ಕನ್ನಡದಲ್ಲಿ ತೀರ್ಪು ಬರೆದಿರುವ ನ್ಯಾಯಾಧೀಶ ಮಿಟ್ಟಲಕೋಡ!

By Kannadaprabha News  |  First Published Dec 2, 2019, 3:56 PM IST

ಆಡಳಿತದಲ್ಲಿ ಕನ್ನಡ ಭಾಷೆ ಬರಲಿ ಎನ್ನುವ ಮಾತು ಎಲ್ಲಾ ಕಡೆ ಕೇಳಿ ಬರುತ್ತದೆ. ನ್ಯಾಯಾಂಗದ ವಿಚಾರಕ್ಕೆ ಬಂದರೆ ಈ ಮಾತು ಇನ್ನಷ್ಟು ಜಟಿಲವಾಗುತ್ತದೆ. ಆದರೆ ಧಾರವಾಡದ ನಿವೃತ್ತ ನ್ಯಾಯಾಧೀಶರೊಬ್ಬರು ತಮ್ಮ ಕಾಲಾವಧಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ತೀರ್ಪುಗಳನ್ನು ಕನ್ನಡದಲ್ಲೇ ಬರೆದಿದ್ದಾರೆ. ಯಾರು ಅವರು ಅಂತೀರಾ? ಇಲ್ಲಿದೆ ವಿವರ.


ಸಾಮಾನ್ಯವಾಗಿ ನ್ಯಾಯಾಧೀಶರು ತಾವು ನೀಡುವ ಎಲ್ಲ ತೀರ್ಪುಗಳನ್ನು ಆಂಗ್ಲ ಭಾಷೆಯಲ್ಲಿಯೇ ಬರೆಯುತ್ತಾರೆ. ಆದರೆ, ಕನ್ನಡದ ಭಾಷಾಪ್ರೇಮ ಮತ್ತು ಅಭಿಮಾ ನದ ಫಲವಾಗಿ ಇಲ್ಲೋರ್ವ ನ್ಯಾಯಾಧೀಶರು ತಮ್ಮ ಸೇವಾ ಅವಧಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳ ತೀರ್ಪುಗಳನ್ನು ಕನ್ನಡದಲ್ಲಿಯೇ ಬರೆಯುವ ಮೂಲಕ ಕನ್ನಡಾಭಿಮಾನ ತೋರಿದ್ದಾರೆ.

ಕರ್ನಾಟಕ ಏಕೀಕರಣಕ್ಕೆ ನಾಂದಿ ಹಾಡಿದ ಧಾರವಾಡ ನೆಲದವರಾದ ನಿವೃತ್ತ ನ್ಯಾಯಾಧೀಶ ಎಚ್.ಎಸ್. ಮಿಟ್ಟಲಗೋಡ ಅವರು ತಮ್ಮ ೨೮ ವರ್ಷಗಳ ನ್ಯಾಯಾಧೀಶ ಸೇವೆಯಲ್ಲಿ ತೀರ್ಪುಗಳನ್ನು ಅಲ್ಲದೇ ಅಸಂಖ್ಯಾತ ಆದೇಶಗಳನ್ನು ಕನ್ನಡ ಭಾಷೆಯಲ್ಲಿಯೇ ಮಾಡಿರುವುದು ವಿಶೇಷ.

