Mar 16, 2023, 8:41 PM IST
ಉತ್ತರ ಕನ್ನಡ (ಮಾ.16): ಇದು 1963-64ರ ಅನುದಾನಿತ ಪ್ರೌಢಶಾಲೆ. ಅಂದು ಅರಣ್ಯಕ್ಕೆ ಸೇರಿದ ಜಾಗದಲ್ಲಿ ನಿರ್ಮಾಣವಾಗಿದ್ದ ಈ ಶಾಲೆಗೆ ಇದೀಗ ದೊಡ್ಡ ಸಂಕಷ್ಟ ಎದುರಾಗಿದೆ. ಅರಣ್ಯ ಜಾಗದಲ್ಲಿದೆ ಅನ್ನೋ ಒಂದೇ ಕಾರಣಕ್ಕೆ ಈ ಶಾಲೆಗೆ ಸರ್ಕಾರದಿಂದ ಯಾವುದೇ ಸವಲತ್ತು, ಅನುದಾನ ದೊರೆಯುತ್ತಿಲ್ಲ. ನೂರು ವಿದ್ಯಾರ್ಥಿಗಳಿರುವ ಈ ಶಾಲೆಯನ್ನು ರಿಪೇರಿ ಮಾಡಬೇಕಂದ್ರೂ ಆಗುತ್ತಿಲ್ಲ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ. ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಸುಮಾರು 1963-64ನೇ ಇಸವಿಯಲ್ಲಿ ನಿರ್ಮಾಣವಾದ ಅಶೋಕ ಪ್ರೌಢಶಾಲೆ ಇದು. ಹಳ್ಳಿಯ ಮಕ್ಕಳಿಗೆ ಶಿಕ್ಷಣ ಸೌಲಭ್ಯ ದೊರಯ ಬೇಕು ಎಂಬ ಉದ್ದೇಶದಿಂದ ಅಂದಿನ ಕಾಲದಲ್ಲಿದ್ದ ಹಿರಿಯರು ಮಹಾತ್ಮಾ ಗಾಂಧಿ ಮೆಮೋರಿಯಲ್ ಶಿಕ್ಷಣ ಪ್ರಸಾರ ಮಂಡಳಿ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮೂಲಕ ಈ ಶಾಲೆಯನ್ನು ನಡೆಸತೊಡಗಿದ್ದರು.
ಆರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಈ ಶಾಲೆಯನ್ನು ನಡೆಸಲಾಗುತ್ತಿತ್ತು. 1974-75ರಲ್ಲಿ ಸ್ವಂತ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಲಾಯ್ತು. ಈವರೆಗೆ ಶಾಲೆಯನ್ನು ಹೇಗೋ ನಡೆಸಿಕೊಂಡು ಬರಲಾಗುತ್ತಿದೆ. ಆದ್ರೆ ಪ್ರಸ್ತುತ ಈ ಶಾಲೆಗೆ ಅಭಿವೃದ್ಧಿಯ ಅಗತ್ಯವಿದೆ. ಈ ಶಾಲೆ ಅನುದಾನಿತವಾಗಿದ್ರೂ, ಕೇವಲ ಅರಣ್ಯ ಜಾಗದಲ್ಲಿದೆ ಅನ್ನೋ ಒಂದೇ ಒಂದು ಕಾರಣಕ್ಕೆ ಸರ್ಕಾರದಿಂದ ಅನುದಾನವೇ ಸಿಗುತ್ತಿಲ್ಲ. ಇದರಿಂದಾಗಿ ಶಾಲೆಯ ರಿಪೇರಿ ಕಾರ್ಯ, ರಂಗಮಂದಿರ ಹಾಗೂ ಇತರ ಅಗತ್ಯತೆಗಳನ್ನು ಇಂದಿಗೂ ದಾನಿಗಳು, ಹಳೇ ವಿದ್ಯಾರ್ಥಿಗಳು ಹಾಗೂ ಶಾಲಾ ಸಮಿತಿ ಸದಸ್ಯರ ಸಹಾಯದಿಂದಲೇ ಮಾಡುತ್ತಾ ಬರಲಾಗುತ್ತಿದೆ. ಇನ್ನೂ ಈ ಶಾಲೆಯಲ್ಲಿ 8ರಿಂದ 10ನೇ ತರಗತಿಯವರೆ ಸುಮಾರು 100ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಈ ಹಿಂದೆ ಶಾಲೆಗೆ ಶೌಚಾಲಯವನ್ನು ಕೂಡ ಧಾನಿಗಳಿಂದಲೇ ನಿರ್ಮಿಸಲಾಗಿದೆ. ಶಾಲೆ ಅರಣ್ಯ ಜಾಗದಲ್ಲಿದೆ ಎಂದು ಸದ್ಯದ ಮಟ್ಟಿಗೆ ಈ ಶಾಲೆಯನ್ನು ಬೇರೆಡೆ ಸ್ಥಳಾಂತರ ಮಾಡುವುದು ಸಾಧ್ಯವಾಗದ ಮಾತು. ಸರ್ಕಾರ ಈ ಜಾಗವನ್ನು ಅರಣ್ಯ ಇಲಾಖೆಯಿಂದ ಶಾಲೆಯ ಸಮಿತಿ ಹೆಸರಿಗೆ ವರ್ಗಾಯಿಸಿದಲ್ಲಿ ಸರ್ಕಾರದಿಂದ ಅನುದಾನ ಪಡೆಯುವುದರೊಂದಿಗೆ ಮಕ್ಕಳಿಗಾಗಿ ಇನ್ನಷ್ಟು ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಲ್ಲಿನ ಸಮಸ್ಯೆಗಳತ್ತ ಗಮನ ಹರಿಸಿ, ಗ್ರಾಮೀಣ ಮಕ್ಕಳ ಭವಿಷ್ಯವನ್ನು ರೂಪಿಸಬೇಕಿದೆ. ಒಟ್ಟಿನಲ್ಲಿ 50 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಸಿದ್ಧಾಪುರ ಹಾರ್ಸಿಕಟ್ಟಾದ ಅಶೋಕ ಪ್ರೌಢಶಾಲೆ ಸರ್ಕಾರದ ನಿರ್ಲಕ್ಷ್ಯಕ್ಕೆ ಅತಂತ್ರವಾಗಿದೆ. ಕೂಡಲೇ ಸರ್ಕಾರ ಅರಣ್ಯಜಾಗದಿಂದ ಈ ಶಾಲೆಯನ್ನ ಶಿಕ್ಷಣ ಇಲಾಖೆಗೆ ವರ್ಗಾಯಿಸಿ, ಮಕ್ಕಳ ಭವಿಷ್ಯಕ್ಕೆ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನ ನೀಡಲಿ ಅನ್ನೋದು ಬಿಗ್-3 ಆಗ್ರಹ.