Weekend Curfew: ಈ ವಾರ ವೀಕೆಂಡ್ ಕರ್ಫ್ಯೂ ಇರುತ್ತೋ, ಇರುವುದಿಲ್ಲವೋ? ಜ. 21 ಕ್ಕೆ ನಿರ್ಧಾರ

Jan 18, 2022, 8:47 AM IST

ಬೆಂಗಳೂರು (ಜ. 18): ಕೊರೋನಾ ನಿರ್ಬಂಧಗಳ ಕುರಿತು ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಉನ್ನತ ಮಟ್ಟದ ಸಭೆಯಲ್ಲಿ ‘ಕಾದು ನೋಡುವ ತಂತ್ರ’ ಅನುಸರಿಸಲು ಸರ್ಕಾರ ನಿರ್ಧರಿಸಿದ್ದು, ಶುಕ್ರವಾರ (ಜ. 21)  ಮತ್ತೊಂದು ಸಭೆ ನಡೆಸಿ ವಾರಾಂತ್ಯದ ಕರ್ಫ್ಯೂ ಕೈಬಿಡಬೇಕೆ ಅಥವಾ ಮುಂದುವರೆಸಬೇಕೆ ಎಂಬುದನ್ನು ತೀರ್ಮಾನಿಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಈಗಿನ ನಿರ್ಬಂಧಗಳೇ ಮುಂದುವರೆಯಲಿವೆ.

ಸಭೆ ಬಳಿಕ ಮಾತನಾಡಿದ ಸಚಿವ ಅಶೋಕ್‌, ತಜ್ಞರು ಜ.25ರ ವೇಳೆಗೆ ಕೊರೋನಾ ಸಂಖ್ಯೆ ಉಚ್ಛ್ರಾಯ ಸ್ಥಿತಿಗೆ ತಲುಪಲಿದೆ ಎಂದಿದ್ದಾರೆ. ಜ.25ರ ವೇಳೆಗೆ ಸೋಂಕು ಹೆಚ್ಚಾಗಿ ಇಳಿಮುಖದತ್ತ ಸಾಗಿದರೆ ನಿರ್ಬಂಧಗಳು ಅಗತ್ಯವಿಲ್ಲ. ಜ.25ರ ಬಳಿಕವೂ ಸೋಂಕು ಹೆಚ್ಚಾದರೆ ಮಾತ್ರ ಸಮಸ್ಯೆಯಾಗಲಿದೆ. ಹೀಗಾಗಿ ವಾರಾಂತ್ಯದ ಕರ್ಫ್ಯು ಬಗ್ಗೆ ನಿರ್ಧರಿಸಲು ಶುಕ್ರವಾರ ಸಭೆ ನಡೆಸಲಿದ್ದೇವೆ. ಲಾಕ್‌ಡೌನ್‌ನಂತಹ ಕಠಿಣ ನಿರ್ಬಂಧಗಳಿಲ್ಲ. ಇನ್ನು ಮುಂದೆ ನಿರ್ಬಂಧಗಳ ಬದಲಿಗೆ ನಿರ್ಬಂಧ ಸಡಿಲಿಕೆಗಷ್ಟೇ ಗಮನ ನೀಡಲು ಚರ್ಚಿಸಲಾಗಿದೆ ಎಂದು ಹೇಳಿದರು.