Tap to resize

Latest Videos

undefined

ಮೊದಲ ತೀರ್ಪು ಕನ್ನಡದಲ್ಲಿ

ನ್ಯಾಯಾಧೀಶರು ನೀಡುವ ತೀರ್ಪುಗಳು ಸಾಮಾನ್ಯ ಜನರಿಗೂ ಅರ್ಥವಾಗಬೇಕು ಎನ್ನುವ ನಿಟ್ಟಿನಲ್ಲಿ ಸ್ಥಳೀಯ ಭಾಷೆಯಲ್ಲಿಯೇ ಪ್ರಕರಣಗಳ ತೀರ್ಪು ನೀಡಬೇಕೆಂಬ ಆದೇಶವಿದ್ದರೂ ಕರ್ನಾಟಕ ಸೇರಿದಂತೆ ಯಾವ ಸ್ಥಳೀಯ ಭಾಷೆಗಳಲ್ಲೂ ತೀರ್ಪುಗಳು ಪ್ರಕಟವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕನ್ನ ಡದಲ್ಲಿ ತೀರ್ಪು ನೀಡಲು ಅನೇಕ ಅಡೆತಡೆಗಳು ಬಂದರೂ ಭಾಷಾ ಪ್ರೇಮದಿಂದ ಮಿಟ್ಟಲಕೋಡ ಅವರು ಕನ್ನಡದಲ್ಲಿಯೇ ತೀರ್ಪು ಪ್ರಕಟಿಸಿದ್ದಾರೆ.

ಭಾಷಾ ಪ್ರೀತಿಗೆ ಎಲ್ಲೆ ಎಲ್ಲಿ.. ಅಮೆರಿಕಾದ ಕನ್ನಡ 'ಕಲಿ'ಗಳು

1985 ರಲ್ಲಿ ತುಮಕೂರು ಚಿಕ್ಕನಾಯಕನಹಳ್ಳಿಯಲ್ಲಿ ನ್ಯಾಯಾಧೀಶರಾಗಿ ಸೇವೆ ಆರಂಭಿಸಿದ ಅವರು ತಮ್ಮ ಮೊದಲ ತೀರ್ಪನ್ನು ಕನ್ನಡದಲ್ಲಿಯೇ ಮಾಡಿದ್ದು, ಆ ಪ್ರತಿಯನ್ನು ಇನ್ನೂ ಕಾಯ್ದುಕೊಂಡಿದ್ದಾರೆ. ಪ್ರಾಥಮಿಕ ಶಾಲೆಯಲ್ಲೂ ಕನ್ನಡ ಮಾಧ್ಯಮದಲ್ಲಿ ಕಲಿತ ಅವರು, ವಕೀಲ ವೃತ್ತಿ ಹಾಗೂ ನ್ಯಾಯಾಧೀಶರಾಗಿ ಕನ್ನಡವನ್ನು ಎಂದಿಗೂ ಬಿಟ್ಟುಕೊಟ್ಟದೇ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ ಮಿಟ್ಟಲಕೋಡ ಅವರು.

ಸವಾಲು ಸ್ವೀಕರಿಸಿದರು

ಚಿತ್ರದುರ್ಗ, ಕೊಪ್ಪಳ, ಕಾರವಾರ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಕನ್ನಡ ತೀರ್ಪು ನೀಡುತ್ತಿದ್ದ ಅವರಿಗೆ ಸಾಕಷ್ಟು ಸವಾಲುಗಳು ಎದುರಾಗಿದ್ದವು. ಶೀಘ್ರಲಿಪಿಕಾರರು ಮತ್ತು ಬೆರಳಚ್ಚುಗಾರರ ಕೊರತೆ ಮಧ್ಯೆ ಕನ್ನಡ ತೀರ್ಪು ಪ್ರಕಟಿಸುವುದು ಸವಾಲಾಗಿಯೇ ಪರಿಣಮಿಸಿತ್ತು. ತೀರ್ಪುಗಳನ್ನು ಸುದೀರ್ಘವಾಗಿ ಬರೆಯಬೇಕಾದ ಕಾರಣ ಕಚೇರಿ ಅವಧಿ ಮುಗಿದ ನಂತರ ಟೈಪಿಂಗ್ ಯಂತ್ರವನ್ನು ತಮ್ಮ ಮನೆಗೆ ತರಿಸಿ ತಡರಾತ್ರಿವರೆಗೂ ಕುಳಿತು ಕಷ್ಟವಾದರೂ ತೀರ್ಪನ್ನು ಕನ್ನಡದಲ್ಲಿಯೇ ಪೂರ್ಣಗೊಳಿಸುತ್ತಿದ್ದರು ಎಂಬುದು ವಿಶೇಷ.

