ನಗರ ಸ್ಥಳೀಯ ಸಂಸ್ಥೆಗಳಿಗೆ ಭರದಿಂದ ಮತದಾನ!

May 29, 2019, 1:18 PM IST

ರಾಜ್ಯದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಸೇರಿದಂತೆ 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯುತ್ತಿದೆ. 1296 ವಾರ್ಡ್‌ಗಳಲ್ಲಿ 4360 ಅಭ್ಯರ್ಥಿಗಳು ಕಣದಲ್ಲಿದ್ದು, 1646 ಮತಗಟ್ಟೆಗಳಲ್ಲಿ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. 8 ನಗರಸಭೆಗಳು, 33 ಪುರಸಭೆಗಳು ಮತ್ತು 22 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 1998 ಮತಯಂತ್ರಗಳ ಬಳಕೆ ಮಾಡಲಾಗಿದೆ. 61 ಸ್ಥಳೀಯ ಸಂಸ್ಥೆಗಳ 1326 ವಾರ್ಡ್‌ಗಳ ಪೈಕಿ 30 ವಾರ್ಡ್‌ಗಳಲ್ಲಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದೆ. ಹೀಗಾಗಿ 1296 ವಾರ್ಡ್‌ಗಳಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್‌ನಿಂದ 1224, ಬಿಜೆಪಿಯಿಂದ 1125, ಜೆಡಿಎಸ್‌ನಿಂದ 780 ಅಭ್ಯರ್ಥಿಗಳು ಸೇರಿದಂತೆ 4360 ಅಭ್ಯರ್ಥಿಗಳು ಅದೃಷ್ಟಪರೀಕ್ಷೆಗಿಳಿದಿದ್ದಾರೆ.

7.37 ಲಕ್ಷ ಪುರುಷರು ಮತ್ತು 7.36 ಲಕ್ಷ ಮಹಿಳೆಯರು 181 ಇತರರು ಸೇರಿ 14.74 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ಮೇ.31ರಂದು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ನಡೆಯಲಿದೆ. ಇದೇ ವೇಳೆ ಎಂಟು ಜಿಲ್ಲೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಒಟ್ಟು 8 ತಾಲೂಕು ಪಂಚಾಯಿತಿಗಳ 10 ಕ್ಷೇತ್ರಗಳ ಸದಸ್ಯ ಸ್ಥಾನಗಳಿಗೆ ಮತ್ತು ಗ್ರಾಮಪಂಚಾಯಿತಿಗಳಲ್ಲಿ ತೆರವಾಗಿರುವ 202 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ. ಬಿಬಿಎಂಪಿಯ ಸಗಾಯಿಪುರ ಮತ್ತು ಕಾವೇರಿಪುರ ವಾರ್ಡ್‌, ತುಮಕೂರು ಪಾಲಿಕೆಯ ವಾರ್ಡ್‌ 22, ಬೆಂಗಳೂರಿನ ಹೆಬ್ಬಗೋಡಿ ನಗರಸಭೆಯ ವಾರ್ಡ್‌ 26, ಬೆಳಗಾವಿಯ ಸದಲಗ ಪುರಸಭೆಯ ವಾರ್ಡ್‌ 19 ಮತ್ತು ಮುಗಳಖೋಡ ಪುರಸಭೆಯ ವಾರ್ಡ್‌ 2ಕ್ಕೆ ಉಪಚುನಾವಣೆ ನಡೆಯುತ್ತಿದೆ.