ಕನ್ನಡಿ ಹೇಳುವ ಕಥೆ ಕತೆಗಳು ಒಂದೇ ಎರಡೇ!

By Kannadaprabha News  |  First Published Dec 1, 2019, 4:08 PM IST

ನಮ್ಮ ಎಡಬಲ ಬದಲಾದರೂ ನಾವು ನಾವಂತೇ. ನಮ್ಮನ್ನು ಹುರುಪುಗೊಳಿಸುವಂತೆ ಕನ್ನಡಿ ಪ್ರೇರೇಪಿಸುತ್ತಿರುತ್ತದೆ. ಜೊತೆಗೆ ನಮ್ಮ ಹುಳುಕನ್ನು ಕನ್ನಡಿ ತನ್ನೊಳಗೆ ಇಟ್ಟುಕೊಂಡಿದ್ದರೂ.. ಎದುರಿರುವ ಜನರ ಜೊತೆ ಎದೆಯುಬ್ಬಿಸಿ ಬಾಳುವಂತೆ ಮಾಡುತ್ತದೆ.


ಮೊನ್ನೆಮೊನ್ನೆ ಕೇರಳದ ಸ್ನೇಹಿತರೊಬ್ಬರು ಒಂದು ಕನ್ನಡಿಯನ್ನು ನಮಗೆ ತಂದು ಕೊಟ್ಟರು. ಅದನ್ನು ನೋಡಿ ನಾನು ಬಲು ಮೋಹಿತಳಾದೆ. ಅಂಗೈಗಲದ ಮೋಹಕ ಕಲೆಗಾರಿಕೆಯ ಹಿತ್ತಾಳೆ ಹಿಡಿಯ ಅದರ ಹಿಡಿಕಟ್ಟೋ? ಅದರ ಹೊಳಪೋ? ಅದರ ಜೊತೆಗಿಟ್ಟಿದ್ದ ಅದರ ವಿವರಣೆಯನ್ನು ಗಮನಿಸಿದೆ.

ಗಾಜನ್ನು ಉಪಯೋಗಿಸದೆ ಕರಕುಶಲಗಾರರ ಕೈ ಚಳಕದಲ್ಲಿ ಹಿತ್ತಾಳೆಯ ಮೈಯನ್ನೇ ಕನ್ನಡಿಯಾಗಿಸುವ ಕಲೆಯದು. ಎರ್ನಾಕುಲಂ ಕನ್ನಡಿ ಎನ್ನುವ ಆ ಹಿತ್ತಾಳೆ ಕನ್ನಡಿ 18 ನೇ ಶತಮಾನದ ದ್ರಾವಿಡರ ಮಧ್ಯಕಾಲೀನ ಸಂಶೋಧನೆ. ಗಾಜಿನ ಕನ್ನಡಿ ಬರುವ ಮುನ್ನವೇ ಇದನ್ನು ಮಾಡುತ್ತಿದ್ದ ಕೇರಳದ ಕುಟುಂಬವೊಂದು ಇಂದಿಗೂ ಇದನ್ನು ತಯಾರಿಸುತ್ತದಲ್ಲದೆ ಅದರ ಗುಟ್ಟನ್ನು ಬೇರೆ ಯಾರಿಗೂ ಇವತ್ತಿಗೂ ಬೇರೆಯವರಿಗೆ ಬಿಟ್ಟುಕೊಟ್ಟಿಲ್ಲ.

Latest Videos

undefined

ಸಿಲ್ವರ್ ನೈಟ್ರೇಟ್ ಹಚ್ಚಿದ ಸಿಲಿಕಾನ್ ಮೂಲದ ಗಾಜು ಬೆಳಕನ್ನು ಪ್ರತಿಫಲಿಸುವ ಅಥವಾ ವಾಪಾಸ್ ಉಗಿಯುವ ತಂತ್ರದಿಂದ ರೂಪುಗೊಂಡ ಕನ್ನಡಿಗಳಿಗಿಂತ ಭಿನ್ನವಾದ ಹಿತ್ತಾಳೆ ಲೋಹದ ಈ ಸಾಂಪ್ರದಾಯಿಕ ಕನ್ನಡಿ ಮನೆಯಲ್ಲಿದ್ದರೆ ಆ ತಾಯಿ ಪಾರ್ವತಿಯ ಅನುಗ್ರಹವಿರುತ್ತದೆ, ಮನೆಗೆ ಕೆಟ್ಟದ್ದಾಗುವುದಿಲ್ಲ ಎಂಬ ನಂಬಿಕೆಯೂ ಇದಕ್ಕೆ ತಳಕು ಹಾಕಿಕೊಂಡಿದೆ. ಕುಶಲತೆಯ ವ್ಯಾಪಾರ ವ್ಯವಹಾರಗಳು ತಮ್ಮ ಗುಟ್ಟುಗಳನ್ನು ತಮ್ಮಲ್ಲೇ ಕಾಪಾಡಿಕೊಳ್ಳುವಾಗ ಇಂಥ ನಂಬಿಕೆಗಳನ್ನು ಹುಟ್ಟು ಹಾಕುವುದು ಸಹಜವೇ. ಆದರೆ ಇದರ ರೂಪರಚನೆಗೆ ಕಲ್ಪನೆ, ತಾದಾತ್ಮ್ಯ, ಕಾರ್ಯನಿರತ ಕುಶಲತೆ ಬೇಕೆಬೇಕು ಎಂಬ ಅವರ ವಿವರಣೆಯನ್ನು ನಾವು ನಂಬಲೇಬೇಕು.

ಥಾಯ್‌ ಮಸಾಜ್‌ ಕಲಿಸಿದ ಕೆಲವು ಪಾಠಗಳು

ಈ ಮಾಯಾ ಜಾಲದ ಕಣ್ಣಡಿಯ ಲೋಕವೊಂದು ನನ್ನೊಳಗೆ ಹತ್ತಾರು ನೆನಪುಗಳನ್ನು ವಿಚಾರಗಳನ್ನು ತಂದು ಹಾಕಿತು. ಅವ್ವ ಚಿಕ್ಕವ್ವ ನಮ್ಮ ಚಿಕ್ಕವ್ವ ಊರಿನಲ್ಲಿ ಯಾವಾಗೂ ಕಂಚಿನ ತಣಿಗೆಯನ್ನು ಬೆರಣಿ ಬೂದಿಯಲ್ಲಿ ಥಣಗುಡುವ ಹಾಗೆ ಬೆಳಗಿ ಹಂಗೆ ಮುಖ ಕಾಣಬೇಕು ಅಂತ ಅದನ್ನು ಎತ್ತಿ ಹಿಡಿದು ಮುಖ ನೋಡುತ್ತಿತ್ತು, ಅಂತೆಯೇ ಒಂದು ರಾತ್ರಿ ಊಟದ ಹೊತ್ತಿನಲ್ಲಿ ಉರಿಯುವ ಒಲೆ ಮುಂದಿನ
ಇಂಥದೇ ಕಂಚಿನ ಗಂಗಳದಲ್ಲಿ ಬೆಂಕಿಯ ಬೆಳಕು ಬಿದ್ದು ಅವ್ವನ ಮುಖ ತೇಲಿ ಅದರೊಳಗೆ ಬಿಟ್ಟ ಹುರುಳಿ ಸಾರಿನ ಪರಿಮಳದೊಳಗೆ ಆ ರೂಪ ಕಲಸಿ ಹೋಗಿದ್ದು ಇಂದಿಗೂ ಮನದಲ್ಲಿ ಉಳಿದು
ಹೋಗಿವೆ.

