ನಿಮ್ಮ ಜಮೀನಲ್ಲಿ ಎರೆಹುಳು ಬರುವಂತೆ ಮಾಡಿದ್ರೆ ಕೈತುಂಬಾ ಹಣವೂ ಬರುತ್ತೆ!

By Suvarna NewsFirst Published Dec 3, 2019, 1:53 PM IST
Highlights

ತೋಟದಲ್ಲಿ ಏನಾದರೂ ಕೆಲಸ ಮಾಡುವಾಗ, ಉಳುಮೆ ಮಾಡುವಾಗ ಎರೆಹುಳು ಕಾಣಿಸತೊಡಗಿದರೆ ನಿಮ್ಮ ಜಮೀನು ಆರೋಗ್ಯವಾಗಿದೆಯೆಂದೇ ಲೆಕ್ಕ. ನಿರಂತರವಾಗಿ ರಾಸಾಯನಿಕ ಉಣಿಸಿದ ನಿಮ್ಮ ಜಮೀನು ಕಾಂಕ್ರಿಟ್‌ನಂತಾಗಿರುತ್ತದೆ. ಕೈ ಹಾಕಿ ಹಿಡಿಮಣ್ಣು ತಗೆದುಕೊಳ್ಳಲು ಆಗಲ್ಲ, ಏನಾದರೂ ಸಲಕರಣಿಯಿಂದ ಅಗೆದು ತಗೆದುಕೊಳ್ಳಬೇಕಷ್ಟೆ. ಉಸಿರೇ ಆಡದ, ನೀರೇ ಇಳಿಯದ ಇಂಥ ಜಮೀನಿ ನಲ್ಲಿ ನೀವು ಲಾಭದಾಯಕ ಕೃಷಿ ಮಾಡಲು ಸಾಧ್ಯವೇ ಇಲ್ಲ.

ಎಸ್‌.ಕೆ.ಪಾಟೀಲ್ 

ಕೈಯಲ್ಲಿ ಮಣ್ಣು ಹಿಡಿದಾಗ ಅದರಲ್ಲಿ ಜೀವಂತಿಕೆ ಇರಬೇಕು, ಹಾಗಾಗಬೇಕಾದರೆ ನೀವು ಸಾವಯವ ಅಥವಾ ನೈಸರ್ಗಿಕ ಕೃಷಿ ಅನುಸರಿಸಬೇಕು. ಇವೆರಡಕ್ಕೂ ಇರುವ ವ್ಯತ್ಯಾಸ ಇಷ್ಟೆ : ನೀವೇ ಎರೆಹುಳು ಗೊಬ್ಬರ ತಯಾರು ಮಾಡಿ ಹಾಕಿದರೆ ಅದು ಸಾವಯವ ಕೃಷಿ, ಎರೆಹುಳು ತಾನಾಗೇ ಜಮೀನಿನಲ್ಲಿ ಬಂದು ಗೊಬ್ಬರ ಹಾಕಿದರೆ ಅದು ನೈಸರ್ಗಿಕ ಕೃಷಿ. ಇಂದು ಸಾವಯವ ಕೃಷಿ
ಹೆಸರಲ್ಲಿಯೂ ರೈತರನ್ನು ಶೋಷಣೆ ಮಾಡುತ್ತಿರುವುದರಿಂದ ರೈತರು ಸಾಧ್ಯವಾದಷ್ಟು ನೈಸರ್ಗಿಕ ಕೃಷಿಯೆಡೆಗೆವಾಲುವುದು ಒಳ್ಳೆಯದು.

ಜೇನುಕೃಷಿ ಮಾಡಿ ಲಕ್ಷ ಎಣಿಸುವ ಅರವಿಂದ್!

ಹೀಗೆ ಮಾಡಿ

ನೀವು ಒಂದೇ ಸಲಕ್ಕೆ ರಾಸಾಯನಿಕ ಗೊಬ್ಬರ ನಿಲ್ಲಿಸಿ ನೈಸರ್ಗಿಕ ಕೃಷಿ ಮಾಡ್ತಿನಂದ್ರೆ ಅದು ಆಗದ ಕೆಲಸ. ಆದ್ದರಿಂದ ಮೊದಲು ನಿಮ್ಮ ರಾಸಾಯನಿಕಯುಕ್ತ ಜಮೀನಿಗೆ ಚಿಕಿತ್ಸೆ ಕೊಡಿ. ಒಂದು ಎಕರೆಗೆ ಕಮ್ಮಿಯೆಂದರೂ ನಾಲ್ಕೈದು ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಹಾಕಿ. ನಂತರ ಅಲ್ಲಿ ಡಯೆಂಚಾ ಅಥವಾ ಸೆಣಬಿನಂಥ ಹಸಿರೆಲೆ ಗೊಬ್ಬರದ ಬೀಜ ಬಿತ್ತಿ, 40-45 ದಿನಕ್ಕೆ ಅದನ್ನು ಮುಗ್ಗು ಹೊಡೆದು ಮಣ್ಣಲ್ಲಿ ಮುಚ್ಚಿ ಎರಡು ವಾರಗಳ ನಂತರ ನೀವು ಏನು ಬೆಳೀಬೇಕು ಅನ್ಕೊಂಡಿದ್ದೀರೋ ಅದನ್ನು ಹಾಕಿ.

