ನೂರಕ್ಕೆ ನೂರರಷ್ಟು ಲಿಂಗಾಯತ ಅಭ್ಯರ್ಥಿಯೇ ಬಿಜೆಪಿ ಮುಂದಿನ ಸಿಎಂ: ಯತ್ನಾಳ

Apr 27, 2023, 10:39 PM IST

ಬೆಳಗಾವಿ (ಏ.27): ನೂರಕ್ಕೆ ನೂರರಷ್ಟು ಲಿಂಗಾಯತ ಅಭ್ಯರ್ಥಿಯನ್ನೇ ಬಿಜೆಪಿ ಮುಂದಿನ ಸಿಎಂ ಮಾಡಲಿದೆ. ತಾಕತ್ತಿದ್ದರೆ ಲಿಂಗಾಯತರನ್ನೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಲಿ ಎಂದು ಕಾಂಗ್ರೆಸ್ ನಾಯಕರಿಗೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಸವಾಲು ಹಾಕಿದ್ದಾರೆ. ನನ್ನ ಹಾಗೂ ಬಿಎಸ್‌ವೈ ಮಧ್ಯದ ವೈಮನಸ್ಸು ಶಾಶ್ವತವಾಗಿ ಸಮಾಪ್ತಿ ಆಗಿದೆ. ಈ ಹಿಂದೆ ನಮ್ಮಿಬ್ಬರ ಮಧ್ಯೆ ಕೆಲವೊಂದು ವಿಷಯದಲ್ಲಿ ವತ್ಯಾಸಗಳಿದ್ದವು. ಹೈಕಮಾಂಡ್ ಇಬ್ಬರನ್ನು ಕರೆಯಿಸಿ ಮಾತನಾಡಿಸಿದ್ದಾರೆ, ಅವರು ಹಿರಿಯರು ಇಂಥ ನಾಯಕನ ಜೊತೆಗೆ ಜಗಳಾಡುವುದರಲ್ಲಿ ಅರ್ಥವಿಲ್ಲ. ಹೈಕಮಾಂಡ್ ‌ಸಂಧಾನ ತೃಪ್ತಿ ತಂದಿದೆ, ನಮಗೆ ಮೀಸಲಾತಿ ಸಿಕ್ಕಿದೆ ಅಷ್ಟು ಸಾಕು.  ಅವರಿಗೂ ಈಗ ನಮ್ಮ ಬಗ್ಗೆ ಕೆಟ್ಟ ಭಾವನೆಗಳಿಲ್ಲ, ನಮಗೂ ಅವರ ಮೇಲಿಲ್ಲ. ಈ ಕಾರಣಕ್ಕೆ ಹೈಕಮಾಂಡ್ ಸೂಚನೆ ಮೇರೆಗೆ ಜಂಟಿಯಾಗಿ ಪ್ರಚಾರಕ್ಕೆ ಹೋಗ್ತಿದ್ದೇವೆ.

ಲಿಂಗಾಯತರೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಕಾಂಗ್ರೆಸ್ ‌ಘೋಷಿಸಲಿ ಈ ಹಿಂದೆ ವಿರೇಂದ್ರ ಪಾಟೀಲ, ನಿಜಲಿಂಗಪ್ಪ ನಡೆಸಿಕೊಂಡ ರೀತಿಯಿಂದ ಲಿಂಗಾಯತರು ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ. ಕಾಂಗ್ರೆಸ್ ‌ಲಿಂಗಾಯತ ಸಮುದಾಯದ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಬಿಎಸ್‌ವೈ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿರನ್ನು ಸಿಎಂ ಮಾಡಿ ಬಿಜೆಪಿ ಲಿಂಗಾಯತರಿಗೆ ಗೌರವ ನೀಡಿದೆ. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸಿಎಂ ಆಗ್ತಾರೆ ಎಂದು ಆ ಇಬ್ಬರು ಹೆಸರನ್ನು ತೇಲಿ ಬಿಡಲಾಗುತ್ತಿದೆ. ಆದರೆ ಲಿಂಗಾಯತರೇ ಮುಂದಿನ ಬಿಜೆಪಿಯ ಮುಖ್ಯಮಂತ್ರಿ ಅಗಲಿದ್ದಾರೆ ಎಂದ ಯತ್ನಾಳ ಹೇಳಿದ್ದಾರೆ.