ಸ್ಕೂಲಿನಲ್ಲಿ ತೋರಿಸುತ್ತಿದ್ದ ಕಿರುಚಿತ್ರ ಹಾಗೂ ಬಾಲ್ಯದ ದೃಶ್ಯಗಳು: ಯುದ್ಧ ಮುಗಿಸಿ ಗೆಲುವು ಸಾಧಿಸಿ ಬಂದ ಬುಡಕಟ್ಟು ನಾಯಕನ ದಂಡು ಕೂಗಳತೆಯಲ್ಲಿ ಬರುವಾಗ ಅವನ ನಾಯಕಿ ಓಡಿಬಂದು ದೊಡ್ಡ ಹಿಡಿಯ ಹರಿವಾಣದಲ್ಲಿ ಇಟ್ಟ ನೀರುಗನ್ನಡಿಯಲ್ಲಿ ತನ್ನ ಮುಖ ನೋಡುತ್ತಾಳೆ. ಅವಳ ಬುಡಕಟ್ಟಿನ ಹೆರಳು, ಮುಖದ ಸಿಂಗಾರ ಇನ್ನೂ ನನ್ನ ಭಿತ್ತಿಯೊಳಗಿದೆ. ಇನ್ನೊಂದು ನಾಯಿಮೂಳೆ ಕಥೆಯ ಚಿತ್ರದ್ದು. ನಾಯಿ ಬಾಯಲ್ಲಿ ಮೂಳೆ ಹಿಡಿದು ಓಡುತ್ತಿದೆ. ಅದು ಹಳ್ಳ ದಾಟುವ ಸಮಯದಲ್ಲಿ ನೀರಲ್ಲಿ ತನ್ನ ಪ್ರತಿಬಿಂಬವನ್ನು ಕಾಣುತ್ತದೆ. ತಾನೆಂಬ ಅರಿವಿಲ್ಲದೆ ಮತ್ತೊಂದು ನಾಯಿಯೆಂದು ತಿಳಿದ ಅದು ಗಂಟಲಲ್ಲಿ ಸ್ವರವೇಳಿಸುತ್ತದೆ. ಅದು ಮಾರ್ದನಿಯಾದಾಗ ನಾಯಿಯ ಪಿತ್ಥ ನೆತ್ತಿಗೇರಿ ಇದು ಜೋರಾಗಿ ಬೊಗಳುತ್ತದೆ. ಮೂಳೆ ನೀರಿಗೆ ಬಿದ್ದು ಹೋಗುತ್ತದೆ. ನಾಯಿ ಮೂಳೆ ಎರಡೂ ನೀರ್ಗನ್ನಡಿಯಲ್ಲಿ ಕಲಸಿ ಮರೆಯಾಗಿ ಹೋಗುತ್ತದೆ. 


ಚಿಕ್ಕವಳಿದ್ದಾಗ ಆಗಾಗ ವಾಹನಗಳ ಕಿಟಕಿಯ ಗಾಜು ಹಾಗೂ ಕನ್ನಡಿಯ ತಮ್ಮ ಪ್ರತಿಬಿಂಬಕ್ಕೆ ಗೊಂದಲದಲ್ಲಿ ಕುಕ್ಕುವ ಹಕ್ಕಿಗಳನ್ನು ಕಂಡಾಗೆಲ್ಲ ನನಗೆ ಯೋಚನೆಯಾಗುತ್ತಿತ್ತು. ಪ್ರಾಣಿಪಕ್ಷಿಗಳಿಗೆ ತಮ್ಮ ಪ್ರತಿಬಿಂಬ ನೋಡಿ ಏನನ್ನಿಸಬಹುದು? ಅದನ್ನು ಕಂಡು ಹಿಡಿವರಾರು? ಪಂಚತಂತ್ರ ಕಥೆಗಳಂತೂ ಬಾವಿಯೊಳಗಿನ ನೀರ ಬಿಂಬವನ್ನು ತೋರಿ ಕಾಡಿನ ರಾಜನಾದ ಸಿಂಹವನ್ನೇ ಬಾವಿಗೆ ಬೀಳಿಸಿ ಮನೆಗೆ ವಾಪಾಸ್ಸು ಬಂದು ತನ್ನ ತಂದೆ ತಾಯಿಗಳನ್ನು ಅಪ್ಪಿಕೊಂಡ ಕಿಲಾಡಿ ಮೊಲದ ಮರಿಯ ಕಥೆಗಳಂಥವನ್ನು ಬಗೆಬಗೆಯಲ್ಲಿ ಸೃಷ್ಟಿಸಿವೆ.

ಉಳಿವಿಗಾಗಿ ಒಂದು ಖಿಲಾಡಿತನ ಹಾಗೂ ಸಮಯ ಪ್ರಗ್ನೆಯನ್ನು ಸಾರಿಸಾರಿ ಹೇಳುವ ಬಾಲ್ಯದ ಕಥೆಗಳ ಹತ್ತಾರು ಚಿತ್ರಗಳು ಅಳಿಯದೆ ಮನದ ಪುಟಗಳಲ್ಲಿವೆ. ನನ್ನಣ್ಣ ಬಾಲ್ಯದಲ್ಲಿ ಬಿಸಿಲಿಗೆ ಕನ್ನಡಿ ಹಿಡಿದು ಮನೆಯ ಹೊರಗಿನ ಗೋಡೆಯ ಮೇಲೆ ಚಿತ್ರಿಸುತ್ತಿದ್ದ ಹೊಳಪಿನ ಬಿಸಿಲು ನೆರಳಿನ ಚಿತ್ತಾರಗಳು, ಅಡಿಗೆ ಮನೆಯ ಹೆಂಚಿಗೆ ಹಾಕಿದ್ದ ಗಾಜುಹೆಂಚಲ್ಲಿ ತೂರಿ ಬೀಳುತ್ತಿದ್ದ ಹೊಳಪಿನ ನೆರಳು ಹೊತ್ತುಹೊತ್ತಿಗು ಧೂಳಕಣಗಳನ್ನು ಮೇಲೆ ಕೆಳಗೆ ಸಿನಿಮಾ ರೀಲಿನಂತೆ ಹಿಡಿದುಬಿಡುತ್ತ ಚಲಿಸುತ್ತಿತ್ತಲ್ಲದೆ, ಒಲೆ ಹಿಂದಿನ ಹೊಗೆ ಹಿಡಿದ ಗೋಡೆಯನ್ನೂ ಬೆಳಕಲ್ಲಿ ಕರ‌್ರಗೆ ಮಿಂಚಿಸುತಿತ್ತು.

ನನ್ನೂರಿನ ನಮ್ಮನೆಯ ಬಾಗಿಲೆದುರಿನಲ್ಲಿ ವಾರೆಯಾಗಿ ಮರದ ಕಟ್ಟಿನ ಮೇಲೆ ಕೂರಿಸಿದ್ದ ದೊಡ್ಡ ಕನ್ನಡಿಯಲ್ಲಿ ನಮ್ಮ ಮಕ್ಕಳ ಪುಟ್ಟ ಪ್ರತಿಬಿಂಬ ನೆಲಕ್ಕೂರಿಕೊಂಡು ಕತ್ತೆತ್ತಿ ನೋಡುತ್ತಿತ್ತು. ಆಗೆಲ್ಲ ಅದರ ಹಿಂದಿನ ಗುಬ್ಬಚ್ಚಿ ಗೂಡಿನಿಂದ ಪುರ‌್ರನೆ ಗಾಳಿಯಲ್ಲಿ ಚಿತ್ರ ಬರೆಯುತ್ತಿದ್ದ ಗುಂಚಲಕ್ಕಿಯ ಹಾರಾಟವನ್ನು ಮರೆಯುವುದು ಹೇಗೆ? ನಮ್ಮೂರ ಬಾವಿಯ ತಳದ ಕನ್ನಡಿಯಲ್ಲಿ ಇಣುಕುತ್ತಿದ್ದ ನಮ್ಮ ಸಣ್ಣ ಚಿತ್ರ ಹಗ್ಗದಲ್ಲಿಳಿವ ಕೊಡದ ತಳಕ್ಕೆ ತಲೆ ಜಜ್ಜಿಕೊಂಡು ನೀರತೆರೆ ಕಣ್ಣು ಕತ್ತಲೆಯಿಟ್ಟಂತೆ ತಿರುಗು ಸುಳಿಯಲ್ಲಿ ತಿರುಗಿ ಇಳಿಬಿದ್ದ ಹಗ್ಗದ ಕುಣಿಕೆಯ ತೊಟ್ಟಿಕ್ಕುವ ನೀರ ಹನಿಯಲ್ಲಿ ತಿಳಿಗೊಳ್ಳುತ್ತ ಮತ್ತೆ ನೀರು
ಕನ್ನಡಿಯಾಗುವ ಬಗೆಯನ್ನು ಇಣುಕಿ ನೋಡುತ್ತಿದ್ದ ನೆನಪು ನೀರ ತೇವದಂತೆ ಮೈಗೆ ಮೆತ್ತಿಕೊಂಡಿದೆ.

ಏರ್‌ಲೈನ್ಸ್‌ನಲ್ಲಿ ಬಿಕಿನಿ ಬೆಡಗಿಯರು; ನಗ್ನರಾಗೋಕೆ ಇಲ್ಲಿದೆ ಸ್ವಾತಂತ್ರ್ಯ!

ಒಮ್ಮೆ ಶನಿವಾರದ ಮಧ್ಯಾಹ್ನ ಸ್ಕೂಲಿನಿಂದ ಬರುವಾಗ ಅಣ್ಣ ಒಂದು ಭೂತಕನ್ನಡಿ ಹಿಡಿದು ತಂದು ಬಿಸಿಲನ್ನು ಚಣ ಹೊತ್ತು ಅದರಲ್ಲಿ ಕಾಯಿಸಿ ಬರೆಯುವ ಪೇಪರ‌್ರನ್ನೇ ಹೊತ್ತಿಸಿದ್ದ. ಅದು ಉರಿದು ಹೋಗಿತ್ತು. ಈಗ ಇಂಥ ಸಾವಿರಸಾವಿರ ಕನ್ನಡಿಗಳು ಆಕಾಶಕ್ಕೆ ಕಣ್ತೆರೆದು ಸೂರ್ಯನಿಗೆ ಕಣ್ಣಿಟ್ಟು ವಿದ್ಯುತ್ ಉತ್ಪಾದನೆಯಲ್ಲಿವೆ. ಇಂದು ಸೂರ್ಯ ಬೆಳಕಿನ ರೂಪವಾಗಿ ಮಾತ್ರ ಉಳಿಯದೆ ಬಂಡವಾಳವೂ ಆಗಿದ್ದಾನೆ.
ಪತ್ತೆದಾರಿ ತೆರೆದದ್ದು ಒಂದೊಮ್ಮೆ ಕನ್ನಡಿ ಪತ್ತೆದಾರಿಕೆ ಕೆಲಸವನ್ನೂ ಮಾಡಿದ್ದಿದೆ.

ಅದು ಹೇಗೆಂದರೆ ಈಗಿನ ನಮ್ಮ ಮನೆಯ ವೆರಾಂಡದಲ್ಲಿ ಪುಸ್ತಕದ ಕಪಾಟಿನ ಬೀರುವಿನ ಗಾಜಿನಲ್ಲಿ ಮನೆಯ ಗೇಟಿಗೆ ಬಂದವರ ಪ್ರತಿಬಿಂಬ ಬೀಳುತಿತ್ತು. ಗೇಟಿನ ಸದ್ದಿಗೆ ಓಡಿ ಬಾಗಿಲು ತೆಗೆಯುವ ಅಥವಾ ನಿರಾಕರಿಸುವ ಹಕ್ಕನ್ನೂ ಅದು ನಮಗೆ ಕೊಡುತಿತ್ತು. ಮನೆಯ ಮುಂದಿನ ನೀರ್ಗೊಳದಲ್ಲಿ ಸಣ್ಣ ಬಣ್ಣದ ಮೀನುಗಳು ದಿನದಿನವೂ ಹೇಗೆ ಖಾಲಿಯಾಗುತ್ತವೆ ಎಂದು ದಿನವೂ ತಲೆ ಕೆಡಿಸಿಕೊಂಡಿದ್ದೆ, ನಾಕೈದು ಮೈಲಿ ದೂರವಿದ್ದ ಹೆಬ್ಬಾಳದ ಕೆರೆಯಿಂದ ಹಾರಿ ಬರುತ್ತಿದ್ದ ಬೆಳ್ಳಕ್ಕಿಯ ಅರಿವೇ ಇಲ್ಲದೆ. ನಮ್ಮ ಬೀರುವಿನ ಗಾಜು ಇದರ ಗುಟ್ಟನ್ನು ಒಂದು ದಿನ ಬಿಟ್ಟುಕೊಟ್ಟೇಬಿಟ್ಟಿತು.
ಮುಂಜಾನೆಯ ಸದ್ದಡಗಿತ್ತು. ಹನ್ನೊಂದರ ಸಮಯ.