ಕನ್ನಡ ಕಟ್ಟಿದವರು:ಐಟಿ ಮಂದಿಯನ್ನು ಸಾಹಿತ್ಯದೆಡೆಗೆ ಸೆಳೆಯುತ್ತಿರುವ 'ಕಹಳೆ'!

ಮತ್ತೊಂದು ವಿಶೇಷ

ದಾವಣಗೆರೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕನ್ನಡಪ್ರೇಮಿ ಶೀಘ್ರಲಿಪಿಕಾರನೋರ್ವ ಇವರ ಕನ್ನಡಪ್ರೇಮಕ್ಕೆ ತಲೆಬಾಗಿದ ಪರಿಣಾಮ, ತಾವು ವಿಚಾರಣೆ ನಡೆಸಿದ ಸುಮಾರು ಒಂದು ಸಾವಿರ ಪ್ರಕರಣಗಳ ತೀರ್ಪನ್ನು ಕನ್ನಡದಲ್ಲಿಯೇ ಪ್ರಕಟಿಸಿದ್ದನ್ನು ಅವರ ಸ್ಮರಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ಮುಂದೂಡಿಕೆಯಿಂದ ಕಕ್ಷಿದಾರರಿಗೆ ತುಂಬ ಬೇಸರವಾಗುತ್ತದೆ. ಆದ್ದರಿಂದ ಇವರು ಪ್ರಕರಣವನ್ನು ಮುಂದೂಡುವುದು, ವಾರಗಟ್ಟಲೇ ತೀರ್ಪು ಕಾಯ್ದಿರಿಸುವುದರಿಂದ ಕಕ್ಷಿದಾರರಿಗೆ ಸಮಸ್ಯೆಯಾಗಲಿದೆ ಎಂದು ತೀರ್ಪನ್ನು ಬಹುಬೇಗ ಪ್ರಕಟಿಸುತ್ತಿದ್ದರು.

ಇನ್ನು, ಕನ್ನಡ ಭಾಷೆ ಕಾನೂನು ಕ್ಷೇತ್ರದಲ್ಲೂ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಕಾನೂನು ಸಂಬಂಧಿ ಇಂಗ್ಲಿಷ್ ಪದಗಳಿಗೆ ಸಮನಾರ್ಥ ನೀಡುವ ಕನ್ನಡ ಪದಗಳನ್ನು ಹುಡುಕಿ ತೀರ್ಪು ಬರೆದಿದ್ದು ಮತ್ತೊಂದು ವಿಶೇಷ. ಕರ್ನಾಟಕ ಏಕೀಕರಣದ ನಂತರ ಕನ್ನಡ ಭಾಷೆಯಲ್ಲಿಯೇ ಜಿಲ್ಲಾ ಮತ್ತು ಜೆಎಂಎಫ್‌ಸಿ ನ್ಯಾಯಾಲಯಗಳಲ್ಲಿ ತೀರ್ಪು ನೀಡಲು ಸರ್ಕಾರ ಅನುಮತಿ ನೀಡಿದೆ. ಆದರೆ, ಈವರೆಗೂ ಅದು ಜಾರಿಯಾಗಿಲ್ಲ. ಸದ್ಯ ಕನ್ನಡದಲ್ಲಿ ತೀರ್ಪು ನೀಡಲು ಯಾವುದೇ ಆತಂಕವಿಲ್ಲ. ಬೇಕಾದ ಸೌಲಭ್ಯಗಳೂ ಇವೆ.

