ಕುಮಾರಣ್ಣನ ಆಡಳಿತ ಸ್ವಾರ್ಥಕ್ಕೆ, ನನ್ನ ಆಡಳಿತ ಜನರಿಗಾಗಿ: ಡಿ.ಕೆ.ಶಿವಕುಮಾರ್ ವಾಗ್ದಾಳಿ

By Kannadaprabha NewsFirst Published Sep 22, 2024, 4:57 PM IST
Highlights

ಕುಮಾರಣ್ಣನ ಆಡಳಿತ ಸ್ವಾರ್ಥಕ್ಕೆ, ನನ್ನ ಆಡಳಿತ ತಾಲೂಕು ಹಾಗೂ ಜನರಿಗಾಗಿ. ನನ್ನ ಆಡಳಿತವೇ ಬೇರೆ, ಕುಮಾರಣ್ಣನ ಆಡಳಿತವೇ ಬೇರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. 

ಚನ್ನಪಟ್ಟಣ (ಸೆ.21): ಕುಮಾರಣ್ಣನ ಆಡಳಿತ ಸ್ವಾರ್ಥಕ್ಕೆ, ನನ್ನ ಆಡಳಿತ ತಾಲೂಕು ಹಾಗೂ ಜನರಿಗಾಗಿ. ನನ್ನ ಆಡಳಿತವೇ ಬೇರೆ, ಕುಮಾರಣ್ಣನ ಆಡಳಿತವೇ ಬೇರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ಪಟ್ಟಣದ ಆದಿಲ್ ಷಾ (ಟಿಪ್ಪು) ಮೈದಾನದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ದಾಖಲೆ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಲ್ಲಿ ಸಚಿವರು, ಅಧಿಕಾರಿಗಳು ನಿಮ್ಮ ಬಳಿ ಬಂದು ನಿಮಗೆ ಏನು ಬೇಕು ಎಂದು ಕೇಳುತ್ತಿದ್ದಾರೆ. ಹಳೆ ಶಾಸಕರು ನಿಮ್ಮನ್ನು ಬಿಟ್ಟು ಹೋಗಿದ್ದಾರೆ. ಅವರಿಗೂ ಚನ್ನಪಟ್ಟಣಕ್ಕೂ ಸಂಬಂಧವಿಲ್ಲ. ನನ್ನ ಮತ್ತು ಚನ್ನಪಟ್ಟಣ ನಡುವಣ ಸಂಬಂಧ ಭಕ್ತ ಹಾಗೂ ಭಗವಂತ ನಡುವಿನ ಸಂಬಂಧ. ಈ ಭಾಗದವರು ನಾಲ್ಕು ಬಾರಿ ನನ್ನನ್ನು ವಿಧಾನಸಭೆಗೆ ಆರಿಸಿದ್ದಾರೆ. ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.

ಇನ್ನೂ 150 ಎಕರೆ ಖರೀದಿಗೆ ಸಿದ್ಧ: ನಿಮ್ಮ ಮನೆ ಬಾಗಿಲಿಗೆ ಬಂದಾಗ ಈ ಜನ 27 ಸಾವಿರ ಅರ್ಜಿ ನೀಡಿದ್ದಾರೆ. ಅದರಲ್ಲಿ 18 ಸಾವಿರ ಅರ್ಜಿಗಳು, ಮನೆ ಹಾಗೂ ನಿವೇಶನ ಬೇಕು ಎಂದು ಹೇಳಿದ್ದಾರೆ. ಈ ತಾಲೂಕಿನಲ್ಲಿ ನಿವೇಶನ ಹಂಚಿಕೆ ಮಾಡಲು 170 ಎಕರೆ ಜಾಗ ಗುರುತಿಸಲಾಗಿದೆ. ಇನ್ನು 150 ಎಕರೆ ಖರೀದಿ ಮಾಡಲು ನಾವು ಸಿದ್ಧವಾಗಿದ್ದೇವೆ. ಮಾರುಕಟ್ಟೆ ದರ ನೀಡಿ ಜಿಲ್ಲಾಧಿಕಾರಿಗಳು ಖರೀದಿ ಮಾಡಲಿದ್ದಾರೆ. ಈ ಮಾತನ್ನು ಕುಮಾರಣ್ಣನಿಗೆ ಹೇಳಲು ಬಯಸುತ್ತೇನೆ ಎಂದು ಕಾಲೆಳೆದರು. ನಮ್ಮ ಕೇಂದ್ರ ಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ನನ್ನ ಕಾಲದಲ್ಲಿ ಇಂತಹ ಕೆಲಸ ಮಾಡಲಿಲ್ಲ, ಈಗ ಹೇಗೆ ಮಾಡುತ್ತೀರಿ ಎಂದು ಕೇಳುತ್ತಿದ್ದಾರಂತೆ. ಕುಮಾರಣ್ಣ ನಿನ್ನ ಗೊಡ್ಡು ಬೆದರಿಕೆಗಳಿಗೆ ನಾನು ಹೆದರುವವನಲ್ಲ. ನನ್ನದು ಕುಟುಂಬಕ್ಕಾಗಿ ರಾಜಕಾರಣವಲ್ಲ, ತಾಲೂಕು ಹಾಗೂ ಜನರ ಪರವಾದ ರಾಜಕಾರಣ ಎಂದು ಶಿವಕುಮಾರ್ ಹರಿಹಾಯ್ದರು.

Latest Videos

ಅರ್ಜಿ ಕೊಟ್ಟಿರುವ ಎಲ್ಲರಿಗೂ ನೀವೇಶನ ನೀಡುವ ಆಸೆ: ಅರ್ಜಿ ಹಾಕಿರುವ ಎಲ್ಲರಿಗೂ ನಿವೇಶನ, ಮನೆ ನೀಡಲು ನಮಗೆ ಆಸೆ ಇದೆ. ಸಚಿವ ಜಮೀರ್ ಅಹ್ಮದ್ ಅವರು 5,000 ಮನೆ ಮಂಜೂರು ಮಾಡಿದ್ದಾರೆ. ಈಗ ನಿವೇಶನದ ಬದಲು 500 ಚ.ಅಡಿ ಮನೆ ಕಟ್ಟಿಕೊಡೋಣ ಎಂದು ಹೇಳಿದ್ದಾರೆ. ಜಮೀನ್ ಮತ್ತು ನಾನು ಕೂತು ಸಭೆ ಮಾಡಿ ನಿಮಗೆ ಮನೆ ನೀಡುವ ಕೆಲಸ ಮಾಡುತ್ತೇವೆ. 150 ಎಕರೆ ಜಮೀನನ್ನು ಹುಡುಕಿ ಬಡವರಿಗೆ ಸೈಟ್ ಹಂಚುತ್ತಿದ್ದೇವೆ. ಇನ್ನೂ 150 ಎಕರೆ ಖರೀದಿ ಮಾಡಿ ಜನರಿಗೆ ಸೈಟ್ ಕೊಡುತ್ತೇವೆ ಎಂದು ಹೇಳಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಂದೆ ಬೇರೆ ರಾಜ್ಯಕ್ಕೆ ಹೋಗ್ತಾರೆ: ಸಚಿವ ಜಮೀರ್ ಅಹ್ಮದ್‌

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್, ರಹೀಮ್ ಖಾನ್, ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪಂಚಾಯತ್ ಸಿಇಓ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

click me!