ಗಾಜಿನಲ್ಲಿ ಹಸಿರ ಮರೆಯಲ್ಲಿ ನಿಂತ ಬೆಳ್ಳಕ್ಕಿ ಚಿತ್ರವಾಗಿತ್ತು. ಸದ್ದಿಲ್ಲದೆ ನಿಧಾನ ಕಾಲಾಡಿಸಿ ಮೀನು ಆಯ್ದು ತಿನ್ನುವ ಅದರ ಎಚ್ಚರಿಕೆಯನ್ನು ಕಂಡು ನಿಧಾನ ಬಾಗಿಲು ತೆರೆದೆ. ಆಮೌನದಲ್ಲೂ ನನ್ನ ಸುಳಿವು ಸಿಕ್ಕಿ ಅದು ಹಾರಿಹೋಗಿತ್ತು. ನೀರಿನ ಹಾಗೂ ಜೀವ ಸರಪಳಿಯ ಪಾಠವೊಂದನ್ನು ಬಿಟ್ಟು ಹೋಗಿತ್ತು. ನಮಗೆ ಬಳಸು ರಾಜ ಮಾರ್ಗದ ಐದು ಮೈಲಿಯ ಹೆಬ್ಬಾಳದ ಕೆರೆ ಅದಕ್ಕೆ ಪಕ್ಷಿನೋಟ. ಬೆಟ್ಟದ ಎತ್ತರೆತ್ತರಕ್ಕೆ ಹೋದಂತೆಲ್ಲ ಹತ್ತಿರದ ಒಟ್ಟು ನೋಟಕ್ಕೆ ದಕ್ಕುತ್ತ ಚಿತ್ರಗಳಾಗಿ ನಿಲ್ಲುವ ಕೆರೆತೊರೆಗಳು, ಗುಡ್ಡಬಯಲುಗಳು ನೆನಪಾಗಿದ್ದವು.

ಇನ್ನೊಮ್ಮೆ ನಮ್ಮ ಮನೆಯ ಮಹಡಿಯ ಮೇಲೆ ಅದೇನೋ ಸಾಹಿತ್ಯದ ಚರ್ಚೆ ಜೋರು ನಡೆಯುತಿತ್ತು. ಟೀಪಾಯಿಯ ಗಾಜಿಗೆ ಗಲ್ಲ ಊರಿದ್ದ ಹೆಣ್ಣು. ಖುರ್ಚಿಯಲ್ಲಿ ಕುಳಿತ ಗಂಡು. ಹೆಣ್ಣು ಬೆರಳು ತೋರಿದ ಕಡೆ ನನ್ನ ಕಣ್ಣು ಹೋಗಿತ್ತು. ಕಿಟಕಿಯಿಂದಾಚೆಗಿನ ಆಗಸದಲ್ಲಿ ಹಾರುತ್ತಿದ್ದ ಬೆಳ್ಳಕ್ಕಿಯ ಚಿತ್ರ ನಮಗೆ ಕಾಣುತ್ತಿರಲಿಲ್ಲ. ಆದರೆ ಗಾಜಿನಲ್ಲಿ ಅದರ ಪ್ರತಿಬಿಂಬ ಮೋಡಗಳ ನಂಟಿನೊಡನೆ ಸದ್ದಿಲ್ಲದೆ ಹಾರುತ್ತಿದ್ದುದು ನನಗೂ ಕಾಣಿಸಿತ್ತು .

ಮುದದಿಂದ ಆ ದೃಶ್ಯ ಕಂಡ ಗಂಡು ಮಾತಿಲ್ಲದೆ ತನ್ನ ಒಂದು ಪ್ರೇಮಗೀತೆಯಲ್ಲಿ ಆ ಕನಸನ್ನು ದಾಖಲಿಸಿದ್ದ. ಅದನ್ನು ಓದಿದೊಡನೆಯೇ ಅವರಿಬ್ಬರೂ ಪ್ರೇಮಿಗಳೆಂದು ಅನುಮಾನವಿದ್ದುದು ನಿಜವಾಗಿ ಅರಿವಿಗೆ ಬಂದಿತ್ತು. ಇಂಥದ್ದೇ ಗುಟ್ಟಿನ ಇನ್ನೊಂದು ಪ್ರೇಮಸಂಭ್ರಮ. ಅಂದು ಪ್ರೇಮಿ ಕನ್ನಡಿಯ ಮುಂದೆ ನಿಂತು ತಮ್ಮಿಬ್ಬರ ಜೋಡಿ ಪ್ರತಿಬಿಂಬವನ್ನು ನೋಡುತ್ತ ಅವಳೊಡನೆ ಗುಟ್ಟಾಗಿ ನಿವೇದಿಸಿಕೊಂಡಿದ್ದ. ಈ ಕನ್ನಡಿಯಲ್ಲಿ ಕಂಡ ನಮ್ಮಿಬ್ಬರ ಬಿಂಬಗಳು ದಾಖಲಾಗಿ ಉಳಿದುಹೋದರೆ ಅನ್ನುವ ಅವನ ಅಂತರಾಳದ ಭಯಮಿಶ್ರಿತ ವಾಕ್ಯವನ್ನು ಮನೆಯಲ್ಲಿ ಕೋಲಾಹಲ ಎಂದು ಬಿದ್ದು ಬಿದ್ದು ನಗುತ್ತ ಅವಳು ಆ ಮಾತನ್ನು ಮುಗಿಸಿದ್ದಳು. ಬೆನ್ನಿಗೆ ಅಂಟಿಕೊಂಡ ಕಿಟಕಿಯಲ್ಲಿ ನಮ್ಮನ್ನು ನೋಡುವ ಕಣ್ಣುಗಳಿರುತ್ತವೆ ಎಂದು ಭಯಪಡುವವನನ್ನು ನೋಡಿ ಇವಳಿಗೆ ಆಗ ಹೊಟ್ಟೆ ಹುಣ್ಣಾಗುವಷ್ಟು ನಗು ಬಂದಿತ್ತು. ಆದರೆ ಆ ಸಂಬಂಧ ಕಳೆದುಹೋಗಿತ್ತು.

