ಐಪಿಎಲ್ 2025ರ ಮೆಗಾ ಹರಾಜಿನ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಐಪಿಎಲ್ 2025 ರ ಮೆಗಾ ಹರಾಜಿಗೂ ಮೊದಲು ಆರ್‌ಸಿಬಿ ಆಡಳಿಯ ಮಂಡಳಿ ಮುಂದೆ ವಿರಾಟ್ ಕೊಹ್ಲಿ ಹೊಸ ಬೇಡಿಕೆಯೊಂದನ್ನು ಇರಿಸಿದ್ದಾರೆ. 2025ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ನಾಯಕನಾಗಲು ವಿರಾಟ್ ಕೊಹ್ಲಿ ಬಯಸಿದ್ದಾರೆ ಎಂದು ವರದಿಯಾಗಿದೆ. ವಿರಾಟ್ ಕೊಹ್ಲಿ ಈ ಹಿಂದೆ 2013 ರಿಂದ 2021 ರವರೆಗೆ ಆರ್‌ಸಿಬಿ ನಾಯಕರಾಗಿದ್ದರು. ನಂತರ ದಿಢೀರ್ ಅಂತ ನಾಯಕ ಸ್ಥಾನದಿಂದ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದರು.
ಆಟದತ್ತ ಹೆಚ್ಚು ಕೇಂದ್ರಿಕರಿಸಲು ನಾಯಕತ್ವ ಸ್ಥಾನದಿಂದ ಹಿಂದೆ ಸರಿಯುತ್ತಿರೋದಾಗಿ ವಿರಾಟ್ ಕೊಹ್ಲಿ ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದ್ದರು. ನಂತರ 2022 ರಿಂದ ದಕ್ಷಿಣ ಆಫ್ರಿಕಾ ಫಾಫ್ ಡು ಪ್ಲೆಸಿಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಮುಂದಿನ ಸೀಸನ್‌ನಲ್ಲಿ ಕೊಹ್ಲಿ ಬೆಂಗಳೂರು ತಂಡದ ನಾಯಕರಾಗುವುದು ಬಹುತೇಕ ಖಚಿತವಾಗಿದೆ. 2021ರಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಿಂದ ಹಿಂದೆ ಸರಿದಾಗ ಟ್ರೋಫಿ ಗೆಲ್ಲಲು ವಿಫಲವಾದ ಹಿನ್ನೆಲೆ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಐಪಿಎಲ್ ಅಂಗಳದಲ್ಲಿ ಕೇಳಿ ಬಂದಿದ್ದವು.
ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿಯೂ ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಫಾಫ್ ಡು ಪ್ಲೆಸಿಸ್ ಓರ್ವ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ತಂಡವು ಒಮ್ಮೆ ಮಾತ್ರ ಪ್ಲೇಆಫ್ ಹಂತವನ್ನು ತಲುಪಿದೆ.
2011ರಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು. ಆದರೆ 2013ರಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ತಂಡ ಮುನ್ನಡೆಸಲು ಆರಂಭಿಸಿದ್ದರು. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ 143 ಪಂದ್ಯಗಳನ್ನು ಆಡಿದ್ದು, 66ರಲ್ಲಿ ಗೆಲುವು ಮತ್ತು 70ರಲ್ಲಿ ಸೋಲು ಕಂಡಿದೆ. 3 ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿವೆ.