೊಂಡು ಕಲಿಯಬಹುದಾದ ತಂತ್ರವನ್ನು ತನಗೇ ಅರಿವಿಲ್ಲದಂತೆ, ಸಂತೋಷದಿಂದ ಕಲಿಯುತ್ತದೆ.
ರಂಗ ಚಟುವಟಿಕೆಗಳು ಯಾವಾಗಲೂ ಸಾಮೂಹಿಕ ಚಟುವಟಿಕೆಗಳು. 4ರಿಂದ 7 ವರ್ಷ ವಯಸ್ಸಿನ ಗುಂಪಿನ ಮಕ್ಕಳಲ್ಲೇ, ಒಂದು ಮಗು ‘ನಾನು ಮರ’ ಎಂದರೆ, ಅದಕ್ಕೆ ಇನ್ನೊಂದು ವಾಕ್ಯ ಜೋಡಿಸಬೇಕಾದ ಮತ್ತೊಂದು ಮಗು ‘ನಾನು ಬೇರುಗಳ ಕೆಳಗೆ ಹರಿಯುವ ನೀರು’ ಎನ್ನಬಹುದು. ಹೀಗೆ ‘ಮರ’ ಎಂಬ ಒಂದು ಪದ ಮಕ್ಕಳ ಕಲ್ಪನೆಯಲ್ಲಿ ಹಲವು ಹೊಸ ಕೊಂಬೆಗಳನ್ನು ಹರಡಿಕೊಂಡು ¸ೃಹದಾಕಾರವಾಗಿ ನಿಂತುಬಿಡುತ್ತದೆ. ಇಂಥ ಸಂದರ್ಭಗಳಲ್ಲಿಯೇ ನನಗೆ ಐನ್‌ಸ್ಟೀನ್ ಹೇಳಿದ - ‘ಕಲ್ಪನೆ ಜ್ಞಾನಕ್ಕಿಂತ ಮುಖ್ಯ’ ಎಂಬ ಮಾತು ನೆನಪಾಗುವುದು. ನಾಟಕ ಮಾಡುವಾಗ -ಕಲಿಯುವಾಗ ಸರಿ/ತಪ್ಪು ಎಂಬುವುದಿಲ್ಲ, ಆದರೆ ಶಿಸ್ತಿದೆ. ಇಲ್ಲಿ ನಮ್ಮ ಗಮನವೆಲ್ಲ ಕಲ್ಪಿಸಿಕೊಳ್ಳುವುದರ ಬಗ್ಗೆ, ಹೊಸತನ್ನು ಸೃಷ್ಟಿಸುವುದರ ಕುರಿತು, ಹೆಚ್ಚು ಆಸಕ್ತಿಪೂರ್ಣವಾಗಿಸುವುದರ ಕಡೆ.
ರಂಗ ಶಿಬಿರಗಳಲ್ಲಿ ಈ ಸಾಮೂಹಿಕತೆ ಎರಡು ಮುಖ್ಯ ಉಪಯೋಗಗಳನ್ನು ನಮ್ಮ ಮಕ್ಕಳಿಗೆ ನೀಡುತ್ತದೆ. ‘ಮೈಛಳಿ’ ಬಿಡಿಸಿ, ಮಾತನಾಡುವುದನ್ನು ಉತ್ತೇಜಿಸುತ್ತದೆ. ಮುಂದಾಳುವಾಗುವುದರ ಜವಾಬ್ದಾರಿ-ಅವಕಾಶ-ಲಾಭಗಳನ್ನು ಕಲಿಸುತ್ತದೆ. ಮುಂದಾಳುವಿನ ಮಾತಿನಂತೆ ನಡೆಯುವುದನ್ನೂ ಕಲಿಸುತ್ತದೆ. ನಾಟಕಗಳಲ್ಲಿ ನಿಜಜೀವನದ ಅನುಭವಗಳಿಗೆ ಸ್ಪಂದಿಸುವ ಬಗೆಯನ್ನು ಮಕ್ಕಳು ಕಲಿಯುತ್ತಾರೆ. ಬೇರೆಯವರ ಭಾವನೆಗಳನ್ನು ಗ್ರಹಿಸುವುದು, ಅವರನ್ನು ‘ಸಹಿಸಿ’ಕೊಳ್ಳುವುದು, ಸ್ನೇಹ ಮಾಡಿಕೊಳ್ಳುವುದು ಇವು ನಾಟಕದಿಂದ ಉಂಟಾಗುವ ಇತರ ಲಾಭಗಳು.
ಕಥೆಗಳು ನಮಗೆ ಕಲ್ಪಿಸಿಕೊಳ್ಳುವ ಪಾಠ ಕಲಿಸಿದರೆ, ನಾಟಕಗಳು ಅವುಗಳನ್ನು ನಟಿಸುವುದನ್ನು ಕಲಿಸುತ್ತದೆ. ಇವು ಭಾಷೆಯ ಎರಡು ಮುಖಗಳು. ಒಂದು ಭಾಷೆಯನ್ನು ಗ್ರಹಿಸುವುದಾದರೆ, ಇನ್ನೊಂದು ಮೌಖಿಕ-ದೈಹಿಕ-ಹಾವಭಾವಗಳ ಮುಖಾಂತರ ಇನ್ನೊಬ್ಬರಿಗೆ ಅದನ್ನು ತಿಳಿಸುವ ಅಭಿವ್ಯಕ್ತಿ. ಸಂಭಾಷಣೆಗಳನ್ನು ಹೇಳುವಾಗ ಧ್ವನಿಯ ಏರಿಳಿತಗಳು, ಸರಿಯಾದ ಉಚ್ಛಾರಣೆ, ತಕ್ಕ ಹಾವಭಾವಗಳು ಇವು ನಾಟಕದ ಮೂಲಕ ನಾವು ಕಲಿಯುವ ಅಂಶಗಳು. ಕೇಳುವುದು, ಪ್ರತಿಕ್ರಿಯಿಸುವುದು, ನಟಿಸುವುದು ಈ ಮೂರೂ ವಿವಿಧ ಹಂತಗಳಲ್ಲಿ ನಾಟಕಗಳಲ್ಲಿ ನಡೆಯುತ್ತದೆ.
ಇಷ್ಟೆಲ್ಲಾ ಲಾಭಗಳು ನಾಟಕಗಳಿಂದ, ಅವುಗಳನ್ನು ಕಲಿಸುವ ರಂಗ ಶಿಬಿರಗಳಿಂದ ಇದ್ದರೂ, ಎಲ್ಲಕ್ಕಿಂತ ಮಕ್ಕಳಿಗೆ ನಾಟಕದಿಂದ ಲಭಿಸುವ ಮುಖ್ಯ ಲಾಭ ‘ಸಂತೋಷ’! ಮಕ್ಕಳು ಈ ‘ಸಂತೋಷ’ ವನ್ನು ‘ಲಾಭ’ ಎಂದು ಕರೆಯಲಾರರು! ಆದರೆ ಎಲ್ಲವನ್ನೂ ಲಾಭ-ನಷ್ಟದ ಲೆಕ್ಕಾಚಾರದ ವ್ಯವಹಾರದ ದೃಷ್ಟಿಯಿಂದಲೇ ನೋಡುವ ಹಿರಿಯರಿಗೆ ಮಕ್ಕಳಿಗೆ ನಾಟಕದಿಂದ ಸಿಕ್ಕುವ ‘ಸಂತೋಷ’ ಬಹಳ ಮಹತ್ವದ್ದು ಎಂಬ ಅರಿವು ಇರಬೇಕು. ಸಂತೋಷದಿಂದ ನಡೆಯುವ ಯಾವುದೇ ಚಟುವಟಿಕೆ ಒತ್ತಾಯಕ್ಕಿಂತ ಹೆಚ್ಚು ಲಾಭಗಳನ್ನು ತರಬಲ್ಲದು. ಮಕ್ಕಳ ಭಾವನಾತ್ಮಕ ಮಿದುಳು ಅಂದರೆ ಬಲ ಮಿದುಳನ್ನು ಸಬಲಗೊಳಿಸುವ ನಾಟಕ ಕಲೆ ಆಟ-ನಗು-ಹಾಸ್ಯ-ಸಂಗೀತ-ಕಥೆ- ನೃತ್ಯಗಳ ಮೂಲಕ ಬೌದ್ಧಿಕ ಮಿದುಳಿನ (ಅಂದರೆ ಅಂಕಗಳಿಕೆಗೆ) ಸಾಮರ್ಥ್ಯಕ್ಕೆ ಒಳ್ಳೆಯ ಸಾಧನವೂ ಹೌದು. ‘ನಮ್ಮ ಮಕ್ಕಳು ಮುಂದೆ ಸುಖವಾಗಿರಬೇಕು’ ಎಂದೇ ಹೆಚ್ಚಿನವನ್ನು ಮಾಡುವ ತಂದೆ-ತಾಯಿಗಳು, ಹಾಗೆ ಮಕ್ಕಳು ‘ಸುಖ’ವಾಗಿರಲು ಭಾವನಾತ್ಮಕ ನೆಮ್ಮದಿ ಅಗತ್ಯ ಎಂಬುದನ್ನು ಗಮನಿಸಬೇಕು. ಕನಿಷ್ಟಒಂದು ತಿಂಗಳು, ಮಕ್ಕಳನ್ನು ಯಾವಾಗಲಾದರೊಮ್ಮೆ ರಂಗ ಶಿಬಿರಕ್ಕೆ ಸೇರಿಸುವ ಸಾಹಸ/ಪ್ರಯೋಗವನ್ನು ಮಾಡಬೇಕು.