ಇವಳು ನೋಯುವಾಗ ಎಂದಿಗೂ ಅವನು ಕಣ್ಣಲ್ಲಿ ಕಣ್ಣಿಟ್ಟು ತನ್ನ ಬಿಂಬವನ್ನು ಕಾಣಲಿಲ್ಲ. ಅದು ತನಗೆ ತಿಳಿಯದೇ ಹೋಯಿತಲ್ಲ! ಎಂದು ಕನ್ನಡಿಯ ಮುಂದೆ ಈಗಲೂ ಪರಿತಪಿಸುತ್ತಾಳೆ. ಕದ್ದು ಹಾಲು ನೆಕ್ಕುವಾಗ ಬೆಕ್ಕು ಕಣ್ಣು ಮುಚ್ಚಿಕೊಳ್ಳುವ ಪ್ರಶ್ನೆ ಅವಳ ಮನದಲ್ಲಿ ಹಾಗೆ ಉಳಿದು ಹೋಗಿದೆ. ಅವರಿಬ್ಬರ ಎದೆಯೊಳಗಡಗಿಸಿಟ್ಟಿದ್ದ ಮೇರೆ ಮೀರಿದ ಪ್ರೇಮ ನನ್ನೊಳಗೆ ಕನ್ನಡಿಯೊಳಗಿನ ಹಕ್ಕಿಯ ರೆಕ್ಕೆಯಾಗಿ ಹಾರಿ ಬಹಿರಂಗವಾಗಿತ್ತು. ಚಿರಸ್ಥಾಯಿಯಾಗಿ ಆ ನೆನಪನ್ನುಳಿಸಿಕೊಂಡ ಆ ಹೆಣ್ಣು ಕೆಲವು ಕಾಲದ ನಂತರ ಮಂಕಾಗಿದ್ದಳು. ಯಾಕೆಂದರೆ ಗಂಡಿನ ರೆಪ್ಪೆ ಪ್ರೇಮದ ಕಣ್ತಪ್ಪಿಸುತಿತ್ತು.

ಒಂದು ಮುಂಜಾನೆಯ ಪ್ರಯಾಣ ನಾವೊಮ್ಮೆ ಕಾಡು ಹಾದಿಯ ಬೆರಗನ್ನು ನೋಡುತ್ತ ಮುಂಜಾನೆಯ ಪ್ರಯಾಣದ ಸವಿಗಳಿಗೆಯಲ್ಲಿದ್ದಾಗ ಓಡುವ ಮರವನ್ನು ಹಿಡಿದಿಡುವಂತೆ ಅವರೂರಿನ ಒಂದು ತಿರುವಿನಲ್ಲಿ ನಮ್ಮ ಸ್ನೇಹಿತರು ಜೀಪನ್ನು ಗಕ್ಕನೆ ನಿಲ್ಲಿಸಿದ್ದರು. ಪಕ್ಕನೆ ಎದುರಾದ ಒಂದು ಸಣ್ಣ ನೀರ ಕಣ್ಣಡಿಯಾಗಿದ್ದ ಕೊಳ ಈಗತಾನೆ ನಾವು ನೋಡಿಕೊಂಡು ಬಂದಿದ್ದ ಇಡೀ ಬೆಟ್ಟಗುಡ್ಡ ಮರಗಿಡಗಳ ಚೆಲುವನ್ನು ಸೂರ್ಯನ ಎಳೆ ಬೆಳಕಿನ ಚೆಲುವಲ್ಲಿ ತನ್ನ ಚಿತ್ರವನ್ನು ತಾನೇ ನೋಡಿಕೊಳ್ಳುವಂತೆ ತ್ರೀ ಡೈಮೆನ್ಶನ್ನಲ್ಲಿ ಚಿತ್ರಪಟವಾಗಿ ಕಾಣುತಿತ್ತು. ನೀರು ಅಷ್ಟು ತಿಳಿಯಾಗಿತ್ತು. ಮಾತಿಲ್ಲದೆ ಬೊಟ್ಟು ಮಾಡಿ ತೋರಿದ ಸ್ನೇಹಿತರ ಸೂಕ್ಷ್ಮತೆಗೆ ನಾವೇ ಮೂಕರಾಗಿದ್ದೆವು.

ಅಲುಗಾಡದ ಚಿತ್ರ ಶಾಶ್ವತವಲ್ಲ ಎಂಬಂತೆ ನೀರಿನಿಂದ ನೀರ್ಗೋಳಿಗಳೆದ್ದು ಇನ್ನೊಂದು ಚಿತ್ರ ಬರೆಯುತ್ತ ಕಲಕಿದ ತೆರೆಗಳನ್ನು ತೆರೆಯುತ್ತ ಸಾಗಿದ್ದವು. ತಿಳಿ ನೀರ ಬೆಳಕಿನ ಮೇಲೆ ಇರುಳು ಚಲಿಸುವಂತೆ ನೀರ್ಗೋಳಿ ಹಿಂಡು ಸಾಗುತ್ತಿದ್ದವು. ಹೀಗೆ ನೆಲಕ್ಕಂಟಿಕ್ಕೊಂಡೆ ಚಲಿಸುವ ಜೀವಗಳು ನೀರುನೆಳಲಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುತ್ತವೆ. ಆಗಸದಲ್ಲಿ ಹಾರುವ ಹಕ್ಕಿ ನೀರಿನಾಳಕ್ಕೆ ಇಳಿಯುತ್ತಿರುತ್ತದೆ. ಮರ ಹತ್ತುವ ಕೋತಿಯ ಪ್ರತಿಬಿಂಬ ಮರ ಇಳಿಯುತ್ತಿರುತ್ತದೆ.

ಅರಮನೆ ಕನ್ನಡಿಗಳು

ಮೈಸೂರಿನರಮನೆಗೆ ಹೋದರೆ ಅಲ್ಲಿ ದೊಡ್ಡ ಆಳುದ್ದ ಊರಗಲದ ಕನ್ನಡಿಗಳು ಥರಂಥರ ಚಿನ್ನ, ಬೆಳ್ಳಿ, ದಂತ, ಮರದ ಕಟ್ಟು ಹಾಕಿಸಿಕೊಂಡು ಪ್ರಭುತ್ವದ ದಂತಗೋಪುರವನ್ನೇರಿದ ದೊಡ್ಡಸ್ತಿಕೆಯನ್ನು ತೋರುತ್ತ ನಮ್ಮನ್ನು ಕುಬ್ಜರನ್ನಾಗಿಸುತ್ತ ಅರಮನೆಯ ತುಂಬಾ ತೋರುತ್ತವೆ. ಆದರೆ ಕೊನೆಯ ನಿರ್ಗಮನದ ಹಾದಿಯಲ್ಲಿರುವ ಚಿತ್ರವಿಚಿತ್ರ ಅಸಡಾಳ ಬಶಡಾಳ ಅಡ್ಡಡ್ಡ ಉಡ್ಡುದ್ದ ವಾರೆಕೋರೆ ವಿಕಾರಗಳನ್ನು ತೋರುವ ಭೂತಕನ್ನಡಿಗಳು ದಾರಿಹೋಕರನ್ನು, ಜನಸಾಮಾನ್ಯರನ್ನು, ಕೆಳವರ್ಗದವರನ್ನು ಬೆಚ್ಚಿಬೀಳಿಸುವಂತೆ, ಆ ರೂಪಗಳು ಕೊನೆಗೆ ತಮ್ಮ ರೂಪವನ್ನು ನೋಡಿ ಅವೇ ಬಿದ್ದು ಬಿದ್ದು ನಗುವಂತೆ ಮಾಡುತ್ತವೆ.