ಕನ್ನಡ ಕಟ್ಟಿದವರು: ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡಿದ ಉತ್ಸಾಹಿ ಅನಿಲ್ ಶೆಟ್ಟಿ

ಆದರೆ, ಮನಸ್ಸು ಮಾಡಬೇಕಷ್ಟೇ ಎನ್ನುತ್ತಾರೆ ಮಿಟ್ಟಲಕೋಡ ಅವರು. ನಿವೃತ್ತಿ ನಂತರವೂ ಕುಗ್ಗದ ಭಾಷಾಪ್ರೇಮ ೨೦೧೩ರಲ್ಲಿಯೇ ನಿವೃತ್ತರಾಗಿರುವ ಮಿಟ್ಟಲಕೋಡ ಅವರು ನಿವೃತ್ತಿ ನಂತರವೂ ತಮ್ಮ ಭಾಷಾಪ್ರೇಮ ಮಾತ್ರ ಕಡಿಮೆಯಾಗಿಲ್ಲ. ರಾಜ್ಯದ ವಕೀಲರ ಸಂಘಗಳಿಗೆ ಹೋಗಿ ಕಾರ್ಯಾಗಾರಗಳಲ್ಲಿ ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡ ಬಳಕೆ ಕುರಿತು ಸಂವಾದ ಮಾಡುತ್ತಾರೆ. ಕನ್ನಡದ ಕಾನೂನು ಸಾಹಿತ್ಯ ಹೊರಬರಬೇಕು. ಅದಕ್ಕಾಗಿ ರಾಜ್ಯ ಸರ್ಕಾರ ಸಮಿತಿ ರಚಿಸಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಬೇಕು ಎಂಬ ಹೋರಾಟ ಸಹ ನಡೆಸುತ್ತಿದ್ದಾರೆ.

ಕಾನೂನು ದೀಪಿಕಾ, ಬ್ಯಾಂಕ್ ಚೆಕ್‌ಗಳ ಅಮಾನ್ಯತಾ ಅಪರಾಧಗಳು, ಸರ್ಕಾರಿ ವ್ಯಜ್ಯಗಳ ನಿರ್ವಹಣಾ ಕೈಪಿಡಿ ಎಂಬ ಪುಸ್ತಕಗಳನ್ನು ಬರೆದಿದ್ದು, ಆಕರ್ಷ, ಉತ್ಕರ್ಷ ಎಂಬ ಎರಡು ಕವನ ಸಂಕಲನ ಸಹ ಬರೆದಿದ್ದಾರೆ. ಇದರೊಂದಿಗೆ ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಹಲವು ಲೇಖನಗಳನ್ನು ಬರೆದಿದ್ದು, ಕನ್ನಡದಲ್ಲಿ ತೀರ್ಪು ನೀಡಿದ್ದಕ್ಕಾಗಿ ೨೦೦೮ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವರಿಗೆ ಗೌರವ ಸಹ ಸಮರ್ಪಿಸಿದೆ.

ಕಷ್ಟವಾದರೂ ಇಷ್ಟ
ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡ ಬಳಕೆಯನ್ನು ಸಮರ್ಥ ಹಾಗೂ ಪರಿಣಾಮಕಾರಿಯಾಗಿ ಮಾಡಬಹುದು ಎನ್ನಲು ನಾನೇ ಸಾಕ್ಷಿ. ೨೮ ವರ್ಷಗಳ ಕಾಲ ಈ ಕಾರ್ಯ ತುಸು ಕಷ್ಟವಾದರೂ ಇಷ್ಟಪಟ್ಟು ಮಾಡಿದ್ದೇನೆ. ಆದರೆ, ಈಗ ಎಲ್ಲ ಸೌಲಭ್ಯಗಳಿದ್ದು, ನ್ಯಾಯಾಂಗದಲ್ಲಿ ಕನ್ನಡ ತರಲು ಯಾವುದೇ ಆತಂಕವಿಲ್ಲ. ಭಾಷಾಭಿಮಾನದ ಜತೆಗೆ ಭಾವನೆಗಳನ್ನು ಮಾತೃಭಾಷೆಯ ಮೂಲಕವೇ ವ್ಯಕ್ತಪಡಿಸುವುದು ಒಳಿತು. ? ಎಚ್.ಎಸ್. ಮಿಟ್ಟಲಕೋಡ ನಿವೃತ್ತ ನ್ಯಾಯಾಧೀಶ

click me!