Mar 20, 2022, 11:29 AM IST
ಬೆಂಗಳೂರು (ಮಾ, 20): ಉಕ್ರೇನ್‌ನಲ್ಲಿ ಯುದ್ಧಕ್ಕೆ ಬಲಿಯಾದ ರಾಜ್ಯದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ಶನಿವಾರ ಮಧ್ಯಾಹ್ನ ಪೋಲೆಂಡ್ ರಾಜಧಾನಿ ವಾರ್ಸಾದಿಂದ ಭಾರತಕ್ಕೆ ರವಾನಿಸಲಾಗಿದೆ. ಸೋಮವಾರ ಬೆಳಗಿನ ಜಾವ ಬೆಂಗಳೂರು ತಲುಪಲಿದೆ.
ನವೀನ್ ಸ್ವಗ್ರಾಮ ರಾಣೆಬೆನ್ನೂರು ತಾಲೂಕಿನ ಚಳಗೇರೆಯಲ್ಲಿ ಅಂತಿಮ ಹಂತದ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ನವೀನ ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಆತನ ಪೊಷಕರು ಮನೆಯ ಮುಂಭಾಗದ ಸ್ಥಳವನ್ನು ನಿಗದಿಪಡಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರೆ ಗ್ರಾಮದ ನವೀನ್ ಉಕ್ರೇನ್‌ನಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್ ಓದುತ್ತಿದ್ದರು. ಉಕ್ರೇನ್ ರಷ್ಯಾ ಯುದ್ಧದಲ್ಲಿ ಮಾ.1 ರಂದು ರಷ್ಯಾ ಸೈನಿಕರ ದಾಳಿಯಿಂದ ಸಾವಿಗೀಡಾಗಿದ್ದರು. 21 ದಿನದ ಬಳಿಕ ನವೀನ್ ಮೃತದೇಹವನ್ನು ಭಾರತಕ್ಕೆ ತರಲಾಗುತ್ತಿದೆ.