ಇವು ಪ್ರಭುತ್ವದ ವಿಕಾರವನ್ನು ತೋರುತ್ತಲೇ ಸಾಮಾನ್ಯ ಜನರನ್ನು ಪ್ರಭುತ್ವ ಬೇಕಾದ ಹಾಗೆ ತನ್ನ ತಕ್ಕಡಿಗೆ ಹಾಕಿ ತೂಗುತ್ತಿರುವಂತೆ ಈಗಲೂ ನನಗನ್ನಿಸುತ್ತದೆ. ಅದರ ವಿಕಾರ ನೋಡಿ ನಗುವುದು ಮನ ಬಿಚ್ಚಿದ ನಗುವಲ್ಲ. ಸಮಾಜದ ಹಿಡಿಕಟ್ಟು ಬಿಂಬದಾಚೆಗಿನ ತನ್ನ ಪ್ರತಿಬಿಂಬವನ್ನು ತಾನೇ ಅಗ್ಗಗೊಳಿಸಿದಾಗ ಬಂದ ಬೇಸ್ತುಬಿದ್ದ ನಗೆ. ಕನ್ನಡಿ ಹೊರಗೂ ಒಳಗೂ ನಮ್ಮ ದೊಡ್ಡಜ್ಜನ ದೊಡ್ಡ ಮನೆಯಲ್ಲಿ ಏಣಿ ಮೆಟ್ಟಿಲ ಕೆಳಗೆ ಪಾಳು ಬಿದ್ದ ಗುಡಿಯಂತೆ ಮರದ ಕಟ್ಟು ಹಾಕಿದ ಒಂದು ಸಣ್ಣ ಕನ್ನಡಿ ತೂಗುಬಿದ್ದಿತ್ತು. ಅದರೊಳಗೆ ಇಣುಕದ ಯಾವಾಗಲೂ ಕೆಲಸ ಬೊಗಸೆಯಲ್ಲಿರುತ್ತಿದ್ದ ಹೆಂಗಸರು ಗಂಡಸರ ತುಂಬು ಮನೆ ಪ್ರಪಂಚವದು.

ಸಂಜೆ ಬಾವಿ ನೀರಿಗೆ ಹೋಗುವ ಮುನ್ನ ಕೊಂಚ ಕೆಲಸ ಕೈಬಿಟ್ಟ ಸಮಯದಲ್ಲಿ ಹೆಂಗಸರು ಎಣ್ಣೆ ಹಚ್ಚಿಕೊಳ್ಳುವುದು, ಹೇನು ನೋಡಿಕೊಳ್ಳುವುದು, ತಲೆ ಕೆರೆದುಕೊಂಡು ಗಂಟು ಹಾಕಿಕೊಳ್ಳುವವರೆಗು ನಗೆಚಾಟಿಕೆಯಲ್ಲಿ ಗುಂಪು ಅಲ್ಲಿ ತಲ್ಲೀನವಾಗಿರುತಿತ್ತು. ಒಬ್ಬರ ಬೆಳಕಲ್ಲಿ ಒಬ್ಬರು ಮೀಯುತ್ತಿದ್ದ ಅವರಾರಿಗೂ ಕನ್ನಡಿಯ ಅಗತ್ಯವೇ ಇರಲಿಲ್ಲ. ಬ್ಯಾಸಾಯದ ಮನೆಗಳಲ್ಲಿ ಅದಕ್ಕೆ ಪುರುಸೊತ್ತು ಇರುತ್ತಿರಲಿಲ್ಲ. ಆದರೆ ಅಂಗೈಗಲದ ಗಾಜಿನ ಚೂರೊಂದನ್ನು ಎಲ್ಲಿಂದಲೋ ಸಂಪಾದಿಸಿ ತಂದಿದ್ದ ನಮ್ಮೂರ ದ್ಯಾವಯ್ಯ ತನ್ನ ಮನೆಯಲ್ಲಿ ಅಮೂಲ್ಯವೆಂಬಂತೆ ಅದನ್ನು ಕೈಗಾರೆಗಚ್ಚಲ್ಲಿ ಹೊಂದಿಸಿ ಅದರ ಸುತ್ತ ಒಂದು ಖಾವಿಬಣ್ಣದ ಚಿತ್ರ ಕೊರೆದು ತನ್ನ ಸುಂದರವಾದ ಹೆಣ್ಣುಮಕ್ಕಳಿಗೆ ಗೋಡೆಗನ್ನಡಿ ಮಾಡಿಕೊಟ್ಟಿದ್ದ. ಕತ್ತಲು ಕೋಣೆಯೊಳಗೂ ಬಿಸಿಲು ಕಾಲದಲ್ಲಿ ಅದು ಅವನ ಮಕ್ಕಳಂತೆ ಹೊಳೆಯುತಿತ್ತು.

ಟೇಪು ಹೆಣೆದುಕೊಂಡ ಗೌರಿ ಗುಂಗುರುಗೂದಲನ್ನು ಪಟ್ಟು ಹಾಕಿ ಹೇರ್ಪಿನ್ನದಲ್ಲಿ ಬಂಧಿಸುವಾಗ ಅದನ್ನು ಬಗ್ಗಿ ನೋಡಿಕೊಳ್ಳುತ್ತಿದ್ದಳು. ಅರಿವು ಬರುವ ಮುನ್ನ ನನ್ನ ಅಕ್ಕನನ್ನು ಹಾಸನದ ಕೋಟೆಯ ಸರ್ಕಾರೀ ನೌಕರರ ಮನೆಗೆ ಮದುವೆ ಮಾಡಿಕೊಟ್ಟಿತ್ತು. ಅವರ ಮನೆಯಲ್ಲಿ ಅತ್ಯಂತ ಸುಸಜ್ಜಿತವಾಗಿ ಮನೆಯ ಪೀಠೋಪಕರಣಗಳನ್ನು ಸೊಳ್ಳೆ ಪರದೆಗಳನ್ನು, ಕಿಟಕಿಯ ಬಾಂಬೇ ಡೈಯಿಂಗ್ ಬಟ್ಟೆಯ ಹೂವಿನ ಪರದೆಗಳನ್ನು ಹಾಕಿದ್ದರು. ಅವು ನಮ್ಮ ಎಳೆ ಕಣ್ಣುಗಳಲ್ಲಿ ಮಿಂಚುತ್ತಿದ್ದವು.

