Party Rounds: ನಾಳೆಯಿಂದ ಮತ್ತೆರೆಡು ದಿನ ಪ್ರಧಾನಿ ಮೋದಿ ರಾಜ್ಯದಲ್ಲಿ ಅಬ್ಬರದ ಪ್ರಚಾರ

May 1, 2023, 9:01 PM IST

ಬೆಂಗಳೂರು (ಮೇ.01): ವಿಧಾನಸಭೆ ಚುನಾವಣೆಯಲ್ಲಿ ಇನ್ನೇನು 9 ದಿನ ಬಾಕಿ ಇದೆ. ಈ ನಡುವೆ ಮತದಾರರ ಮನ ಗೆಲ್ಲಲು ಆಡಳಿತ ರೂಢ ಬಿಜೆಪಿ ರಾಷ್ಟ್ರೀಯ ನಾಯಕರ ಮೊರೆ ಹೋಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೋಡಿ ರಾಜ್ಯದಲ್ಲಿ ಅಬ್ಬರದ ಪ್ರಚಾರಕ್ಕೆ ದುಮುಕಿರುವುದು ಬಿಜೆಪಿಗೂ ಬೂಸ್ಟ್‌ ಸಿಕ್ಕಂತಾಗಿದ್ದು, ಚುನಾವಣಾ ಕಣದ ಮೂಡ್ ಬದಲಾವಣೆಯ ನಿರೀಕ್ಷೆಯಲ್ಲಿ ಕಮಲ ಪಡೆ ಇದೆ. ಇನ್ನು ಬಿಜೆಪಿ ಮತ ಪ್ರಚಾರದ ಬೃಹತ್ ಸಮಾವೇಶ ಕಾರ್ಯಕ್ರಮ ನಾಳೆ( ಮೇ2) ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೋಟೆ ನಾಡಿಗೆ ಭೇಟಿ ನೀಡಲಿದ್ದಾರೆ. ನಾಳೆ ಬೆಳಗ್ಗೆ ಸುಮಾರು 10.30 ಗಂಟೆಗೆ ಪ್ರಧಾನಿ ಮೋದಿ ಕಾರ್ಯಕ್ರಮ ಆರಂಭವಾಗಲಿದ್ದು, ಸುಮಾರು ಎರಡೂವರೆ ಲಕ್ಷ ಜನ ಸೇರುವ ನಿರೀಕ್ಷೆ ಇದೆ. 

ಇದಲ್ಲದೆ ರಾಜ್ಯ ನಾಯಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಚಿತ್ರದುರ್ಗ ನಗರದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ಈಗಾಗಲೇ ಬೃಹತ್ ಪೆಂಡಾಲ್ ಹಾಕಲಾಗಿದೆ. ಹೊಸದುರ್ಗ, ಮೊಳಕಾಲ್ಮೂರು, ಚಿತ್ರದುರ್ಗ,ಹಿರಿಯೂರು ಹೊಳಲ್ಕರೆ, ಚಳ್ಳಕೆರೆ, ಮತ್ತು ದಾವಣಗೆರೆ, ಚನ್ನಗಿರಿ, ಜಗಳೂರು, ಮಾಯಕೊಂಡ, ವಿಧಾನಸಭಾ ಕ್ಷೇತ್ರಗಳಿಂದ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.