ಈ ಬೆಳೆಗೆ ಬಿತ್ತುವಾಗ ಹಾಗೂ ನಂತರ ತಿಂಗಳಿಗೊಮ್ಮೆ ಎರಡು ಮೂರು ಕಂತುಗಳಲ್ಲಿ ಎರೆಹುಳು ಗೊಬ್ಬರ ಕೊಡಿ. ಮೊದಲ ಸಲವಾದ್ದರಿಂದ ಒಂದು ಎಕರೆಗೆ ಒಂದರಿಂದ ಎರಡು ಟನ್ ಎರೆಹುಳು ಗೊಬ್ಬರ ಬೇಕಾಗಬಹುದು. ಹೆಚ್ಚಾದರೂ ಸರಿ ಏನೂ ಸಮಸ್ಯೆಯಿಲ್ಲ. ಹಾಗೆಯೇ ಮುಖ್ಯವಾಗಿ ಜೀವಾಮೃತ ಬಳಸಲೇಬೇಕು. ಪ್ರತಿ 15-20 ದಿನಕ್ಕೊಮ್ಮೆ ಜೀವಾಮೃತವನ್ನು ಉಣಿಸುವುದು ಹಾಗೂ ಸಿಂಪರಿಸುವುದು ಅವಶ್ಯಕ. ಜೊತೆಗೆ ತೋಟದ ಬೆಳೆಯಲ್ಲಿ ಅಥವಾ ನಿಮ್ಮ ಏಕದಳದ ಬೆಳೆಯಲ್ಲಿ ದ್ವಿದಳ ಧಾನ್ಯದ ಮುಚ್ಚಿಗೆ ಹಾಕಬೇಕು.

10 ಲಕ್ಷ ಸಂಬಳದ ಕೆಲಸ ಬಿಟ್ಟು ಗುಲಾಬಿ ಕೃಷಿಗಿಳಿದ ಇಂಜಿನಿಯರ್‌!

ರಾಸಾಯನಿಕ ವಿಷ ಇಲ್ಲದಿರುವುದು,ಸಾವಯವ ಅಂಶ ಸಾಕಷ್ಟಿರುವುದರಿಂದ,ಜೀವಾಮೃತದ ಮೂಲಕ ಹಸುವಿನ ಗಂಜಲದ ಘಮಲು ಬರುವುದರಿಂದ, ಮಲ್ಚಿಂಗ್‌ನಿಂದ ತಂಪು ವಾತಾವರಣ ಸೃಷ್ಟಿಯಾಗುವುದರಿಂದ ನಿಮ್ಮ ಜಮೀನಿನ ಆಳದಲ್ಲಿ ಸುಪ್ತಾವಸ್ಥೆಯಲ್ಲಿ ಮಲಗಿರುವ ಎರೆಹುಳುಗಳು ಎಚ್ಚರಗೊಳ್ಳುತ್ತವೆ. ಕೆಲವೇ ದಿನಗಳಲ್ಲಿ ನಿಮ್ಮ ಜಮೀನಿನ ಮೇಲೆ ಎರೆಹುಳುಗಳ ದರ್ಶನವಾಗುತ್ತದೆ. ಒಮ್ಮೆ ಹಾಗೆ ಎರೆಹುಳು ಕಾಣಿಸಿಕೊಂಡರೆ ನೀವು ಅರ್ಧ ಗೆದ್ದಂತೆಯೇ ಲೆಕ್ಕ.

ಕರ್ನಾಟಕದಲ್ಲೊಂದು ಬಾಳೆ ಗ್ರಾಮ; ಗದಗ ಜಿಲ್ಲೆಯ ಹಮ್ಮಗಿಗೆ ಭೇಟಿ ನೀಡಿ!

ಮೊದಲ ಒಂದು ಅಥವಾ ಎರಡು ಸಲ ರಾಸಾಯನಿಕ ಕೃಷಿಗಿಂತ ಸ್ವಲ್ಪ ಕಡಿಮೆ ಇಳುವರಿ ಬರುವುದು ನಿಜ. ಆದರೆ ಖರ್ಚು ಕಡಿಮೆ ಯಾಗಿರುತ್ತದೆ. ಎರಡನೇ ಬೆಳೆಗೆ ಹಾಗೂ ಮೂರನೇ ಬೆಳೆಗೆ ಎರೆಹುಳು ಗೊಬ್ಬರದ ಪ್ರಮಾಣವನ್ನು ಕಡಿಮೆ ಮಾಡುತ್ತ ಹೋಗಿ ನಂತರ ಅದನ್ನು ನಿಲ್ಲಿಸಿಬಿಡಬೇಕು. ಕೇವಲ ಜೀವಾಮೃತ, ಎರೆಹುಳು, ಮಲ್ಚಿಂಗ್ ಇವಷ್ಟೇ ನಿಮ್ಮ ಬೆಳೆಯನ್ನು ಸಲಹುತ್ತವೆ. ನಿರಂರವಾಗಿ ಪ್ರತಿ 20 ದಿನಕ್ಕೊಮ್ಮೆ ಜೀವಾಮೃತ ಸಿಂಪರಣೆ ಹಾಗೂ ನೆಲಕ್ಕೂ ಉಣಿಸುವುದು ಮತ್ತು ಮರೆಯದೇ ಮಲ್ಚಿಂಗ್ ಮಾಡುವುದು ಮಾತ್ರ ನಿಮ್ಮ ಕೆಲಸವಾಗಿರುತ್ತದೆ.
(ಎರೆಹುಳು ಜೀವನ ಚರಿತ್ರೆ,  ಎರೆಹುಳು ಗೊಬ್ಬರ ಹಾಗೂ ಎರೆಜಲದ ಮಹತ್ವ ಮುಂತಾದವು ಮುಂದಿನ ಭಾಗದಲ್ಲಿ)

click me!