ಮರದ ಊಟದ ಟೇಬಲ್, ಗಾಜು ಕಪಾಟುಗಳು, ಮೂಲೆ ಸ್ಟ್ಯಾಂಡುಗಳು, ಸಾಲು ಖುರ್ಚಿಗಳು, ಕರೆಂಟ ಸ್ಟೌಗಳು, ನೀರು ಕಾಯಿಸಲು ಹಂಡೆಗೆ ಇಳಿಬಿಟ್ಟ ಹೀಟರ್ಗಳು ಹೀಗೆ. ಹಾಗೆಯೇ ಅವರ ಮನೆಯ ರೂಮುಗಳಲ್ಲಿ ಕೋಟು ಟೋಪಿ ಟೈಗಳನ್ನು ತಗುಲಿ ಹಾಕುವ ಗೂಟವಿದ್ದ ಸ್ಟ್ಯಾಂಡುಗಳು, ಅಲಂಕರಿಸಿದ್ದ ಮಂಚ, ಸೊಳ್ಳೆಪರದೆಗಳು ಶಿಸ್ತುಬದ್ಧವಾಗಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿವೆ. ಅವರ ಮನೆಯ ಮಂಚದಲ್ಲಿ ತಲೆಯ ಕಡೆಗೆ ದೇವರ ಫೋಟೊಗಳಿದ್ದವು. ಕಾಲು ಕಡೆಯ ಹಲಗೆಯುದ್ದಕ್ಕೂ ದೊಡ್ಡ ಕನ್ನಡಿ ಹೊಂದಿಕೊಂಡಿದ್ದವು. ಹೋದಾಗೆಲ್ಲ ಕುತೂಹಲದಿಂದ ಬಾಗಿಲ ಪರದೆ ಸರಿಸಿ ರೂಮಿಗೆ ಒಮ್ಮೆ ಇಣುಕು ಹಾಕುತ್ತಿದ್ದೆ. ಅಂತೆಯೇ....ಆ ದಿನವೂ ಅವರ ಮನೆಗೆ ಹೋದಾಗ ಬಾಗಿಲ ಪರದೆ ಸರಿಸಿ ಮೆಲ್ಲಗೆ ಇಣುಕಿದೆ.

ಒಂದು ಬೆಟ್ಟದಂತೆ ಬಿದ್ದಿದ್ದ ದೇಹ ವಿಕಾರವಾಗಿ ಕನ್ನಡಿಯಲ್ಲಿ ಕಾಣಿಸಿಕೊಂಡಿತು. ದೊಡ್ಡ ಗೊರಕೆಯ ಸದ್ದು. ಯಾವಾಗೂ ಸುಂದರವಾಗಿ ತೋರುತ್ತಿದ್ದ ಮಂಚಗನ್ನಡಿ ಅಂದು ವಿಕರಾಳ ರೂಪ ತೋರಿ ಹೇವರಿಕೆಯಿಂದ ಓಡಿಹೋಗುವಂತೆ ಮಾಡಿತ್ತು. ಯಾಕೆಂದರೆ ಆ ದೇಹದ ಒಡತಿ ಅಕ್ಕನ ಚಿಕ್ಕತ್ತೆ. ಅಪರೂಪದ ಸಹನಶೀಲ ಅಕ್ಕನ ಅತ್ತೆಮ್ಮನಿಗೆ ಈ ತಂಗಿ ದ್ರುಷ್ಟಿ ಬೊಟ್ಟಿನಂತಿತ್ತು. ಯಾವಾಗಲೂ ಎಲ್ಲರನ್ನು ಬಯ್ಯುತ್ತ, ತನ್ನಕ್ಕನ ಸೊಸೆಯಂದಿರ ಮೇಲೆ ಸವಾರಿ ಮಾಡುತ್ತ, ಬಂದಾಗೆಲ್ಲ ರುಚಿರುಚಿ ಅಡುಗೆ ಉಂಡು ಡರ‌್ರನೆ ಹೂಸುತ್ತ, ಸಣ್ಣ ಮಕ್ಕಳಿಗೆ ಹೊಡೆಯುತ್ತ ಸಾಕುಬೇಕು ಅನ್ನುವಂತೆ ಮಾಡುತ್ತ... ಹದಿನೈದು ದಿನ ದರ್ಬಾರು ನಡೆಸಿ ತನ್ನ ಊರು ಸೇರುತಿತ್ತು. ನೋಡಲು ಚೆನ್ನಾಗಿಯೇ ಇದ್ದರೂ ಅಂದು ಅದರ ನಿದ್ದೆಯ ಆರಡಿ ಗುಡ್ಡದಂಥ ದೇಹವನ್ನು ತೋರಿದ್ದನ್ನು ಕಂಡ ಮೇಲೆ ಆ ಮಂಚಗನ್ನಡಿಯ ಮೋಹ ಕಳೆದು ಹೋದದ್ದು ಇಂದಿಗು ಮನದಲ್ಲಿ ಉಳಿದಿದೆ.

ಮಲತಾಯಿ ಕನ್ನಡಿಯಲ್ಲಿ ಜಗತ್ತಿನ ಸುಂದರಿ ಯಾರು? ಎಂದು ಕೇಳಿ ಅದು ಮಲಮಗಳನ್ನು ಹೆಸರಿಸಿದಾಗ ಇವಳು ಉರಿದುಬಿದ್ದು ಸಿಂಡ್ರೆಲ್ಲಾ ಬಾಲೆ ಯನ್ನು ಕಾಡಿಗಟ್ಟಿ ಸಾಯಲು ಚಿತ್ರಹಿಂಸೆ ಕೊಟ್ಟಿದ್ದು, ಆದರೆ ಕಾಡು ಅವಳನ್ನು ಕಾಪಾಡಿಕೊಂಡು ರಾಜಕುಮಾರನ ಜೊತೆ ಕಳಿಸಿದ ಕಥೆ ಇಂಥದ್ದೇ ಒಂದು. ಅದೇ ಮನೆಯಲ್ಲಿ ನನ್ನಕ್ಕನ ನೀಲಿ ಬಣ್ಣದ ಹರಳಿರುವ ಚಿನ್ನದ ಓಲೆ ಅದೂ ಬೀರುವಿನಲ್ಲಿಟ್ಟದ್ದು ಕಳೆದುಹೋಗಿತ್ತು. ಯಾರದ್ದೋ ಮಾತು ಕೇಳಿ ಕಳ್ಳರನ್ನು ಹುಡುಕಲು ಅಂಜನ ಹಾಕುವವರ ಬಳಿ ಹೋದರು.

ಅಂಜನ ನೋಡಲು ಬಾಲೆಯೊಬ್ಬಳು ಬೇಕೆಂದು ನನ್ನನ್ನು ಕರೆದುಕೊಂಡು ಹೋದರು. ಅದೊಂದು ಕಣ್ಕಟ್ಟು ವಿದ್ಯೆ. ಸಾಲಗಾಮೆ ರೋಡಿನಲ್ಲಿದ್ದ ಸಣ್ಣಪುಟ್ಟ ಮಂತ್ರ ಹಾಕುವವರ ಮುಂದೆ ಹೋಗಿ ಕೂತೆವು. ಅವರು ಮಂತ್ರಿಸಿದ ಒಂದು ಬೊಟ್ಟು ಗಾಜಿನ ರೀತಿಯಲ್ಲೇ ಇದ್ದ ಅಂಜನವನ್ನು ನನ್ನ ಮುಂದಿಟ್ಟರು. ಅದರೊಳಗೆ ಯಾರಾದರೂ ಕಾಣ್ತಾರಾ ನೋಡವ್ವ? ಎಂದ ಮಂತ್ರದವನ ಪ್ರಶ್ನೆಗೆ ಹೌದು ಎಂದೆ. ಯಾರು ಕಾಣ್ತಾರೆ? ಬೀರು ಯಾರು ತೆಗೆದ್ರು? ಅಂದದ್ದಕ್ಕೆ ಮನೆಯಲ್ಲಿ ಅಂಜನದ ವಿವರ ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿಸಿಕೊಂಡಿದ್ದ ನಾನು ನಿಜವಾಗಿಯೂ ದಾರಿ ತೆರೆದಿಟ್ಟು ನೋಡಿದಂತೆ ಆ ರೂಮಿನಲ್ಲಿ ಮಲಗುತ್ತಿದ್ದ ನನಗಿಷ್ಟವಿಲ್ಲದ ನನ್ನಕ್ಕನ ಚಿಕ್ಕತ್ತೆಯನ್ನು ಆರೋಪಿಸಿಬಿಟ್ಟೆ.

ನಿಜವಾಗಿ ಹೇಳಬೇಕೆಂದರೆ ನನಗಲ್ಲಿ ಏನೂ ಕಂಡಿರಲಿಲ್ಲ. ನಮ್ಮೂರ ಸುಡುಗಾಡು ಸಿದ್ಧ ಕಣ್ಣಿಗೆ ಇಂಥದ್ದೇ ಅಂಜನದ ಕಪ್ಪನ್ನು ಬಳಿದುಕೊಂಡು ಬರ್ತಾನೆ ಎಂದು ನಮ್ಮೂರಿನವರು ಮಾತಾಡಿಕೊಳ್ಳುತ್ತಿದ್ದರು. ಅದಕ್ಕೆ ಅವನಿಗೆ ಹಿಂದೆ ಹೋಗೋದು ಮುಂದೆ ಆಗೋದು ಕಾಣುಸ್ತದೆ ಕಣ್ರೇ ಹುಡ್ಲಾ ಎಂದು ಅಜ್ಜಮ್ಮ ಹೇಳುತಿತ್ತು. ಅದರ ಪ್ರಭಾವವೂ ನನ್ನೊಳಗೆ ಸೇರಿಕೊಂಡು ಈ ಅಂಜನ ಅನ್ನೋದು ಒಂದು ಕಟ್ಟುಕಥೆಯನ್ನು ನನ್ನ ಬಳಿ ಹೇಳಿಸಿಬಿಟ್ಟಿತ್ತು. ಆ ಸಮಯದಲ್ಲಿ ನನ್ನಕ್ಕನ ಜೀವನದಲ್ಲಾದ ಸಣ್ಣ ಏರುಪೇರುಗಳಿಗೆ ನೀಲಿ ಹರಳನ್ನು ಕಳೆದುಕೊಳ್ಳಬಾರದು. ಕಳೆದರೆ ಕಷ್ಟ ಕಟ್ಟಿಟ್ಟ ಬುತ್ತಿ ಎಂದು ಎಲ್ಲರು ಷರಾ ಬರೆದಿದ್ದರು.

 ಭರತನೇ ತನ್ನ ಪಾಲಿನ ವರ! ಕೈಕೇಯಿಯ ಏಳಿಗೆಯೇ ತನ್ನ ದೈವ ವೆಂದು ಜೀವನ ಮಾಡಿದ ಕುರೂಪಿ ಮಂಥರೆ ಕನ್ನಡಿಯನ್ನು ತಂದು ಚಂದ್ರನನ್ನು ತೋರಿ ಅದು ಬೇಕೆಂದು ರಚ್ಚೆಹಿಡಿದು ಅಳುತ್ತಿದ್ದ ರಾಮನಿಗೆ ತೋರಿಸಿ ಸುಮ್ಮನಾಗಿಸಿದ ಕಥೆ ಯಾರಿಗೆ ತಿಳಿದಿಲ್ಲ. ಆದರೆ ಅವಳ ಮುದ್ದು ಉಕ್ಕಿದ ನಿರ್ಮಲ ಮಮತೆಯ ಪ್ರೀತಿಯ ತೋಳನ್ನು ತುಚ್ಚೀಕರಿಸಿದ ಕೌಸಲ್ಯೆಯ ಅಂದಿನ ನಡವಳಿಕೆ ರಾಮಾಯಣಕ್ಕೆ ನಿಜ ಕಾರಣವಾಯಿತು. ನಮ್ಮನ್ನು ನಾವು ನೋಡಿಕೊಳ್ಳುವ ಇಂಥ ಕನ್ನಡಿಯ ಕಥೆಗಳು ಜಗದ ತುಂಬ ಪ್ರತಿಫಲಿಸುತ್ತಿವೆ. ಆದರೇನು? ಅರಿವೇ ನಮ್ಮ ಕನ್ನಡಿ ಯೆಂದು ನಾವು ಅರಿಯುತ್ತೇವೆಯೇ?

ನಾನು...ನಮ್ಮ ಕಣ್ಣೊಳಗೆ ಕಾಣುವ ಪ್ರೀತಿ ಅನುರಾಗಗಳೊಡನೆ ದ್ವೇಷ, ಅಸೂಯೆ, ಹಾಗೆಯೇ ಭಯ ಹೇವರಿಕೆಗಳನ್ನು ತೋರುವ ನಮ್ಮ ಕಣ್ಣಕನ್ನಡಿಗಳು ನಿಜರೂಪದವು ಎಂದುಕೊಳ್ಳುತ್ತೇನೆ. ಕಣ್ಣ ಕರೆಗಳು, ನಿರಾಕರಣೆಗಳು, ನಮ್ಮ ಸಂಬಂಧಗಳನ್ನೂ ನಿಯಂತ್ರಿಸುತ್ತಿರುತ್ತವೆ. ಮನ ತಿಳಿಯಾಗಿದ್ದರೆ ನಮ್ಮ ಹೊರ ರೂಪವೂ ಹೊಳೆಯುತ್ತದೆ. ಮುಖವೇ ಮನಸ್ಸಿನ ಕನ್ನಡಿ. ಅಂತೆ ಮನಸ್ಸಿನಂತೆ ನಮ್ಮ ಮಾದೇವನೂ ಅದರೊಳಗೆ ಇಣುಕುವನು. ಗಾದೆ ಮಾತು ಸುಳ್ಳಲ್ಲವಂತೆ ! ನಿಜವೇ ಕನ್ನಡಿ? ನಿಜವೆನ್ನುವುದು ಕನ್ನಡಿಯೊಳಗಿನ ಗಂಟೇ? ಕನ್ನಡಿಯೇ.

- ಹೆಚ್ ಆರ್ ಸುಜಾತಾ

click me!